ಹಿರಿಯೂರು ಪ್ರಜಾಸೇವೆ ಕಾರ್ಯಕ್ರಮದಲ್ಲಿ ಸಾರ್ವಜನಿಕರ ಅಹವಾಲು ಸ್ವೀಕಾರ; ಗರ್ಭಿಣಿಯರಿದ್ದರೂ ಬಸ್ ನಿಲ್ಲಿಸದ ಅಧಿಕಾರಿಗಳ ವಿರುದ್ಧ ಅಸಮಾಧಾನ, 85 ವರ್ಷದ ಅಜ್ಜಿಗೆ ಭೂಮಿ ಮಂಜೂರಾತಿ ಭರವಸೆ
ಹಿರಿಯೂರು, ನ. 21:
ಖಾತೆ ಮಾಡಿಕೊಡಲು ಅಧಿಕಾರಿಯೊಬ್ಬರು ಲಂಚ ಕೇಳಿರುವುದು ನಿಜವೆಂದು ಕಂಡುಬಂದರೆ ಸಂಬಂಧಪಟ್ಟ ಅಧಿಕಾರಿಯನ್ನು ಕೂಡಲೇ ಅಮಾನತು ಮಾಡಬೇಕು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಜಿಲ್ಲಾಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.
ಹಿರಿಯೂರಿನಲ್ಲಿ ಶನಿವಾರ ನಡೆದ ‘ಬಾಗಿಲಿಗೆ ಬಂತು ಸರ್ಕಾರ, ಸೇವೆಗೆ ಇರಲಿ ಸಹಕಾರ’ ಪ್ರಜಾಸೇವೆ ಕಾರ್ಯಕ್ರಮದಲ್ಲಿ ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿದ ಅವರು, ಜನರ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಸ್ಪಂದಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಹಿರಿಯೂರು ತಾಲ್ಲೂಕಿನ ಕೆ.ಎಂ. ಕೊಟ್ಟಿಗೆ ಎಕೆ ಕಾಲೋನಿಯ ಕೆ. ಚಂದ್ರು ಅವರು ಖಾತೆ ಮಾಡಿಸಿಕೊಳ್ಳಲು ಅಧಿಕಾರಿ ಲಂಚ ಕೇಳಿದ್ದಾರೆ ಎಂದು ದೂರು ನೀಡಿದಾಗ, ಸಿಎಂ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಜಿಲ್ಲಾಧಿಕಾರಿ ಮತ್ತು ಉಪವಿಭಾಗಾಧಿಕಾರಿಗಳಿಗೆ ಈ ಕುರಿತು ತಕ್ಷಣ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
“ಲಂಚ ಕೇಳಿರುವುದು ನಿಜವೆಂದು ಗೊತ್ತಾದರೆ ಸಂಬಂಧಪಟ್ಟ ಅಧಿಕಾರಿಯನ್ನು ಅಮಾನತು ಮಾಡಬೇಕು. ಇಂತಹವರನ್ನು ಬಿಡಬಾರದು” ಎಂದು ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದರು.
“ತಾಯಿ, ಟೆನ್ಷನ್ ಮಾಡಿಕೊಳ್ಳಬೇಡಿ, ನಾನಿದ್ದೇನೆ”
ಯರಿಚಿಕ್ಕನಹಳ್ಳಿಯ ಮಾನಸ ಮತ್ತು ರವಿ ಅವರು ತಮ್ಮ ಜಮೀನಿನ ಮೇಲೆ ಹೈಟೆನ್ಷನ್ ವಿದ್ಯುತ್ ಮಾರ್ಗ ಹಾದುಹೋಗುವುದರಿಂದ ಅಡಿಕೆ ತೋಟಗಳಿಗೆ ತೊಂದರೆಯಾಗುತ್ತಿದೆ ಹಾಗೂ ಜಮೀನು ಕಳೆದುಕೊಳ್ಳುವ ಆತಂಕ ಎದುರಾಗಿದೆ ಎಂದು ಸಿಎಂ ಎದುರು ಮನವಿ ಮಾಡಿದರು.
ಇದಕ್ಕೆ ಸ್ಪಂದಿಸಿದ ಡಿ.ಕೆ. ಶಿವಕುಮಾರ್, “ತಾಯಿ, ಹೈಟೆನ್ಷನ್ ವಿದ್ಯುತ್ ಮಾರ್ಗದ ಬಗ್ಗೆ ಟೆನ್ಷನ್ ಮಾಡಿಕೊಳ್ಳಬೇಡಿ. ನಿಮ್ಮ ಸಮಸ್ಯೆಯನ್ನು ಬಗೆಹರಿಸುತ್ತೇನೆ” ಎಂದು ಭರವಸೆ ನೀಡಿದರು. ಎರಡು ಮೂರು ದಿನಗಳಲ್ಲಿ ಸ್ಥಳ ಪರಿಶೀಲನೆ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಗರ್ಭಿಣಿಯರಿದ್ದರೂ ಬಸ್ ಏಕೆ ನಿಲ್ಲಿಸುವುದಿಲ್ಲ?
ಕೆಎಸ್‌ಆರ್‌ಟಿಸಿ ಬಸ್‌ಗಳು ಹಿರಿಯೂರು ಪಟ್ಟಣದ ಒಳಗೆ ಬಾರದೆ ಬೈಪಾಸ್‌ನಲ್ಲಿ ನಿಲ್ಲಿಸುತ್ತಿರುವುದರಿಂದ ಮಹಿಳೆಯರು, ವಿದ್ಯಾರ್ಥಿನಿಯರು ಮತ್ತು ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಪತ್ರಿಕಾ ವಿತರಕ ಏಕಾಂತಪ್ಪ ದೂರಿದರು.
ಈ ವಿಷಯಕ್ಕೆ ತೀವ್ರವಾಗಿ ಪ್ರತಿಕ್ರಿಯಿಸಿದ ಸಿಎಂ, “ಗರ್ಭಿಣಿಯರಿದ್ದರೂ ಬಸ್ ಏಕೆ ನಿಲ್ಲಿಸುವುದಿಲ್ಲ? ಮಾನವೀಯತೆ ಇಲ್ಲವೇ? ಕೂಡಲೇ ಸಮಸ್ಯೆ ಬಗೆಹರಿಸಿ ನನಗೆ ಮಾಹಿತಿ ನೀಡಬೇಕು. ಈ ಸಮಸ್ಯೆ ಮತ್ತೆ ಪುನರಾವರ್ತನೆಯಾಗಬಾರದು” ಎಂದು ಕೆಎಸ್‌ಆರ್‌ಟಿಸಿ ವಿಭಾಗೀಯ ಅಧಿಕಾರಿಗೆ ಸೂಚಿಸಿದರು.
85 ವರ್ಷದ ಲಕ್ಷ್ಮಮ್ಮಗೆ ಭೂಮಿ ಮಂಜೂರಾತಿ ಭರವಸೆ
ಕಸವನಹಳ್ಳಿಯ 85 ವರ್ಷದ ಲಕ್ಷ್ಮಮ್ಮ ಅವರು ತಮ್ಮ ಬಳಿ ಯಾವುದೇ ಜಮೀನು ಇಲ್ಲ. ಜೀವನ ನಡೆಸಲು ಸ್ವಲ್ಪ ಭೂಮಿ ಮಂಜೂರು ಮಾಡಿಸಿಕೊಡಿ ಎಂದು ಸಿಎಂ ಅವರ ಕೈ ಹಿಡಿದು ಮನವಿ ಮಾಡಿದರು.
ಅವರ ಮನವಿಗೆ ಸ್ಪಂದಿಸಿದ ಡಿ.ಕೆ. ಶಿವಕುಮಾರ್, “ಅಜ್ಜಿ, ನಿಮಗೆ ಭೂಮಿ ಮಂಜೂರು ಮಾಡಿಕೊಡಲಾಗುವುದು” ಎಂದು ಭರವಸೆ ನೀಡಿದರು. ಈ ಮಾತಿನಿಂದ ಲಕ್ಷ್ಮಮ್ಮ ಅವರ ಮುಖದಲ್ಲಿ ಸಂತಸ ಮೂಡಿತು.
15 ಹೊಲಗಳಿಗೆ ಹೋಗಲು ದಾರಿಯೇ ಇಲ್ಲ
ತಹಶೀಲ್ದಾರ್‌ಗೆ ಹಲವು ಬಾರಿ ಅರ್ಜಿ ಸಲ್ಲಿಸಿದ್ದರೂ ಸುಮಾರು 10ರಿಂದ 15 ಹೊಲಗಳಿಗೆ ತೆರಳಲು ದಾರಿ ಇಲ್ಲದಂತಾಗಿದೆ ಎಂದು ರೈತರು ಅಳಲು ತೋಡಿಕೊಂಡರು. ರೈತರ ಸಮಸ್ಯೆಯನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಯಿತು.
ಸರ್ಕಾರಿ ಶಾಲೆಗೆ ಕಟ್ಟಡ, ಎಲ್‌ಕೆಜಿ ಆರಂಭಕ್ಕೆ ಮನವಿ
ಬ್ಯಾಡರಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಕಟ್ಟಡದ ಕೊರತೆಯಿದ್ದು, ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ಎಲ್‌ಕೆಜಿ ಆರಂಭಿಸಲು ಅವಕಾಶ ಕಲ್ಪಿಸಬೇಕು ಎಂದು ಪ್ರಸನ್ನ ಎಂಬುವರು ಮನವಿ ಮಾಡಿದರು. ಡಿಡಿಪಿಐ ಎರಡು ಬಾರಿ ಶಾಲೆಗೆ ಭೇಟಿ ನೀಡಿದ್ದರೂ ಸಮಸ್ಯೆ ಬಗೆಹರಿದಿಲ್ಲ ಎಂದು ದೂರಿದರು.
ತಕ್ಷಣ ಡಿಡಿಪಿಐ ಅವರನ್ನು ಕರೆಸಿದ ಸಿಎಂ, ಅರ್ಜಿ ಪಡೆದು ಮೊದಲು ಸಮಸ್ಯೆ ಪರಿಹರಿಸುವಂತೆ ಸೂಚಿಸಿದರು.
ವಕೀಲರ ಭವನಕ್ಕೆ ₹3 ಕೋಟಿ ಅನುದಾನಕ್ಕೆ ಮನವಿ
ಹಿರಿಯೂರಿನಲ್ಲಿ 250ಕ್ಕೂ ಹೆಚ್ಚು ವಕೀಲರಿದ್ದು, ವಕೀಲರ ಭವನ ಮತ್ತು ಮೂಲಸೌಕರ್ಯಗಳ ಕೊರತೆ ಇದೆ. ಭವನ ನಿರ್ಮಾಣಕ್ಕಾಗಿ ₹3 ಕೋಟಿ ವೆಚ್ಚದ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಅನುದಾನ ಬಿಡುಗಡೆ ಮಾಡಬೇಕು ಎಂದು ವಕೀಲರ ಪ್ರತಿನಿಧಿಗಳು ಮನವಿ ಸಲ್ಲಿಸಿದರು.
ಉದ್ಯಾನವನ, ಸಾರ್ವಜನಿಕ ಶೌಚಾಲಯ ನಿರ್ಮಾಣಕ್ಕೆ ಮನವಿ
ಧರ್ಮಪುರದಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಿಸಬೇಕು ಹಾಗೂ ಹಿರಿಯೂರಿನಲ್ಲಿ ಇಂದಿರಾ ಗಾಂಧಿ ಉದ್ಯಾನವನ ನಿರ್ಮಿಸಿ ಮಹಿಳೆಯರಿಗೆ ಬೆಳಗ್ಗೆ ಮತ್ತು ಸಂಜೆ ವಾಯುವಿಹಾರ ಮಾಡಲು ಅನುಕೂಲ ಕಲ್ಪಿಸಬೇಕು ಎಂದು ಸಾರ್ವಜನಿಕರು ಮನವಿ ಮಾಡಿದರು.
ಮನೆ ನಿರ್ಮಾಣದ ಬಿಲ್‌ಗಳು ಬಾಕಿ ಉಳಿದಿವೆ ಎಂದು ಫಲಾನುಭವಿಗಳು ಗಮನ ಸೆಳೆದಾಗ, ಅರ್ಜಿ ಸಲ್ಲಿಸುವಲ್ಲಿ ಲೋಪವಾಗಿದ್ದರೆ ಅಗತ್ಯ ದಾಖಲೆಗಳನ್ನು ಪಡೆದು ಸಮಸ್ಯೆ ಬಗೆಹರಿಸುವಂತೆ ಸಿಎಂ ಅಧಿಕಾರಿಗಳಿಗೆ ಸೂಚಿಸಿದರು.
ಅರ್ಜಿದಾರನೊಂದಿಗೆ ಸಿಎಂ ಸೆಲ್ಫಿ: ಯುವಕನ ಮುಖದಲ್ಲಿ ಮಂದಹಾಸ
ಅಲೆಮಾರಿ ಸಮುದಾಯದವರಿಗೆ ಮನೆಗಳಿಲ್ಲ, ವಾಸಿಸಲು ಸೂರಿಲ್ಲ ಎಂದು ಮನವಿ ಸಲ್ಲಿಸಲು ಬಂದ ಯುವಕನ ಅಹವಾಲನ್ನು ಡಿ.ಕೆ. ಶಿವಕುಮಾರ್ ಆಲಿಸಿದರು. ಆತನ ಸಂಕಷ್ಟಕ್ಕೆ ಸ್ಪಂದಿಸಿದ ಅವರು, “ಆಯ್ತು ಬಿಡಪ್ಪ, ಮನೆ ಕೊಡಿಸೋಣ. ನಾನಿದ್ದೇನೆ, ಯಾವುದೇ ಚಿಂತೆ ಬೇಡ” ಎಂದು ಭರವಸೆ ನೀಡಿದರು.
ನಂತರ ಯುವಕನ ಮೊಬೈಲ್ ಪಡೆದು ಆತನೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡರು. ಮುಖ್ಯಮಂತ್ರಿಗಳೇ ಸ್ವತಃ ಸೆಲ್ಫಿ ತೆಗೆದುಕೊಂಡಿದ್ದರಿಂದ ಯುವಕನ ಮುಖದಲ್ಲಿ ಸಂತಸ ಮೂಡಿತು.
ಮಾಜಿ ಸೈನಿಕನಿಗೂ ನೆರವಿನ ಭರವಸೆ
ಹೊಸ ಎಳನಾಡಿನ ನಿವಾಸಿ, ಮಾಜಿ ಸೈನಿಕ ವೆಂಕಟೇಶ್ ಅವರು ತಾವು ದೇಶಸೇವೆ ಮಾಡಿದ್ದು, ನಿವೇಶನ ಮಂಜೂರು ಮಾಡಿಕೊಡಬೇಕು ಎಂದು ಮನವಿ ಸಲ್ಲಿಸಿದರು.
ಕ್ಯಾನ್ಸರ್ ಚಿಕಿತ್ಸೆಗೆ ಒಳಗಾಗಿರುವ ಈಶ್ವರಗೆರೆಯ ಸುರೇಶ್ ಅವರು ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಆರ್ಥಿಕ ನೆರವು ನೀಡುವಂತೆ ಕೋರಿದರು. ಅಗತ್ಯ ದಾಖಲೆಗಳನ್ನು ಸಲ್ಲಿಸುವಂತೆ ಸೂಚಿಸಿದ ಸಿಎಂ, ಅವುಗಳನ್ನು ಪರಿಶೀಲಿಸಿ ನೆರವು ಬಿಡುಗಡೆಗೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಇದೇ ವೇಳೆ ನಿಂಗಮ್ಮ ಅವರು ಕ್ಲೌಡ್ ಕಿಚನ್ ಯೋಜನೆ ಬೇಡ, ಬಿಸಿಯೂಟ ನೌಕರರನ್ನು ರಕ್ಷಿಸಬೇಕು ಎಂದು ಮನವಿ ಸಲ್ಲಿಸಿದರು. ಜಿ.ಎನ್. ಕೋಟೆ ಕೆರೆಗೆ ಭದ್ರಾ ನೀರು ಹರಿಸುವಂತೆ ರೈತ ಸಂಘದ ಮಂಜುನಾಥ್, ಪಾಯಯ್ಯ ಮತ್ತು ಶಿವಕುಮಾರ್ ಅವರು ಮನವಿ ಸಲ್ಲಿಸಿದರು.
ಪ್ರಜಾಸೇವೆ ಕಾರ್ಯಕ್ರಮದಲ್ಲಿ ಸಾರ್ವಜನಿಕರ ವೈಯಕ್ತಿಕ ಹಾಗೂ ಸ್ಥಳೀಯ ಸಮಸ್ಯೆಗಳನ್ನು ಆಲಿಸಿದ ಡಿ.ಕೆ. ಶಿವಕುಮಾರ್, ಜನರ ಅಹವಾಲುಗಳಿಗೆ ಆದ್ಯತೆ ನೀಡಿ ತ್ವರಿತವಾಗಿ ಪರಿಹಾರ ಒದಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಕೆಳಗಿನ Social Media ಪುಟಗಳಿಗೆ Follow / Subscribe ಮಾಡಿ.
🟢 WhatsApp Group
Join WhatsApp Group
🔵 Facebook Page
Follow Facebook Page
⚫ Twitter / X
Follow on X (Twitter)
🟣 Threads
Follow on Threads
Follow on Instagram
🔵 Telegram
Join Telegram Channel
🟢 WhatsApp Channel
Follow WhatsApp Channel
📰 ಸಮಗ್ರ ಸುದ್ದಿ
ನಿಖರತೆಗೆ ಮತ್ತೊಂದು ಹೆಸರು
📢 ಸುದ್ದಿ • ಮಾಹಿತಿ • ಶಿಕ್ಷಣ • ಉದ್ಯೋಗ • ಕರ್ನಾಟಕ • ದೇಶ • ಜಗತ್ತು