ಹೊಳಲ್ಕೆರೆ :
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಒಂದು ಹನಿ ನೀರು ವ್ಯರ್ಥವಾಗಿ ಹರಿದು ಶಾಂತಿಸಾಗರಕ್ಕೆ ಹೋಗಬಾರದೆಂದು ಸರಣಿ ಚೆಕ್‍ಡ್ಯಾಂಗಳನ್ನು ಕಟ್ಟಿಸಿದ್ದೇನೆ. ಜೋಗ್‍ಫಾಲ್ಸ್‍ನಿಂದ ನೇರ ವಿದ್ಯುತ್
ಭದ್ರೆಯಿಂದ ನೀರು, ಹಿರಿಯೂರಿನ ವಾಣಿವಿಲಾಸಸಾಗರದಿಂದ ಕುಡಿಯುವ ನೀರು ಪೂರೈಸಲಾಗುವುದೆಂದು ಶಾಸಕ ಡಾ.ಎಂ.ಚಂದ್ರಪ್ಪ ತಿಳಿಸಿದರು.
ಕೊಡಗವಳ್ಳಿ ಗ್ರಾಮದಲ್ಲಿ ಒಂದು ಕೋಟಿ ಐವತ್ತು ಲಕ್ಷ ರೂ.ಗಳ ವೆಚ್ಚದಲ್ಲಿ ಗೋಕಟ್ಟೆ ಅಭಿವೃದ್ದಿಪಡಿಸುವ ಕಾಮಗಾರಿಗೆ ಭಾನುವಾರ ಗುದ್ದಲಿ ಪೂಜೆ ಸಲ್ಲಿಸಿ ಮಾತನಾಡಿದರು.
ಕೆರೆ ತುಂಬಿಸುವುದು ಎಷ್ಟು ಮುಖ್ಯವೋ ಚೆಕ್‍ಡ್ಯಾಂಗಳನ್ನು ಕಟ್ಟಿಸುವುದು ಅಷ್ಟೆ ಅವಶ್ಯಕ ಎನ್ನುವುದನ್ನು ಗಮನದಲ್ಲಿಟ್ಟುಕೊಂಡು ತಾಲ್ಲೂಕಿನಾದ್ಯಂತ ಎಲ್ಲಾ ಕಡೆ ಚೆಕ್‍ಡ್ಯಾಂಗಳನ್ನು ನಿರ್ಮಿಸಿದ್ದೇನೆ. ಹೊಳಲ್ಕೆರೆ ಚಿಕ್ಕಕೆರೆಯಲ್ಲಿ 165 ಕೋಟಿ ರೂ.ಗಳನ್ನು ಖರ್ಚು ಮಾಡಿ ನೀರು ತುಂಬಿಸಿ ಅಲ್ಲಿಂದ ಮಲಸಿಂಗನಹಳ್ಳಿ ಕೆರೆ ಮೂಲಕ ಎಲ್ಲಾ ಕೆರೆಗಳಿಗೆ ನೀರು ಹರಿಸಲಾಗುವುದು. ಕೊಡಗಲಹಟ್ಟಿಗೆ ಕರ್ನಾಟಕ ಪಬ್ಲಿಕ್ ಶಾಲೆ ಮಂಜೂರು ಮಾಡಿಸಿ ಹನ್ನೆರಡು ಕೋಟಿ ರೂ.ಗಳನ್ನು ಕೊಟ್ಟಿದ್ದೇನೆ. ಎಲ್.ಕೆ.ಜಿ.ಯಿಂದ ಹಿಡಿದು ಪಿ.ಯು.ಸಿ.ವರೆಗೆ ಆಂಗ್ಲ ಮಾಧ್ಯಮದಲ್ಲಿ ಮಕ್ಕಳಿಗೆ ಶಿಕ್ಷಣ ಕಲಿಸಲಾಗುವುದು ಎಂದರು.
ಕೆಪಿಎಸ್.ಶಾಲೆಗೆ ಬರುವ ಮಕ್ಕಳ ಶಿಕ್ಷಣಕ್ಕೆ ಅನುಕೂಲವಾಗಲೆಂದು ಉಚಿತವಾಗಿ ಬಸ್ ಬಿಟ್ಟಿದ್ದೇನೆ. ಬೆಳಿಗ್ಗೆ ಮೊಟ್ಟೆ, ಹಾಲು, ಬಾಳೆಹಣ್ಣು, ಮಧ್ಯಾಹ್ನ ಬಿಸಿಯೂಟ, ಸಂಜೆ ಪೌಷ್ಠಿಕಾಂಶವುಳ್ಳ ಮೊಳಕೆ ಕಾಳುಗಳನ್ನು ನೀಡಿ ಸುರಕ್ಷಿತವಾಗಿ ಮನೆಗೆ ತಲುಪಿಸಲಾಗುತ್ತದೆ. ನನ್ನ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿಭಾಯಿಸುತ್ತಿದ್ದೇನೆ. ಒಮ್ಮೆ ಕೆಜಿಪಿ.ಗೆ ಮತ್ತೊಮ್ಮೆ ಕಾಂಗ್ರೆಸ್‍ಗೆ ಹೋಗಿ ನನ್ನ ತಪ್ಪಿನಿಂದ ನಾನು ಸೋತಿದ್ದೇನೆ. ಐದು ಸಾರಿ ಮತದಾರರು ಗೆಲ್ಲಿಸುತ್ತಾರೆಂದರೆ ಸುಲಭವಲ್ಲ. ಪ್ರಥಮ ಬಾರಿಗೆ ಭರಮಸಾಗರದಿಂದ ಚುನಾವಣೆಗೆ ನಿಂತಾಗ ಜನರ ಬಳಿ ಹೋಗಿ ಮತ ಕೇಳಲು ರಸ್ತೆಗಳಿರಲಿಲ್ಲ. ಗೆದ್ದು ನಾಲ್ಕು ವರ್ಷಗಳಲ್ಲಿ ಎಲ್ಲಾ ಊರುಗಳಲ್ಲಿಯೂ ರಸ್ತೆ ಮಾಡಿಸಿದ್ದರಿಂದ ಜನ ರಸ್ತೆ ರಾಜ ಎನ್ನುವ ಬಿರುದು ನೀಡಿ ಎರಡನೆ ಬಾರಿ ಚುನಾವಣೆಗೆ ನಿಂತಾಗ ಯುವಕರು ಹೆಗಲ ಮೇಲೆ ಕೂರಿಸಿಕೊಂಡು ಮೆರವಣಿಗೆ ಮಾಡಿ ಮತ್ತೆ ಗೆಲ್ಲಿಸಿದರು ಎಂದು ನೆನಪಿಸಿಕೊಂಡರು.
ಬರಗಾಲ ಬಂದಿದೆ. ಎಂಟತ್ತು ಕಡೆ ಬೋರ್ ಕೊರೆಸಿದರೂ ನೀರು ಸಿಗುತ್ತಿಲ್ಲ. ನಾಲ್ಕು ವರ್ಷಗಳ ಕೆಳಗೆ 367 ಕೋಟಿ ರೂ.ಗಳನ್ನು ಖರ್ಚು ಮಾಡಿ ಹಿರಿಯೂರಿನ ವಾಣಿವಿಲಾಸಸಾಗರದಿಂದ ನೀರು ತಂದು ಪ್ರತಿ ಮನೆ ಮನೆಗೂ ಶುದ್ದ ಕುಡಿಯುವ ನೀರು ಪೂರೈಸುವ ಯೋಜನೆ ಹಾಕಿಕೊಳ್ಳಲಾಗಿದೆ. ಪೈಪ್‍ಲೈನ್ ಅಳವಡಿಕೆ ಮುಗಿದಿದ್ದು, ಇನ್ನು ಒಂದು ತಿಂಗಳಲ್ಲಿ ನೀರು ಸರಬರಾಜಾಗಲಿದೆ ಎಂದು ಭರವಸೆ ನೀಡಿದರು.
ತುಂಗಾ ನದಿಯಿಂದ ಭದ್ರೆಗೆ ಹದಿನೇಳುವರೆ ಟಿ.ಎಂ.ಸಿ. ನೀರು ಹರಿಯುತ್ತದೆ. ಜನವರಿಯಲ್ಲಿ ಮತ್ತೊಂದು ರೌಂಡ್ ನೀರು ಬಿಡಲಾಗುತ್ತದೆ. ಕುಡಿಯುವ ನೀರು, ಕೆರೆಗಳನ್ನು ತುಂಬಿಸುವುದು, ವಿದ್ಯುತ್, ಹೀಗೆ ಎಲ್ಲಾ ಕೆಲಸಗಳನ್ನು ಮಾಡಿಸಿದ್ದೇನೆ. ಅಧಿಕಾರ ಸಿಕ್ಕಾಗ ಹತ್ತಾರು ಜನಕ್ಕೆ ಒಳ್ಳೆಯದು ಮಾಡಬೇಕೆನ್ನುವ ಜಾಯಮಾನ ನನ್ನದು. ಜನರಿಂದ ಛೀ ಥೂ ಅನ್ನಿಸಿಕೊಳ್ಳಲು ಇಷ್ಟವಿಲ್ಲ. ಹಿಂದೆ ಅಧಿಕಾರದಲ್ಲಿದ್ದವರು ಏನು ಮಾಡಿದ್ದಾರೆನ್ನುವುದು ನಿಮಗೆಲ್ಲಾ ಗೊತ್ತಿದೆ ಎಂದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ತಿಪ್ಪೇಸ್ವಾಮಿ, ನ್ಯಾಯವಾದಿ ರಂಗಸ್ವಾಮಿ, ಡಿ.ಸಿ.ಮೋಹನ್, ಪ್ರಭಣ್ಣ, ನಾಗರಾಜ್, ಅಶೋಕ್, ಶಿವಕುಮಾರ್, ಕುಮಾರಣ್ಣ, ರಾಜ್‍ಕುಮಾರ್ ಹಾಗೂ ಗ್ರಾಮದ ಪ್ರಮುಖರು ಈ ಸಂದರ್ಭದಲ್ಲಿ ಹಾಜರಿದ್ದರು.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಕೆಳಗಿನ Social Media ಪುಟಗಳಿಗೆ Follow / Subscribe ಮಾಡಿ.
🟢 WhatsApp Group
Join WhatsApp Group
🔵 Facebook Page
Follow Facebook Page
⚫ Twitter / X
Follow on X (Twitter)
🟣 Threads
Follow on Threads
Follow on Instagram
🔵 Telegram
Join Telegram Channel
🟢 WhatsApp Channel
Follow WhatsApp Channel
📰 ಸಮಗ್ರ ಸುದ್ದಿ
ನಿಖರತೆಗೆ ಮತ್ತೊಂದು ಹೆಸರು
📢 ಸುದ್ದಿ • ಮಾಹಿತಿ • ಶಿಕ್ಷಣ • ಉದ್ಯೋಗ • ಕರ್ನಾಟಕ • ದೇಶ • ಜಗತ್ತು