ಚಿತ್ರದುರ್ಗದಲ್ಲಿ 71ನೇ ಕನ್ನಡ ರಾಜ್ಯೋತ್ಸವ ಹಾಗೂ ರಾಜ್ಯಮಟ್ಟದ ಕವಿಗೋಷ್ಠಿ: ಕನ್ನಡ ಭಾಷೆ ಉಳಿಸಿ ಬೆಳೆಸಲು ಕೆ.ಎಂ. ಶಿವಸ್ವಾಮಿ ಕರೆ.

ಚಿತ್ರದುರ್ಗ, ನ.29:

ವರದಿ ಮತ್ತು ಫೋಟೊ, ರವಿ ಕೆ.ಅಂಬೇಕರ್/ ಮೊ.9900667740

ಕನ್ನಡ ಭಾಷೆ, ನಾಡು, ನುಡಿ, ಸಾಹಿತ್ಯ ಹಾಗೂ ಸಂಸ್ಕೃತಿಯ ಶ್ರೀಮಂತ ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸಿ ಉಳಿಸಿ ಬೆಳೆಸುವ ಜವಾಬ್ದಾರಿ ಪ್ರತಿಯೊಬ್ಬ ಕನ್ನಡಿಗನ ಮೇಲಿದೆ ಎಂದು 71ನೇ ಕನ್ನಡ ರಾಜ್ಯೋತ್ಸವ ಹಾಗೂ ರಾಜ್ಯಮಟ್ಟದ ಕವಿಗೋಷ್ಠಿಯಲ್ಲಿ ಭಾಗವಹಿಸಿದ್ದ ಚಿತ್ರದುರ್ಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಶಿವಸ್ವಾಮಿ ಅಭಿಪ್ರಾಯಪಟ್ಟರು.

ನಗರದ ಶ್ರೀ ರಾಘವೇಂದ್ರ ಫಾರ್ಮಸಿ ಕಾಲೇಜು ಸಭಾಂಗಣದಲ್ಲಿ ಭಾರತೀಯ ಯೋಗ ಶಿಕ್ಷಣ ಸಂಸ್ಥೆ (ರಿ.) ಚಿತ್ರದುರ್ಗ, ಕೋಟೆ ವಾಯುವಿಹಾರಿಗಳ ಸಂಘ ಚಿತ್ರದುರ್ಗ ಜ್ಞಾನಪೀಠ ಶಿಕ್ಷಣ ಮತ್ತು ಸಾಂಸ್ಕೃತಿಕ ವೇದಿಕೆ ಚಳ್ಳಕೆರೆ ಹಾಗೂ ಶ್ರೀ ರಾಘವೇಂದ್ರ ವಿದ್ಯಾ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡುತ್ತಾ ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ ಭಾಷೆ, ಸಾಹಿತ್ಯ ಹಾಗೂ ಸಾಂಸ್ಕೃತಿಕ ಪರಂಪರೆಯ ಬೆಳವಣಿಗೆಗಾಗಿ ನಿರಂತರವಾಗಿ ಶ್ರಮಿಸುತ್ತಿದೆ. ಕನ್ನಡದ ನೆಲ, ಜಲ, ಭಾಷೆ ಮತ್ತು ಸಂಸ್ಕೃತಿಯ ಬಗ್ಗೆ ಪ್ರತಿಯೊಬ್ಬರಲ್ಲಿಯೂ ಅಭಿಮಾನ ಮೂಡಿಸುವ ಅಗತ್ಯವಿದೆ. ಕವಿಗಳು ಹಾಗೂ ಸಾಹಿತಿಗಳು ತಮ್ಮ ಸಾಹಿತ್ಯದ ಮೂಲಕ ಸಮಾಜದ ಸಮಸ್ಯೆಗಳಿಗೆ ಸ್ಪಂದಿಸುವುದರ ಜೊತೆಗೆ ಉತ್ತಮ ಮೌಲ್ಯಗಳನ್ನು ಜನರಲ್ಲಿ ಬಿತ್ತುವ ಕೆಲಸ ಮಾಡಬೇಕು ಎಂದು ಕರೆ ನೀಡಿದರು.

ಭಾರತೀಯ ಯೋಗ ಶಿಕ್ಷಣ ಸಂಸ್ಥೆ ಅಧ್ಯಕ್ಷ ರವಿ ಕೆ. ಅಂಬೇಕರ್ ಪ್ರಾಸ್ತಾವಿಕವಾಗಿ ಮಾತನಾಡಿ ಕನ್ನಡ ರಾಜ್ಯೋತ್ಸವ ಆಚರಣೆಯು ಕೇವಲ ಒಂದು ದಿನದ ಸಂಭ್ರಮಕ್ಕೆ ಸೀಮಿತವಾಗದೆ ಕನ್ನಡ ಭಾಷೆಯ ಬಳಕೆ, ಸಾಹಿತ್ಯದ ಅಭಿರುಚಿ ಹಾಗೂ ಸಾಂಸ್ಕೃತಿಕ ಮೌಲ್ಯಗಳ ಸಂರಕ್ಷಣೆಗೆ ಪ್ರೇರಣೆಯಾಗಬೇಕು ಎಂದರು. ಇಂತಹ ಸಾಹಿತ್ಯಿಕ ಕಾರ್ಯಕ್ರಮಗಳು ಹೊಸ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವುದರ ಜೊತೆಗೆ ಕನ್ನಡದ ಅಭಿಮಾನವನ್ನು ಹೆಚ್ಚಿಸುತ್ತವೆ ಎಂದು ತಿಳಿಸಿದರು.

ಕಾರ್ಯಕ್ರಮ ಉದ್ಘಾಟನೆ ಮಾಡಿದ ರಾಘವೇಂದ್ರ ವಿಧ್ಯಾ ಸಂಸ್ಥೆಯ ಸಂಸ್ಥಾಪನಾಧ್ಯಕ್ಷ ಶ್ರೀನಿವಾಸ್ ಹೆಚ್ ಮಾತನಾಡಿ ಕನ್ನಡ ನಮ್ಮ ಉಸಿರು, ನಮ್ಮ ಸಂಸ್ಕೃತಿ, ನಮ್ಮ ಬದುಕಿನ ಜೀವನಾಡಿ. ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಕನ್ನಡ ಭಾಷೆ ಎಂಟು ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದು ಭಾರತೀಯ ಭಾಷೆಗಳಲ್ಲಿಯೇ ವಿಶಿಷ್ಟ ಸ್ಥಾನ ಪಡೆದಿದೆ. ಪಂಪ, ರನ್ನ, ಜನ್ನರಿಂದ ಹಿಡಿದು ಕುವೆಂಪು, ಬೇಂದ್ರೆ, ಶಿವರಾಮ ಕಾರಂತ, ಮಾಸ್ತಿ ಹಾಗೂ ಇಂದಿನ ಸಮಕಾಲೀನ ಸಾಹಿತಿಗಳವರೆಗೆ ಕನ್ನಡ ಸಾಹಿತ್ಯದ ಪರಂಪರೆ ಅತ್ಯಂತ ಶ್ರೀಮಂತವಾಗಿದೆ. ಜಾಗತೀಕರಣದ ಪ್ರಭಾವದಿಂದ ನಮ್ಮ ಮಾತೃಭಾಷೆಯ ಬಳಕೆ ಕೆಲವು ಕ್ಷೇತ್ರಗಳಲ್ಲಿ ಕಡಿಮೆಯಾಗುತ್ತಿದೆ. ನಮ್ಮ ಮಕ್ಕಳು ಕನ್ನಡವನ್ನು ಓದಬೇಕು, ಬರೆಯಬೇಕು, ಮಾತನಾಡಬೇಕು. ಕನ್ನಡ ಶಾಲೆಗಳು ಉಳಿಯಬೇಕು, ಕನ್ನಡ ಸಾಹಿತ್ಯ ಓದುವ ಅಭಿರುಚಿ ಬೆಳೆಯಬೇಕು. ಕನ್ನಡ ರಾಜ್ಯೋತ್ಸವವೆಂದರೆ ಕೇವಲ ಧ್ವಜಾರೋಹಣ, ಮೆರವಣಿಗೆ, ಸಿಹಿ ಹಂಚಿಕೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸೀಮಿತವಾಗಬಾರದು. ಕನ್ನಡದ ಉಳಿವು ಮತ್ತು ಬೆಳವಣಿಗೆಗಾಗಿ ವರ್ಷವಿಡೀ ಶ್ರಮಿಸುವ ಸಂಕಲ್ಪದ ದಿನವಾಗಬೇಕು. ಎಂದು ಅಭಿಪ್ರಾಯ ಪಟ್ಟರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಭಾವಸಾರ ಕ್ಷತ್ರಿಯ ಮಹಿಳಾ ಮಂಡಳಿ ಅಧ್ಯಕ್ಷೆ ಶ್ರೀಮತಿ ಮಮತ ಡಿ.ವಿ. ನವೆಂಬರ್ 1ರಂದೇ ಕನ್ನಡ ರಾಜ್ಯೋತ್ಸವವನ್ನು ಅಧಿಕೃತವಾಗಿ ಹಾಗೂ ಅರ್ಥಪೂರ್ಣವಾಗಿ ಆಚರಿಸಬೇಕು. ಏಕೆಂದರೆ 1956ರ ನವೆಂಬರ್ 1ರಂದು ಕನ್ನಡ ಮಾತನಾಡುವ ಪ್ರದೇಶಗಳು ಒಂದಾಗಿ ಮೈಸೂರು ರಾಜ್ಯ ರಚನೆಯಾದ ಐತಿಹಾಸಿಕ ದಿನ. 1973ರಲ್ಲಿ ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ಮರುನಾಮಕರಣ ಮಾಡಲಾಯಿತು.
ಆದರೆ ರಾಜ್ಯಮಟ್ಟದ ಕವಿಗೋಷ್ಠಿ, ಸಾಹಿತ್ಯ ಸಮ್ಮೇಳನ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನವೆಂಬರ್ ತಿಂಗಳ ಇತರ ದಿನಗಳಲ್ಲಿಯೂ ಆಯೋಜಿಸುವುದರಲ್ಲಿ ತಪ್ಪಿಲ್ಲ ಎಂದು ತಿಳಿಸಿದರು.
ಇದೇ ಸಂಧರ್ಭದಲ್ಲಿ ಲೇಖಕಿ ಶ್ರೀಮತಿ ದಯಾಪುತ್ತೂರ್ಕರ್ ಮಾತನಾಡಿ ನವೆಂಬರ್ ತಿಂಗಳ ಪೂರ್ತಿ ನಡೆಯುವ ಈ ಸಂಭ್ರಮವು ವರ್ಷದ ಉಳಿದ 11 ತಿಂಗಳುಗಳೂ ನಮ್ಮ ದೈನಂದಿನ ವ್ಯವಹಾರದಲ್ಲಿ, ತಂತ್ರಜ್ಞಾನದಲ್ಲಿ ಮತ್ತು ಮನೆಮಾತಿನಲ್ಲಿ ನಮ್ಮ ಜೀವಮಾನವಿಡೀ ಕನ್ನಡವನ್ನು ಉಳಿಸಿ ಬೆಳೆಸಲು ಒಂದು ಪ್ರೇರಣೆಯಾಗಬೇಕು ಎಂದರು

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಭಾರತೀಯ ಯೋಗ ಶಿಕ್ಷಣ ಸಂಸ್ಥೆ ಗೌರವ ಅಧ್ಯಕ್ಷರಾದ ಸತ್ಯಪ್ಪ ಆರ್ ಮಾತನಾಡಿ ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸವಿದ್ದು, ಅನೇಕ ಕವಿಗಳು, ಸಾಹಿತಿಗಳು ಹಾಗೂ ಶರಣರ ಕೊಡುಗೆಯಿಂದ ಕನ್ನಡ ಸಾಹಿತ್ಯ ಶ್ರೀಮಂತಗೊಂಡಿದೆ. ಇಂದಿನ ಆಧುನಿಕ ತಂತ್ರಜ್ಞಾನದ ಯುಗದಲ್ಲಿಯೂ ಕನ್ನಡವನ್ನು ಶಿಕ್ಷಣ, ಆಡಳಿತ, ವ್ಯವಹಾರ ಹಾಗೂ ದೈನಂದಿನ ಬದುಕಿನಲ್ಲಿ ಹೆಚ್ಚು ಬಳಸುವ ಮೂಲಕ ಭಾಷೆಯ ಬೆಳವಣಿಗೆಗೆ ಸಹಕರಿಸಬೇಕು ಎಂದು ಕರೆ ನೀಡಿದರು.

ಭಾರತೀಯ ಯೋಗ ಶಿಕ್ಷಣ ಸಂಸ್ಥೆಯಿಂದ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಗಣ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು. ಸನ್ಮಾನಿತರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡು, ಕನ್ನಡ ನಾಡು-ನುಡಿ ಹಾಗೂ ಸಾಹಿತ್ಯದ ಬೆಳವಣಿಗೆಗಾಗಿ ಸಂಘ-ಸಂಸ್ಥೆಗಳು ನಡೆಸುತ್ತಿರುವ ಕಾರ್ಯಗಳನ್ನು ಶ್ಲಾಘಿಸಿದರು.

ಅಧ್ಯಕ್ಷತೆ ವಹಿಸಿದ್ದ ಸತ್ಯಪ್ಪ ಆರ್. ಮಾತನಾಡಿ, ಸಾಹಿತ್ಯವು ಸಮಾಜದ ಚಿಂತನೆಗಳನ್ನು ಪ್ರತಿಬಿಂಬಿಸುವ ಶಕ್ತಿಯುತ ಮಾಧ್ಯಮವಾಗಿದೆ. ಕವಿಗಳು ತಮ್ಮ ಬರಹಗಳ ಮೂಲಕ ಸಮಾಜದಲ್ಲಿ ಜಾಗೃತಿ, ಮಾನವೀಯತೆ ಹಾಗೂ ಕನ್ನಡಾಭಿಮಾನ ಬೆಳೆಸುವ ಕಾರ್ಯ ಮಾಡಬೇಕು ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ನಡೆದ ರಾಜ್ಯಮಟ್ಟದ ಕವಿಗೋಷ್ಠಿಯಲ್ಲಿ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಕವಿಗಳು ಕನ್ನಡ ನಾಡಿನ ಇತಿಹಾಸ, ಭಾಷೆಯ ವೈಶಿಷ್ಟ್ಯ, ನೆಲ-ಜಲ, ರೈತರು, ಸಂಸ್ಕೃತಿ, ಕನ್ನಡಾಭಿಮಾನ ಹಾಗೂ ಸಾಮಾಜಿಕ ಕಳಕಳಿಯ ವಿಷಯಗಳ ಕುರಿತು ಸ್ವರಚಿತ ಕವನಗಳನ್ನು ವಾಚಿಸಿದರು. ಕವಿಗಳ ಕವನ ವಾಚನಕ್ಕೆ ಸಭಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಯಿತು.

ಕಾರ್ಯಕ್ರಮದಲ್ಲಿ ಜ್ಞಾನಪೀಠ ಸಾಹಿತ್ಯ ಸಾಂಸ್ಕೃತಿಕ ಸಂಸ್ಥೆ ಅಧ್ಯಕ್ಷ ಲೋಕೇಶ್ ಕೆ.ಹೆಚ್, ಹಿರಿಯ ಪೋಲಿಸ್ ಅಧಿಕಾರಿ ಮಲ್ಲಿಕಾರ್ಜುನಚಾರ್, ಖ್ಯಾತ ಉದ್ಯಮಿ ವೇದಪ್ರಕಾಶ್ ಇನ್ನಿತರರು ಭಾಗವಹಿಸಿದ್ದರು.

ನಮ್ಮ ಸಮಗ್ರ ಸುದ್ದಿಗಳಿಗಾಗಿ ಕೆಳಗಿನ Social Media ಪುಟಗಳಿಗೆ Follow / Subscribe ಮಾಡಿ.

🟢 WhatsApp Group

Join WhatsApp Group

🔵 Facebook Page

Follow Facebook Page

⚫ Twitter / X

Follow on X (Twitter)

🟣 Threads

Follow on Threads

🟠 Instagram

Follow on Instagram

🔵 Telegram

Join Telegram Channel

🟢 WhatsApp Channel

Follow WhatsApp Channel

📰 ಸಮಗ್ರ ಸುದ್ದಿ

ನಿಖರತೆಗೆ ಮತ್ತೊಂದು ಹೆಸರು

📢 ಸುದ್ದಿ • ಮಾಹಿತಿ • ಶಿಕ್ಷಣ • ಉದ್ಯೋಗ • ಕರ್ನಾಟಕ • ದೇಶ • ಜಗತ್ತು

Leave a Reply

Your email address will not be published. Required fields are marked *