ಮಂಡ್ಯ| ಕಳ್ಳ-ಪೊಲೀಸ್‌ ಆಟ: ಅಸಲಿ ಗನ್‌ನಿಂದಲೇ ಶೂಟ್ ಮಾಡಿದ 13ರ ಬಾಲಕ; ಗುಂಡು ತಗುಲಿ 3 ವರ್ಷದ ಬಾಲಕ ಮೃತ.

ELDER BROTHER SHOT YOUNGER BROTHER : ಕಳ್ಳ-ಪೊಲೀಸ್ ಆಟವಾಡುತ್ತಾ ಅಸಲಿ ಗನ್​ನಿಂದ ಅಣ್ಣ ತನ್ನ ತಮ್ಮನಿಗೆ ಶೂಟ್​ ಮಾಡಿದ್ದಾನೆ. ಗುಂಡು ತಗುಲಿದ ಬಾಲಕ ತೀವ್ರ ರಕ್ತಸ್ರಾವವಾಗಿ ಸಾವನ್ನಪ್ಪಿದ್ದಾನೆ. ತಾಯಿಯೂ ಗಾಯಗೊಂಡಿದ್ದಾರೆ.

ಮಂಡ್ಯ: 13 ವರ್ಷದ ಬಾಲಕನೊಬ್ಬ ಆಟವಾಡುತ್ತಿದ್ದಾಗ ಆಕಸ್ಮಿಕವಾಗಿ ತನ್ನ 3 ವರ್ಷದ ತಮ್ಮನ ಮೇಲೆ ಕೋವಿಯಿಂದ ಗುಂಡು ಹಾರಿಸಿದ ಘಟನೆ ಜಿಲ್ಲೆಯ ನಾಗಮಂಗಲ ತಾಲೂಕಿನಲ್ಲಿ ಭಾನುವಾರ ನಡೆದಿದೆ. ಗುಂಡು ತಗುಲಿ ತೀವ್ರ ರಕ್ತಸ್ರಾವವಾಗಿ ಬಾಲಕ ಮೃತಪಟ್ಟಿದ್ದಾನೆ.

ನಾಗಮಂಗಲದ ದೊಂದೇಮಾದಿಹಳ್ಳಿಯಲ್ಲಿ ಕಾಂಗ್ರೆಸ್ ಮುಖಂಡ ನರಸಿಂಹಮೂರ್ತಿ ಎಂಬವರಿಗೆ ಸೇರಿದ ಕೋಳಿ ಫಾರಂನಲ್ಲಿ ಈ ಘಟನೆ ನಡೆದಿದೆ. ಕಳ್ಳ-ಪೊಲೀಸ್ ಆಟ ಆಡುತ್ತಿದ್ದಾಗ ಬಾಲಕ ತಿಳಿಯದೆ ಅಸಲಿ ಗನ್‌ನಿಂದಲೇ ಶೂಟ್ ಮಾಡಿದ್ದಾನೆ ಎಂದು ತಿಳಿದು ಬಂದಿದೆ.

ಮಕ್ಕಳ ಕೈಗೆ ಕೋವಿ ಸಿಕ್ಕಿದ್ದು ಹೇಗೆ?: ಕೋಳಿ ಫಾರಂನಲ್ಲಿ ಭದ್ರತೆಗಾಗಿ ಒಂದು ಅಸಲಿ ಕೋವಿ (ಗನ್)​ ಇಡಲಾಗಿತ್ತು. ಅದು ಸಜೀವ ಗುಂಡುಗಳಿಂದ ಲೋಡೆಡ್ ಆಗಿತ್ತು. ಪಶ್ಚಿಮ ಬಂಗಾಳದ ಶಶಾಂಕ್ ಹಾಗೂ ಲಿಪಿಕಾ ದಂಪತಿ ಇಲ್ಲಿ ಕೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ. ಇವರ ಇಬ್ಬರು ಗಂಡು ಮಕ್ಕಳು ಆಟವಾಡುತ್ತಿದ್ದರು. ಈ ವೇಳೆ 13 ವರ್ಷದ ಬಾಲಕ (ಅಣ್ಣ) ಮೇಲಿದ್ದ ಗನ್​​​ ತೆಗೆದುಕೊಂಡು ಕಳ್ಳ-ಪೊಲೀಸ್​​ ಆಟ ಆಡೋಣ ಎನ್ನುತ್ತಲೇ ತನ್ನ ತಮ್ಮನ ಮೇಲೆ ಶೂಟ್ ಮಾಡಿದ್ದಾನೆ. ಆಕಸ್ಮಿಕ ಫೈರಿಂಗ್‌ ಮಗುವಿನ ಹೊಟ್ಟೆ ಸೀಳಿದೆ. ತಾಯಿ ಲಿಪಿಕಾ ಅವರಿಗೂ ಗಾಯವಾಗಿದೆ.

ಹೊರಬಂದ ಮಗುವಿನ ಕರುಳು: ಗುಂಡು ಮಗುವಿನ ಹೊಟ್ಟೆ ಸೀಳಿದ್ದರಿಂದ ಕರುಳು ಹೊರಬಂದಿತ್ತು. ಆದರೂ ಉಸಿರಾಡುತ್ತಿದ್ದ ಮಗುವಿನ ಕರುಳುಗಳನ್ನು ಹೊಟ್ಟೆಯ ಮೇಲೆ ಟವೆಲ್‌ನಿಂದ ಕಟ್ಟಿಕೊಂಡು ನಾಗಮಂಗಲ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ತೀವ್ರ ರಕ್ತಸ್ರಾವವಾಗಿದ್ದರಿಂದ ಮಗು ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲಿ ಸಾವನ್ನಪ್ಪಿದೆ.

ಮಂಡ್ಯ ಎಸ್‌ಪಿ ಭೇಟಿ, ಗನ್ ವಶಕ್ಕೆ ಪಡೆದು ತನಿಖೆ: ಘಟನಾ ಸ್ಥಳಕ್ಕೆ ಮಂಡ್ಯ ಎಸ್‌ಪಿ ಮಲ್ಲಿಕಾರ್ಜುನ ಬಾಲದಂಡಿ ಭೇಟಿ ನೀಡಿ ಪರಿಶೀಲಿಸಿದರು. ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗನ್ ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದೆ.

Source : https://www.etvbharat.com/kn/!state/an-elder-brother-shot-his-younger-brother-with-a-real-gun-mistaking-it-as-toy-gun-in-mandya-karnataka-news-kas25021700945

Leave a Reply

Your email address will not be published. Required fields are marked *