ಇಲಿನಾಯ್ಸ್ ಚಿಕಾಗೋ ವಿಶ್ವವಿದ್ಯಾನಿಲಯದಿಂದ ಪಿಎಚ್‌ಡಿ (PHD) ಪಡೆದಿರುವ ಡಾ. ಶರ್ಮಾ ಅವರು ಸಾರಜನಕ ಪರಮಾಣುಗಳನ್ನು ಅಣುಗಳಲ್ಲಿ ಸೇರಿಸುವ ಸಂಶೋಧನೆಯನ್ನು ಅಭಿವೃದ್ಧಿಪಡಿಸಿದ್ದಾರೆ.

ಭಾರತೀಯ (Indian) ಮೂಲದ ಅಮೇರಿಕನ್ ವಿಜ್ಞಾನಿ ಡಾ. ಇಂದ್ರಜೀತ್ (Dr. Indrajeet) ಶರ್ಮಾ ಅವರು ಕ್ಯಾನ್ಸರ್ (Cancer), ಕ್ಷಯ ಮತ್ತು ನರವೈಜ್ಞಾನಿಕ ಅಸ್ವಸ್ಥತೆಗಳಂತಹ ಕಾಯಿಲೆಗಳ ಚಿಕಿತ್ಸೆಯಲ್ಲಿ ಕ್ರಾಂತಿಯನ್ನುಂಟುಮಾಡುವ ಅದ್ಭುತ ವೈದ್ಯಕೀಯ ಸಂಶೋಧನೆಯೊಂದನ್ನು ಮಾಡಿದ್ದಾರೆ. ಇಲಿನಾಯ್ಸ್ ಚಿಕಾಗೋ ವಿಶ್ವವಿದ್ಯಾನಿಲಯದಿಂದ ಪಿಎಚ್‌ಡಿ (PHD) ಪಡೆದಿರುವ ಡಾ. ಶರ್ಮಾ ಅವರು ಸಾರಜನಕ ಪರಮಾಣುಗಳನ್ನು ಅಣುಗಳಲ್ಲಿ ಸೇರಿಸುವ ಸಂಶೋಧನೆಯನ್ನು ಅಭಿವೃದ್ಧಿಪಡಿಸಿದ್ದಾರೆ.
ಭಾರತೀಯ ಮೂಲದ ವಿಜ್ಞಾನಿಯ ಮಹತ್ವದ ಸಾಧನೆ!
ಈ ಒಂದು ಸಂಶೋಧನೆ ಕ್ಯಾನ್ಸರ್, ಕ್ಷಯ ಮತ್ತು ನರವೈಜ್ಞಾನಿಕ ಅಸ್ವಸ್ಥತೆಗಳಂತಹ ಕಾಯಿಲೆಗಳ ಔಷಧ ಅಭಿವೃದ್ಧಿಯಲ್ಲಿ ಆನೆಬಲ ನೀಡುತ್ತದೆ ಎನ್ನಲಾಗಿದೆ.
ಔಷಧ ಅಭಿವೃದ್ಧಿಯಲ್ಲಿ ಸಾರಜನಕ ಪರಮಾಣುಗಳ ಪಾತ್ರ
ಸಾರಜನಕ ಪರಮಾಣುಗಳು ಮತ್ತು ಸಾರಜನಕ-ಒಳಗೊಂಡಿರುವ ರಚನೆಗಳು, ಹೆಟೆರೊಸೈಕಲ್ಸ್ ಎಂದು ಕರೆಯಲ್ಪಡುತ್ತವೆ, ಔಷಧೀಯ ರಸಾಯನಶಾಸ್ತ್ರದಲ್ಲಿ ಅತ್ಯಗತ್ಯ ಮತ್ತು ಔಷಧ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಡಾ ಶರ್ಮಾ ನೇತೃತ್ವದ ಸಂಶೋಧನಾ ತಂಡವು ಸಲ್ಫೆನೈಲ್ನೈಟ್ರೀನ್ ಎಂಬ ಅಲ್ಪಾವಧಿಯ ರಾಸಾಯನಿಕವನ್ನು ಪರಿಚಯಿಸುವ ಮೂಲಕ, ಈ ಜೈವಿಕ ಸಕ್ರಿಯ ಅಣುಗಳಲ್ಲಿ ಸಾರಜನಕ ಪರಮಾಣುಗಳನ್ನು ಸೇರಿಸಬಹುದು ಎಂದು ಕಂಡುಹಿಡಿದಿದೆ.
ಈ ಪ್ರಕ್ರಿಯೆಯು ಅವುಗಳನ್ನು ಔಷಧಗಳನ್ನು ತಯಾರಿಸಲು ಉಪಯುಕ್ತವಾದ ಹೊಸ ಫಾರ್ಮಾಕೋಫೋರ್‌ಗಳಾಗಿ ಮಾರ್ಪಡಿಸುತ್ತದೆ. ಶರ್ಮಾ ಅವರ ತಂಡವು ಅಣುವಿನೊಳಗಿನ ಇತರ ಕ್ರಿಯಾತ್ಮಕ ಗುಂಪುಗಳೊಂದಿಗೆ ಹೊಂದಿಕೊಳ್ಳುವ ಸೇರ್ಪಡೆಗಳು ಮತ್ತು ಲೋಹಗಳಿಂದ ಮುಕ್ತವಾದ ಸಲ್ಫೆನೈಲ್ನೈಟ್ರೀನ್‌ಗಳನ್ನು ರಚಿಸಲು ವಿಧಾನವನ್ನು ಅಭಿವೃದ್ಧಿಪಡಿಸಿದ್ದು, ಔಷಧ ಕ್ಷೇತ್ರದಲ್ಲಿ ಇದೊಂದು ಮೈಲಿಗಲ್ಲಾಗಲಿದೆ.
ಕ್ಯಾನ್ಸರ್, ಕ್ಷಯ ಮತ್ತು ನರವೈಜ್ಞಾನಿಕ ಕಾಯಿಲೆಗಳ ಚಿಕಿತ್ಸೆಗೆ ಸಹಾಯ
ಅಸ್ತಿತ್ವದಲ್ಲಿರುವ ಎಲ್ಲಾ FDA-ಅನುಮೋದಿತ ಔಷಧಿಗಳಲ್ಲಿ 85 ಪ್ರತಿಶತವು ಒಂದು ಅಥವಾ ಹೆಚ್ಚಿನ ಸಾರಜನಕ ಪರಮಾಣುಗಳನ್ನು ಹೊಂದಿದೆ. ಕೆಲ ಟಾಪ್ 200 ಬ್ರ್ಯಾಡೆಂಡ್ ಔಷಧಿಗಳು 75-80% ನೈಟ್ರೋಜನ್ ಹೆಟೆರೊಸೈಕಲ್ಗಳನ್ನು ಹೊಂದಿವೆ ಎಂದು ಡಾ. ಶರ್ಮಾ ಹೇಳಿದರು.
“ಅಭಿವೃದ್ಧಿಯ ನಂತರದ ಹಂತಗಳಲ್ಲಿ ಈ ಅಸ್ತಿತ್ವದಲ್ಲಿರುವ ಔಷಧದ ಹೆಟೆರೋಸೈಕಲ್‌ಗಳಿಗೆ ಒಂದು ಸಾರಜನಕ ಪರಮಾಣುವನ್ನು ಸೇರಿಸುವ ಮೂಲಕ, ನಾವು ಅದರ ಕ್ರಿಯಾತ್ಮಕತೆಯನ್ನು ಬದಲಾಯಿಸದೆಯೇ ಅಣುವಿನ ಜೈವಿಕ ಮತ್ತು ಔಷಧೀಯ ಗುಣಲಕ್ಷಣಗಳನ್ನು ಬದಲಾಯಿಸಬಹುದು” ಎಂದು ಅವರು ಹೇಳಿದರು.
ಸ್ಕೆಲಿಟಲ್ ಎಡಿಟಿಂಗ್ ವಿಧಾನವು ಹೆಚ್ಚಿನ ಔಷಧ ವೈವಿಧ್ಯತೆಯನ್ನು ಅನುಮತಿಸುತ್ತದೆ ಎಂದು ಡಾ. ಶರ್ಮಾ ವಿವರಿಸಿದರು. ಮೊದಲಿನಿಂದಲೂ ಹೊಸ ಔಷಧಗಳನ್ನು ರಚಿಸುವ ಬದಲು, ಈ ವಿಧಾನವು ಸಂಶೋಧಕರಿಗೆ ಕೇವಲ ಒಂದು ಸಾರಜನಕ ಪರಮಾಣುವನ್ನು ಸೇರಿಸುವ ಮೂಲಕ ಅಸ್ತಿತ್ವದಲ್ಲಿರುವ ಔಷಧಗಳನ್ನು ಮಾರ್ಪಡಿಸಲು ಅನುಮತಿಸುತ್ತದೆ. ಈ ಸೇರ್ಪಡೆಯು ಮಹತ್ವದ್ದಾಗಿದೆ ಏಕೆಂದರೆ ಸಾರಜನಕವು ಡಿಎಸ್‌ಎ, ಆರ್‌ಎನ್‌ಎ, ಪ್ರೋಟೀನ್‌ಗಳು ಮತ್ತು ಅಮೈನೋ ಆಮ್ಲಗಳ ನಿರ್ಣಾಯಕ ಭಾಗವಾಗಿದೆ.
ಈ ರೀತಿಯಾಗಿ ಸಾರಜನಕವನ್ನು ಸೇರಿಸುವ ಮೂಲಕ, ಕ್ಯಾನ್ಸರ್ ಮತ್ತು ನರವೈಜ್ಞಾನಿಕ ಅಸ್ವಸ್ಥತೆಗಳಂತಹ ಸಂಕೀರ್ಣ ಕಾಯಿಲೆಗಳಿಗೆ ಚಿಕಿತ್ಸೆಗಳನ್ನು ಅಭಿವೃದ್ಧಿಪಡಿಸುವಲ್ಲಿ ಡಾ. ಶರ್ಮಾ ಅವರ ಈ ಸಂಶೋಧನೆ ಪ್ರಮುಖ ಪಾತ್ರವನ್ನು ವಹಿಸುತ್ತದೆ.
“ಆರೋಗ್ಯದ ವೆಚ್ಚವನ್ನು ಕಡಿಮೆ ಮಾಡಬಹುದು”
ಈ ನವೀನ ವಿಧಾನವು ಆರೋಗ್ಯ ರಕ್ಷಣೆಯ ಕೈಗೆಟುಕುವಿಕೆ ಮತ್ತು ಲಭ್ಯತೆಯ ಮೇಲೆ ಗಮನಾರ್ಹ ಪರಿಣಾಮ ಬೀರಬಹುದು. “ಅಭಿವೃದ್ಧಿಯ ಕೊನೆಯ ಹಂತಗಳಲ್ಲಿ ಸಾರಜನಕ ಪರಮಾಣುವನ್ನು ಸೇರಿಸುವ ಮೂಲಕ, ನೀವು ಹೊಸ ಔಷಧಿಗಳನ್ನು ಅಗ್ಗವಾಗಿ ಮಾಡಬಹುದು. ಈ ವಿಧಾನ ಒಂದು ಮನೆಯನ್ನು ಹೊಸದಾಗಿ ಕಟ್ಟವ ಬದಲು ನವೀಕರಣ ಮಾಡಿದ ರೀತಿಯನ್ನು ಹೋಲುತ್ತದೆ” ಎಂದು ಶರ್ಮಾ ಹೇಳಿದರು.
ಅಮೇರಿಕಾದಲ್ಲೂ, ತಲಾ ಆರೋಗ್ಯ ವೆಚ್ಚಗಳು ವಾರ್ಷಿಕವಾಗಿ $12,000 (ಅಂದಾಜು ರೂ 10.28 ಲಕ್ಷ) ಮೀರಿ ಹೋಗುತ್ತಿದೆ. ಹೀಗಾಗಿ ಈ ಔಷಧಿಗಳನ್ನು ದೊಡ್ಡ ಪ್ರಮಾಣದಲ್ಲಿ ಉತ್ಪಾದಿಸಲು ಸುಲಭಗೊಳಿಸುವ ಮೂಲಕ, ನಾವು ಪ್ರಪಂಚದಾದ್ಯಂತ ದುರ್ಬಲ ಜನಸಂಖ್ಯೆಯ ಆರೋಗ್ಯದ ವೆಚ್ಚವನ್ನು ಕಡಿಮೆ ಮಾಡಬಹುದು ಎಂದು ಡಾ. ಶರ್ಮಾ ಹೇಳಿದ್ದಾರೆ.