ದುಬೈ, ಡಿ.21:
ಭಾರತ ಹಾಗೂ ಪಾಕಿಸ್ತಾನ ನಡುವಿನ ಬಹುನಿರೀಕ್ಷಿತ ಅಂಡರ್-19 ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಭಾರತ ತಂಡಕ್ಕೆ ಭಾರೀ ಆಘಾತ ಎದುರಾಯಿತು. ಆಯುಷ್ ಮ್ಹಾತ್ರೆ ನಾಯಕತ್ವದ ಭಾರತ ತಂಡ, ಪಾಕಿಸ್ತಾನ ವಿರುದ್ಧ 191 ರನ್ಗಳ ಭಾರೀ ಅಂತರದ ಸೋಲನ್ನು ಅನುಭವಿಸಿತು.
ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ಭಾರತ ತಂಡ ತನ್ನ ನಿರ್ಧಾರವನ್ನು ಸಮರ್ಥಿಸಿಕೊಳ್ಳಲು ವಿಫಲವಾಯಿತು. ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ತಂಡ, ಆರಂಭಿಕ ಬ್ಯಾಟರ್ ಸಮೀರ್ ಮಿನ್ಹಾಸ್ ಅವರ ಅದ್ಭುತ ಶತಕದ ನೆರವಿನಿಂದ ನಿಗದಿತ 50 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 347 ರನ್ಗಳ ಬೃಹತ್ ಮೊತ್ತ ಕಲೆಹಾಕಿತು.
113 ಎಸೆತಗಳನ್ನು ಎದುರಿಸಿದ ಮಿನ್ಹಾಸ್, 9 ಸಿಕ್ಸರ್ ಮತ್ತು 17 ಬೌಂಡರಿಗಳೊಂದಿಗೆ 172 ರನ್ ಸಿಡಿಸಿದರು. ಈ ಮೂಲಕ ಅಂಡರ್-19 ಏಷ್ಯಾ ಕಪ್ ಫೈನಲ್ಗಳ ಇತಿಹಾಸದಲ್ಲೇ ಅತ್ಯಧಿಕ ವೈಯಕ್ತಿಕ ಸ್ಕೋರ್ ದಾಖಲಿಸಿದರು. ಇದಕ್ಕೂ ಮುನ್ನ 2012ರಲ್ಲಿ ಸಮಿ ಅಸ್ಲಾಮ್ ಬಾರಿಸಿದ್ದ 134 ರನ್ಗಳೇ ದಾಖಲೆ ಆಗಿತ್ತು. ಮಿನ್ಹಾಸ್ಗೆ ಉತ್ತಮ ಬೆಂಬಲ ನೀಡಿದ ಉಸ್ಮಾನ್ ಖಾನ್ (35) ಹಾಗೂ ಅಹ್ಮದ್ ಹುಸೇನ್ (56) ತಂಡದ ಮೊತ್ತವನ್ನು ಇನ್ನಷ್ಟು ವಿಸ್ತರಿಸಿದರು.
ಗುರಿ ಬೆನ್ನಟ್ಟಿದ ಭಾರತ ತಂಡದ ಆರಂಭ ಭರವಸೆಯಂತಿತ್ತು. ಸ್ಫೋಟಕ ಬ್ಯಾಟರ್ ವೈಭವ್ ಸೂರ್ಯವಂಶಿ ಮೊದಲ ಎಸೆತವನ್ನೇ ಸಿಕ್ಸರ್ಗೆ ಅಟ್ಟಿದರು. ಮೊದಲ ಓವರ್ನಲ್ಲೇ 20 ರನ್ ದೋಚಿ ಭರ್ಜರಿ ಆರಂಭ ನೀಡಿದರು. ಆದರೆ 26 ರನ್ ಗಳಿಸಿದ ವೇಳೆ ವಿಕೆಟ್ ಕಳೆದುಕೊಂಡ ಅವರು ಔಟಾದ ಬಳಿಕ ಭಾರತದ ಪತನ ಆರಂಭವಾಯಿತು.
ನಾಯಕ ಆಯುಷ್ ಮ್ಹಾತ್ರೆ (2), ಆರನ್ ಜಾರ್ಜ್ (16), ವಿಹಾನ್ ಮಲ್ಹೋತ್ರಾ (7), ವೇದಾಂತ್ ತ್ರಿವೇದಿ (9) ಒಬ್ಬರ ಹಿಂದೆ ಒಬ್ಬರಂತೆ ಪೆವಿಲಿಯನ್ ಸೇರಿದರು. 26.2 ಓವರ್ಗಳಲ್ಲಿ ಭಾರತ ತಂಡ 156 ರನ್ಗಳಿಗೆ ಸರ್ವಪತನ ಕಂಡಿತು.
ಇನ್ನೇನು ತಂಡ 100ರೊಳಗೆ ಕುಸಿಯುತ್ತದೆ ಎನ್ನುವಷ್ಟರಲ್ಲಿ 9ನೇ ಕ್ರಮಾಂಕದಲ್ಲಿ ಆಡಲಿಳಿದ ದೀಪೇಶ್ ದೇವೇಂದ್ರನ್ 16 ಎಸೆತಗಳಲ್ಲಿ 36 ರನ್ ಬಾರಿಸಿ ತಂಡದ ಗೌರವ ಉಳಿಸಿದರು.
ಪಾಕಿಸ್ತಾನ ಪರ ಘಾತಕ ಬೌಲಿಂಗ್ ದಾಳಿ ನಡೆಸಿದ ಅಲಿ ರಾಜಾ 4 ವಿಕೆಟ್ ಕಿತ್ತು ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಉಳಿದಂತೆ ಮೊಹಮ್ಮದ್ ಸಯ್ಯಾಮ್, ಅಬ್ದುಲ್ ಸುಭಾನ್ ಹಾಗೂ ಹುಜೈಫಾ ಅಹ್ಸಾನ್ ತಲಾ 2 ವಿಕೆಟ್ ಪಡೆದರು.
ಈ ಸೋಲಿನೊಂದಿಗೆ ಭಾರತ ಅಂಡರ್-19 ತಂಡದ ಏಷ್ಯಾ ಕಪ್ ಕನಸು ಮುರಿದಿದ್ದು, ಪಾಕಿಸ್ತಾನ ತಂಡ ಶ್ರೇಷ್ಠ ಪ್ರದರ್ಶನದೊಂದಿಗೆ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.