ನವದೆಹಲಿ: ರಾಷ್ಟ್ರೀಯ ಹೆದ್ದಾರಿಗಳನ್ನು ಆಗಾಗ್ಗೆ ಬಳಸುವ ಮಧ್ಯಮ ವರ್ಗ ಹಾಗೂ ಖಾಸಗಿ ಕಾರು ಮಾಲೀಕರಿಗೆ ಕೇಂದ್ರ ಸರ್ಕಾರ ಗುಡ್ನ್ಯೂಸ್ ಕೊಡೋದಕ್ಕೆ ಮುಂದಾಗಿದೆ. ಟೋಲ್ ಸಂಗ್ರಹದಲ್ಲಿ ಉಂಟಾಗುತ್ತಿದ್ದ ಕಿರಿಕಿರಿ ತಪ್ಪಿಸಲು ಹಾಗೂ ಕಾರು ಮಾಲೀಕರಿಗೆ ಅನುಕೂಲ ಮಾಡಿಕೊಡಲು ʻವಾರ್ಷಿಕ ಟೋಲ್ ಪಾಸ್ʼ ವ್ಯವಸ್ಥೆಯ ಅನುಷ್ಠಾನಕ್ಕೆ ಚಿಂತನೆ ನಡೆಸಿದೆ.
![](https://samagrasuddi.co.in/wp-content/uploads/2025/02/image-49.png)
ಈ ಪ್ರಸ್ತಾವನೆ ಕುರಿತು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಪರಿಶೀಲಿಸುತ್ತಿದೆ. ಅದರಂತೆ ಒಮ್ಮೆಲೆ 3,000 ರೂ. ಪಾವತಿಸಿ ಒಂದು ವರ್ಷದಲ್ಲಿ ಎಷ್ಟು ಬಾರಿ ಬೇಕಾದರೂ ಟೋಲ್‌ಗಳಲ್ಲಿ ಸಂಚಾರ ಮಾಡಬಹುದು. 30,000 ರೂ. ಪಾವತಿಸಿದ್ರೆ ʻಜೀವಮಾನದ ಪಾಸ್ʼ ಒದಗಿಸುವ ಸಾಧ್ಯತೆಯೂ ಇದೆ. 30,000 ರೂ.ಗಳ ಪಾಸ್ ಪಡೆದರೆ 15 ವರ್ಷಗಳವರೆಗೆ ಟೋಲ್‌ಗಳಲ್ಲಿ ಸಂಚಾರಕ್ಕೆ ಅವಕಾಶ ಇರಲಿದೆ ಎಂದು ಮೂಲಗಳು ತಿಳಿಸಿವೆ.
ಸದ್ಯದ ಮಾಹಿತಿ ಪ್ರಕಾರ, ಈ ವ್ಯವಸ್ಥೆ ಅನುಷ್ಠಾನಗೋಳಿಸುವ ಪ್ರಸ್ತಾವನೆಯು ಪ್ರಗತಿಯಲ್ಲಿದೆ. ಜೊತೆಗೆ ಕಾರುಗಳಿಗೆ ಪ್ರತಿ ಕಿಮೀಗೆ ವಿಧಿಸಲಾಗುವ ಟೂಲ್‌ನ ಮೂಲ ಬೆಲೆಯನ್ನೂ ಮೊಟಕುಗೊಳಿಸುವ ಬಗ್ಗೆಯೂ ಸಚಿವಾಲಯ ಚಿಂತನೆ ನಡೆಸಿದೆ. ಫಾಸ್ಟ್ ಟ್ಯಾಗ್ ಹೊಂದಿರುವವರಿಗೆ ಇದು ಅಗತ್ಯವಿಲ್ಲ ಎಂದು ಸಹ ಹೇಳಲಾಗಿದೆ.
ಪ್ರತಿ 60 ಕಿಲೋಮೀಟರ್‌ಗಳಿಗೆ ಒಂದು ಟೋಲ್ ಗೇಟ್ ಇದೆ. ಈ ಟೋಲ್ ಗೇಟ್‌ಗಳಲ್ಲಿ ನಿಗದಿತ ಮೊತ್ತವನ್ನು ಪಾವತಿಸಿದ ನಂತರವೇ ಮುಂದುವರಿಯಬೇಕಿದೆ. ಆದರೆ ಈಗ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಇಲಾಖೆ ತೆಗೆದುಕೊಂಡ ನಿರ್ಧಾರದಿಂದ ಎಲ್ಲಾ ವಾಹನ ಚಾಲಕರಿಗೆ ಕೊಂಚ ಆರಾಮ ಸಿಗಲಿದೆ ಎಂದು ನಿರೀಕ್ಷಿಸಲಾಗುತ್ತಿದೆ.
ಸದ್ಯ ಆಗಾಗ್ಗೆ ರಾಷ್ಟ್ರೀಯ ಹೆದ್ದಾರಿ ಬಳಸುವ ವಾಹನ ಸವಾರರಿಗೆ ಮಾಸಿಕ ಪಾಸ್ ನೀಡುವ ವ್ಯವಸ್ಥೆ ಚಾಲ್ತಿಯಲಿದೆ. ಇದು ಮಾಸಿಕ ಪಾಸ್‌ಗೆ 340 ರೂ. ಇದು, ವಾರ್ಷಿಕ 4,080 ರೂ.ಆಗಲಿದೆ. ವಾರ್ಷಿಕ ಪಾಸ್ ವ್ಯವಸ್ಥೆ ಜಾರಿಗೆ ಬಂದರೆ 1,080 ರೂ. ಉಳಿತಾಯವಾಗಲಿದೆ. ಇದು ಮಧ್ಯಮ ವರ್ಗದವರಿಗೆ ಇನ್ನಷ್ಟು ಅನುಕೂಲ ಮಾಡಿಕೊಟ್ಟಂತಾಗುತ್ತದೆ.
ಇತ್ತೀಚೆಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ ʻಏಕ ಟೋಲ್ʼ ವ್ಯವಸ್ಥೆ ಜಾರಿಗೊಳಿಸುವ ಬಗ್ಗೆ ಚಿಂತನೆ ನಡೆಸುವುದಾಗಿ ಹೇಳಿದ್ದರು. 2023-24ರ ವರ್ಷದಲ್ಲಿ ಸಂಗ್ರಹವಾದ 55,000 ಕೋಟಿ ರೂ.ಗಳ ಪೈಕಿ, ಖಾಸಗಿ ಕಾರುಗಳಿಂದ ಸಂಗ್ರಹಿತವಾದ ಟೋಲ್ ಶುಲ್ಕ 8,000 ಕೋಟಿ ರೂ. ಮಾತ್ರವೇ ಇದೆ. ಖಾಸಗಿ ಕಾರುಗಳ ವಹಿವಾಟು 53% ಇದ್ದರೂ, ಟೋಲ್ ಸಂಗ್ರಹದಲ್ಲಿ ಶೇ.21 ರಷ್ಟಿದೆ ಎಂದು ಡೇಟಾ ತೋರಿಸಿದೆ. ಹೀಗಾಗಿ ಹೊಸ ಕ್ರಮಕ್ಕೆ ಸಚಿವಾಲಯ ಮುಂದಾಗಿದೆ.