ಸೋಲುಗಳ ಸರಮಾಲೆ. ಭಾರತ ಟೆಸ್ಟ್ ತಂಡಕ್ಕೆ ‘ಗಂಭೀರ’ ಸಮಸ್ಯೆ.

ಟೀಮ್ ಇಂಡಿಯಾ ಕೋಚ್ ಗೌತಮ್ ಗಂಭೀರ್ ಗರಡಿಯಲ್ಲಿ ಭಾರತ ತಂಡವು ಈವರೆಗೆ 11 ಟೆಸ್ಟ್​ ಪಂದ್ಯಗಳನ್ನಾಡಿದೆ. ಈ ಹನ್ನೊಂದು ಮ್ಯಾಚ್​ಗಳಲ್ಲಿ ಟೀಮ್ ಇಂಡಿಯಾ ಗೆದ್ದಿರುವುದು ಕೇವಲ ಮೂರು ಪಂದ್ಯಗಳಲ್ಲಿ ಎಂದರೆ ನಂಬಲೇಬೇಕು. ಅಂದರೆ ಗಂಭೀರ್ ಗರಡಿಯಲ್ಲಿ ಭಾರತ ಟೆಸ್ಟ್ ತಂಡವು ಅಧಃಪತನದತ್ತ ಸಾಗುತ್ತಿದೆ.

ಇದಕ್ಕೆ ಸಾಕ್ಷಿ ಈ ಅಂಕಿ ಅಂಶಗಳು…

2024 ರಲ್ಲಿ ಬೆಂಗಳೂರಿನಲ್ಲಿ ನಡೆದ ಮೊದಲ ಟೆಸ್ಟ್​ ಪಂದ್ಯದಲ್ಲಿ ಟೀಮ್ ಇಂಡಿಯಾ ವಿರುದ್ಧ ನ್ಯೂಝಿಲೆಂಡ್ 8 ವಿಕೆಟ್​ಗಳ ಗೆಲುವು ದಾಖಲಿಸಿತ್ತು. ಇದು 36 ವರ್ಷಗಳ ಬಳಿಕ ಭಾರತದಲ್ಲಿ ನ್ಯೂಝಿಲೆಂಡ್ ತಂಡಕ್ಕೆ ದಕ್ಕಿದ ಮೊದಲ ಟೆಸ್ಟ್ ಜಯ ಎಂಬುದು ವಿಶೇಷ. ಅಷ್ಟೇ ಅಲ್ಲದೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕಳೆದ 19 ವರ್ಷಗಳಿಂದ ಗೆಲ್ಲುತ್ತಾ ಬಂದಿದ್ದ ಟೀಮ್ ಇಂಡಿಯಾದ ಗೆಲುವಿನ ನಾಗಾಲೋಟ ಕೂಡ ಇದರೊಂದಿಗೆ ಅಂತ್ಯವಾಗಿತ್ತು.

ಇನ್ನು ನ್ಯೂಝಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಕೇವಲ 46 ರನ್​ಗಳಿಗೆ ಆಲೌಟ್ ಆಗಿತ್ತು. ಇದು ಟೆಸ್ಟ್ ಕ್ರಿಕೆಟ್​ ಇತಿಹಾಸದಲ್ಲೇ ತವರಿನಲ್ಲಿ ಭಾರತ ತಂಡ ಕಲೆಹಾಕಿದ ಅತ್ಯಂತ ಕಡಿಮೆ ಸ್ಕೋರ್ ಎಂಬುದು ವಿಶೇಷ.

92 ವರ್ಷಗಳ ಟೆಸ್ಟ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಭಾರತ ತಂಡವು ನ್ಯೂಝಿಲೆಂಡ್ ವಿರುದ್ಧ ಸರಣಿ ಸೋತಿದೆ. ಅಂದರೆ ಗೌತಮ್ ಗಂಭೀರ್ ಕೋಚಿಂಗ್​ನಲ್ಲಿ ಟೀಮ್ ಇಂಡಿಯಾ ಕಿವೀಸ್ ವಿರುದ್ಧದ 9 ದಶಕಗಳ ಪಾರುಪತ್ಯಕ್ಕೆ ತೆರೆ ಎಳೆದಿದೆ.

ನ್ಯೂಝಿಲೆಂಡ್ ವಿರುದ್ಧದ ಸರಣಿ ಸೋಲಿನೊಂದಿಗೆ ತವರಿನಲ್ಲಿ ಭಾರತ ತಂಡದ 12 ವರ್ಷಗಳ ಗೆಲುವಿನ ನಾಗಾಲೋಟಕ್ಕೆ ಬ್ರೇಕ್ ಬಿದ್ದಂತಾಗಿದೆ. ಅಲ್ಲದೆ 12 ವರ್ಷಗಳ ಬಳಿಕ ಟೀಮ್ ಇಂಡಿಯಾ ಸತತ ಟೆಸ್ಟ್ ಪಂದ್ಯಗಳನ್ನು ಸೋತು ನಿರಾಸೆ ಮೂಡಿಸಿದೆ.

ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ 19 ವರ್ಷಗಳ ಟೆಸ್ಟ್ ಗೆಲುವಿನ ನಾಗಾಲೋಟಕ್ಕೆ ತೆರೆ ಎಳೆದಿದ್ದ ಟೀಮ್ ಇಂಡಿಯಾ, ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲೂ ನ್ಯೂಝಿಲೆಂಡ್ ವಿರುದ್ಧ ಸೋತು 12 ವರ್ಷಗಳ ಗೆಲುವಿನ ಪರಂಪರೆಯನ್ನು ಅಂತ್ಯಗೊಳಿಸಿತು.

ಇವೆಲ್ಲಕ್ಕಿಂತ ಮುಖ್ಯವಾಗಿ 92 ವರ್ಷಗಳ ಟೆಸ್ಟ್ ಇತಿಹಾಸದಲ್ಲಿ ಭಾರತ ತಂಡವು ತವರಿನಲ್ಲಿ ಮೂರು ಪಂದ್ಯಗಳ ಸರಣಿಯನ್ನು 3-0 ಅಂತರದಿಂದ ಸೋತಿರಲಿಲ್ಲ. ಆದರೆ ಗಂಭೀರ್ ಕೋಚ್ ಆದ ಬಳಿಕ ಟೀಮ್ ಇಂಡಿಯಾ ನ್ಯೂಝಿಲೆಂಡ್ ವಿರುದ್ಧ 3-0 ಅಂತರದಿಂದ ತವರಿನಲ್ಲಿ ಅವಮಾನಕರ ಸೋಲನುಭವಿಸಿದೆ.

ಇನ್ನು ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾ 10 ವರ್ಷಗಳಿಂದ ಪಾರುಪತ್ಯ ಮರೆದಿತ್ತು. ಆದರೆ ಈ ಬಾರಿ ಗಂಭೀರ್ ಮುಂದಾಳತ್ವದಲ್ಲಿ ಆಸೀಸ್ ಪ್ರವಾಸ ಮಾಡಿದ್ದ ಟೀಮ್ ಇಂಡಿಯಾ 3-1 ಅಂತರದಿಂದ ಹೀನಾಯವಾಗಿ ಸೋಲೊಪ್ಪಿಕೊಂಡಿದೆ. ಈ ಮೂಲಕ ದಶಕದ ಗೆಲುವಿನ ನಾಗಾಲೋಟವನ್ನು ಸಹ ಅಂತ್ಯಗೊಳಿಸಿದೆ.

ಇಷ್ಟೇ ಅಲ್ಲದೆ ಭಾರತ ತಂಡವು ಕಳೆದ ಎರಡು ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್ (2021, 2023) ಆಡಿತ್ತು. ಆದರೆ ಗಂಭೀರ್ ಕೋಚ್ ಆದ ಬಳಿಕ ಕಳಪೆ ಪ್ರದರ್ಶನ ನೀಡಿದ ಟೀಮ್ ಇಂಡಿಯಾ 2025 ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ನಲ್ಲಿ ಫೈನಲ್​ಗೇರಲು ವಿಫಲವಾಗಿದೆ. ಅಂದರೆ ಟೆಸ್ಟ್​ ಕ್ರಿಕೆಟ್​ನ ಬಲಿಷ್ಠ ತಂಡ ಎಂದೇ ಗುರುತಿಸಿಕೊಂಡಿದ್ದ ಭಾರತ ತಂಡವು ಈ ಬಾರಿ ಫೈನಲ್​ಗೆ ಪ್ರವೇಶಿಸಲು ವಿಫಲವಾಗುವ ಮೂಲಕ ಭಾರೀ ಮುಖಭಂಗ ಅನುಭವಿಸಿದೆ.

ಇದೀಗ ಹೆಡಿಂಗ್ಲೆ ಮೈದಾನದಲ್ಲಿ 77 ವರ್ಷಗಳ ಬಳಿಕ ಇಂಗ್ಲೆಂಡ್ ತಂಡವು ಐತಿಹಾಸಿಕ ಗೆಲುವು ದಾಖಲಿಸಿದೆ. ಈ ಮೈದಾನದಲ್ಲಿ 1948 ರಲ್ಲಿ ಆಸ್ಟ್ರೇಲಿಯಾ 404 ರನ್​ ಚೇಸ್ ಮಾಡಿದ್ದು ಈವರೆಗಿನ ದಾಖಲೆಯಾಗಿತ್ತು. ಆ ಬಳಿಕ ಯಾವುದೇ ತಂಡ 370+ ಸ್ಕೋರ್ ಬೆನ್ನತ್ತಿ ಗೆದ್ದಿರಲಿಲ್ಲ. ಆದರೆ ಈ ಬಾರಿ ಟೀಮ್ ಇಂಡಿಯಾ ನೀಡಿದ 371 ರನ್​ಗಳ ಗುರಿಯನ್ನು 82 ಓವರ್​ಗಳಲ್ಲಿ ಬೆನ್ನತ್ತಿ ಇಂಗ್ಲೆಂಡ್ ಅಮೋಘ ಗೆಲುವು ದಾಖಲಿಸಿದೆ.

ಅಂದರೆ ಗೌತಮ್ ಗಂಭೀರ್ ಕೋಚ್ ಆದ ಬಳಿಕ ಭಾರತ ತಂಡವು 7 ಪಂದ್ಯಗಳಲ್ಲಿ ಹೀನಾಯವಾಗಿ ಸೋಲನುಭವಿಸಿದೆ. ಇನ್ನು 1 ಪಂದ್ಯವು ಡ್ರಾನಲ್ಲಿ ಕೊನೆಗೊಂಡರೆ, 3 ಪಂದ್ಯಗಳಲ್ಲಿ ಮಾತ್ರ ಟೀಮ್ ಇಂಡಿಯಾ ಗೆಲುವು ದಾಖಲಿಸಿದೆ. ಹೀಗೆ ಗೆಲುವು ದಾಖಲಿಸಿರುವುದು ಬಾಂಗ್ಲಾದೇಶ್ ವಿರುದ್ಧ ಎಂಬುದು ಇಲ್ಲಿ ಉಲ್ಲೇಖಾರ್ಹ. ಬಾಂಗ್ಲಾ ವಿರುದ್ಧ 2 ಟೆಸ್ಟ್ ಪಂದ್ಯಗಳನ್ನು ಗೆದ್ದರೆ, ಒಂದು ಮ್ಯಾಚ್​ನಲ್ಲಿ ಆಸ್ಟ್ರೇಲಿಯಾ ತಂಡವನ್ನು ಸೋಲಿಸಿದೆ. ಈ ಮೂರು ಗೆಲುವನ್ನು ಹೊರತುಪಡಿಸಿದರೆ ಟೀಮ್ ಇಂಡಿಯಾ ಸತತ ಸೋಲುಗಳಿಂದ ಕಂಗೆಟ್ಟಿರುವುದು.

Leave a Reply

Your email address will not be published. Required fields are marked *