ಅಮೆರಿಕಾದಲ್ಲಿ ಭೀಕರ ಅಪಘಾತ: ಕಾರ್‌ಪೂಲಿಂಗ್ ಆ್ಯಪ್ ಮೂಲಕ ತೆರಳುತ್ತಿದ್ದ ನಾಲ್ವರು ಭಾರತೀಯರ ಸಜೀವ ದಹನ.

ವಾಷಿಂಗ್ಟನ್‌: ಟೆಕ್ಸಾಸ್‌ನಲ್ಲಿ ಐದು ವಾಹನಗಳು ಸಂಭವಿಸಿದ ಭೀಕರ ಅಪಘಾತದಲ್ಲಿ ಮಹಿಳೆ ಸೇರಿದಂತೆ ನಾಲ್ವರು ಭಾರತೀಯರು ಸಜೀವ ದಹನವಾಗಿದ್ದಾರೆ. ಇವರು ಕಾರ್‌ಪೂಲಿಂಗ್ ಆ್ಯಪ್ ಮೂಲಕ ಸಂಪರ್ಕ ಹೊಂದಿದ್ದರು. ಶುಕ್ರವಾರ ಅರ್ಕಾನ್ಸಾಸ್‌ನ ಬೆಂಟೊನ್‌ವಿಲ್ಲೆಗೆ ತೆರಳುತ್ತಿದ್ದಾಗ ದುರಂತ ಸಂಭವಿಸಿದೆ.

ಅಪಘಾತದ ತೀವ್ರತೆಗೆ SUV ಕಾರು ಹೊತ್ತಿ ಉರಿಯಿತು. ಪರಿಣಾಮ ಕಾರಿನಲ್ಲಿದ್ದವರು ಸುಟ್ಟು ಕರಕಲಾಗಿದ್ದಾರೆ. ಮೃತರ ಗುರುತುಗಳನ್ನು ಖಚಿತಪಡಿಸಲು ಅಧಿಕಾರಿಗಳು ಡಿಎನ್ಎ ಪರೀಕ್ಷೆ ಮಾಡಿಸಿದ್ದಾರೆ. ಮೃತರನ್ನು ಆರ್ಯನ್ ರಘುನಾಥ್ ಓರಂಪಾಟಿ, ಫಾರೂಕ್ ಶೇಕ್, ಲೋಕೇಶ್ ಪಾಲಾಚಾರ್ಲ ಮತ್ತು ದರ್ಶಿನಿ ವಾಸುದೇವನ್ ಎಂದು ಗುರುತಿಸಲಾಗಿದೆ. ಓರಂಪತಿ ಮತ್ತು ಅವರ ಸ್ನೇಹಿತ ಶೇಕ್ ಡಲ್ಲಾಸ್‌ನಲ್ಲಿರುವ ತನ್ನ ಸೋದರಸಂಬಂಧಿಯನ್ನು ಭೇಟಿ ಮಾಡಿ ಹಿಂತಿರುಗುತ್ತಿದ್ದರು. ಲೋಕೇಶ್ ಪಾಲಾಚಾರ್ಲ ಪತ್ನಿಯನ್ನು ಭೇಟಿಯಾಗಲು ಬೆಂಟನ್‌ವಿಲ್ಲೆಗೆ ತೆರಳುತ್ತಿದ್ದರು. ಟೆಕ್ಸಾಸ್ ವಿಶ್ವವಿದ್ಯಾನಿಲಯದಿಂದ ಸ್ನಾತಕೋತ್ತರ ಪದವಿ ಪಡೆದಿರುವ ದರ್ಶಿನಿ ವಾಸುದೇವನ್, ಬೆಂಟನ್‌ವಿಲ್ಲೆಯಲ್ಲಿರುವ ತನ್ನ ಚಿಕ್ಕಪ್ಪನನ್ನು ಭೇಟಿ ಮಾಡಲು ಹೋಗುತ್ತಿದ್ದರು.

ಓರಂಪತಿ ತಂದೆ ಸುಭಾಷ್ ಚಂದ್ರ ರೆಡ್ಡಿ ಅವರು ಹೈದರಾಬಾದ್ ಮೂಲದ ಮ್ಯಾಕ್ಸ್ ಅಗ್ರಿ ಜೆನೆಟಿಕ್ಸ್ ಪ್ರೈವೇಟ್ ಲಿಮಿಟೆಡ್ ಎಂಬ ಸಂಸ್ಥೆಯನ್ನು ಹೊಂದಿದ್ದಾರೆ. ಆರ್ಯನ್ ಕೊಯಮತ್ತೂರಿನ ಅಮೃತ ವಿಶ್ವ ವಿದ್ಯಾಪೀಠದಲ್ಲಿ ಇಂಜಿನಿಯರಿಂಗ್ ಪದವಿ ಮುಗಿಸಿದ್ದರು. ಟೆಕ್ಸಾಸ್ ವಿಶ್ವವಿದ್ಯಾನಿಲಯದಲ್ಲಿ ಘಟಿಕೋತ್ಸವಕ್ಕಾಗಿ ಅವರ ಪೋಷಕರು ಮೇ ತಿಂಗಳಲ್ಲಿ ಯುಎಸ್‌ನಲ್ಲಿದ್ದರು. ಘಟಿಕೋತ್ಸವದ ನಂತರ ಅವರು ಭಾರತಕ್ಕೆ ಮರಳುವುದಿತ್ತು ಎಂದು ಸಂಬಂಧಿಕರು ಹೇಳಿಕೊಂಡಿದ್ದಾರೆ. ವೇಗವಾಗಿ ಬಂದ ಟ್ರಕ್ ಹಿಂಬದಿಯಿಂದ ಭಾರತೀಯರಿದ್ದ ಎಸ್‌ಯುವಿ ಕಾರಿಗೆ ಡಿಕ್ಕಿ ಹೊಡೆದಿದೆ. ತಕ್ಷಣ ಕಾರಿನಲ್ಲಿ ಬೆಂಕಿ ಹೊತ್ತಿ ಉರಿದಿದೆ. ಪರಿಣಾಮ ಎಲ್ಲಾ ಪ್ರಯಾಣಿಕರು ಸುಟ್ಟುಹೋಗಿದ್ದಾರೆ. ದರ್ಶಿನಿ ವಾಸುದೇವನ್ ಅವರ ತಂದೆ ಮೂರು ದಿನಗಳ ಹಿಂದೆ ಟ್ವಿಟರ್ ಪೋಸ್ಟ್‌ನಲ್ಲಿ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರನ್ನು ಟ್ಯಾಗ್ ಮಾಡಿ ತಮ್ಮ ಮಗಳ ಪತ್ತೆಗೆ ಸಹಾಯ ಕೋರಿದ್ದರು.

Source : https://www.kannadaprabha.com/world/2024/Sep/04/4-indians-charred-in-multi-car-crash-in-us-they-were-carpooling

 

Leave a Reply

Your email address will not be published. Required fields are marked *