ಹಾಕಿಗೆ ವಿದಾಯ ಹೇಳಿದ ಬೆನ್ನಲ್ಲೇ ಶ್ರೀಜೇಶ್‌ಗೆ ಹೊಸ ಜವಾಬ್ದಾರಿ ನೀಡಿದ ಹಾಕಿ ಇಂಡಿಯಾ.

ನವದೆಹಲಿ: ಭಾರತ ಪುರುಷರ ಹಾಕಿ ತಂಡ ನಿನ್ನೆ(ಗುರುವಾರ) ನಡೆದ ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ(paris olympics) ಕಂಚಿನ ಪದಕ ಗೆದ್ದ ಸಾಧನೆ ಮಾಡಿತ್ತು. ಭಾತರತದ ಹಾಕಿ ದಿಗ್ಗಜ ಗೋಲು ಕೀಪರ್​ ಪಿ.ಆರ್ ಶ್ರೀಜೇಶ್(PR Sreejesh)​ ಈ ಪಂದ್ಯವನ್ನಾಡುವ ಮೂಲಕ ತಮ್ಮ 18 ವರ್ಷಗಳ ಹಾಕಿ ವೃತ್ತಿ ಜೀವನಕ್ಕೆ ವಿದಾಯ ಹೇಳಿದ್ದರು.​ ಭಾರತೀಯ ಹಾಕಿಗೆ ಅವರು ನೀಡಿದ ಅಪಾರ ಸೇವೆಯನ್ನು ಪರಿಗಣಿಸಿ ಹಾಕಿ ಇಂಡಿಯಾ(Hockey India) ಶ್ರೀಜೇಶ್​ ಅವರನ್ನು ಭಾರತ ಜೂನಿಯರ್ ಪುರುಷರ ತಂಡದ ಹೊಸ ಮುಖ್ಯ ಕೋಚ್ ಆಗಿ ನೇಮಿಸಿದೆ.

ಈ ಬಾರಿಯ ಒಲಿಂಪಿಕ್ಸ್​ ಆರಂಭಕ್ಕೂ ಮುನ್ನವೇ ಶ್ರೀಜೇಶ್​ ಇದು ನನ್ನ ಕೊನೆಯ ಒಲಿಂಪಿಕ್ಸ್​ ಎಂದು ಹೇಳಿ ಅಂತಾರಾಷ್ಟ್ರೀಯ ಹಾಕಿಗೆ ನಿವೃತ್ತಿ ಘೋಷಿಸಿದ್ದರು. ಇದೀಗ ಅವರಿಗೆ ಪದಕ ಗೆಲುವಿನ ವಿದಾಯ ಲಭಿಸಿದೆ. ಅದು ಕೂಡ ಸತತವಾಗಿ 2 ಪದಕಗಳ ಮೂಲಕ ಎನ್ನುವುದು ವಿಶೇಷ. 2006ರಲ್ಲಿ ಭಾರತೀಯ ಹಾಕಿ ತಂಡಕ್ಕೆ ಪದಾರ್ಪಣೆ ಮಾಡಿದ್ದರು. ಕಳೆದ ಟೊಕಿಯೋ ಒಲಿಂಪಿಕ್ಸ್​ನಲ್ಲಿ ಭಾರತ ಕಂಚಿನ ಪದಕ ಗೆದ್ದುಕೊಂಡಿತ್ತು. ಭಾರತ ತಂಡದ ಈ ಪದಕ ಗೆಲುವಿನಲ್ಲಿ ಶ್ರೀಜೇಶ್ ಪ್ರಮುಖ ಪಾತ್ರವಹಿಸಿದ್ದರು. ವಿಶ್ವದ ಅತ್ಯುತ್ತಮ ಗೋಲ್ ಕೀಪರ್ ಎಂಬ ಪುರಸ್ಕಾರವೂ ಸಂದಿತ್ತು. ಈ ಬಾರಿಯೂ ಶ್ರೀಜೇಶ್​ ಅತ್ಯುತ್ತಮ ಪ್ರದರ್ಶನ ತೋರುವ ಮೂಲಕ ಭಾರತದ ಪದಕ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.

36 ವಷದ ಕೇರಳದ ಶ್ರೀಜೇಶ್‌ ಭಾರತ ಪರ 336 ಪಂದ್ಯಗಳನ್ನು ಆಡಿದ್ದಾರೆ. 2 ಒಲಿಂಪಿಕ್ಸ್‌ ಕಂಚಿನ ಪದಕ, ಏಷ್ಯನ್‌ ಗೇಮ್ಸ್‌ನಲ್ಲಿ 2 ಚಿನ್ನ, 1 ಕಂಚು, ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿ 2 ಬೆಳ್ಳಿ, ಏಷ್ಯನ್‌ ಚಾಂಪಿಯನ್ಸ್‌ ಟ್ರೋಫಿಯಲ್ಲಿ 2 ಬೆಳ್ಳಿ ಪದಕಕ್ಕೆ ಕೊರಳೊಡ್ಡಿದ್ದಾರೆ. ವೃತ್ತಿಜೀವನ ಕೊನೆಗೊಳಿಸಿದ ಭಾರತ ಹಾಕಿ ತಂಡದ ಗೋಲ್​ಕೀಪರ್​ ಶ್ರೀಜೇಶ್ ಪಂದ್ಯದ ಬಳಿಕ ಭಾವುಕರಾದರು. ಅವರು ಗೋಲ್​ಕೀಪಿಂಗ್​ ಗ್ಲೌವ್ಸ್​ಗಳನ್ನು ಕಳಚಿಟ್ಟು ದೀರ್ಘದಂಡ ನಮಸ್ಕಾರ ಹಾಕಿ ತಮ್ಮ ಕ್ರೀಡೆಗೆ ಗೌರವ ಸೂಚಿಸಿದರು. ಸ್ಪೇನ್ ವಿರುದ್ಧ ಭಾರತ 2-1 ಗೋಲುಗಳ ರೋಚಕ ಜಯ ಸಾಧಿಸಿದ ಬಳಿಕ ಎಲ್ಲರೂ ಖುಷಿಯಲ್ಲಿದ್ದ ವೇಳೆ ಶ್ರೀಜೇಶ್ ಕಣ್ಣೀರಿಟ್ಟು ನಮಸ್ಕಾರ ಹಾಕಿದರು. ಈ ವೇಳೆ ತಮ್ಮ ಗೋಲ್​ ಕೀಪಂಗ್​ ಸಲಕರಣೆಗಳಿಗೆ ಗರಿಷ್ಠ ಗೌರವ ಸಲ್ಲಿಸಿದರು.

Source : https://vistaranews.com/sports/pr-sreejesh-pr-sreejesh-is-new-india-junior-mens-team-head-coach-confirms-hockey-india/711955.html

Leave a Reply

Your email address will not be published. Required fields are marked *