ತಿರುವನಂತಪುರಂ: ಶಿಕ್ಷಣವನ್ನು ಆಧುನೀಕರಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯನ್ನಿಟ್ಟಿರುವ ಕೇರಳವು ಶಾಲಾ ಪಠ್ಯಪುಸ್ತಕಗಳಲ್ಲಿ ಕೃತಕ ಬುದ್ಧಿಮತ್ತೆಯ (ಎ.ಐ) ವಿಷಯ ಸೇರ್ಪಡೆಗೊಳಿಸಲು ನಿರ್ಧಿರಿಸಿದೆ.

7 ನೇ ತರಗತಿ ವಿದ್ಯಾರ್ಥಿಗಳಿಗೆ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ (ಐಸಿಟಿ) ಪಠ್ಯಕ್ರಮದ ಭಾಗವಾಗಿ ಎ.ಐ ಕಲಿಕಾ ಮಾದರಿನ್ನು ಪರಿಚಯಿಸುವ ಯೋಜನೆಯನ್ನು ರಾಜ್ಯ ಸರ್ಕಾರವು ಅನಾವರಣಗೊಳಿಸಿದೆ.
ಕೇರಳ ಸರ್ಕಾರದ ಈ ನಡೆಯಿಂದ ರಾಜ್ಯದ 4 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪ್ರಯೋಜನೆ ಆಗಲಿದೆ. ಅವರಿಗೆ ಮುಂಬರುವ ಶೈಕ್ಷಣಿಕ ವರ್ಷದಲ್ಲಿ ಎ.ಐ ಕುರಿತು ಅಧ್ಯಯನ ಮಾಡಲು ಅವರಿಗೆ ಅವಕಾಶ ಸಿಗಲಿದೆ ಎಂದು ಕೇರಳ ಶೈಕ್ಷಣಿಕ ಮೂಲಸೌಕರ್ಯ ಮತ್ತು ತಂತ್ರಜ್ಞಾನ (ಕೈಟ್) ಸಂಸ್ಥೆಯ ಪ್ರಕಟಣೆ ತಿಳಿಸಿದೆ.
‘ಈ ಕಾರ್ಯಕ್ರಮವು ಮನುಷ್ಯನ ಮುಖಭಾಗವನ್ನು ಏಳು ವಿಭಿನ್ನ ಭಾವನೆಗಳಲ್ಲಿ ಗುರುತಿಸುವ ಸಾಮರ್ಥ್ಯದ ಎ.ಐ ಪ್ರೋಗ್ರಾಮ್ ರಚಿಸುವ ಚಟುವಟಿಕೆಯು ಕಂಪ್ಯೂಟರ್ ವಿಷನ್ ಹೆಸರಿನ ಅಧ್ಯಾಯನದಲ್ಲಿ ಇರಲಿದೆ ಎಂದು ಕೈಟ್ ಸಿಇಒ ಅನ್ವರ್ ಸಾದತ್ ತಿಳಿಸಿದ್ದಾರೆ.
ಹೊಸ ಶೈಕ್ಷಣಿಕ ವರ್ಷವು ಜೂನ್ 3, 2024 ರಂದು ಪ್ರಾರಂಭವಾಗಲಿದೆ. ಮಲಯಾಳಂ, ಇಂಗ್ಲಿಷ್, ತಮಿಳು ಮತ್ತು ಕನ್ನಡ ಮಾಧ್ಯಮಗಳಲ್ಲಿ ಕಲಿಯುವ 1, 3, 5 ಮತ್ತು 7 ನೇ ತರಗತಿಗಳಿಗೆ ಹೊಸ ಐಸಿಟಿ ಪಠ್ಯಪುಸ್ತಕ ಇರಲಿದೆ. ಮಕ್ಕಳಲ್ಲಿ ವಿಮರ್ಶಾತ್ಮಕ ಚಿಂತನೆ, ವಿಶ್ಲೇಷಣಾತ್ಮಕ ಕೌಶಲ ಮತ್ತು ಸಮಸ್ಯೆ-ಪರಿಹರಿಸುವ ಸಾಮರ್ಥ್ಯ ಬೆಳಸುವುದಕ್ಕೆ ಪಠ್ಯಕ್ರಮ ಚೌಕಟ್ಟು ಒತ್ತು ನೀಡಲಿದೆ. ಈ ಹಿನ್ನೆಲೆಯಲ್ಲಿ ಪ್ರಾಥಮಿಕ ಹಂತದ ಐಸಿಟಿ ಪಠ್ಯಪುಸ್ತಕಗಳಲ್ಲಿ ತಾರ್ಕಿಕ ಚಿಂತನೆ ಮತ್ತು ಪ್ರೋಗ್ರಾಮಿಂಗ್ ಕೌಶಲ್ಯಗಳ ಅಭಿವೃದ್ಧಿಗೆ ವಿಶೇಷ ಒತ್ತು ನೀಡಲಾಗಿದೆ ಎಂದು ಸದಾತ್ ಹೇಳಿದರು.
ಎ.ಐ ವಿಚಾರವಾಗಿ ಮೇ 2 ರಿಂದ 80,000 ಮಾಧ್ಯಮಿಕ ಶಾಲಾ ಶಿಕ್ಷಕರಿಗೆ ತರಬೇತಿ ನೀಡುವ ಕೆಲಸವನ್ನು ಕೈಟ್ ಆರಂಭಿಸಿದೆ. ಇದುವರೆಗೆ ಒಟ್ಟು 20,120 ಶಿಕ್ಷಕರು ತರಬೇತಿಯನ್ನು ಪೂರ್ಣಗೊಳಿಸಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ. ಶಿಕ್ಷಣ ಸಚಿವ ವಿ ಶಿವನ್‌ಕುಟ್ಟಿ ಅವರು ಜೂನ್‌ನಿಂದ ಹೊಸ ಐಸಿಟಿ ಪಠ್ಯಪುಸ್ತಕಗಳ ಕುರಿತು ಎಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ತರಬೇತಿ ನೀಡಲು ಈಗಾಗಲೇ ಸೂಚನೆಗಳನ್ನು ನೀಡಿದ್ದಾರೆ ಎಂದು ತಿಳಿಸಿದ್ದಾರೆ.