ಅಪರ್ಣಾ ಬಿಟ್ಟು ಹೋದ ಜೀವನದ ಪಾಠಗಳು ಮಾತ್ರ ನಮ್ಮೊಂದಿಗೆ ಅಜರಾಮರವಾಗಿ ಉಳಿದುಕೊಂಡಿದೆ. ಹಾಗಿದ್ದರೆ ಅಪರ್ಣಾರಿಂದ ನಾವು ಕಲಿಯಬೇಕಾದ ಜೀವನ ಪಾಠಗಳೇನು?
![](https://samagrasuddi.co.in/wp-content/uploads/2024/07/image-92.png)
ನನ್ ಬದುಕೇ ಯಾಕೆ ಹೀಗೆ..ಯಾರಿಗೂ ಬರದ ಕಷ್ಟ ನನಗೇ ಯಾಕೆ ಬರುತ್ತೆ? ದೇವರೇ.. ಸಾಕಪ್ಪಾ ಸಾಕು ಕೈಮುಗಿದುಬಿಡ್ತೀನಿ” ಹಂ..ಹೀಗೆ ನಿಮಗೂ ಎಂದಾದರೊಂದು ದಿನದ ಘಳಿಗೆಯೊಂದರಲ್ಲಿ ಅನಿಸಿರಬಹುದು. ಆದರೆ, “ಎಷ್ಟೇ ಏನೇ ಸಮಸ್ಯೆ ಇದ್ದರೂ ನಾನು ಬದುಕುತ್ತೇನೆ”ಎಂಬ ಒಂದು ದೀರ್ಘ ನಿಟ್ಟುಸಿರು ಇದೆಯಲ್ಲ, ಅದು ಅದೇ ನಮ್ಮ ಜೀವನವನ್ನು ಸಂಭ್ರಮದಿಂದ ಎಳೆದೊಯ್ಯುವ ಮಾಯಕದ ಕೋಲು.
ಇಡೀ ನಾಡಿಗೆ ನಾಡೇ ಕೊಂಡಾಡುತ್ತಿರುವ ಅಪರ್ಣಾ ವಸ್ತಾರೆ ಭೌತಿಕ ದೇಹ ಬಿಟ್ಟು ಅಗಲಿದ್ದಾರೆ. ಅವರ ಧ್ವನಿ, ಅವರ ನಟನೆ, ಅವರ ನಡೆ ನುಡಿ..ಜೊತೆಗೆ ಅವರು ಬಿಟ್ಟು ಹೋದ ಜೀವನದ ಪಾಠಗಳು ಮಾತ್ರ ನಮ್ಮೊಂದಿಗೆ ಅಜರಾಮರವಾಗಿ ಉಳಿದುಕೊಂಡಿದೆ. ಹಾಗಿದ್ದರೆ ಅಪರ್ಣಾರಿಂದ ನಾವು ಕಲಿಯಬೇಕಾದ ಜೀವನ ಪಾಠಗಳೇನು?
ಸಾರ್ವಜನಿಕ ಬದುಕಲ್ಲಿ ಮಾತು ಮತ್ತು ಮೌನ
ಅಪರ್ಣಾ ವಸ್ತಾರೆ ಹೇಳಿಕೇಳಿ ಸಾರ್ವಜನಿಕವಾಗಿ ಪ್ರಸಿದ್ಧಿ ಇರುವ ತಾರೆ. ಧ್ವನಿ, ನಟನೆಯಿಂದ ಗುರುತಿಸಿಕೊಂಡಿದ್ದ ಅವರು ಸಾರ್ವಜನಿಕವಾಗಿ ಎಷ್ಟು ಬೇಕೋ ಅಷ್ಟನ್ನು ಮಾತ್ರ ಬಿಟ್ಟುಕೊಡುತ್ತಿದ್ದರು. ಹೌದು, ಅಪರ್ಣಾ ಅವರನ್ನು ಕಳೆದ ಎರಡು ವರ್ಷಗಳಿಂದ ಕ್ಯಾನ್ಸರ್ ಕಾಡುತ್ತಿತ್ತು. ಆದರೆ ಈ ಬಗ್ಗೆ ಅವರು ಸಾರ್ವಜನಿಕವಾಗಿ ಎಲ್ಲೂ ಬಾಯ್ಬಿಟ್ಟಿರಲಿಲ್ಲ. ಹಲವು ಆಪ್ತರಿಗೂ ಅಪರ್ಣಾರಿಗೆ ಕ್ಯಾನ್ಸರ್ ಇರುವ ವಿಚಾರ ತಿಳಿದಿರಲಿಲ್ಲ. ಪತ್ರಕರ್ತೆ ಭಾರತಿ ಹೆಗಡೆ ಅವರು ಬರೆದುಕೊಂಡಿರುವ ಪ್ರಕಾರ, ಕಳೆದ ವರ್ಷ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಅಪರ್ಣಾ ಬಳಿ ಯಾರ್ಯಾರಿಗೋ ಕ್ಯಾನ್ಸರ್ ಬಂದ ಬಗ್ಗೆ ಮಾತನಾಡಿದ್ದರು. ಆದರೆ ತಮ್ಮನ್ನೇ ಕ್ಯಾನ್ಸರ್ ಕಾಡುತ್ತಿರುವ ಬಗ್ಗೆ ಕಿಂಚಿತ್ ಸುಳಿವನ್ನೂ ಅವರು ಬಿಟ್ಟುಕೊಟ್ಟಿರಲಿಲ್ಲ.
ಪಾಸಿಟಿವ್ ಶಕ್ತಿ
ಅಪರ್ಣಾ ಪತಿ ನಾಗರಾಜ ವಸ್ತಾರೆ ಹೇಳಿದಂತೆ, ಡಾಕ್ಟರ್ ಅಪರ್ಣಾ ಇನ್ನಾರು ತಿಂಗಳಷ್ಟೇ ಬದುಕುತ್ತಾರೆ ಅಂದಿದ್ದರಂತೆ. ಆದರೆ ಅಪರ್ಣಾ ಕ್ಯಾನ್ಸರ್ ವಿರುದ್ಧ ಬರೋಬ್ಬರಿ ಎರಡು ವರ್ಷ ಹೋರಾಡಿದರು. ಅಂದರೆ ಡಾಕ್ಟರ್ ಮಾತನ್ನೇ ಸುಳ್ಳಾಗಿಸಿದರು. ಇದು ಅವರ ಹೊರಾಟದ ಕೆಚ್ಚಿನ ಮನೋಭಾವ. ಜೀವನದಲ್ಲಿ ಏನೇ ಬಂದರೂ ಎದುರಿಸಿ ನಿಲ್ಲೋಣ. ಸೋಲೋದು ಬೇಡ ಎಂಬ ಪಾಸಿಟಿವ್ ಎನರ್ಜಿಗೆ ಇನ್ನೊಂದು ಹೆಸರೇ ಅಪರ್ಣಾ ಆಗಿದ್ದರು. ದೃಢಸಂಕಲ್ಪ-ಇಚ್ಛಾಶಕ್ತಿಯಿಂದ ಆಗಬಲ್ಲ ಪವಾಡಗಳನ್ನು ದಿಟ ಮಾಡಿದರು.
ಖುಷಿಯಾಗಿ ಬದುಕಿ-ಬದುಕಿಸಿ
“ಸಮಸ್ಯೆ ಯಾರಿಗೆ ತಾನೇ ಬರಲ್ಲ ಹೇಳಿ, ಮನುಷ್ಯನಿಗೆ ಕಷ್ಟ ಬರದೇ ಮರಕ್ಕೆ ಬರ್ತದಾ?” ಕ್ಯಾನ್ಸರ್ ಬಂದವರಿಗೆ ಯಾವ ವೈದ್ಯರೂ ನೂರಕ್ಕೆ ನೂರು ಗ್ಯಾರಂಟಿ ಕೊಡುವುದಿಲ್ಲ. ಬದುಕಿನ ಬಗ್ಗೆ ಭರವಸೆಯೊಂದೇ ಅವರ ಜೀವನದ ದಾರಿದೀಪವಾಗಬೇಕು. ಖುಷಿಯಾಗಿ ಬದುಕುವುದೇ ವೈದ್ಯರು ನೀಡಿದ ಗಡುವನ್ನು ಮುರಿಯುತ್ತದೆ. ಬದುಕನ್ನು ವಿಸ್ತರಿಸುತ್ತಾ ಹೋಗುತ್ತದೆ. ಬದುಕು ಖಂಡಿತ ಕ್ಷಣಿಕ. ಇರುವಷ್ಟು ದಿನ ಖುಷಿಯಿಂದ ಬದುಕಿ, ಬದುಕಲು ಬಿಡಿ. ಇದು ಅಪರ್ಣಾ ಬಾಯ್ಬಿಟ್ಟು ಹೇಳದೇ ತೋರಿಸಿಕೊಟ್ಟ ಪಾಠವೇ ಸರಿ.
ಎಷ್ಟೇ ಎತ್ತರಕ್ಕೆ ಬೆಳದರೂ ಅಹಂಕಾರ ಬೇಡ
ಅಪರ್ಣಾ ನಿಜಕ್ಕೂ ಸ್ಟಾರ್. ಇತ್ತ ಸಾಹಿತ್ಯ-ಕಲಾ ಪ್ರಪಂಚದಲ್ಲಿ ಅವರು ಹೆಸರು ಖ್ಯಾತಿಯಲ್ಲಿದ್ದರೆ, ಅತ್ತ ಸಿನಿಮಾ- ರಿಯಾಲಿಟಿ ಶೋ ಲೋಕದಲ್ಲೂ ಅವರು ಪ್ರಸಿದ್ಧರು. ಅವರ ಧ್ವನಿಯಂತೂ ಕನ್ನಡಿಗರಿಗೆ ಚಿರಪರಿಚಿತ. ಮೆಟ್ರೋ ಪ್ರಯಾಣಿಕರ ಕಿವಿಗೆ ಪ್ರತಿದಿನ ಕೇಳುವ ಕೋಗಿಲೆ ಕಂಠ. ಇಷ್ಟೆಲ್ಲ ಇದ್ದರೂ ಅವರು ವಿನಯವಂತರು. ಚೂರೇ ಚೂರು ಪ್ರಸಿದ್ಧಿಗೆ ಬಂದರೂ ಕೋಡು ಮೂಡಿಸಿಕೊಂಡು ಓಡಾಡುವ ಎಷ್ಟೋ “ಸ್ಟಾರ್”ಗಳ ನಡುವೆ ಅಪರ್ಣಾ ಮಾತ್ರ ಅಚ್ಚರಿಯಾಗಿದ್ದರು.
ಇರೋದನ್ನು ಪ್ರೀತಿಸಿ
ಅಪರ್ಣಾ ಅವರೇ ಸಂದರ್ಶನವೊಂದರಲ್ಲಿ ಹೇಳಿಕೊಂಡಂತೆ, ಅಚಾನಕ್ ಆಗಿ ಅವರು ಧಾರಾವಾಹಿ-ರಿಯಾಲಿಟಿ ಶೋಗೆ ಕಾಲಿಟ್ಟಿದ್ದರು. ಸಿಕ್ಕ ಅವಕಾಶ ಬಳಸಿಕೊಂಡರು. ಬಾರದ ವಿಷಯಗಳಿಗಾಗಿ ಮರುಗಲಿಲ್ಲ. ಇರೋದನ್ನು ಅದ್ಭುತವಾಗಿ ಪ್ರೀತಿಸಿದರು. ಹಮ್ಮು ಬಿಮ್ಮಿಲ್ಲದೇ ಬೆರೆತರು. ಸಹಜವಾಗಿ ಅವಕಾಶಗಳನ್ನು ಇವರಿಗಾಗಿಯೇ ಸೃಷ್ಟಿಯಾದವು. ಇವರನ್ನೇ ಹುಡುಕಿ ಬಂದವು. ಇಲ್ಲದಿರುವುದನ್ನು ಹಂಬಲಿಸುವುದಕ್ಕಿಂತ ಇರುವುದನ್ನು ಪ್ರೀತಿಸಿ ನ್ಯಾಯ ಒದಗಿಸುವುದರ ತಾಕತ್ತನ್ನು ಅಪರ್ಣಾ ತೋರಿಸಿಕೊಟ್ಟರು.