ಏಷ್ಯಾಕಪ್ (Asia Cup 2023) ಆತಿಥ್ಯಕ್ಕೆ ಸಂಬಂಧಿಸಿದಂತೆ ಭಾರತ ಮತ್ತು ಪಾಕಿಸ್ತಾನದ (India vs Pakistan) ನಡುವಿನ ಉದ್ವಿಗ್ನತೆ ಮುಂದುವರೆದಿದೆ. ಇತ್ತೀಚೆಗೆ, ಪಾಕಿಸ್ತಾನ ಕ್ರಿಕೆಟ್ ಮಂಡಳಿ ಪ್ರಸ್ತಾಪಿಸಿದ ಹೈಬ್ರಿಡ್ ಮಾದರಿಯನ್ನು (hybrid model) ಬಿಸಿಸಿಐ ತಿರಸ್ಕರಿಸಿತ್ತು. ಇದು ಸಾಲದೆಂಬಂತೆ ಭಾರತದ ಈ ನಿಲುವಿಗೆ ನೆರೆಯ ರಾಷ್ಟ್ರಗಳಾದ ಬಾಂಗ್ಲಾದೇಶ ಹಾಗೂ ಶ್ರೀಲಂಕಾ ಬೆಂಬಲ ಸೂಚಿಸಿವೆ ಎಂಬ ಸುದ್ದಿಯೂ ಹರಿದಾಡಿತ್ತು. ಆದರೆ ಈಗ ಹೊರಬಿದ್ದಿರುವ ಮಾಹಿತಿ ಪ್ರಕಾರ ಈ ಹಿಂದೆ ಬಿಸಿಸಿಐಗೆ ಬೆಂಬಲ ನೀಡುವುದಾಗಿ ಹೇಳಿಕೊಂಡಿದ್ದ ಬಾಂಗ್ಲಾದೇಶ ಹಾಗೂ ಶ್ರೀಲಂಕಾ ಕ್ರಿಕೆಟ್ ಮಂಡಳಿಗಳು ಇದೀಗ ಪಾಕ್ ಪರ ವಾಲಿವೆ ಎಂಬ ಮಾಹಿತಿ ಹೊರಬಿದ್ದಿದೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿ ಪ್ರಸ್ತಾಪಿಸಿದ ಹೈಬ್ರಿಡ್ ಮಾದರಿಯ ಪ್ರಕಾರ, ಪಾಕಿಸ್ತಾನವು ಏಷ್ಯಾಕಪ್ ಆಯೋಜಿಸಲಿದೆ. ಆದರೆ ಟೀಂ ಇಂಡಿಯಾದ ಪಂದ್ಯಗಳು ಮಾತ್ರ ಬೇರೆ ದೇಶದಲ್ಲಿ ನಡೆಯಲ್ಲಿವೆ. ಆದರೆ, ಬಿಸಿಸಿಐ (BCCI) ಮಾತ್ರ ಈ ಹೈಬ್ರಿಡ್ ಮಾದರಿಯ ಬದಲು ಪೂರ್ಣ ಪಂದ್ಯಾವಳಿಯನ್ನೇ ಬೇರೆಡೆಗೆ ಶಿಫ್ಟ್ ಮಾಡಬೇಕು ಎನ್ನುವ ಇರಾದೆ ಹೊಂದಿದೆ.
ಏಷ್ಯಾಕಪ್ 2023 ರ ಹೊಸ ಹೈಬ್ರಿಡ್ ಯೋಜನೆಗೆ ಬಾಂಗ್ಲಾದೇಶ ಮತ್ತು ಶ್ರೀಲಂಕಾ ಬೆಂಬಲ ನೀಡುತ್ತಿದ್ದಂತೆ ಕೊಂಚ ನಿಟ್ಟುಸಿರು ಬಿಟ್ಟಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಅಧ್ಯಕ್ಷ ನಜಮ್ ಸೇಥಿ ಈ ಪ್ರಸ್ತಾಪವನ್ನು ಏಷ್ಯನ್ ಕ್ರಿಕೆಟ್ ಕೌನ್ಸಿಲ್ಗೆ ಸಲ್ಲಿಸಿದ್ದಾರೆ. ಈಗ, ಬಿಸಿಸಿಐ ಕಾರ್ಯದರ್ಶಿಯಾಗಿರುವ ಎಸಿಸಿ ಅಧ್ಯಕ್ಷ ಜೈ ಶಾ ಅವರು ನಿರ್ಧಾರ ತೆಗೆದುಕೊಳ್ಳುವ ಮೊದಲು ಮುಂದಿನ ಎರಡು ದಿನಗಳಲ್ಲಿ ಈ ಪ್ರಸ್ತಾಪವನ್ನು ನಿರ್ಣಯಿಸಲಿದ್ದಾರೆ. ಆದಾಗ್ಯೂ, ಇಡೀ ಪಂದ್ಯಾವಳಿಯನ್ನು ಸ್ಥಳಾಂತರಿಸುವಲ್ಲಿ ಬಿಸಿಸಿಐ ಅಚಲವಾಗಿರುವುದರಿಂದ ಭಾರತ ಈ ಎಷ್ಯಾಕಪ್ ಟೂರ್ನಿಯನ್ನು ಬಹಿಷ್ಕರಿಸುವುದನ್ನು ಸಹ ಅಲ್ಲಗಳೆಯುವಂತಿಲ್ಲ.
ODI rankings: ಐಪಿಎಲ್ ನಡುವೆ ಟೀಂ ಇಂಡಿಯಾಗೆ ಬಿಗ್ ಶಾಕ್ ನೀಡಿದ ಪಾಕಿಸ್ತಾನ..!
ಪಿಸಿಬಿಯ ಪ್ರಸ್ತಾಪಗಳು ಯಾವುವು?
ಪ್ರಸ್ತಾಪ 1: ಇಡೀ ಟೂರ್ನಿಯನ್ನು ಪಾಕಿಸ್ತಾನ ಆಯೋಜಿಸಲಿದೆ. ಆದರೆ ಭಾರತ ತನ್ನ ಪಂದ್ಯಗಳನ್ನು ತಟಸ್ಥ ಸ್ಥಳದಲ್ಲಿ ಆಡಲಿದೆ.
ಪ್ರಸ್ತಾವನೆ 2: ಏಷ್ಯಾ ಕಪ್ ಟೂರ್ನಿಯನ್ನು ಎರಡು ಭಾಗಗಳಾಗಿ ವಿಂಗಡಿಸಲಾಗುವುದು. ಮೊದಲ ಸುತ್ತಿನ ಪಂದ್ಯಗಳಿಗೆ ಪಾಕಿಸ್ತಾನ ಆತಿಥ್ಯ ವಹಿಸಲಿದ್ದು, ಈ ಸುತ್ತಿನಲ್ಲಿ ಭಾರತದ ವಿರುದ್ಧ ಯಾವುದೇ ಪಂದ್ಯಗಳು ನಡೆಯುವುದಿಲ್ಲ. ಭಾರತ ತಂಡ ಎರಡನೇ ಸುತ್ತಿನಲ್ಲಿ ಆಡಲಿದೆ. ಅಲ್ಲದೆ ಟೂರ್ನಿಯ ಫೈನಲ್ ಪಂದ್ಯ ತಟಸ್ಥ ಸ್ಥಳದಲ್ಲಿ ನಡೆಯಲಿದೆ.
ಪಂದ್ಯಾವಳಿಗೆ ಶ್ರೀಲಂಕಾ ಹೆಚ್ಚು ಸೂಕ್ತವಾಗಿದೆ
“ನಾನು ಪ್ರಸ್ತಾಪವನ್ನು ನೋಡಿಲ್ಲ. ಆದರೆ ನಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ. ಪಂದ್ಯಾವಳಿಯನ್ನು ತಟಸ್ಥ ಸ್ಥಳದಲ್ಲಿ ಆಡಬೇಕೆಂದು ನಾವು ಬಯಸುತ್ತೇವೆ. ತಟಸ್ಥ ಸ್ಥಳವೆಂದರೆ ನಮ್ಮ ಆಯ್ಕೆ ಯುಎಇ ಅಲ್ಲ. ಹೆಚ್ಚು ಬಿಸಿಲಿರುವ ಯುಎಇಯಲ್ಲಿ ನಮ್ಮ ತಂಡವನ್ನು ಕಣಕ್ಕಿಳಿಸಿ ತಂಡವನ್ನು ಅಪಾಯಕ್ಕೆ ತಳ್ಳಲು ಸಾಧ್ಯವಿಲ್ಲ. ಹೀಗಾಗಿ ಪಂದ್ಯಾವಳಿಗೆ ಶ್ರೀಲಂಕಾ ಹೆಚ್ಚು ಸೂಕ್ತವಾಗಿದೆ. ಸದ್ಯಕ್ಕೆ ನಾವು ಪಂದ್ಯಾವಳಿಯನ್ನು ಬಹಿಷ್ಕರಿಸುವ ಬಗ್ಗೆ ಏನನ್ನೂ ಚರ್ಚಿಸಿಲ್ಲ. ಮೊದಲು ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳೋಣ. ನಂತರ ನಾವು ಒಂದು ನಿರ್ಧಾರಕ್ಕೆ ಬರುತ್ತೇವೆ ”ಎಂದು ಬಿಸಿಸಿಐ ಹಿರಿಯ ಅಧಿಕಾರಿಯೊಬ್ಬರು ಇನ್ಸೈಡ್ಸ್ಪೋರ್ಟ್ಗೆ ತಿಳಿಸಿದ್ದಾರೆ.
ವಾಸ್ತವವಾಗಿ ಹೇಳಬೇಕೆಂದರೆ, ಪಿಸಿಬಿ ಪ್ರಸ್ತಾಪಿಸಿರುವ “ಹೈಬ್ರಿಡ್” ಮಾದರಿಯನ್ನು ಬಿಸಿಸಿಐ ತಿರಸ್ಕರಿಸಿದೆ. ಬದಲಾಗಿ, ಬಿಸಿಸಿಐ ಇಡೀ ಟೂರ್ನಿಯನ್ನು ತಟಸ್ಥ ಸ್ಥಳಕ್ಕೆ ಸ್ಥಳಾಂತರಿಸಲು ಕೇಳಿಕೊಂಡಿದೆ. ಬಿಸಿಸಿಐನ ಈ ನಿರ್ಧಾರವನ್ನು ಶ್ರೀಲಂಕಾ ಕ್ರಿಕೆಟ್ ಬೆಂಬಲಿಸಿದ್ದರೆ, ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಮಾತ್ರ ಪಿಸಿಬಿ ನಿರ್ಧಾರವನ್ನು ಬೆಂಬಲಿಸಿತ್ತು. ಇತ್ತ ಲಂಕಾ ಮಂಡಳಿ ಬಿಸಿಸಿಐಗೆ ಬೆಂಬಲ ನೀಡಿದರೆ, ಉಭಯ ದೇಶಗಳ ನಡುವಣ ಟೆಸ್ಟ್ ಸರಣಿಯನ್ನು ರದ್ದುಗೊಳಿಸುವುದಾಗಿ ಪಾಕಿಸ್ತಾನ, ಶ್ರೀಲಂಕಾ ಮಂಡಳಿಗೆ ಬೆದರಿಕೆ ಹಾಕಿದೆ.
ಇದೀಗ ಜಿಯೋಟಿವಿ ಪ್ರಕಾರ, ಪಾಕಿಸ್ತಾನದ ಹೈಬ್ರಿಡ್ ಮಾದರಿಯನ್ನು ಎಸ್‌ಎಲ್‌ಸಿ ಮತ್ತು ಬಿಸಿಬಿ ಒಪ್ಪಿಕೊಂಡಿದ್ದು, ಅಫ್ಘಾನಿಸ್ತಾನ ಮಾತ್ರ ತಟಸ್ಥವಾಗಿ ಉಳಿದಿದೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ