ಏಷ್ಯಾ ಕಪ್ ಹಾಕಿ | ಹಾರ್ದಿಕ್, ಮನದೀಪ್ ಮಿಂಚು: ಭಾರತಕ್ಕೆ ತಪ್ಪಿದ ಸೋಲು.

ರಾಜಗೀರ್, ಬಿಹಾರ: ಆತಿಥೇಯ ಭಾರತ ತಂಡವು ಇಲ್ಲಿ ನಡೆಯುತ್ತಿರುವ ಏಷ್ಯಾ ಕಪ್ ಹಾಕಿ ಚಾಂಪಿಯನ್‌ಷಿಪ್‌ನಲ್ಲಿ ಅಜೇಯ ದಾಖಲೆಯನ್ನು ಕಾಪಾಡಿಕೊಂಡಿತು.


ಬುಧವಾರ ಇಲ್ಲಿ ನಡೆದ ಸೂಪರ್ ಫೋರ್ ಪಂದ್ಯದಲ್ಲಿ ಭಾರತ ತಂಡವು ದಕ್ಷಿಣ ಕೊರಿಯಾ ತಂಡದ ಎದುರು 2-2ರಿಂದ ಡ್ರಾ ಮಾಡಿಕೊಂಡಿತು.

ಅದರೊಂದಿಗೆ ಸೋಲು ತಪ್ಪಿಸಿಕೊಳ್ಳುವಲ್ಲಿ ಹರ್ಮನ್‌ಪ್ರೀತ್ ಸಿಂಗ್ ಬಳಗ ಯಶಸ್ವಿಯಾಯಿತು.

ಹಾರ್ದಿಕ್ ಸಿಂಗ್ (8ನೇ ನಿಮಿಷ) ಅವರು ಮೊದಲ ಗೋಲು ಗಳಿಸುವ ಮೂಲಕ ಭಾರತಕ್ಕೆ ಮುನ್ನಡೆ ನೀಡಿದರು. ಆದರೆ ನಾಲ್ಕು ನಿಮಿಷಗಳ ನಂತರ ಕೊರಿಯಾದ ಯಾಂಗ್ ಜಿಹುನ್ (12ನೇ ನಿ) ಗೋಲು ಹೊಡೆದು ಸಮಬಲ ಸಾಧಿಸಿದರು. ಇದಾಗಿ ಇನ್ನೂ ಎರಡು ನಿಮಿಷ ಆಗಿತ್ತಷ್ಟೇ ಕೊರಿಯಾದ ಹೈನಹಾಂಗ್ ಕಿಮ್ (14ನೇ ನಿ) ಮತ್ತೊಂದು ಗೋಲು ಹೊಡೆದರು. ತಮ್ಮ ತಂಡಕ್ಕೆ ಮಹತ್ವದ ಮುನ್ನಡೆ ಒದಗಿಸಿಕೊಟ್ಟರು. ಇದಾದ ನಂತರ ಉಭಯ ತಂಡಗಳ ನಡುವೆ ರೋಚಕ ಹಣಾಹಣಿ ನಡೆಯಿತು.

ಕೊರಿಯಾ ಅಟಗಾರರು ತಮ್ಮ ಮುನ್ನಡೆಯನ್ನು ರಕ್ಷಿಸಿಕೊಳ್ಳಲು ಶತಾಯಗತಾಯ ಪ್ರಯತ್ನಿಸಿದರು. ಇನ್ನೊಂದೆಡೆ ಭಾರತ ತಂಡವು ತನ್ನ ಅಜೇಯ ಓಟವನ್ನು ಕಾಪಾಡಿಕೊಳ್ಳುವತ್ತ ಛಲದಿಂದ ಆಡಿತು. ಕೊನೆಗೂ ಭಾರತಕ್ಕೆ ಯಶಸ್ಸು ದಕ್ಕಿತು. ಅಂತಿಮ ಕ್ವಾರ್ಟರ್‌ನಲ್ಲಿ ಮನದೀಪ್ ಸಿಂಗ್ (52ನೇ ನಿಮಿಷ) ಗೋಲು ದಾಖಲಿಸಿದರು. ಅದರೊಂದಿಗೆ ಸಮಬಲ ಸಾಧಿಸಲು ನೆರವಾದರು.

ಪಂದ್ಯದ ಇನ್ನುಳಿದ ಸಮಯದಲ್ಲಿ ಕೊರಿಯಾ ಆಟಗಾರರು ಹೆಚ್ಚು ಆಕ್ರಮಣಕಾರಿ ಶೈಲಿಯಲ್ಲಿ ಆಡಿದರು. ಅವರನ್ನು ಸಮರ್ಥವಾಗಿ ಎದುರಿಸಿದ ಆತಿಥೇಯರೂ ಗೋಲು ಗಳಿಸುವ ಪ್ರಯತ್ನ ಮಾಡಿದರು. ಆದರೆ ಉಭಯ ತಂಡಗಳಿಗೂ ಗೋಲು ದಕ್ಕಲಿಲ್ಲ. ಪಂದ್ಯ ಸಮಬಲವಾಯಿತು.

ಭಾರತ ತಂಡವು ಎ ಗುಂಪಿನಲ್ಲಿ ಎಲ್ಲ ಪಂದ್ಯಗಳನ್ನೂ ಜಯಿಸಿತ್ತು. ಚೀನಾ, ಜಪಾನ್ ಮತ್ತು ಕಜಾಕಸ್ತಾನ ತಂಡಗಳನ್ನು ಸೋಲಿಸಿತ್ತು.

ದಿನದ ಇನ್ನೊಂದು ಪಂದ್ಯದಲ್ಲಿ ಮಲೇಷ್ಯಾ ತಂಡವು 2-0ಯಿಂದ ಚೀನಾ ವಿರುದ್ಧ ಜಯಿಸಿತು. ಮತ್ತೊಂದು ಪಂದ್ಯದಲ್ಲಿ ಜಪಾನ್ ತಂಡವು 2-0ಯಿಂದ ಚೈನಿಸ್ ತೈಪಿ ವಿರುದ್ಧ ಗೆದ್ದಿತು.

Views: 15

Leave a Reply

Your email address will not be published. Required fields are marked *