ಭಾರತ- ಪಾಕ್ ವಿಭಜನೆಯಾದ 1947 ರ ಈ ದಿನ ಪಂಜಾಬ್‌ನ ಫಿರೋಜ್‌ಪುರದ ರೈಲ್ವೆ ಪ್ಲಾಟ್‌ಫಾರ್ಮ್ ಕಂಡು ಬಂದ ದೃಶ್ಯ ಭಯಾನಕ. ರೈಲು ಪಾಕಿಸ್ತಾನದಿಂದ ಇಲ್ಲಿನ ರೈಲ್ವೆ ಪ್ಲಾಟ್ ಫಾರ್ಮ್ಗೆ ಬಂದಾಗ ಭೋಗಿಗಳಲ್ಲಿ ಶವಗಳು, ದೇಹದಿಂದ ಛಿದ್ರಗೊಂಡ ಕೈಗಳು ಮತ್ತು ಕಾಲುಗಳು, ಕತ್ತರಿಸಿದ ತಲೆಗಳು ಮತ್ತು ಬೋಗಿಗಳ ಕೆಳಗೆ ಸುರಿಯುತ್ತಿದ್ದ ರಕ್ತ.
ಒಟ್ಟಿನಲ್ಲಿ ಆ ರೈಲು ‘ಪ್ರೇತದ ರೈಲಿನಂತೆ’ ಬಾಸವಾಗುತ್ತಿತ್ತು ಎಂದು ಖಾಲ್ಸಾ ವೋಕ್ಸ್ ವರದಿ ಮಾಡಿದೆ. ಆ ವರದಿಯಲ್ಲಿ ಏನೇನಿದೆ ಅನ್ನೋದನ್ನು ನೋಡುವುದಾದರೆ,

ಚಂಡೀಗಢ (ಪಂಜಾಬ್) : 1947 ಭಾರತ- ಪಾಕಿಸ್ತಾನ ವಿಭಜನೆ ಆದ ವರ್ಷ.. ಒಂದು ಕಡೆ ಸ್ವಾತಂತ್ರ್ಯ ಸಿಕ್ಕ ಹರ್ಷ ಮತ್ತೊಂದೆಡೆ, ಭಾರತ – ಪಾಕ್ ವಿಭಜನೆ ಆದ ವರ್ಷವೂ ಕೂಡಾ ಹೌದು. ಇದು ಎರಡು ರಾಷ್ಟ್ರಗಳ ನಡುವೆ ಘರ್ಷಣೆಗೆ ವೇದಿಕೆಯನ್ನೂ ಸೃಷ್ಟಿ ಮಾಡಿದ ವರ್ಷ. ದುರಂತ ಎಂದರೆ ಹಲವರನ್ನ ನಿರ್ದಯವಾಗಿ ಕೊಲ್ಲಲಾಯಿತು. ಮಹಿಳೆಯರನ್ನ ಪ್ರತ್ಯೇಕಿಸಲಾಯಿತು.
ಪಾಕ್ನಿಂದ ಬರುವ ರೈಲುಗಳು ರಕ್ತಸಿಕ್ತವಾದವು. ಹೀಗಾಗಿ ಅವುಗಳನ್ನ ಪ್ರೇತದ ರೈಲುಗಳು ಎಂದೇ ಕರೆಯಲಾಯಿತು. ಪಾಕ್ನಿಂದ ಬಂದ ರೈಲುಗಳು ತಮ್ಮ ಗಮ್ಯ ಸ್ಥಾನ ತಲುಪಿದಾಗ ಅದರೊಳಗಿನ ಚಿತ್ರಣವಂತೂ ಹೃದಯ ವಿದ್ರಾವಕವಾಗಿದ್ದವು. ವಿಭಜನೆಯ ಬಳಿಕ ಪಾಕ್ನಿಂದ ಭಾರತಕ್ಕೆ ಮರಳಿದ ರೈಲುಗಳ ಬೋಗಿಗಳಲ್ಲಿ ಪ್ರವಾಹದ ನೀರಿನಂತೆ ರಕ್ತದೋಕುಳಿಯಲ್ಲಿ ಮಿಂದೆದ್ದವು. ಟ್ರೈನ್ಗಳ ಒಂದು ಮೂಲೆಯಲ್ಲಿ ಹೆಣಗಳ ರಾಶಿಗಳನ್ನು ಹಾಕಲಾಗಿತ್ತು. ಕೈಗಳು ಮತ್ತು ಕಾಲುಗಳು ದೇಹದಿಂದ ಬೇರೆ ಬೇರೆ ಯಾಗಿದ್ದವು. ಮಹಿಳೆಯರ ಅಂಗಾಂಗಳನ್ನು ವಿರೂಪಗೊಳಿಸಿದ ರೀತಿ ಎಂತಹವರನ್ನು ತಲೆತಗ್ಗಿಸುವಂತೆ ಮಾಡಿದ್ದವು ಎಂದು ಖಾಲ್ಸಾ ವೋಕ್ಸ್ ವರದಿ ಮಾಡಿದೆ.
ಅಂದು ಆಗಸ್ಟ್ 14, 1947.. ಪಂಜಾಬ್‌ನ ಫಿರೋಜ್‌ಪುರದ ರೈಲು ನಿಲ್ದಾಣ ಎಂದಿನಂತೆ ಚಟುವಟಿಕೆಗಳಿಂದ ಕೂಡಿರಲಿಲ್ಲ. ಗುಟ್ಟಾದ ಪಿಸುಮಾತುಗಳು, ಕೈಗಳನ್ನು ಹಿಸುಕುತ್ತಾ ಗಡಿಯಾರಗಳತ್ತ ನೋಡುತ್ತಾ ಜನರು ನಿಂತಿದ್ದರು. ಪ್ಲಾಟ್‌ಫಾರ್ಮ್‌ನಲ್ಲಿ ಯಾವುದೇ ಮಾರಾಟಗಾರರು ಚಹಾ ಅಥವಾ ತಿಂಡಿಗಳನ್ನು ಮಾರಾಟ ಮಾಡುತ್ತಿರಲಿಲ್ಲ. ಪುಸ್ತಕ ಮಳಿಗೆಗಳನ್ನು ಮುಚ್ಚಲಾಗಿತ್ತು. ಪ್ಲಾಟ್‌ಫಾರ್ಮ್‌ಗಳ ಮಕ್ಕಳ ಆಟದ ಸದ್ದಿರಲಿಲ್ಲ. ನಿಲ್ದಾಣದ ಎಲ್ಲಡೆ ಭದ್ರತಾ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿತ್ತು. ಜನರಲ್ಲಿ ಭಯ ಮತ್ತು ಆತಂಕದ ವಾತಾವರಣ ಇತ್ತು ಖಾಲ್ಸಾ ವೋಕ್ಸ್ ವರದಿಯಲ್ಲಿ ಹೇಳಿದೆ.
ಇನ್ನೇನು ಲಾಹೋರ್‌ನಿಂದ ಬರುವ ರೈಲು ಯಾವುದೇ ಕ್ಷಣದಲ್ಲಿ ಪ್ಲಾಟ್‌ಫಾರ್ಮ್‌ಗೆ ಬರುವ ನಿರೀಕ್ಷೆ ಇತ್ತು. ಅಂದುಕೊಂಡ ಹಾಗೇ ಆ ಮೇಲ್ ರೈಲಿನಂತಿದ್ದ ರೈಲು ಪ್ಲಾಟ್‌ಫಾರ್ಮ್‌ಗೆ ಬಂದೇ ಬಿಟ್ಟಿತ್ತು. ಆದರೆ ರೈಲಿನಲ್ಲಿ ಕಂಡ ದೃಶ ಮಾತ್ರ ಹೃದಯ ಕದಡುವಂತಾ ವಾತಾವರಣವನ್ನೇ ನಿರ್ಮಾಣ ಮಾಡಿತ್ತು. ಯಾವುದೇ ಸಂತೋಷ, ನಗು ಮತ್ತು ಹರಟೆಗೆ ಅವಕಾಶವೇ ಇರಲಿಲ್ಲ. ರೈಲು ನಿಲ್ದಾಣದ ಪ್ಲಾಟ್ ಫಾರ್ಮ್ಗಳನ್ನು ತಲುಪಿದಾಗ ಅಲ್ಲಿ ಸಂಪೂರ್ಣ ಮೌನ ಆವರಿಸಿತ್ತು. ರೈಲಿನ ಬಾಗಿಲುಗಳನ್ನು ತೆಗೆದಾಗ ಪ್ರಯಾಣಿಕರ ನಗು ಮೊಗಗಳಲ್ಲ, ಹೊರ ಬಿದ್ದಿದ್ದು ಸತ್ತವರ ಶವಗಳು, ಛಿದ್ರಗೊಂಡ ಕೈಗಳು ಮತ್ತು ಕಾಲುಗಳು, ಕತ್ತರಿಸಿದ ತಲೆಗಳು ಹೀಗೆ ಸಂಪೂರ್ಣ ರೈಲಿನ ಬೋಗಿಗಳಿಗೆ ಬೋಗಿಗಳೆ ರಕ್ತ ಮಡುವಿನಲ್ಲಿ ಬಿದ್ದಂತೆ ಬಾಸವಾಗುತ್ತಿತ್ತು ಎಂದು ಸಲೋನಿ ಪೊದ್ದಾರ್ ಖಾಲ್ಸಾ ವೋಕ್ಸ್ ವರದಿಯಲ್ಲಿ ಅಂದಿನ ಘಟನೆಗಳ ಚಿತ್ರಣವನ್ನು ವಿವರಿಸಿದ್ದಾರೆ.
ತಮ್ಮವರ ಬರುವಿಕೆಗಾಗಿ ಲವಲವಿಕೆಯಿಂದ ಕಾದು ಕುಳಿತ ಸಂಬಂಧಿಕರು, ಬಂಧು ಬಾಂಧವರು, ರೈಲಿನಲ್ಲಿ ಕಂಡು ಬಂದ ಹೆಣಗಳು, ಊನಗೊಂಡ ಶರೀರಗಳು, ಗಾಯಗೊಂಡು ಚೀತ್ಕಾರ ಹಾಕುವವರನ್ನು ಭೇಟಿಯಾಗುವಂತಾಗಿತ್ತು ಎಂಬುದನ್ನು ಲೇಖಕರು ತಮ್ಮ ವರದಿಯಲ್ಲಿ ವಿವರಿಸಿದ್ದಾರೆ. ರೈಲಿನಿಂದ ಬೆರಳೆಣಿಕೆಯ ಪ್ರಯಾಣಿಕರು, ಅಂದರೆ ಒಬ್ಬ ಪುರುಷ, ಮಹಿಳೆ ಮತ್ತು ಇಬ್ಬರು ಮಕ್ಕಳು ರೈಲಿನಿಂದ ಹೊರಬಂದರು. ರೈಲಿನಲ್ಲಿ ಇವರಷ್ಟೇ ಜೀವಂತವಾಗಿ ಉಳಿದಿದ್ದರಿಂದ ಅವರು ಆ ಎಲ್ಲ ದೃಶ್ಯಗಳನ್ನು ನೋಡಿ ತೀವ್ರ ಭಯಭೀಗೊಂಡಿದ್ದರು ಅನ್ನುತ್ತದೆ ವರದಿ.
ಅಲ್ಲಿನ ಸ್ಟೇಷನ್ ಮಾಸ್ಟರ್, ಹೀಗೆ ರೈಲಿನಲ್ಲಿ ಬದುಕಿ ಬಂದ ಆ ಮಕ್ಕಳನ್ನು ನೋಡಿದರು. ತಕ್ಷಣವೇ ಅವರು ಅವೆಲ್ಲವನ್ನೂ ಬೋಗಿಯ ವಾಶ್ ರೂಂನಲ್ಲಿ ಬಚ್ಚಿಟ್ಟು ಹೊರಗಿನಿಂದ ಭದ್ರವಾಗಿ ಬೀಗ ಹಾಕಿದ್ದರು. ಪಾಕಿಸ್ತಾನದ ಪ್ರತಿ ನಿಲ್ದಾಣದಲ್ಲಿ ರೈಲು ನಿಂತಾಗ, ಲಾಠಿ ಮತ್ತು ಚಾಕುಗಳನ್ನು ಹಿಡಿದ ವ್ಯಕ್ತಿಗಳು ರೈಲಿನೊಳಗೆ ಪ್ರವೇಶಿಸಿ “ಹೈ ಕೋಯಿ ಸಿಖ್ ದಾ ಬಚಾ?” ಎನ್ನುವ ಘೋಷಣೆ ಮೂಲಕ ಹಿಂಸೆ ಕೊಡ್ತಿದ್ದರು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಸುಮಾರು 700-800 ಜನರಲ್ಲಿ ನಾಲ್ಕು ಜೀವಗಳು ಮಾತ್ರ ಬದುಕುಳಿದಿದ್ದವು.
ಸೆಪ್ಟೆಂಬರ್ 24, 1947 ರಂದು, ಖೇವ್ರಾದಿಂದ ಮುಸ್ಲಿಮೇತರರನ್ನು ಕರೆದುಕೊಂಡು ಬರುವ ಟ್ರಕ್‌ಗಳ ಬೆಂಗಾವಲು ತಂಡವನ್ನು ಪಿಂಡ್ ದದನ್ ಖಾನ್‌ದಲ್ಲಿ ಉಳಿಸಲಾಗಿತ್ತು. ಅಲ್ಲಿಂದ ಅವರೆಲ್ಲ ಭಾರತಕ್ಕೆ ಬರುವ ಕೊನೆಯ ರೈಲಿನಲ್ಲಿ ಹತ್ತಬೇಕಿತ್ತು. ಲಜ್ವಂತಿ ಎಂಬುವವರ ಪತಿ, ಅವರ ಪುಟ್ಟ ಮಗ, ಅವರ ಚಿಕ್ಕಪ್ಪ, ಅವರ ಪತ್ನಿ ಮತ್ತು ಅವರ ಪುಟ್ಟ ಮಗಳು ಜೊತೆಗಿದ್ದರು.
ಈ ಘಟನೆಗೂ ಮುನ್ನ ನಡೆದಿದ್ದೇನು?: ಪಾಕಿಸ್ತಾನ ಸೇನೆಯ 15 ಸೈನಿಕರು ರೈಲಿನ ಕಾವಲು ಕಾಯುತ್ತಿದ್ದರು. ಆಹಾರ ಮತ್ತು ನೀರಿಲ್ಲದೇ ದನಕರುಗಳಂತೆ ಪ್ರಯಾಣಿಕರು ರೈಲುಗಾಡಿಗಳಲ್ಲಿ ತುಂಬಿದ್ದರು. ಪಾಕಿಸ್ತಾನದ ಕಾಮೋಕೆ ತಲುಪುತ್ತಿದ್ದಂತೆ ಪೊಲೀಸರು ಎಲ್ಲರನ್ನು ಇಳಿಯುವಂತೆ ಆದೇಶಿಸಿದರು ಮತ್ತು ಎರಡು ಗಂಟೆಗಳ ಕಾಲ ರೈಲಿನಲ್ಲಿ ಶೋಧ ನಡೆಸಿದರು. ಈ ವೇಳೆ ಎಲ್ಲ ಪುರುಷರನ್ನು ನಿಶ್ಯಸ್ತ್ರಗೊಳಿಸಲಾಯಿತು. ಇದಾದ ಬಳಿಕ ಪ್ರಯಾಣ ಪುನರಾರಂಭಿಸಿದಾಗ ಅವರ ಶಸ್ತ್ರಾಸ್ತ್ರಗಳನ್ನು ಹಿಂತಿರುಗಿಸಲಾಗುವುದು ಆ ವೇಳೆ ಅವರಿಗೆಲ್ಲ ತಿಳಿಸಲಾಯಿತು. ಇಂಜಿನ್ ಹೊರಡಲು ಹಾರ್ನ್ ಹಾಕುತ್ತಿದ್ದಂತೆ ಕಠಾರಿಗಳು, ರೈಫಲ್‌ಗಳು, ಚಾಕುಗಳು ಮತ್ತು ಕೋಲುಗಳಿಂದ ಶಸ್ತ್ರಸಜ್ಜಿತವಾದ ಪಾಕ್ನ ಗುಂಪುಗಳು ಎಲ್ಲ ಪ್ರವೇಶದ್ವಾರಗಳಿಂದ ರೈಲನ್ನು ಪ್ರವೇಶಿಸಿದ್ದವು. ಹೀಗೆ ಟ್ರೈನ್ ಏರಿದ ದುಷ್ಕರ್ಮಿಗಳು ರೈಲಿನಲ್ಲಿದ್ದ ಪುರುಷರನ್ನು ಕೊಂದು ಹಾಕಿದರು. ಮಹಿಳೆಯರನ್ನು ಅವರಿಂದ ಪ್ರತ್ಯೇಕಿಸಿದರು ಎಂದು ಖಾಲ್ಸಾ ವೋಕ್ಸ್ ವರದಿ ಹೇಳಿದೆ. ಅಷ್ಟೇ ಅಲ್ಲ ದಂಗೆಕೋರರಿಗೆ ಪೊಲೀಸರು ಬೆಂಬಲ ನೀಡಿದ್ದರು. ರೈಲಿನಿಂದ ಇಳಿಯಲು ಪ್ರಯತ್ನಿಸುವವರ ಮೇಲೆ ಗುಂಡು ಹಾರಿಸಿದರು.
ಮಹಿಳಾ ಪ್ರಯಾಣಿಕರನ್ನು ದಂಗೆಕೋರರು ಕೆಳಗಿಳಿಸಿದ್ದರು. ಮತ್ತು ಮಹಿಳೆಯರ ಬಳಿ ಇದ್ದ ಚಿನ್ನಾಭರಣ ಹಾಗೂ ಬೆಲೆಬಾಳುವ ವಸ್ತುಗಳನ್ನು ದೋಚಿದರು. ಮಹಿಳೆಯೊಬ್ಬರ ಅಪ್ರಾಪ್ತ ಮಗನನ್ನು ಅವರಿಂದ ಕಸಿದು ಟಾಂಗಾ ಚಾಲಕನಿಗೆ ನೀಡಲಾಯಿತು. ಇನ್ನು ಚಿಕ್ಕ ಹೆಣ್ಣು ಮಕ್ಕಳು, ಯುವತಿಯರನ್ನ ಸರಕುಗಳನ್ನು ವಿತರಿಸಿದಂತೆ ವಿತರಿಸಲಾಯಿತು. ಆ ರೈಲಿನಲ್ಲಿ ಒಟ್ಟು 5 ಸಾವಿರ ಪ್ರಯಾಣಿಕರಿದ್ದರು, ಇದರಲ್ಲಿ 500- 600 ಮಹಿಳೆಯರಿದ್ದರು. ಬಹುತೇಕ 4400 – 4500 ಪುರಷ ಪ್ರಯಾಣಿಕರನ್ನ ಸಾಮೂಹಿಕವಾಗಿ ಹತ್ಯೆ ಮಾಡಲಾಯಿತು ಎಂದು ಸಲೋನಿ ಪೊದ್ದಾರ್ ಖಾಲ್ಸಾ ವೋಕ್ಸ್ ವರದಿಯಲ್ಲಿ ಬರೆದಿದ್ದಾರೆ.
Views: 0