ಮಹಿಳೆಯರ ಮಾನಸಿಕ ಆರೋಗ್ಯದ ಬಗ್ಗೆ ಜಾಗೃತಿ — ಮೈಸೂರಿನಲ್ಲಿ RLHP ಕಾರ್ಯಕ್ರಮ.

ದಿನಾಂಕ 29/10/2025ರಂದು ಗ್ರಾಮೀಣ ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆ (RLHP) ಮೈಸೂರು, ಚೈಲ್ಡ್ ಫಂಡ್ ಇಂಟರ್ನ್ಯಾಷನಲ್ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮೈಸೂರು ಇವರ ಸಂಯುಕ್ತ ಆಶ್ರಯದಲ್ಲಿ “ವಿಶ್ವ ಮಾನಸಿಕ ಆರೋಗ್ಯ ದಿನ” ಕಾರ್ಯಕ್ರಮವನ್ನು ಶಾಂತಿನಗರದ ಉರ್ದು ಹಿ.ಪ್ರಾ ಶಾಲೆಯಲ್ಲಿ ಹಮ್ಮಿಕೊಳ್ಳಲಾಯಿತು.

ಮೈಸೂರು ಮಹಾನಗರ ಪಾಲಿಕೆಯ ಶಾಂತಿನಗರ ವ್ಯಾಪ್ತಿಯ ಮಾಜಿ ಸದಸ್ಯರಾದ ಶ್ರೀ.ಆಯಾಜ್ ಪಾಷಾ ಇವರು ಕಾರ್ಯಕ್ರಮವನ್ನು ದಾಟಿಸಿ ಮಹಿಳೆಯರನ್ನು ಉದ್ದೇಶಿಸಿ ಮಾತನಾಡುತ್ತಾ ಎಲ್ಲಾ ಮಹಿಳೆಯರು ತಮ್ಮ ಮಾನಸಿಕ ಆರೋಗ್ಯದ ಕಡೆ ಗಮನ ಕೊಡಬೇಕು. ದೈಹಿಕ ಆರೋಗ್ಯ ಎಷ್ಟು ಮುಖ್ಯವೋ, ಮಾನಸಿಕ ಆರೋಗ್ಯ ಕೂಡ ಅಷ್ಟೇ ಮುಖ್ಯ ಎಂದು ಹೇಳಿದರು. ಮತ್ತು ಮೊಬೈಲ್ ಬಳಕೆಯನ್ನು ಕಡಿಮೆ ಮಾಡಬೇಕು ಎಂದು ಕಿವಿಮಾತು ಹೇಳಿದರು.

ಕಾರ್ಯಕ್ರಮಕ್ಕೆ ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಸಿ.ಈ.ಜಿ ಆಸ್ಪತ್ರೆ ಮೈಸೂರು ಇಲ್ಲಿಯ ವೈದ್ಯರಾದ ಡಾ.ಸಹನಾ ಎಂ.ಎಸ್ ಇವರು ಮಹಿಳೆಯರ ಮಾನಸಿಕ ಆರೋಗ್ಯ ಮತ್ತು ಯೋಗಕ್ಷೇಮ ಕುರಿತು ವಿವರವಾಗಿ ಮಾತನಾಡಿದರು, ಇವತ್ತಿನ ದಿನಗಳಲ್ಲಿ ಎಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಮಾನಸಿಕವಾದ ಸಮಸ್ಯೆಗಳಿಂದ ಬಳಲುತ್ತಿದ್ದಾರೆ ಇದರಿಂದಾಗಿ ಮಹಿಳೆಯರು ದೈಹಿಕ, ಮಾನಸಿಕ ಮತ್ತು ಸಾಮಾಜಿಕವಾಗಿ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದು ಈ ಸಮಸ್ಯೆಗಳಿಂದ ಹೊರಗಡೆ ಬರಬೇಕಾದರೆ ಸಮಯಕ್ಕೆ ಸರಿಯಾಗಿ ಆಪ್ತಸಮಾಲೋಚನೆ, ಮಾರ್ಗದರ್ಶನ ಮತ್ತು ಚಿಕಿತ್ಸೆ ಬಹಳ ಅಗತ್ಯ, ಅದಕ್ಕಾಗಿ ನಾವು ಮಾನಸಿಕ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ನೀಡಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಇನ್ನೋರ್ವ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಂರಕ್ಷಣಾಧಿಕಾರಿಯಾದ ಶ್ರೀಮತಿ ಸಂಗೀತ ಪ್ರಕಾಶ್ ಪೂಜಾರ ಇವರು ಮಾತನಾಡುತ್ತಾ ಮಹಿಳೆಯರ ಮೇಲಾಗುವ ಹಿಂಸೆ ದೌರ್ಜನ್ಯಗಳು, ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆ 2005ರ ಕುರಿತು ವಿವರವಾಗಿ ಮಾತನಾಡಿದರು. ಮಹಿಳೆಯರು ತಮಗೆ ಗಂಡನ ಮನೆಯವರಿಂದಾಗಲಿ, ಗಂಡನಿಂದಾಗಲಿ ಯಾವುದೇ ರೀತಿಯ ದೌರ್ಜನ್ಯಗಳು ಆಗುತ್ತಿದ್ದಲ್ಲಿ ಅದನ್ನು ಸಹಿಸದೆ ಅದರ ವಿರುದ್ಧ ಧ್ವನಿ ಎತ್ತಿ ಮಾತನಾಡಬೇಕು. ಇದಕ್ಕಾಗಿ ಕಾನೂನು, ಕಾಯ್ದೆಗಳು ಇದ್ದು ಇದರ ಉಪಯೋಗವನ್ನು ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಕಾರ್ಯಕ್ರಮದ ಉದ್ದೇಶಗಳು ಮತ್ತು ಸಂಸ್ಥೆಯ ಕುರಿತು ನಿರ್ದೇಶಕರಾದ ಶ್ರೀಮತಿ ಸರಸ್ವತಿ ಇವರು ಮಾತನಾಡಿದರು. ಕಾರ್ಯಕ್ರಮದ ವೇದಿಕೆಯಲ್ಲಿ ಡಾ. ಹಾನಮ್, ವೈದ್ಯಾಧಿಕಾರಿಗಳು ನಗರ ಆರೋಗ್ಯ ಮತ್ತು ಕ್ಷೇಮ ಕೇಂದ್ರ ಶಾಂತಿನಗರ, ರೋಷನ್ ಉರ್ದು ಹಿ. ಪ್ರಾ ಶಾಲೆ ಇದರ ಮುಖ್ಯೋಪಾಧ್ಯಾಯದ ಶ್ರೀಮತಿ.ಸಪೂರ ಇವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸುಮಾರು 110ಕ್ಕೂ ಹೆಚ್ಚಿನ ಮಹಿಳೆಯರು ಭಾಗವಹಿಸಿ ಕಾರ್ಯಕ್ರಮದ ಉಪಯೋಗವನ್ನು ಪಡೆದುಕೊಂಡರು.

Views: 61

Leave a Reply

Your email address will not be published. Required fields are marked *