ಪ್ರೊ ಕಬಡ್ಡಿ ಲೀಗ್: ಹ್ಯಾಟ್ರಿಕ್‌ ಜಯ ಸಾಧಿಸಿದ ಬೆಂಗಳೂರು ಬುಲ್ಸ್‌, ಜೈಪುರ ಪಿಂಕ್‌ ಪ್ಯಾಂಥರ್ಸ್‌ ಗೆ ಹ್ಯಾಟ್ರಿಕ್ ಸೋಲು.

ವಿಶಾಖಪಟ್ಟಣ: ಸಾಂಘಿಕ ಆಟ ಪ್ರದರ್ಶಿಸಿದ ಬೆಂಗಳೂರು ಬುಲ್ಸ್‌ ತಂಡವು 12ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್‌ನ ಪಂದ್ಯದಲ್ಲಿ ಹ್ಯಾಟ್ರಿಕ್‌ ಜಯ ಸಾಧಿಸಿತು.


ವಿಶ್ವನಾಥ್ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಬೆಂಗಳೂರು ಬುಲ್ಸ್‌ ತಂಡವು 28-23ರಿಂದ ಜೈಪುರ ಪಿಂಕ್‌ ಪ್ಯಾಂಥರ್ಸ್‌ ತಂಡವನ್ನು ಮಣಿಸಿತು.

ಆರಂಭದ ಮೂರು ಪಂದ್ಯಗಳಲ್ಲಿ ಸೋತಿದ್ದ ಬುಲ್ಸ್‌ ಪಡೆ, ನಂತರದ ಮೂರು ಪಂದ್ಯಗಳಲ್ಲಿ ಜಯಭೇರಿ ಬಾರಿಸಿತು. ಒಟ್ಟು 6 ಅಂಕ ಗಳಿಸಿರುವ ಬೆಂಗಳೂರು ತಂಡವು ಪಾಯಿಂಟ್ಸ್‌ ಪಟ್ಟಿಯಲ್ಲಿ ಐದನೇ ಸ್ಥಾನಕ್ಕೆ ಬಡ್ತಿ ಪಡೆಯಿತು.

ಪಂದ್ಯದ ಮೊದಲಾರ್ಧದಲ್ಲಿ 7 ಅಂಕಗಳ ಮುನ್ನಡೆ (16-9) ಪಡೆದ ಬುಲ್ಸ್‌ ತಂಡವು ದ್ವಿತೀಯಾರ್ಧದಲ್ಲೂ ಪಾರಮ್ಯ ಮೆರೆಯಿತು. ಟ್ಯಾಕಲ್‌ನಲ್ಲೇ 13 ಅಂಕಗಳನ್ನು ಗಳಿಸಿ, ಎದುರಾಳಿ ತಂಡವನ್ನು ಕಟ್ಟಿಹಾಕಿತು.

ಪಟ್ನಾ ಪೈರೇಟ್ಸ್‌ ಮತ್ತು ಹರಿಯಾಣ ಸ್ಟೀಲರ್ಸ್‌ ವಿರುದ್ಧ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಅಲಿರೆಜಾ ಮಿರ್ಜೈಯನ್ ಅವರು ಈ ಪಂದ್ಯದಲ್ಲಿ ರೇಡಿಂಗ್‌ ಮೂಲಕ ಎಂಟು ಅಂಕ ಕಲೆಹಾಕಿದರು. ದೀಪಕ್ ಶಂಕರ್ (5), ಸತ್ಯಪ್ಪ ಮಟ್ಟಿ (4)ಮತ್ತು ಸಂಜಯ್‌ ಧುಲ್ (3) ಟ್ಯಾಕಲ್‌ನಲ್ಲಿ ಮಿಂಚಿದರು.

ಜೈಪುರ ತಂಡದ ನಿತಿನ್‌ ಕುಮಾರ್‌ ರೇಡಿಂಗ್‌ನಲ್ಲಿ ಎಂಟು ಅಂಕ ಗಳಿಸಿದರು. ಎರಡು ಬಾರಿಯ ಚಾಂಪಿಯನ್‌ ಜೈಪುರ ತಂಡಕ್ಕೆ ಇದು ಐದು ಪಂದ್ಯಗಳಲ್ಲಿ ಮೂರನೇ ಸೋಲಾಗಿದೆ.

Views: 8

Leave a Reply

Your email address will not be published. Required fields are marked *