ಮುಸ್ತಾಫಿಜುರ್ ರೆಹಮಾನ್ ಕೈಬಿಟ್ಟ ಬೆನ್ನಲ್ಲೇ ದೇಶಾದ್ಯಂತ ಐಪಿಎಲ್ ನಿಷೇಧ
ಢಾಕಾ:
ದುಬಾರಿ ಬೆಲೆಗೆ ಹರಾಜಾಗಿದ್ದ ಬಾಂಗ್ಲಾದೇಶದ ವೇಗದ ಬೌಲರ್ ಮುಸ್ತಾಫಿಜುರ್ ರೆಹಮಾನ್ ಅವರನ್ನು ಐಪಿಎಲ್‌ನಿಂದ ಹೊರಗಿಟ್ಟ ಬೆನ್ನಲ್ಲೇ ಬಾಂಗ್ಲಾದೇಶ ಸರ್ಕಾರ ಕಠಿಣ ನಿರ್ಧಾರ ಕೈಗೊಂಡಿದೆ. ದೇಶಾದ್ಯಂತ ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಪ್ರಸಾರವನ್ನು ಅನಿರ್ದಿಷ್ಟಾವಧಿವರೆಗೆ ನಿಷೇಧಿಸುವಂತೆ ಆದೇಶ ಹೊರಡಿಸಲಾಗಿದೆ.
ಟಿವಿ ಚಾನೆಲ್‌ಗಳಿಗೆ ಸಚಿವಾಲಯದ ಸುತ್ತೋಲೆ
ಬಾಂಗ್ಲಾದೇಶದ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ದೇಶದ ಎಲ್ಲಾ ಟಿವಿ ಚಾನೆಲ್‌ಗಳಿಗೆ ಸುತ್ತೋಲೆ ಹೊರಡಿಸಿದ್ದು, ಮುಂದಿನ ಸೂಚನೆ ಬರುವವರೆಗೆ ಐಪಿಎಲ್‌ನ ಎಲ್ಲಾ ಪಂದ್ಯಗಳು ಹಾಗೂ ಸಂಬಂಧಿತ ಕಾರ್ಯಕ್ರಮಗಳ ಪ್ರಸಾರವನ್ನು ತಕ್ಷಣ ನಿಲ್ಲಿಸುವಂತೆ ಸೂಚಿಸಿದೆ. 2026ರ ಮಾರ್ಚ್ 26ರಿಂದ ಆರಂಭವಾಗಲಿರುವ ಐಪಿಎಲ್ ಟೂರ್ನಿಯ ಪ್ರಸಾರ ಬಾಂಗ್ಲಾದೇಶದಲ್ಲಿ ಇರದು ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.
ಬಿಸಿಸಿಐ ನಿರ್ಧಾರಕ್ಕೆ ಕಾರಣ ಸ್ಪಷ್ಟವಿಲ್ಲ
ಮುಸ್ತಾಫಿಜುರ್ ರೆಹಮಾನ್ ಅವರನ್ನು ಐಪಿಎಲ್‌ನಿಂದ ಹೊರಗಿಟ್ಟಿರುವ ಬಿಸಿಸಿಐ ನಿರ್ಧಾರದ ಹಿಂದೆ ಯಾವುದೇ ಸ್ಪಷ್ಟ ಕಾರಣವನ್ನು ತಿಳಿಸಲಾಗಿಲ್ಲ ಎಂದು ಬಾಂಗ್ಲಾದೇಶ ಆರೋಪಿಸಿದೆ. ಈ ನಿರ್ಧಾರವು ದೇಶದ ಜನರ ಭಾವನೆಗೆ ಧಕ್ಕೆ ತಂದಿದ್ದು, ಬಾಂಗ್ಲಾ ವಿರೋಧಿ ಮನೋಭಾವಕ್ಕೆ ಉತ್ತೇಜನ ನೀಡಿದಂತೆ ಕಾಣುತ್ತದೆ ಎಂದು ಸಚಿವಾಲಯ ಹೇಳಿದೆ.
ಐಪಿಎಲ್ ಆದಾಯದ ಮೇಲೆ ಪರಿಣಾಮ ಇಲ್ಲ
ಬಾಂಗ್ಲಾದೇಶದಲ್ಲಿ ಐಪಿಎಲ್ ಪ್ರಸಾರ ನಿಷೇಧಿಸಿದ್ದರೂ, ಇದರಿಂದ ಬಿಸಿಸಿಐ ಅಥವಾ ಐಪಿಎಲ್ ಫ್ರಾಂಚೈಸಿಗಳ ಆದಾಯದ ಮೇಲೆ ಯಾವುದೇ ದೊಡ್ಡ ಪರಿಣಾಮ ಇರುವುದಿಲ್ಲ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಬಾಂಗ್ಲಾದೇಶ ಕ್ರಿಕೆಟ್‌ನ ವಾರ್ಷಿಕ ಆದಾಯ 423 ಕೋಟಿ ರೂಪಾಯಿಗಳಷ್ಟಿದ್ದರೆ, ಆರ್‌ಸಿಬಿ ಫ್ರಾಂಚೈಸಿಯ ಬ್ರ್ಯಾಂಡ್ ವ್ಯಾಲ್ಯೂ 2,259 ಕೋಟಿ ರೂಪಾಯಿಗಳಾಗಿದೆ. ವಿಶ್ವದ ಶ್ರೀಮಂತ ಕ್ರಿಕೆಟ್ ಲೀಗ್ ಆಗಿರುವ ಐಪಿಎಲ್‌ನ ಬ್ರ್ಯಾಂಡ್ ವ್ಯಾಲ್ಯೂ 2024ರಲ್ಲಿ 76,100 ಕೋಟಿ ರೂಪಾಯಿಗಳಿಗೆ ಏರಿಕೆಯಾಗಿದೆ.
ಟಿ20 ವಿಶ್ವಕಪ್ ಪಂದ್ಯ ಸ್ಥಳಾಂತರಕ್ಕೆ ಮನವಿ
ಈ ಬೆಳವಣಿಗೆಗೆ ಒಂದು ದಿನ ಮುಂಚೆ, 2026ರ ಐಸಿಸಿ ಟಿ20 ವಿಶ್ವಕಪ್ ಪಂದ್ಯಗಳ ಸ್ಥಳ ಬದಲಾವಣೆ ಮಾಡುವಂತೆ ಬಾಂಗ್ಲಾದೇಶದ ಮಧ್ಯಂತರ ಸರ್ಕಾರ ಸೂಚನೆ ನೀಡಿದೆ. ಭಾರತದಲ್ಲಿ ನಿಗದಿಯಾಗಿರುವ ಬಾಂಗ್ಲಾದೇಶದ ಎಲ್ಲಾ ಲೀಗ್ ಪಂದ್ಯಗಳನ್ನು ಭಾರತದಿಂದ ಹೊರಗೆ ಸ್ಥಳಾಂತರಿಸುವಂತೆ ಐಸಿಸಿಗೆ ಮನವಿ ಸಲ್ಲಿಸಲು ಬಾಂಗ್ಲಾ ಕ್ರಿಕೆಟ್ ಮಂಡಳಿಗೆ ಸರ್ಕಾರ ನಿರ್ದೇಶನ ನೀಡಿದೆ.
ದಾಖಲೆ ಬೆಲೆಗೆ ಮಾರಾಟವಾಗಿದ್ದ ರೆಹಮಾನ್
ಡಿಸೆಂಬರ್‌ನಲ್ಲಿ ನಡೆದ ಐಪಿಎಲ್ 2026 ಹರಾಜಿನಲ್ಲಿ ಮುಸ್ತಾಫಿಜುರ್ ರೆಹಮಾನ್ ಅವರನ್ನು ಕೋಲ್ಕತ್ತಾ ನೈಟ್ ರೈಡರ್ಸ್ ಫ್ರಾಂಚೈಸಿಯು 9.20 ಕೋಟಿ ರೂಪಾಯಿಗೆ ಖರೀದಿಸಿತ್ತು. ಐಪಿಎಲ್ ಇತಿಹಾಸದಲ್ಲೇ ಅತಿ ಹೆಚ್ಚು ಬೆಲೆಗೆ ಮಾರಾಟವಾದ ಬಾಂಗ್ಲಾದೇಶದ ಆಟಗಾರ ಎಂಬ ಹೆಗ್ಗಳಿಕೆಗೂ ಅವರು ಪಾತ್ರರಾಗಿದ್ದರು.
ರಾಜಕೀಯ ಒತ್ತಡದ ನಡುವೆ ಬಿಸಿಸಿಐ ಮಧ್ಯಪ್ರವೇಶ
ಶೇಖ್ ಹಸೀನಾ ಸರ್ಕಾರ ಪತನದ ನಂತರ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಸಂಬಂಧಗಳು ಹದಗೆಟ್ಟಿವೆ. ಈ ನಡುವೆ ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ದೌರ್ಜನ್ಯ ನಡೆಯುತ್ತಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ, ಬಾಂಗ್ಲಾದೇಶದ ಆಟಗಾರರು ಐಪಿಎಲ್‌ನಲ್ಲಿ ಆಡಬಾರದು ಎಂಬ ಒತ್ತಡ ಕ್ರಿಕೆಟ್ ಅಭಿಮಾನಿಗಳಿಂದ ವ್ಯಕ್ತವಾಗಿತ್ತು. ಈ ಹಿನ್ನೆಲೆ ಬಿಸಿಸಿಐ ಮಧ್ಯಪ್ರವೇಶಿಸಿ, ಮುಸ್ತಾಫಿಜುರ್ ರೆಹಮಾನ್ ಅವರನ್ನು ಕೆಕೆಆರ್ ತಂಡದಿಂದ ಕೈಬಿಡುವಂತೆ ಸೂಚಿಸಿದೆ ಎನ್ನಲಾಗಿದೆ.
Views: 23