ಚಿತ್ರದುರ್ಗ, ಡಿ.21:
ಇಂದಿನ ಯುವಜನಾಂಗ ದಾರಿತಪ್ಪಿ ವಿವಿಧ ಮಾರ್ಗಗಳಲ್ಲಿ ಸಾಗುವ ಬದಲು ಧ್ಯಾನದಲ್ಲಿ ತೊಡಗಿಕೊಳ್ಳುವ ಮೂಲಕ ಉತ್ತಮ, ಶಾಂತ ಹಾಗೂ ಆರೋಗ್ಯಕರ ಜೀವನವನ್ನು ರೂಪಿಸಿಕೊಳ್ಳಬೇಕು ಎಂದು ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಕರೆ ನೀಡಿದರು.
ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಹಾಗೂ ಆದಿಯೋಗಿ ಧ್ಯಾನಾಮೃತ ಪಿರಮಿಡ್ ಧ್ಯಾನ ಕೇಂದ್ರದ ಸಹಯೋಗದಲ್ಲಿ ವಿಶ್ವ ಧ್ಯಾನ ದಿನಾಚರಣೆಯ ಅಂಗವಾಗಿ ಮುರುಘಾಮಠದ ಅನುಭವ ಮಂಟಪದಲ್ಲಿ ಭಾನುವಾರ ಆಯೋಜಿಸಿದ್ದ ಸಾಮೂಹಿಕ ಸಂಗೀತ ಧ್ಯಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬುದ್ಧ ಮತ್ತು ಬಸವಣ್ಣನವರ ಕಾಲದಿಂದಲೂ ಧ್ಯಾನಕ್ಕೆ ಅಪಾರ ಮಹತ್ವವಿದೆ. ಇಂದಿನ ವೈಜ್ಞಾನಿಕ ಯುಗದಲ್ಲಿ ಪ್ರತಿಯೊಬ್ಬರೂ ಒಂದಲ್ಲೊಂದು ರೀತಿಯ ಮಾನಸಿಕ ಒತ್ತಡ ಮತ್ತು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ವೈದ್ಯಕೀಯ ಚಿಕಿತ್ಸೆಯೊಂದಿಗೆ ಧ್ಯಾನವನ್ನು ಅಳವಡಿಸಿಕೊಂಡರೆ ಮಾನಸಿಕ ಹಾಗೂ ದೈಹಿಕವಾಗಿ ಸದೃಢ ಜೀವನ ನಡೆಸಬಹುದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಬ್ರಹ್ಮಶ್ರೀ ಪ್ರೇಮನಾಥ ಅವರು, ಭೌತಿಕ ಹಾಗೂ ಆಧ್ಯಾತ್ಮಿಕ ಜೀವನದ ಅರ್ಥವನ್ನು ತಿಳಿದುಕೊಳ್ಳಲು ಧ್ಯಾನ ಅಗತ್ಯವಿದೆ ಎಂದು ತಿಳಿಸಿದರು. ವೇದ, ಉಪನಿಷತ್ತು ಹಾಗೂ ಭಗವದ್ಗೀತೆಯಲ್ಲಿ ಧರ್ಮದ ಅರ್ಥವನ್ನು ವಿವರಿಸಲಾಗಿದೆ. ಸತ್ಯವನ್ನು ಅರಿಯಬೇಕಾದರೆ ಧ್ಯಾನ ಅನಿವಾರ್ಯ. ದೇಹಕ್ಕೆ ಆಹಾರ ಬೇಕಾದಂತೆ ಮನಸ್ಸಿಗೆ ನೆಮ್ಮದಿ ಬೇಕು. ಆರೋಗ್ಯಕ್ಕಿಂತ ದೊಡ್ಡ ಸಂಪತ್ತು ಯಾವುದೂ ಇಲ್ಲ ಎಂದು ಹೇಳಿದರು.
ಯೋಗ ಹಾಗೂ ಧ್ಯಾನ ಮಾಡುವವರು ನಿಜವಾಗಿಯೂ ಶಾಂತಚಿತ್ತರಾಗಿರುತ್ತಾರೆ. ಚಂಚಲ ಮನಸ್ಸನ್ನು ನಿಯಂತ್ರಿಸುವ ಶಕ್ತಿ ಧ್ಯಾನಕ್ಕಿದೆ. ಔಷಧಿಗೆ ಹಣ ಬೇಕಾದರೆ, ಧ್ಯಾನಕ್ಕೆ ಸಮಯ ಮತ್ತು ಮನಸ್ಸು ಬೇಕು. ಧ್ಯಾನದಿಂದ ದೇವರು ಮತ್ತು ಋಷಿಮುನಿಗಳನ್ನು ಅರಿಯಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಬೆಂಗಳೂರು ಮೂಲದ ಡಾ. ಹರಿಕೃಷ್ಣ ಮಾತನಾಡಿ, ಧ್ಯಾನದಿಂದ ಜ್ಞಾನ, ಉತ್ತಮ ಆರೋಗ್ಯ ಹಾಗೂ ಮನಸ್ಸಿಗೆ ಶಾಂತಿ ದೊರೆಯುತ್ತದೆ. ಆಧ್ಯಾತ್ಮಿಕತೆ ಎಂದರೆ ವಿಜ್ಞಾನವೇ ಆಗಿದೆ. ಬಾಲ್ಯದಿಂದಲೇ ಧ್ಯಾನ ಅಭ್ಯಾಸ ಮಾಡಿದರೆ ಒತ್ತಡಮುಕ್ತ ಜೀವನ ನಡೆಸಬಹುದು ಎಂದರು.
ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಶಿವರಶ್ಮಿ ಅಕ್ಕ ಅವರು, ಧ್ಯಾನದಿಂದ ಅಂತರಂಗದ ಶಕ್ತಿ ವೃದ್ಧಿಯಾಗುತ್ತದೆ. ಪರಮೇಶ್ವರನೊಂದಿಗೆ ಆತ್ಮಸಂಪರ್ಕ ಸಾಧಿಸಲು ಧ್ಯಾನ ಮುಖ್ಯ. ಸ್ವಪರಿವರ್ತನೆ ಮತ್ತು ಸ್ವಶಕ್ತೀಕರಣಕ್ಕೆ ಧ್ಯಾನ ಅಗತ್ಯವಿದೆ ಎಂದು ತಿಳಿಸಿದರು.
ನಿವೃತ್ತ ಶಿಕ್ಷಕ ಗೌರೀಶ್ ಮಾತನಾಡಿ, ಧ್ಯಾನದಿಂದ ಆತ್ಮವಿಶ್ವಾಸ ಹೆಚ್ಚುತ್ತದೆ. ಆಧುನಿಕ ಜೀವನದ ಜಂಜಾಟದಿಂದ ಹೊರಬರಲು ಪ್ರತಿಯೊಬ್ಬರೂ ಧ್ಯಾನವನ್ನು ಅಳವಡಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಸದಸ್ಯ ಕೆ.ಎಸ್. ನವೀನ್, ಬಿಜೆಪಿ ಯುವ ಮುಖಂಡ ಜಿ.ಎಸ್. ಅನಿತ್ ಕುಮಾರ್, ಆದಿಯೋಗಿ ಧ್ಯಾನಾಮೃತ ಪಿರಮಿಡ್ ಧ್ಯಾನ ಕೇಂದ್ರದ ಅಧ್ಯಕ್ಷೆ ಮಧುಶ್ರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಶಿವರಾಜ್ ಪ್ರಾರ್ಥಿಸಿದರು. ಡಾ. ಮಂಜುಳಗೌಡ ಸ್ವಾಗತಿಸಿದರು. ರಶ್ಮಿ ವಂದಿಸಿದರು. ಪ್ರಸನ್ನಕುಮಾರಿ ಕಾರ್ಯಕ್ರಮ ನಿರೂಪಿಸಿದರು.
Views: 31