ಕ್ಯಾಬ್​ನಲ್ಲಿ ಮಾತನಾಡುವಾಗ ಎಚ್ಚರ: ಪರ್ಸನಲ್ ವಿಚಾರ ಮಾತನಾಡಿ ₹22 ಲಕ್ಷ, ಮುಕ್ಕಾಲು ಕೆಜಿ ಚಿನ್ನಾಭರಣ ಕಳೆದುಕೊಂಡ ಮಹಿಳೆ

Bengaluru Crime: ಕ್ಯಾಬ್​​ ಚಾಲಕನೊಬ್ಬ ಮಹಿಳೆಗೆ ನಂಬಿಸಿ ಬಳಿಕ ಸುಲಿಗೆ ಮಾಡಿರುವ ಪ್ರಕರಣ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ.

ಬೆಂಗಳೂರು: ನೀವು ಕ್ಯಾಬ್​ನಲ್ಲಿ ಪ್ರಯಾಣ ಮಾಡುತ್ತ ಮೊಬೈಲ್ ಕರೆಯಲ್ಲಿ ಪರ್ಸನಲ್ ವಿಚಾರ ಮಾತನಾಡುವಾಗ ಎಚ್ಚರವಹಿಸಿ. ಕೊಂಚ ಯಾಮಾರಿದರೂ ನಿಮ್ಮ ವೀಕ್​ನೆಸ್​​ನ್ನೇ ಬಂಡವಾಳ ಮಾಡಿಕೊಂಡು ಚಾಲಕರು ಹಣ ಸುಲಿಗೆ ಮಾಡಬಹುದು.

ಚಾಲಕನೊಬ್ಬ ಮಹಿಳೆಯಿಂದ ಲಕ್ಷಾಂತರ ರೂ. ಹಣ ಹಾಗೂ ಚಿನ್ನಾಭರಣ ಸುಲಿಗೆ ಮಾಡಿದ ಪ್ರಕರಣವೊಂದು ರಾಜಧಾನಿ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ.

ಸ್ನೇಹಿತನ ಸೋಗಿನಲ್ಲಿ ಕರೆ ಮಾಡಿ ಮಹಿಳೆಗೆ 22 ಲಕ್ಷ ರೂಪಾಯಿ ಹಾಕಿಸಿಕೊಂಡು ವಂಚಿಸಿದ್ದ ಕ್ಯಾಬ್ ಚಾಲಕನನ್ನು ಬೆಂಗಳೂರಿನ ರಾಮಮೂರ್ತಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ತನ್ನೊಂದಿಗೆ ಕರೆಯಲ್ಲಿ ಮಾತನಾಡುತ್ತಿರುವುದು ಸ್ನೇಹಿತನಲ್ಲ ಎಂದು ತಿಳಿದ ನಂತರವೂ ಮಹಿಳೆಗೆ ಸ್ನೇಹಿತನ ವಿಚಾರಗಳನ್ನು ಗಂಡನಿಗೆ ತಿಳಿಸುವುದಾಗಿ ಬೆದರಿಸಿ ಆಕೆಯಿಂದ ಹಣ ಅಲ್ಲದೇ 750 ಗ್ರಾಂ ಚಿನ್ನ ಸುಲಿಗೆ ಮಾಡಿದ್ದು, ಇದೀಗ ಆರೋಪಿ ಪೊಲೀಸರ ಅತಿಥಿಯಾಗಿದ್ದಾನೆ. ವಶಪಡಿಸಿಕೊಂಡ ಚಿನ್ನಾಭರಣದ ಜೊತೆ ಪೊಲೀಸರು

ಏನಿದು ಘಟನೆ?: ಹೆಸರಘಟ್ಟ ನಿವಾಸಿ ಕಿರಣ್ ಬಂಧಿತ ಕ್ಯಾಬ್ ಚಾಲಕ. ಖಾಸಗಿ‌ ಕಂಪನಿಯಲ್ಲಿ ಕೆಲಸ‌ ಮಾಡುತ್ತಿರುವ ಮಹಿಳೆಯು ಕಳೆದ ವರ್ಷ ಡಿಸೆಂಬರ್​​ನಲ್ಲಿ ಇಂದಿರಾನಗರದಿಂದ ಬಾಣಸವಾಡಿಗೆ ಕ್ಯಾಬ್ ಬುಕ್ ಮಾಡಿದ್ದರು. ಬಳಿಕ ಕ್ಯಾಬ್​ನಲ್ಲಿ ಹೋಗುವಾಗ ಮೊಬೈಲ್​ನಲ್ಲಿ ಸ್ನೇಹಿತನ ವಿಚಾರಗಳನ್ನು ಮಾತನಾಡಿದ್ದರು. ಈ ಹಿಂದೆ ಕ್ಲಾಸ್​​ಮೇಟ್ ಆಗಿದ್ದ ಸ್ನೇಹಿತನ ವಿಚಾರಗಳ ಬಗ್ಗೆ ಚಾಲಕ ಸೂಕ್ಷ್ಮವಾಗಿ ಕದ್ದಾಲಿಸಿಕೊಂಡಿದ್ದ. ಇದಾದ ಕೆಲವು ದಿನಗಳ ಬಳಿಕ ಸ್ನೇಹಿತನ ಸೋಗಿನಲ್ಲಿ ಮಹಿಳೆಗೆ ಸಂದೇಶ ಕಳುಹಿಸಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ನಾನು‌ ನಿನ್ನ ಬಾಲ್ಯದ ಸ್ನೇಹಿತ ಎಂದು ಪರಿಚಯಿಸಿಕೊಂಡ ಕ್ಯಾಬ್ ಚಾಲಕ ಮಹಿಳೆ ಜೊತೆ ಸಂಪರ್ಕ ಬೆಳೆಸಿ ಮೊಬೈಲ್​ನಲ್ಲಿ ಮಾತನಾಡುತ್ತಿದ್ದ. ಈ‌ ಮಧ್ಯೆ ತಾನು ಆರ್ಥಿಕ ಸಂಕಷ್ಟದಲ್ಲಿದ್ದು, ಹಣದ ಅಗತ್ಯವಿದೆ ಎಂದು‌ ನಿವೇದನೆ ಮಾಡಿಕೊಂಡಿದ್ದ. ಬಳಿಕ ಆತನ ಕಷ್ಟಕ್ಕೆ ಸ್ಪಂದಿಸಿದ ಮಹಿಳೆ ಆನ್​ಲೈನ್ ಮೂಲಕ ಆರೋಪಿಯ ಬ್ಯಾಂಕ್ ಖಾತೆಗೆ 22 ಲಕ್ಷ ರೂ. ಹಣ ವರ್ಗಾಯಿಸಿದ್ದರು. ಕೆಲ ದಿನಗಳ ಬಳಿಕ ತನ್ನೊಂದಿಗೆ ಮಾತನಾಡುತ್ತಿರುವುದು ಬಾಲ್ಯ ಸ್ನೇಹಿತನಲ್ಲ ಎಂದು ಗೊತ್ತಾಗುತ್ತಿದ್ದಂತೆ ಅಂತರ ಕಾಯ್ದುಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಆದರೆ, ಇಷ್ಟಕ್ಕೆ ಸುಮ್ಮನಾಗದ ಕ್ಯಾಬ್​ ಚಾಲಕ ನಿನ್ನ ಬಳಿಯಿರುವ ಚಿನ್ನಾಭರಣಗಳನ್ನು ನೀಡದಿದ್ದರೆ ಸ್ನೇಹಿತನೊಂದಿಗಿನ ವಿಚಾರಗಳನ್ನು ಗಂಡನಿಗೆ ಹೇಳುವುದಾಗಿ ಬೆದರಿಸಿದ್ದಾನೆ. ಬೇರೆ ದಾರಿ ತೋಚದೇ ಚಾಲಕನಿಗೆ ತನ್ನ ಬಳಿಯಿದ್ದ 750 ಗ್ರಾಂ ಚಿನ್ನವನ್ನೂ ಕಳೆದ‌ ಏಪ್ರಿಲ್​ನಲ್ಲಿ ನೀಡಿದ್ದರು. ಇದನ್ನ ಅರಿಯದ ಮಹಿಳೆಯ ಪತಿ ಆಭರಣದ ಬಗ್ಗೆ ವಿಚಾರಿಸಿದಾಗ ಮೋಸಕ್ಕೊಳಗಾಗಿರುವ ವಿಷಯದ ಬಗ್ಗೆ ಹೇಳಿದ್ದರು.‌ ಬಳಿಕ ವಂಚನೆ ಸಂಬಂಧ ರಾಮಮೂರ್ತಿನಗರ ಪೊಲೀಸ್​​ ಠಾಣೆಗೆ ದೂರು ನೀಡಿದ್ದರು. ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕ್ಯಾಬ್ ಚಾಲಕನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

Source : https://m.dailyhunt.in/news/india/kannada/etvbhar9348944527258-epaper-etvbhkn/kyaab+nalli+maatanaaduvaaga+echhara+parsanal+vichaara+maatanaadi+22+laksha+mukkaalu+keji+chinnaabharana+kaledukonda+mahile-newsid-n524219748?listname=newspaperLanding&topic=homenews&index=2&topicIndex=0&mode=pwa&action=click

Views: 0

Leave a Reply

Your email address will not be published. Required fields are marked *