ಹೆಣ್ಣುಮಕ್ಕಳನ್ನು ಉಳಿಸೋಣ, ಶಿಕ್ಷಣ ನೀಡೋಣ, ಸಮಾನ ಅವಕಾಶ ಕಲ್ಪಿಸೋಣ: ವರುಣದಲ್ಲಿ’ಬೇಟಿ ಬಚಾವೋ – ಬೇಟಿ ಪಢಾವೋ’ ಜಾಗೃತಿ ಕಾರ್ಯಕ್ರಮ.
ಮೈಸೂರು, ಜೂ. 29: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮೈಸೂರು ಗ್ರಾಮಾಂತರ ಹಾಗೂ ಗ್ರಾಮೀಣ ಮತ್ತು ಆರೋಗ್ಯ ಸಂಸ್ಥೆ (RLHP), ಮೈಸೂರು ಇವರ ಸಂಯುಕ್ತ ಆಶ್ರಯದಲ್ಲಿ ವರುಣ ಗ್ರಾಮದಲ್ಲಿ “ಬೇಟಿ ಬಚಾವೋ – ಬೇಟಿ ಪಢಾವೋ” ಅಭಿಯಾನದಡಿ ಜಾಗೃತಿ ಕಾರ್ಯಕ್ರಮವನ್ನು ಸೋಮವಾರ ಆಯೋಜಿಸಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಮೈಸೂರು ಗ್ರಾಮಾಂತರದ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ರೀಮತಿ ಭಾಗ್ಯಶ್ರೀ, “ಬೇಟಿ ಬಚಾವೋ – ಬೇಟಿ ಪಢಾವೋ” ಯೋಜನೆಯ ಮುಖ್ಯ ಉದ್ದೇಶವು ಹೆಣ್ಣುಮಕ್ಕಳ ಜನನದಿಂದ ಶಿಕ್ಷಣ, ಆರೋಗ್ಯ, ಸುರಕ್ಷತೆ ಹಾಗೂ ಸಬಲೀಕರಣದವರೆಗೆ ಅವರ ಸಮಗ್ರ ಅಭಿವೃದ್ಧಿಯನ್ನು ಖಚಿತಪಡಿಸುವುದಾಗಿದೆ ಎಂದು ತಿಳಿಸಿದರು.

ದೇಶದಲ್ಲಿ ಕುಸಿಯುತ್ತಿರುವ ಮಕ್ಕಳ ಲಿಂಗಾನುಪಾತವನ್ನು ಸುಧಾರಿಸುವುದು, ಹೆಣ್ಣು ಭ್ರೂಣ ಹತ್ಯೆಯನ್ನು ತಡೆಗಟ್ಟುವುದು, ಹೆಣ್ಣುಮಕ್ಕಳ ವಿರುದ್ಧದ ಲಿಂಗ ತಾರತಮ್ಯವನ್ನು ನಿವಾರಿಸುವುದು ಹಾಗೂ ಪ್ರತಿಯೊಬ್ಬ ಹೆಣ್ಣುಮಗುವಿಗೂ ಸಮಾನ ಹಕ್ಕು ಮತ್ತು ಅವಕಾಶಗಳನ್ನು ಒದಗಿಸುವುದು ಈ ಯೋಜನೆಯ ಪ್ರಮುಖ ಗುರಿಗಳಾಗಿವೆ ಎಂದು ಅವರು ಹೇಳಿದರು.
ಹೆಣ್ಣುಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಯಾವುದೇ ಬಾಲಕಿಯೂ ಶಾಲೆಯಿಂದ ಹೊರಗುಳಿಯದಂತೆ ಪೋಷಕರು ಮತ್ತು ಸಮಾಜದವರು ಜವಾಬ್ದಾರಿ ವಹಿಸಬೇಕು. ಜೊತೆಗೆ ಅವರ ಆರೋಗ್ಯ, ಪೌಷ್ಟಿಕ ಆಹಾರ, ಸ್ವಚ್ಛತೆ ಮತ್ತು ಸುರಕ್ಷತೆಯ ಬಗ್ಗೆ ವಿಶೇಷ ಕಾಳಜಿ ವಹಿಸುವ ಅಗತ್ಯವಿದೆ. ಶಿಕ್ಷಣ ಪಡೆದ ಹೆಣ್ಣುಮಕ್ಕಳು ಕುಟುಂಬ, ಸಮಾಜ ಹಾಗೂ ರಾಷ್ಟ್ರದ ಅಭಿವೃದ್ಧಿಗೆ ಅಮೂಲ್ಯ ಕೊಡುಗೆ ನೀಡುತ್ತಾರೆ ಎಂದು ಅವರು ತಿಳಿಸಿದರು.
ಗ್ರಾಮೀಣ ಮತ್ತು ಆರೋಗ್ಯ ಸಂಸ್ಥೆ (RLHP)ಯ ಸಂಯೋಜಕರಾದ ಶ್ರೀ ಶಶಿಕುಮಾರ್ ಮಾತನಾಡಿ, 18 ವರ್ಷದೊಳಗಿನ ಹೆಣ್ಣುಮಕ್ಕಳಿಗೆ ಹಾಗೂ 21 ವರ್ಷದೊಳಗಿನ ಗಂಡುಮಕ್ಕಳಿಗೆ ವಿವಾಹ ನೆರವೇರಿಸುವುದು ಬಾಲ್ಯ ವಿವಾಹವಾಗಿದ್ದು, ಅದು ಸಂಪೂರ್ಣ ಕಾನೂನುಬಾಹಿರವಾಗಿದೆ ಎಂದು ಹೇಳಿದರು.
ಬಾಲ್ಯ ವಿವಾಹದಿಂದ ಹೆಣ್ಣುಮಕ್ಕಳ ಆರೋಗ್ಯ, ಶಿಕ್ಷಣ ಮತ್ತು ಭವಿಷ್ಯದ ಮೇಲೆ ಗಂಭೀರ ದುಷ್ಪರಿಣಾಮಗಳು ಉಂಟಾಗುತ್ತವೆ. ಚಿಕ್ಕ ವಯಸ್ಸಿನಲ್ಲೇ ಗರ್ಭಧಾರಣೆಯಾಗುವುದರಿಂದ ತಾಯಿ ಮತ್ತು ಮಗುವಿನ ಜೀವಕ್ಕೂ ಅಪಾಯ ಎದುರಾಗುವ ಸಾಧ್ಯತೆ ಇದೆ. ಆದ್ದರಿಂದ ಬಾಲ್ಯ ವಿವಾಹ ತಡೆಗಟ್ಟಲು ಪ್ರತಿಯೊಬ್ಬರೂ ಜಾಗೃತರಾಗಬೇಕು ಎಂದು ಅವರು ಕರೆ ನೀಡಿದರು.
ಬಾಲ್ಯ ವಿವಾಹ ನಿಷೇಧ ಕಾಯ್ದೆಯ ಪ್ರಕಾರ ಬಾಲ್ಯ ವಿವಾಹ ನಡೆಸುವವರು, ಪ್ರೋತ್ಸಾಹಿಸುವವರು ಅಥವಾ ಸಹಕರಿಸುವವರ ವಿರುದ್ಧ ಎರಡು ವರ್ಷಗಳವರೆಗೆ ಜೈಲು ಶಿಕ್ಷೆ ಹಾಗೂ ₹1 ಲಕ್ಷದವರೆಗೆ ದಂಡ ವಿಧಿಸುವ ಅವಕಾಶವಿದೆ ಎಂದು ಅವರು ಮಾಹಿತಿ ನೀಡಿದರು.
ಶಿಕ್ಷಣವೇ ಸಮಾಜದಲ್ಲಿ ಶಾಶ್ವತ ಬದಲಾವಣೆಯನ್ನು ತರಬಲ್ಲ ಅತ್ಯಂತ ಶಕ್ತಿಶಾಲಿ ಸಾಧನವಾಗಿದೆ. ಹೆಣ್ಣು-ಗಂಡು ಎಂಬ ಭೇದವಿಲ್ಲದೆ ಪ್ರತಿಯೊಬ್ಬ ಮಗುವಿಗೂ ಶಿಕ್ಷಣ ದೊರೆಯಬೇಕು ಮತ್ತು ತಮ್ಮ ಕನಸುಗಳನ್ನು ಸಾಕಾರಗೊಳಿಸಿಕೊಳ್ಳಲು ಸಮಾನ ಅವಕಾಶ ಕಲ್ಪಿಸಬೇಕು ಎಂದು ಅವರು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಸಮಗ್ರ ಶಿಶು ಅಭಿವೃದ್ಧಿ ಯೋಜನೆಯ ಮೇಲ್ವಿಚಾರಕರಾದ ಶ್ರೀಮತಿ ನಾಗರತ್ನ, ಕಾಲೇಜು ಉಪನ್ಯಾಸಕರಾದ ಲೋಕೇಶ್, ಶಾಲಾ ಶಿಕ್ಷಕರಾದ ಪ್ರಭಾ, ಅಂಗನವಾಡಿ ಕಾರ್ಯಕರ್ತೆಯರು, ಶಾಲಾ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.
Follow the ಸಮಗ್ರ ಸುದ್ದಿ Telegram Channel: https://t.me/SamagraSuddi
ಸಮಗ್ರ ಸುದ್ದಿ channel on WhatsApp: