ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಜೀವಜಲಕ್ಕೆ ಉಪವಾಸ ಕುಳಿತ ಜೀವಕ್ಕೆ ಕುತ್ತು; ಡಿಸಿ ನಿರ್ಲಕ್ಷ್ಯದಿಂದ ರೈತಮುಖಂಡ ಅಸ್ವಸ್ಥ, ಆಸ್ಪತ್ರೆ ವೆಚ್ಚ ಭರಿಸಬೇಕು ವಿವಿಧ ಸಂಘಟನೆಗಳ ಮುಖಂಡರ ಸಭೆಯಲ್ಲಿ ಆಗ್ರಹ
ಚಿತ್ರದುರ್ಗ, ಮಾ.11:
ಭದ್ರಾ ಯೋಜನೆಗೆ ಅನುದಾನಕ್ಕೆ ಒತ್ತಾಯಿಸಿ ಅಮರಣಾಂತ ಉಪವಾಸ ಸತ್ಯಾಗ್ರಹ ಕೈಗೊಳ್ಳುವ ಸಂಬಂಧ ಜಿಲ್ಲಾಡಳಿತ, ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದ್ದರೂ ನಿರ್ಲಕ್ಷ್ಯ ವಹಿಸಿದ ಪರಿಣಾಮ ಉಪವಾಸ ಕುಳಿತಿದ್ದ ರೈತನಾಯಕ ಕೆ.ಟಿ.ತಿಪ್ಪೇಸ್ವಾಮಿ ಅನಾರೋಗ್ಯಕ್ಕೆ ಒಳಗಾಗಿದ್ದಾರೆ ಎಂದು ರೈತ, ಕನ್ನಡಪರ ಸೇರಿ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಆರೋಪಿಸಿದರು.
ಪ್ರವಾಸಿ ಮಂದಿರದಲ್ಲಿ ಬುಧವಾರ ಆಯೋಜಿಸಿದ್ದ ವಿವಿಧ ಸಂಘಟನೆಗಳ ಪದಾಧಿಕಾರಿಗಳ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖಂಡರುಗಳು, ಜಿಲ್ಲಾಡಳಿತ, ಜಿಲ್ಲಾ ಸಚಿವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಭದ್ರಾ ಯೋಜನೆಗೆ ಅನುದಾನಕ್ಕೆ ಸಂಬಂಧ ಕೇಂದ್ರ-ರಾಜ್ಯ ಸರ್ಕಾರದ ಮೇಲೆ ಒತ್ತಡ ತರಲು ಫೆಬ್ರವರಿ 4ರಂದು ಜಿಲ್ಲೆಯಲ್ಲಿ ಮುಷ್ಕರ ಆರಂಭಿಸಿದೇವು. ತಾಲ್ಲೂಕುಗಳು ಬಂದ್, ಕಾಲ್ನಡಿಗೆ ಜಾಥಾ, 13ರಂದು ಚಿತ್ರದುರ್ಗದಲ್ಲಿ ನಾಲ್ಕು ಸಾವಿರ ಜನರನ್ನೊಳಗೊಂಡ ಬಹಿರಂಗ ಸಮಾವೇಶ ನಡೆಸಿದೇವು. ಇಲ್ಲಿಗೆ ಜಿಲ್ಲಾ ಸಚಿವ ಡಿ.ಸುಧಾಕರ್, ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ, ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಆಗಮಿಸಿ ಮನವಿ ಸ್ವೀಕರಿಸಿ, ಅನುದಾನದ ಭರವಸೆ ನೀಡಿದರು. ಆದರೆ, ಈ ಸಂಬಂಧ ಜಿಲ್ಲಾಡಳಿತ ನಮ್ಮನ್ನು ಕತ್ತಲಲ್ಲಿಟ್ಟಿತು ಎಂದು ದೂರಿದರು.
ಸರ್ಕಾರದ ಮೇಲೆ ಒತ್ತಡ ತರಲು ಅನಿವಾರ್ಯವಾಗಿ ನಾವು ಅನಿರ್ಧಿಷ್ಟ ಉಪವಾಸ ಸತ್ಯಾಗ್ರಹ ಮಾ.2ರಂದು ಆರಂಭಿಸುವುದಾಗಿ ಫೆ.24ರಂದೇ ಜಿಲ್ಲಾಡಳಿತ, ಪೊಲೀಸ್ ಇಲಾಖೆಗೆ ಲಿಖಿತ ಮನವಿ ಸಲ್ಲಿಸಿದ್ದೇವು. ಈ ಮಧ್ಯೆಯೂ ಸಂಘದೊಂದಿಗೆ ಮಾತುಕತೆ ನಡೆಸುವ ಸೌಜನ್ಯ ಜಿಲ್ಲಾಧಿಕಾರಿ ಪ್ರದರ್ಶಿಸಲಿಲ್ಲ. ಪರಿಣಾಮ ಮಾ.2ರಂದು ಅಮರಣಾಂತ ಉಪವಾಸ ಸತ್ಯಾಗ್ರಹ ಆರಂಭಿಸಿಯೇ ಬಿಟ್ಟೇವು ಎಂದು ಮಾಹಿತಿ ನೀಡಿದರು. ಆ ಬಳಿಕವೂ ಸತ್ಯಾಗ್ರಹ ಸ್ಥಳಕ್ಕೆ ಆಗಮಿಸಿ ಮನವಿ ಆಲಿಸಿ, ಉಪವಾಸ ಕೈಬಿಡುವಂತೆ ಮನವೊಲಿಸಲಿಲ್ಲ. ಕೆಡಿಪಿ ಸಭೆಯಲ್ಲಿ ಸಚಿವರು, ಶಾಸಕರು ಪಾಲ್ಗೊಂಡಿದ್ದರೂ ಸ್ಥಳಕ್ಕೆ ಬರಲಿಲ್ಲ. ಮುಖ್ಯವಾಗಿ ಉಪವಾಸ ಸತ್ಯಾಗ್ರಹ ಆರಂಭಿಸುತ್ತಿದ್ದಂತೆ ಅಗತ್ಯ ವೈದ್ಯಕೀಯ, ಪೊಲೀಸ್ ರಕ್ಷಣೆ ವ್ಯವಸ್ಥೆ ಜಿಲ್ಲಾಡಳಿತ ಮಾಡಲಿಲ್ಲ. ಮೂರನೇ ದಿನ ರಾತ್ರಿ ಮೂವರು ಅಸ್ವಸ್ಥಗೊಂಡಾಗ ಇಬ್ಬರು ಪೊಲೀಸರು ಆಸ್ಪತ್ರೆಗೆ ಕರೆದುಕೊಂಡು ಚಿಕಿತ್ಸೆ ಕೊಡಿಸಿದ್ದೂ ಹೊರತುಪಡಿಸಿದರೆ ಮತ್ಯಾವುದೇ ರೀತಿ ಮೇಲಧಿಕಾರಿಗಳು ಸ್ಪಂದಿಸಲಿಲ್ಲ ಎಂದು ದೂರಿದರು.
50 ಮೀಟರ್ ದೂರದಲಿದ್ದ ಜಿಲ್ಲಾಧಿಕಾರಿ ತಮ್ಮ ಕರ್ತವ್ಯ ನಿರ್ವಹಿಸುವಲ್ಲಿ ಅಸಡ್ಡೆ ಪ್ರದರ್ಶಿಸಿದ್ದರಿಂದ ನಾನು ಸತ್ತರೂ ಚಿಂತೆಯಿಲ್ಲ ಜಿಲ್ಲೆಗೆ ಭದ್ರೆ ನೀರು ಹರಿದು ಲಕ್ಷಾಂತರ ಬದುಕು ಹಸನಾಗಲೆಂದು ಅನಿವಾರ್ಯವಾಗಿ ಕೆ.ಟಿ.ತಿಪ್ಪೇಸ್ವಾಮಿ ಉಪವಾಸ ಸತ್ಯಾಗ್ರಹ ಮುಂದುವರಿಸಿದರು. ನಮ್ಮೆಲ್ಲರ ಒತ್ತಡಕ್ಕೆ ಮಣಿದು 5ನೇ ದಿನದಂದು ಉಪವಾಸ ಕೈಬಿಟ್ಟು ಮನೆ ಬಾಗಿಲಿಗೆ ತೆರಳುತ್ತಿದ್ದಂತೆ ಕುಸಿದುಬಿದ್ದು ತೀವ್ರ ಅಸ್ವಸ್ಥಗೊಂಡು, ಬೆಂಗಳೂರು ಮಣಿಪಾಲ್ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, 20 ಲಕ್ಷಕ್ಕೂ ಹೆಚ್ಚು ಮೊತ್ತ ವೆಚ್ಚವಾಗಿದೆ. ಇದಕ್ಕೆಲ್ಲ ನೇರ ಹೊಣೆ ಜಿಲ್ಲಾಧಿಕಾರಿಗಳು ಎಂದು ಆಕ್ರೋಶ ವ್ಯಕ್ತಪಡಿಸಿದರು. ಚಳವಳಿಗಾರರನ್ನು ಹತ್ತಿಕ್ಕುವ ಕೆಲಸ ಮಾಡಿರುವ, ರೈತಮುಖಂಡ ಅನಾರೋಗ್ಯಕ್ಕೆ ಒಳಗಾಗಲು ನೇರ ಹೊಣೆ ಆಗಿರುವ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅವರ ವಿರುದ್ಧ ಸರ್ಕಾರ ಶಿಸ್ತುಕ್ರಮಕೈಗೊಳ್ಳಬೇಕು. ಜೊತೆಗೆ ಕೆ.ಟಿ.ತಿಪ್ಪೇಸ್ವಾಮಿ ಅವರ ಚಿಕಿತ್ಸಾ ವೆಚ್ಚವನ್ನು ಸರ್ಕಾರ ಭರಿಸಬೇಕು ಎಂದು ಆಗ್ರಹಿಸಿದರು.
ರೈತಸಂಘದ ರಾಜ್ಯ ಕಾರ್ಯಾಧ್ಯಕ್ಷರಾದ ಬೇಡರೆಡ್ಡಿ ಬಸವರೆಡ್ಡಿ, ಈಚಘಟ್ಟ ಸಿದ್ದವೀರಪ್ಪ, ನೀರಾವರಿ ಹೋರಾಟ ಸಮಿತಿ ಸಂಚಾಲಕರಾದ ಚಳ್ಳಕೆರೆ ಬಸವರಾಜ್, ನರೇನಹಳ್ಳಿ ಅರುಣ್ಕುಮಾರ್, ಆರ್.ಶೇಷಣ್ಣಕುಮಾರ್, ವಿಜಯಸೇನೆ ಜಿಲ್ಲಾಧ್ಯಕ್ಷ ಕೆ.ಟಿ.ಶಿವಕುಮಾರ್, ಸಂಗೊಳ್ಳಿ ರಾಯಣ್ಣ ಸೇನೆ ರಾಜ್ಯಾಧ್ಯಕ್ಷ ಟಿ.ಆನಂದ್, ಟಿಪ್ಪುಸುಲ್ತಾನ್ ವೇದಿಕೆ ರಾಜ್ಯಾಧ್ಯಕ್ಷ ಖಾಸೀಂ ಆಲಿ, ಭೋವಿ ಸಂಘದ ಎಚ್.ಲಕ್ಷ್ಮಣ್, ವೀಣಾಗೌರಮ್ಮ, ಶ್ರೀನಿವಾಸ ನಾಯ್ಕ್, ಜಿ.ಕೆ.ರಾಮಲಿಂಗಪ್ಪ, ಎನ್.ಮಂಜುನಾಥ್, ಪ್ರಸನ್ನಕುಮಾರ್, ರಂಗಸ್ವಾಮಿ ಇತರರಿದ್ದರು.
ಭದ್ರೆಗೆ ಅನುದಾನ ಸ್ಪಷ್ಟತೆ ನೀಡಲಿ ಭದ್ರಾ ಮೇಲ್ದಂಡೆ ಯೋಜನೆಗೆ ರಾಷ್ಟ್ರೀಯ ಮನ್ನಣೆ ನೀಡುತ್ತೇವೆ ಎನ್ನುವ ಜೊತೆಗೆ 5,300 ಕೋಟಿ ರೂ. ಬಜೆಟ್ನಲ್ಲಿ ಘೋಷಿಸಿ, ಈಗ ಜಿಲ್ಲೆಯ ಜನರನ್ನು ಕೇಂದ್ರ ಸರ್ಕಾರ ವಂಚಿಸುತ್ತಿದೆ ಎಂದು ಚಿಂತಕ ಪ್ರೊ.ಜೆ.ಯಾದವರೆಡ್ಡಿ ಆರೋಪಿಸಿದರು. ಜೊತೆಗೆ ರಾಜ್ಯ ಸರ್ಕಾರ ಎಲ್ಲ ಯೋಜನೆಗಳಿಗೆ ಹಣ ಇಟ್ಟರೇ ಭದ್ರಾ ಯೋಜನೆಯನ್ನು ನಿರ್ಲಕ್ಷ್ಯಿಸುತ್ತಿದೆ. ಈ ಎರಡು ಸರ್ಕಾರಗಳು ಮೋಸವನ್ನು ಮುಂದುವರಿಸಿವೆ. ಜೊತೆಗೆ ಚಳವಳಿಗಾರ ತಿಪ್ಪೇಸ್ವಾಮಿ ಅಸ್ವಸ್ಥಕ್ಕೆ ಜಿಲ್ಲಾಡಳಿತ ಹೊಣೆ ಆಗಿದೆ ಎಂದು ದೂರಿದರು.