ಬಿಗ್‌ ಬಾಸ್‌ ಕನ್ನಡ ಸೀಸನ್‌ 12ಕ್ಕೆ ಶಾಕ್‌: ಮಾಲಿನ್ಯ ವಿವಾದದ ನಡುವೆ ಮನೆಗೆ ಬೀಗ – ಶೋ ಅರ್ಧದಲ್ಲೇ ನಿಲ್ಲುತ್ತಾ?


ʼಬಿಗ್‌ ಬಾಸ್‌ ಕನ್ನಡ ಸೀಸನ್‌ – 12ʼ ಆರಂಭಗೊಂಡು ಕೇವಲ ಎರಡು ವಾರಗಳಲ್ಲೇ ಪ್ರೇಕ್ಷಕರಿಗೆ ದೊಡ್ಡ ಶಾಕ್‌ ಎದುರಾಗಿದೆ. ಬಿಡದಿಯ ಕೈಗಾರಿಕಾ ಪ್ರದೇಶದಲ್ಲಿರುವ ಬಿಗ್‌ ಬಾಸ್‌ ಮನೆಯನ್ನು ಮಾಲಿನ್ಯ ನಿಯಂತ್ರಣ ಮಂಡಳಿ ಬೀಗ ಹಾಕಿದ ಘಟನೆ ಸೀಸನ್‌ನ ನಡವಳಿಕೆಗೆ ತೀವ್ರ ಅಡೆತಡೆ ತಂದಿದೆ.

ಮಾಲಿನ್ಯ ನಿಯಂತ್ರಣ ಮಂಡಳಿಯು ಈ ಬಾರಿಯ ಬಿಗ್‌ ಬಾಸ್‌ ಮನೆ ನಿರ್ಮಿಸಿರುವ ʼಜಾಲಿವುಡ್ ಸ್ಟುಡಿಯೋಸ್ ಅಂಡ್ ಅಡ್ವೆಂಚರ್ಸ್ʼ ಮಾಲೀಕರಿಗೆ ತ್ಯಾಜ್ಯ ನೀರು ಸಂಸ್ಕರಣಾ ವ್ಯವಸ್ಥೆ (STP) ನಿರ್ಮಾಣ ಮಾಡದ ಕಾರಣದಿಂದ ನೋಟಿಸ್‌ ಕಳುಹಿಸಿತ್ತು. ಆದರೆ, ಅದಕ್ಕೆ ತೃಪ್ತಿದಾಯಕ ಪ್ರತಿಕ್ರಿಯೆ ನೀಡದ ಹಿನ್ನೆಲೆ ರಾಮನಗರ ತಹಶೀಲ್ದಾರ್‌ ತೇಜಸ್ವಿನಿ ಹಾಗೂ ಅಧಿಕಾರಿಗಳು ಬೀಗ ಹಾಕುವ ಕ್ರಮ ಕೈಗೊಂಡಿದ್ದಾರೆ.

ಅಧಿಕಾರಿಗಳ ಸೂಚನೆಯಂತೆ, ರಾತ್ರಿ 7:30ರೊಳಗೆ ಮನೆಯನ್ನು ಖಾಲಿ ಮಾಡಲು ಸೂಚನೆ ನೀಡಲಾಗಿದ್ದು, ಆಯೋಜಕರು ತುರ್ತು ಸಭೆ ನಡೆಸಿದ್ದಾರೆ. ಲೇಟೆಸ್ಟ್‌ ವರದಿಗಳ ಪ್ರಕಾರ ಎಲ್ಲಾ ಸ್ಪರ್ಧಿಗಳು ಮತ್ತು ಸಿಬ್ಬಂದಿಯನ್ನು ಬಿಗ್‌ ಬಾಸ್‌ ಮನೆಯಿಂದ ಸ್ಥಳಾಂತರಿಸಲಾಗಿದೆ.

ಜಾಲಿವುಡ್‌ ಸ್ಟುಡಿಯೋಸ್‌ನ ವಿದ್ಯುತ್‌ ಸಂಪರ್ಕ ಕಡಿತಗೊಂಡಿದ್ದು, ಸ್ಪರ್ಧಿಗಳು ತಾತ್ಕಾಲಿಕವಾಗಿ ಸ್ಟುಡಿಯೋದಲ್ಲಿನ ಥಿಯೇಟರ್‌ನಲ್ಲಿ ಇದ್ದಾರೆ. ನಂತರ, ಖಾಸಗಿ ಹೊಟೇಲ್‌ನಲ್ಲಿ ಅವರಿಗೆ ವಾಸ್ತವ್ಯ ವ್ಯವಸ್ಥೆ ಮಾಡಲಾಗಿದೆ ಎನ್ನಲಾಗಿದೆ.

ಈ ನಡುವೆ, ಮಾಲಿನ್ಯ ನಿಯಂತ್ರಣ ಮಂಡಳಿ ಸಮಸ್ಯೆ ಪರಿಹಾರವಾದ ನಂತರ ಶೋ ಪುನಃ ಪ್ರಾರಂಭವಾಗುವ ಸಾಧ್ಯತೆಗಳಿವೆ. ಆದರೆ ಸಮಸ್ಯೆ ಮುಂದುವರಿದರೆ, ಈ ಬಾರಿಯ ‘ಬಿಗ್‌ ಬಾಸ್‌ ಕನ್ನಡ ಸೀಸನ್‌ 12’ ಅರ್ಧದಲ್ಲೇ ನಿಂತುಹೋಗುವ ಆತಂಕ ಉಂಟಾಗಿದೆ.

ಪ್ರೇಕ್ಷಕರು “ಇನ್ನು ಬಿಗ್‌ ಬಾಸ್‌ ಪ್ರಸಾರ ಮುಂದುವರಿಯುತ್ತದೆಯಾ ಅಥವಾ ನಿಲ್ಲುತ್ತದೆಯಾ?” ಎಂಬ ಕುತೂಹಲದಲ್ಲಿದ್ದಾರೆ.

Views: 46

Leave a Reply

Your email address will not be published. Required fields are marked *