“ರಾಜ್ಯ ರೈತರ ಹಿತ ಕಾಪಾಡಲು ಕಾಂಗ್ರೆಸ್ ಸರ್ಕಾರ ಸಂಪೂರ್ಣ ವಿಫಲ: ಬಿಜೆಪಿಯ ಅಂಬಿಕಾ ಹುಲಿ ನಾಯಕರ್ ಆರೋಪ”.

ಚಿತ್ರದುರ್ಗ ನ. 24

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ರಾಜ್ಯ ಸರಕಾರ ರೈತರ ಹಿತ ಕಾಪಾಡುವಲ್ಲಿ ಸಂಪೂರ್ಣ ವಿಫಲವಾಗಿದೆ. ರಾಜ್ಯದ ಎಲ್ಲ ಸಮಸ್ಯೆಗೂ ಕೇಂದ್ರ ಸರಕಾರದ ಕಡೆ ಬೆಟ್ಟು ತೋರಿಸುವುದು ಮತ್ತು ಪರಿಹಾರಕ್ಕಾಗಿ ಅವರಕಡೆ ಮುಖ ನೋಡುವುದಷ್ಟೇ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರಕಾರ ಸೀಮಿತವಾಗಿದೆ ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ ಯಾದ ಅಂಬಿಕಾ ಹುಲಿ ನಾಯಕರ್ ಆರೋಪಿಸಿದ್ದಾರೆ.

ಚಿತ್ರದುರ್ಗ ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ರಾಜ್ಯದಲ್ಲಿ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದಾಗಿನಿಂದ ಈ ನಾಡಿನ ರೈತರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಪರಿಹಾರ ನೀಡುತ್ತಿಲ್ಲ. ಬರದ ಸಂದರ್ಭದಲ್ಲಿ ರಾಜ್ಯ ಸರಕಾರ ಎಚ್ಚತ್ತುಕೊಂಡಿಲ್ಲ; ಅತಿವೃಷ್ಟಿ ಸಂದರ್ಭದಲ್ಲೂ ತಲೆ ಕೆಡಿಸಿಕೊಂಡಿಲ್ಲ. ಕಬ್ಬು ಬೆಳೆಗಾರರು ನಿರಂತರ ಹೋರಾಟ ಮಾಡಿದರೂ ಸ್ಪಂದಿಸಿಲ್ಲ; ಈಗ ಮೆಕ್ಕೆಜೋಳ ಬೆಳೆಯುವ ರೈತರೂ ಸಂಕಷ್ಟದಲ್ಲಿದ್ದಾರೆ. ರಾಜ್ಯ ಸರಕಾರ ಇನ್ನೂ ಖರೀದಿ ಕೇಂದ್ರಗಳನ್ನು ಪ್ರಾರಂಭಿಸಿಲ್ಲ. ಬೆಳೆಹಾನಿಗೆ ಪರಿಹಾರ ಘೋಷಿಸಿ ಒಂದೂವರೆ ತಿಂಗಳಾದರೂ ಪರಿಹಾರ ಕೊಡುವಲ್ಲಿ ರಾಜ್ಯ ಸರಕಾರ ತಲೆ ಕೆಡಿಸಿಕೊಂಡಿಲ್ಲ. ವೈರಲ್ ಇನ್‍ಫೆಕ್ಷನ್ ಆಗಿ ಭತ್ತದ ಬೆಳೆ ಹಾನಿಗೊಳಗಾಗಿದೆ. ರಾಜ್ಯ ಸರಕಾರ ರೈತರ ಹಿತ ಕಾಪಾಡುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ದೂರಿದರು.

ಕರ್ನಾಟಕ ರಾಜ್ಯದಲ್ಲಿ ಕಾವೇರಿ ಮತ್ತು ಕೃಷ್ಣಾ ಜಲಾಶಯ ಪ್ರದೇಶದ ನೀರಾವರಿ ಯೋಜನೆಗಳಾದ ಕೃಷ್ಣಾ ಮೇಲ್ದಂಡೆ ಯೋಜನೆ, ಮಹಾದಾಯಿ ಯೋಜನೆ, ಕಳಸಾ ಬಂಡೂರಿ, ಅಪ್ಪರ್‍ಭದ್ರಾ ಮೇಲ್ದಂಡೆ ಯೋಜನೆ, ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ಮುಖ್ಯ ಕಾಲುವೆ, ಟನಲ್‍ಗಳು ಹಾಗೂ ಆಶ್ವೇಡೆಟ್‍ಗಳ ರಿಪೇರಿ, ಮೇಕೆದಾಟು ಹಾಗೂ ಎತ್ತಿನಹೊಳೆ ಯೋಜನೆಗಳನ್ನು ತ್ವರಿತಗತಿಯಲ್ಲಿ ಅನುಷ್ಠಾನಗೊಳಿಸಲು ಕಾಂಗ್ರೆಸ್ ಸರ್ಕಾರ ತನ್ನ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ಪ್ರತಿವರ್ಷ 30 ಸಾವಿರ ಕೋಟಿ ಹಣ ಬಿಡುಗಡೆಗೊಳಿಸಿ ಕಾಮಗಾರಿಗಳನ್ನು ಪೂರ್ಣಗೊಳಿಸಲು ಆಗ್ರಹಿಸಿ ಕರ್ನಾಟಕ ರಾಜ್ಯದಲ್ಲಿ ಬಿಜೆಪಿ ಸರ್ಕಾರದ (ಬಿಎಸ್‍ವೈ) ಅವಧಿಯಲ್ಲಿ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಗೆ ರಾಜ್ಯದ ಬೊಕ್ಕಸದಿಂದ ರೈತರಿಗೆ ನೀಡುತ್ತಿದ್ದ ವರ್ಷಕ್ಕೆ 4 ಸಾವಿರ ರೂಪಾಯಿಗಳನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ನಿಲ್ಲಿಸಿರುವುದನ್ನು ರೈತ ಸಮುದಾಯದ ಪರವಾಗಿ ಖಂಡಿಸಿದ್ದು, ಬಿಜೆಪಿ ಸರ್ಕಾರದ ಅವಧಿಯ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಗೆ ರಾಜ್ಯ ಸರ್ಕಾರದ ಬೊಕ್ಕಸದಿಂದ ಪ್ರತಿ ವರ್ಷಕ್ಕೆ 4 ಸಾವಿರ ರೂಗಳನ್ನು ನೀಡಲು ಆಗ್ರಹಿಸಿದರು.

ಬಿಜೆಪಿ ಸರ್ಕಾರ (ಬಿಎಸ್‍ವೈ) ಅವಧಿಯಲ್ಲಿ ರೂಪಾಯಿ 25 ಸಾವಿರ ಶುಲ್ಕಕ್ಕೆ ರೈತರಿಗೆ ನೀಡುತ್ತಿದ್ದ. ವಿದ್ಯುತ್ ಟ್ರಾನ್ಸ್‍ಫಾರ್ಮ್‍ರ್ ಹಾಗೂ ವಿದ್ಯುತ್ ಸಂಪರ್ಕ ಯೋಜನೆಯನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ನಿಲ್ಲಿಸಿದ್ದು ಪುನಃ ಪ್ರಾರಂಭಿಸಬೇಕು, ಕರ್ನಾಟಕ ರಾಜ್ಯದ ರೈತರಿಗೆ ರಾಜ್ಯ ಸರ್ಕಾರದ ಸಹಕಾರಿ ಬ್ಯಾಂಕ್‍ಗಳಿಂದ ಶೂನ್ಯ ಬಡ್ಡಿದರಲ್ಲಿ ರೂ 10ಲಕ್ಷದವರೆಗೆ ಸಾಲ ಸೌಲಭ್ಯ ನೀಡಬೇಕು, ರೈತರು ಬಳಸುವ ಕೃಷಿ ಸಲಕರಣೆಗಳನ್ನು ಸಬ್ಸಿಡಿ ದರದಲ್ಲಿ ನೀಡಲು ಹೆಚ್ಚು ಹಣ ಬಿಡುಗಡೆಗೊಳಿಸಲು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು. ಕರ್ನಾಟಕ ರಾಜ್ಯದಲ್ಲಿ ತೆಂಗು, ಅಡಿಕೆ, ದಾಳಿಂಬೆ, ದ್ರಾಕ್ಷಿ, ಬಾಳೆ ಇನ್ನಿತರ ತೋಟಗಾರಿಕಾ ಬೆಳೆಗಳಿಗೆ ತಗುಲಿರುವ ಗರಿರೋಗ, ಕಾಂಡಕೊರೆತ ರೋಗ, ಕಪ್ಪುತಲೆಹುಳ ರೋಗ, ಅಣಬೆ ರೋಗಗಳಿಂದಾಗಿ ಸಂಪೂರ್ಣ ನಷ್ಟಕ್ಕೆ ಒಳಗಾಗಿರುವ ಪ್ರತಿ ಗಿಡ/ಮರಗಳಿಗೆ ಕನಿಷ್ಠ 500 ರೂ ನಂತೆ ಕೂಡಲೇ ಪರಿಹಾರ ನೀಡಬೇಕು ಹಾಗೂ ರಾಜ್ಯದಲ್ಲಿ ಕಬ್ಬು ಬೆಳೆಗಾರರಿಗೆ ಕಾಂಗ್ರೆಸ್ ಸರ್ಕಾರ ನಿಗದಿ ಪಡಿಸಿರುವ ಪ್ರತಿ ಟನ್‍ಗೆ 3,300 ರೂಪಾಯಿಗಳನ್ನು ಎಲ್ಲಾ ಜಿಲ್ಲೆಗಳ ರೈತರೂ ಅನ್ವಯಿಸುವಂತೆ ಕಡ್ಡಾಯವಾಗಿ ನೀಡಲು ಆಗ್ರಹಿಸಿದ ಅವರು ರಾಜ್ಯದ ಎಲ್ಲ ಸಮಸ್ಯೆಗೂ ಕೇಂದ್ರ ಸರಕಾರದ ಕಡೆ ಬೆಟ್ಟು ತೋರಿಸುವುದು ಮತ್ತು ಪರಿಹಾರಕ್ಕಾಗಿ ಅವರಕಡೆ ಮುಖ ನೋಡುವುದಷ್ಟೇ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರಕಾರ ಸೀಮಿತವಾಗಿದೆ ಎಂದು ಟೀಕಿಸಿದರು.

ರಾಜ್ಯ ರೈತ ಮೋರ್ಚಾ ರೈತರ ಪರವಾಗಿ ಇದೆ ಅಧಿಕಾರ ಇರಲಿ ಇಲ್ಲದಿರಲಿ ನಮ್ಮ ಪಕ್ಷ ರೈತರ ಪರವಾಗಿ ಹೋರಾಟವನ್ನು ನಡೆಸಲಿದೆ. ಈ ಹಿನ್ನಲೆಯಲ್ಲಿ ರಾಜ್ಯದಲ್ಲಿ ಮೂರು ಹಂತದ ಹೋರಾಟವನ್ನು ರೂಪಿಸಲಾ ಗುವುದು. ಕಾಂಗ್ರೆಸ್ ಸರ್ಕಾರದ ರೈತ ವಿರೋಧಿ ನೀತಿಯ ವಿರುದ್ಧವಾಗಿ ಹೋರಾಟವನ್ನು ಮಾಡಲಾಗು ವುದು. ರೈತ ವಿರೋಧಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಜನಾಭಿಪ್ರಾಯವನ್ನು ಮೂಡಿಸಬೇಕಾಗಿದೆ. ರೈತರ ಪರವಾಗಿ ನ. 28, 29 ರಾಜ್ಯಾದ್ಯಂತ ಎಲ್ಲ ಮಂಡಲಗಳಲ್ಲಿ ಹಾಗೂ ಡಿ. 1,2 ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆಯನ್ನು ನಡೆಸಲಾಗುವುದು ಬೆಳಗಾವಿಯಲ್ಲಿ ನಡೆಯಲಿರುವ ಬೃಹತ್ ಪಾದಯಾತ್ರೆಗೆ ಎಲ್ಲ ಪದಾಧಿಕಾರಿಗಳು ಮತ್ತು ರೈತರು ಪಾಲ್ಗೊಳ್ಳಬೇಕಿದೆ ಎಂದರು.

ಶಾಸಕರಾದ ಡಾ. ಎಂ.ಚಂದ್ರಪ್ಪ ಮಾತನಾಡಿ ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರ ರೈತರ, ಕಾರ್ಮಿಕರ, ಬಡವರ ಬಗ್ಗೆ ಕಾಳಜಿಯನ್ನು ವಹಿಸುತ್ತಿಲ್ಲ ಎಲ್ಲರು ಅಧಿಕಾರವನ್ನು ಹಿಡಿಯುವ ಬಗ್ಗೆ ಹೆಚ್ಚಿನ ಸಮಯವನ್ನು ಕಳೆಯುತ್ತಿ ದ್ದಾರೆ. ರಾಜ್ಯದ ಜನತೆಯ ಮೇಲೆ ಕಾಳಜಿ ಇಲ್ಲವಾಗಿದೆ, ಇಂತಹ ಸಮಯದಲ್ಲಿ ರಾಷ್ಟ್ರಪತಿಗಳು ಹಾಗೂ ಕೇಂದ್ರ ಸರ್ಕಾರ ರಾಜ್ಯ ಸರ್ಕಾರವನ್ನು ಅಮಾನತ್ತಿನಲ್ಲಿ ಇಟ್ಟು ಅವರ ಸಮಸೈಗಳು ಬಗೆಹರಿದ ನಂತರ ಅಧಿಕಾರವನ್ನು ನಡೆಸಲು ಅನುವು ಮಾಡಿಕೊಡಬೇಕಿದೆ, ಕಾಂಗ್ರೆಸ್ ಪಕ್ಷದ ಶಾಸಕರಾಗಲಿ, ಸಚಿವರಾಗಲಿ ಜನತೆಯ ಸಮಸ್ಯೆಯನ್ನು ಅಲಿಸುತ್ತಿಲ್ಲ ಅದಕ್ಕೆ ಪರಿಹಾರವನ್ನು ಕಂಡುಕೊಳ್ಳುತ್ತಿಲ್ಲ ತಮಗೆ ಮತವನ್ನು ನೀಡಿದ ಮತದಾರರನ್ನು ನಿರ್ಲಕ್ಷ್ಯ ಮಾಡುತ್ತಿದೆ. ಈ ಹಿನ್ನಲೆಯಲ್ಲಿ ಸರ್ಕಾರವನ್ನು ಅಮಾನತ್ತಿನಲ್ಲಿ ಇಡುವುದು ಸೂಕ್ತವಾಗಿದೆ ಎಂದರು.

ಪತ್ರಿಕಾ ಗೋಷ್ಟಿಯಲ್ಲಿ ಜಿಲ್ಲಾ ಅಧ್ಯಕ್ಷರಾದ ಕೆ.ಟಿ. ಕುಮಾರಸ್ವಾಮಿ ರಾಜ್ಯ ರೈತ ಮೋರ್ಚಾ ಕಾರ್ಯದರ್ಶಿ ಮಲ್ಲಿಕಾರ್ಜುನ್, ಪ್ರದಾನ ಕಾರ್ಯದರ್ಶಿ ಸಂಪತ್ ಕುಮಾರ್, ಬಾಳೆಕಾಯಿ ಶ್ರೀನಿವಾಸ್, ರೈತ ಮೋರ್ಚ ಜಿಲ್ಲಾಧ್ಯಕ್ಷ ವೆಂಕಟೇಶ್ ಯಾದವ್ ವಕ್ತಾರರಾದ ನಾಗರಾಜ್ ಬೇದ್ರೇ, ದಗ್ಗೆ ಶಿವಪ್ರಕಾಶ್, ರೈತ ಮೋರ್ಚಾದ ಪ್ರಧಾನ ಕಾರ್ಯದರ್ಶಿಗಳಾದ ಸೂರೇನಹಳ್ಳಿ ನಾಗರಾಜ್, ಸಿಂಧೂ ತನಯ, ಎಸ್.ಟಿ.ಮೋರ್ಚಾದ ಜಿಲ್ಲಾಧ್ಯಕ್ಷ ಶಿವಣ್ಣ, ಎಸ್.ಸಿ.ಮೋರ್ಚಾದ ಅಧ್ಯಕ್ಷ ತಿಪ್ಪೇಸ್ವಾಮಿ, ಕಾರ್ಯದರ್ಶಿ ಸಿಂಧೂ ರಜನಿ ಉಪಸ್ಥಿತರಿದದರು.

Views: 25

Leave a Reply

Your email address will not be published. Required fields are marked *