ತಾಯಿಯನ್ನು ನೋಡಲು ಲಂಡನ್‌ನಿಂದ ಥಾಣೆಗೆ ಕಾರಿನಲ್ಲೇ ಬಂದ ಬ್ರಿಟನ್​ ಪ್ರಜೆ! 59 ದಿನ, 16 ದೇಶ.

ಥಾಣೆ: ಹೆತ್ತ ತಾಯಿಯನ್ನು ಕಣ್ತುಂಬಿಕೊಳ್ಳಬೇಕು ಎಂಬ ಬಯಕೆಯಿಂದ ಲಂಡನ್​ನಲ್ಲಿ ನೆಲೆಸಿರುವ ಭಾರತೀಯ ಮೂಲದ ಬ್ರಿಟಿಷ್ ಪ್ರಜೆ ವಿರಾಜ್ ಮುಂಗಲೆ, ಲಂಡನ್‌ನಿಂದ ಮಹಾರಾಷ್ಟ್ರದ ಥಾಣೆಯವರೆಗೆ ತಮ್ಮ ಎಸ್‌ಯುವಿ ಕಾರಿನಲ್ಲೇ ಬಂದ ಆಶ್ಚರ್ಯಕರ ಘಟನೆಯೊಂದು ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.

ಈ ದೊಡ್ಡ ಪ್ರಯಾಣವನ್ನು ಕೈಗೆತ್ತಿಕೊಂಡ ವಿರಾಜ್, 59 ದಿನಗಳಲ್ಲಿ 16 ದೇಶಗಳನ್ನು ದಾಟಿ ಬಂದಿದ್ದಾರೆ.

ಈ ಬಗ್ಗೆ ಸ್ವತಃ ಮುಂಗಲೆ ಅವರೇ ಮಾತನಾಡಿದ್ದು, ‘ನಾನು ಯುಕೆ, ಫ್ರಾನ್ಸ್, ಜರ್ಮನಿ, ಬೆಲ್ಜಿಯಂ, ಪೋಲೆಂಡ್, ಲಿಥುವೇನಿಯಾ, ಲಾಟ್ವಿಯಾ, ಎಸ್ಟೋನಿಯಾ, ರಷ್ಯಾ, ಉಜ್ಬೇಕಿಸ್ತಾನ್, ಕಿರ್ಗಿಸ್ತಾನ್, ಚೀನಾ, ಟಿಬೆಟ್, ನೇಪಾಳ ಮತ್ತು ಅಂತಿಮವಾಗಿ ಭಾರತದ ಮೂಲಕ ಇಲ್ಲಿಯವರೆಗೆ 18,300 ಕಿ.ಮೀ ದೂರ ಕ್ರಮಿಸಿದ್ದೇನೆ. ಈ ಪ್ರಯಾಣದಲ್ಲಿ ನನ್ನೊಂದಿಗೆ ನೇಪಾಳದ ಸ್ನೇಹಿತ ರೋಶನ್ ಶ್ರೇಷ್ಠಾ ಕೂಡ ಜತೆಯಾಗಿದ್ದರು. ಅವರು ನೇಪಾಳದ ಕಠ್ಮಂಡುವಿನಲ್ಲಿ ಇಳಿದುಕೊಂಡರು. ನಾನು ನನ್ನ ತವರಿಗೆ ಬಂದೆ’ ಎಂದಿದ್ದಾರೆ.

‘ಈ ಜರ್ನಿ ಕೈಗೊಂಡಾಗ ಬಹಳ ಉತ್ಸುಕನಾಗಿದ್ದೆ. ದಿನಕ್ಕೆ ಸರಿಸುಮಾರು 400-600 ಕಿ.ಮೀ ಗಾಡಿ ಓಡಿಸಿದ್ದೀನಿ. ಸಾಧ್ಯವಾದ ಕಡೆ 1,000 ಕಿ.ಮೀ ಕೂಡ ತಲುಪಿದ್ದೀನಿ. ಯಾವಾಗಲೂ ರಾತ್ರಿ ಚಾಲನೆಯನ್ನು ತಪ್ಪಿಸುವ ಮೂಲಕ ಸುರಕ್ಷತೆಗೆ ಹೆಚ್ಚು ಆದ್ಯತೆ ನೀಡುತ್ತಿದ್ದೆ. ಇದಕ್ಕಾಗಿ ನನ್ನ ಕೆಲಸಕ್ಕೆ ಎರಡು ತಿಂಗಳ ಕಾಲ ರಜೆಯನ್ನು ತೆಗೆದುಕೊಂಡಿದ್ದೇನೆ. ಪ್ರಯಾಣಿಸಿದ ಪ್ರತಿಯೊಂದು ದೇಶದಿಂದಲೂ ಕಾನೂನು ಅನುಮತಿಗಳನ್ನು ಪಡೆದೇ ವಾಹನ ಚಲಾಯಿಸಿಕೊಂಡು ಬಂದಿದ್ದೇನೆ’ ಎಂದರು.

‘ನನ್ನ ಪ್ರಯಾಣ ಬಹಳ ಕಠಿಣವಾಗಿತ್ತು. ಹಾದಿಯ ಮಧ್ಯೆ ಹಿಮ ಮತ್ತು ಚಳಿ ಸೇರಿದಂತೆ ವಿಪರೀತ ಹವಾಮಾನ ಪರಿಸ್ಥಿತಿಗಳನ್ನು ಎದುರಿಸಿದೆ. ಜರ್ನಿಯ ಪೂರ ದೊಡ್ಡ ದೊಡ್ಡ ಸವಾಲುಗಳೇ ಇತ್ತು’ ಎಂದು ಸ್ಥಳೀಯ ಸುದ್ದಿವಾಹಿನಿಯೊಂದಿಗೆ ಮಾಹಿತಿ ಹಂಚಿಕೊಂಡಿದ್ದಾರೆ,(ಏಜೆನ್ಸೀಸ್).

Source: https://m.dailyhunt.in/news/india/kannada/vijayvani-epaper-vijaykan/taayiyannu+nodalu+landannindha+thaanege+kaarinalle+bandha+britan+praje+59+dina+16+-newsid-n619192310?listname=topicsList&topic=for%20you&index=3&topicIndex=0&mode=pwa&action=click

 

Leave a Reply

Your email address will not be published. Required fields are marked *