KPSC ಭ್ರಷ್ಟಾಚಾರದ ಕೂಪ: ಆ. 27ಕ್ಕೆ KAS ಪೂರ್ವಭಾವಿ ಪರೀಕ್ಷೆ ನಿಗದಿ ಮಾಡಿದಕ್ಕೆ ಅಭ್ಯರ್ಥಿಗಳ ಆಕ್ರೋಶ.

ಬೆಂಗಳೂರು, ಆಗಸ್ಟ್​.22: KAS ಪೂರ್ವಭಾವಿ ಪರೀಕ್ಷೆ ಆ.27ಕ್ಕೆ ನಿಗದಿ ಪಡಿಸಿದ್ದಕ್ಕೆ ಅಭ್ಯರ್ಥಿಗಳು ಕೆಪಿಎಸ್​ಸಿ (KPSC) ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ತರಾತುರಿಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ನಡೆಸಲು ಕೆಪಿಎಸ್​ಸಿ ಕಸರತ್ತು ನಡೆಸುತ್ತಿದೆ. ಕೆಪಿಎಸ್​ಸಿ ನಿರ್ಧಾರ ಅಭ್ಯರ್ಥಿಗಳ ಪಾಲಿಗೆ ಸಂಕಷ್ಟ ತಂದೊಡ್ಡಿದೆ ಎಂದು ಅಭ್ಯರ್ಥಿಗಳು ಕಿಡಿಕಾರಿದ್ದಾರೆ. KPSC ಭ್ರಷ್ಟಾಚಾರದ ಕೂಪವಾಗಿದೆ ಎಂದು ಕರ್ನಾಟಕ ಲೋಕಸೇವಾ ಆಯೋಗ ನಿರ್ಧಾರಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ಕೆಎಎಸ್ ನೇಮಕಾತಿ ಪೂರ್ವಭಾವಿ ಪರೀಕ್ಷೆಯನ್ನು ಆಗಸ್ಟ್ 27ರ ಮಂಗಳವಾರ ನಡೆಸಲಿದೆ. 384 ಗೆಜೆಟೆಡ್ ಪ್ರೊಬೇಷನರ್ಸ್‌ ಹುದ್ದೆಗಳ ಪೂರ್ವಭಾವಿ ಪರೀಕ್ಷೆಯನ್ನು ಸುಮಾರು 2,10,910 ಅಭ್ಯರ್ಥಿಗಳು ಬರೆಯಲಿದ್ದಾರೆ. ಆದರೆ ತರಾತುರಿಯಲ್ಲಿ ದಿನಾಂಕ ಘೋಷಣೆ ಮಾಡಲಾಗಿದೆ ಎಂದು ಅಭ್ಯರ್ಥಿಗಳು ಕೆಂಡಕಾರಿದ್ದಾರೆ. ಈ ಮೊದಲು ಆಗಸ್ಟ್​ 25ಕ್ಕೆ KAS ಪೂರ್ವಭಾವಿ ಪರೀಕ್ಷೆ ನಿಗದಿಯಾಗಿತ್ತು. ಆದರೆ ಆ.25ಕ್ಕೆ IPBS ಪರೀಕ್ಷೆ ಇರುವ ಕಾರಣ ದಿನಾಂಕದಲ್ಲಿ ಬದಲಾವಣೆ ಮಾಡಲಾಗಿದೆ.

ಸಿಎಂ ಸಿದ್ದರಾಮಯ್ಯನವರ ಸೂಚನೆಯಂತೆ ಆ.27ಕ್ಕೆ KAS ಪೂರ್ವಭಾವಿ ಪರೀಕ್ಷೆ ನಿಗದಿ ಮಾಡಲಾಗಿದೆ. ಬದಲಾವಣೆ ಮಾಡಿದ ದಿನಾಂಕದಿಂದಲೂ ಅಭ್ಯರ್ಥಿಗಳಿಗೆ ಸಮಸ್ಯೆ ಎದುರಾಗಿದೆ. ರಜಾ ದಿನದಲ್ಲಿ ಪೂರ್ವಭಾವಿ ಪರೀಕ್ಷೆ ನಡೆಸಲು ಅಭ್ಯರ್ಥಿಗಳು ಮನವಿ ಮಾಡಿದ್ದಾರೆ. ಮಂಗಳವಾರ ಖಾಸಗಿ/ಎಂಎನ್​ಸಿ ಕಂಪನಿಯವರಿಗೆ ರಜೆ ಇರಲ್ಲ. ಅಂಧ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ರೈಟರ್ ಸಿಗುವುದಿಲ್ಲ. ಹೀಗಾಗಿ ರಜೆ ದಿನಗಳನ್ನು ನೋಡಿಕೊಂಡು ಪರೀಕ್ಷೆಗೆ ದಿನಾಂಕ ನಿಗದಿ ಮಾಡಿ ಎಂದು ಆಕ್ರೋಶ ಹೊರ ಹಾಕಿದ್ದಾರೆ.

ಜೊತೆಗೆ ಬೆಂಗಳೂರಿನ ಅಭ್ಯರ್ಥಿಗಳಿಗೆ ಚಿತ್ರದುರ್ಗ ಪರೀಕ್ಷಾ ಸೆಂಟರ್​, ಬೆಳಗಾವಿ ಅಭ್ಯರ್ಥಿಗಳಿಗೆ ಮೈಸೂರು ಕೇಂದ್ರ ಹಾಕಿದ್ದಾರೆ. 200-300 ಕಿಲೋ ಮೀಟರ್​ ದೂರದ ಸೆಂಟರ್ ಹಾಕಿದ್ದಾರೆ. ಹೀಗೆ ಮಾಡಿದರೆ ನಾವು ಹೇಗೆ ಓಡಾಡಬೇಕು ಎಂದು ಅಭ್ಯರ್ಥಿಗಳು ಅಳಲು ತೋಡಿಕೊಂಡಿದ್ದಾರೆ. ಇನ್ನು ತರಾತುರಿಯಲ್ಲಿ ಕೆಎಎಸ್​ ಪ್ರಿಲಿಮ್ಸ್ ಪರೀಕ್ಷೆ ನಡೆಸ್ತಿರುವ ಆರೋಪ ಕೇಳಿ ಬಂದಿದ್ದು ಕರ್ನಾಟಕ ಲೋಕಸೇವಾ ಆಯೋಗ ನಿರ್ಧಾರಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಆಗಸ್ಟ್ 27ರ ಮಂಗಳವಾರ ಎರಡು ಪತ್ರಿಕೆಗಳ ಪರೀಕ್ಷೆಗಳನ್ನು ಒಂದೇ ದಿನ ನಡೆಸಲಾಗುತ್ತೆ. ಬೆಳಗ್ಗೆ 10 ರಿಂದ 12 ಗಂಟೆಯ ತನಕ ಪತ್ರಿಕೆ-1, ಮಧ್ಯಾಹ್ನ 2 ರಿಂದ 4 ಗಂಟೆಯ ತನಕ ಪತ್ರಿಕೆ-2ರ ಪರೀಕ್ಷೆಗಳು ನಿಗದಿಯಾಗಿದೆ.

Source : https://tv9kannada.com/karnataka/aspirants-outrage-over-the-scheduling-of-kas-preliminary-exam-on-august-27-kannada-news-ayb-887858.html

Leave a Reply

Your email address will not be published. Required fields are marked *