ಏಲಕ್ಕಿ ಅನೇಕ ಔಷಧೀಯ ಗುಣಗಳನ್ನು ಹೊಂದಿದೆ. ಕೇವಲ ಅಡುಗೆ ಮನೆಗಷ್ಟೇ ಸೀಮಿತವಾಗಿರದ ಏಲಕ್ಕಿ ದೇಹದ ಆರೋಗ್ಯ ಕಾಪಾಡಿಕೊಳ್ಳಲು ನೆರವಾಗುವ ಬಹು ಪ್ರಯೋಜನಗಳನ್ನು ನೀಡುವ ಒಂದು ಮಸಾಲೆ ಪದಾರ್ಥ. ಪ್ರತಿನಿತ್ಯ ಒಂದೆರಡು ಬೀಜ ಏಲಕ್ಕಿಯನ್ನು ಬಾಯಿಯಲ್ಲಿ ಅಗಿದು ತಿನ್ನುವುದರಿಂದ ಏನೆಲ್ಲಾ ಪ್ರಯೋಜನಗಳಿವೆ ಸಿಗುತ್ತವೆ ಇಲ್ಲಿದೆ ಓದಿ.
ಏಲಕ್ಕಿಯನ್ನು ಸಾಂಬಾರ ಪದಾರ್ಥಗಳ ರಾಣಿ ಎಂದು ಕರೆಯಲಾಗುತ್ತದೆ. ಇದು ಸಿಹಿ ತಿನಿಸುಗಳಿಗೆ ಪರಿಮಳ ಹೆಚ್ಚಿಸಿದರೆ ಮಸಾಲೆಯುಕ್ತ ಭಕ್ಷ್ಯಗಳಿಗೆ ರುಚಿ ಹೆಚ್ಚಿಸುತ್ತದೆ. ಹಾಗಾಗಿ ಎಲ್ಲಾ ವಿಶೇಷ ಪಾಕ ತಯಾರಿಕೆಯಲ್ಲಿ ಏಲಕ್ಕಿ (Cardamom) ಅನ್ನು ಬಳಸಲಾಗುತ್ತದೆ. ಸಾಸಿವೆ ಕಾಳಿಗಿಂತಲೂ ಚಿಕ್ಕದಿರುವ ಏಲಕ್ಕಿಯ ಬೀಜಗಳು ಗಾಢ ಪರಿಮಳದಿಂದ ಕೂಡಿವೆ. ಅಗಾಧ ಪೋಷಕಾಂಶ ಮತ್ತು ಆರೋಗ್ಯದ ಪ್ರಯೋಜನಗಳನ್ನು ಹೊಂದಿರುವ ಏಲಕ್ಕಿ ಬಾಯಿ, ಹೃದಯ ಮತ್ತು ಕರುಳಿನ ಆರೋಗ್ಯ ಕಾಪಾಡುತ್ತದೆ. ಒಂದೆರಡು ಬೀಜವನ್ನು ಬಾಯಿಯಲ್ಲಿಟ್ಟುಕೊಂಡು ಅಗಿದು ತಿಂದರೆ ಬಾಯಿಯ ದುರ್ವಾಸನೆಯನ್ನು ದೂರ ಮಾಡುತ್ತದೆ, ಉಸಿರಿಗೆ ತಾಜಾತನವನ್ನು ನೀಡುತ್ತದೆ. ಇದು ನೈಸರ್ಗಿಕ ಫ್ರೆಶ್ನರ್ ಆಗಿದೆ. ಅಡುಗೆಯ ರುಚಿ ಮತ್ತು ಘಮ ಹೆಚ್ಚಿಸುವ ಏಲಕ್ಕಿಯಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆ. ಇದು ಹೃದಯ ಮತ್ತು ಕರುಳಿನ ಆರೋಗ್ಯ ಕಾಪಾಡುತ್ತದೆ. ಏಲಕ್ಕಿ ಮೂತ್ರವರ್ಧಕ ಗುಣಲಕ್ಷಣಗಳನ್ನು ಹೊಂದಿದೆ. ಇದು ದೇಹದಲ್ಲಿರುವ ಹೆಚ್ಚುವರಿ ನೀರನ್ನು ಹೊರಹಾಕಲು ಸಹಾಯ ಮಾಡುತ್ತದೆ. ಇದರಿಂದ ರಕ್ತನಾಳಗಳ ಮೇಲಿನ ಒತ್ತಡ ಕಡಿಮೆಯಾಗುತ್ತದೆ. ವಿಟಮಿನ್, ಖನಿಜ, ಆಂಟಿಆಕ್ಸಿಡೆಂಟ್, ಉರಿಯೂತ ನಿವಾರಕ ಮತ್ತು ಆಂಟಿಮೈಕ್ರೋಬಿಯಲ್ ಗುಣಗಳನ್ನು ಹೊಂದಿರುವ ಏಲಕ್ಕಿಯ ಆರೋಗ್ಯ ಪ್ರಯೋಜನಗಳು ಹೀಗಿವೆ.
ಏಲಕ್ಕಿಯನ್ನು ಪ್ರತಿನಿತ್ಯ ತಿನ್ನುವುದರಿಂದ ಸಿಗುವ ಆರೋಗ್ಯ ಪ್ರಯೋಜನಗಳು
ಆರೋಗ್ಯಪೂರ್ಣ ಹಲ್ಲುಗಳು: ಏಲಕ್ಕಿಯನ್ನು ಪ್ರತಿನಿತ್ಯ ತಿನ್ನುವುದರಿಂದ ಬಾಯಿಯ ಆರೋಗ್ಯ ಹೆಚ್ಚುತ್ತದೆ. ಇದು ಪಿಎಚ್ ಮಟ್ಟವನ್ನು ಕಡಿಮೆ ಮಾಡುವುದರ ಮೂಲಕ ಉಸಿರಾಟವನ್ನು ತಾಜಾಗೊಳಿಸುತ್ತದೆ. ಏಲಕ್ಕಿಯು ಲಾಲಾರಸದ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಹಲ್ಲು ಹಾಳಾಗುವುದು, ಕೆಟ್ಟ ವಾಸನೆ ಮುಂತಾದ ಬಾಯಿಯ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ.
ರಕ್ತದೊತ್ತಡ ನಿಯಂತ್ರಿಸುತ್ತದೆ: ಏಲಕ್ಕಿ ಪುಡಿಯನ್ನು ನಿಯಮಿತವಾಗಿ ಬಳಸುವುದರಿಂದ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. ಇದರಿಂದ ಹೃದಯಾಘಾತ, ಪಾರ್ಶ್ವವಾಯು ಅಪಾಯವನ್ನು ಕಡಿಮೆ ಮಾಡುತ್ತದೆ.
ಹಸಿವನ್ನು ಹೆಚ್ಚಿಸುತ್ತದೆ: ಏಲಕ್ಕಿಯು ಉತ್ತಮ ಜೀರ್ಣಕಾರಿಯಾಗಿದೆ. ಇದು ಪಚನಕ್ರಿಯಯನ್ನು ಉತ್ತೇಜಿಸುತ್ತದೆ. ಇದರಿಂದ ಸಮಯಕ್ಕೆ ಸರಿಯಾಗಿ ಹಸಿವಿನ ಅನುಭವವಾಗುತ್ತದೆ. ಏಲಕ್ಕಿಯು ಆಹಾರ ಸೇವನೆಯನ್ನು ಪ್ರಚೋದಿಸುತ್ತದೆ.
ಮಧುಮೇಹಕ್ಕೆ ಸಹಕಾರಿ: ಫ್ರೀ ರ್‍ಯಾಡಿಕಲ್ ಮತ್ತು ಆಂಟಿಆಕ್ಸಿಡೆಂಟ್‌ಗಳ ನಡುವಿನ ಅಸಮತೋಲನದಿಂದ ಆಕ್ಸಿಡೇಟಿವ್ ಒತ್ತಡ ಉಂಟಾಗುತ್ತದೆ. ಇದು ಹಲವಾರು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಏಲಕ್ಕಿಯು ಉರಿಯೂತವನ್ನು ಕಡಿಮೆ ಮಾಡುತ್ತದೆ ಮತ್ತು ಜೀವಕೋಶಗಳನ್ನು ರಕ್ಷಿಸುತ್ತದೆ. ಮಧುಮೇಹದಲ್ಲಿ ಉಂಟಾಗುವ ಆರೋಗ್ಯ ಸಮಸ್ಯೆಗಳಿಗೆ ಇದು ಪ್ರಯೋಜನಕಾರಿಯಾಗಿದೆ.
ಖಿನ್ನತೆ ದೂರ ಮಾಡುತ್ತದೆ: ನಮ್ಮಲ್ಲಿ ಕೆಲವರು ಅತಿ ಒತ್ತಡ ದಿನಗಳಲ್ಲಿ ಏಲಕ್ಕಿಯ ಚಹಾ ಕುಡಿಯುವುದನ್ನು ನೋಡಿರಬಹುದು. ಏಲಕ್ಕಿ ಉತ್ತಮ ಆಂಟಿಆಕ್ಸಿಡೆಂಟ್ ಹೊಂದಿರುವ ಸಾಂಬಾರ ಪದಾರ್ಥವಾಗಿದೆ. ಏಲಕ್ಕಿಯನ್ನು ಪುಡಿಯನ್ನು ಬಿಸಿ ನೀರಿಗೆ ಸೇರಿಸಿ ಅಥವಾ ಏಲಕ್ಕಿ ಚಹಾ ಕುಡಿಯವುದರಿಂದ ಖಿನ್ನತೆ ದೂರ ಮಾಡುತ್ತದೆ. ಇದರಲ್ಲಿರುವ ಆಂಟಿಆಕ್ಸಿಡೆಂಟ್ ಖಿನ್ನತೆ ದೂರ ಮಾಡಲು ಸಹಾಯ ಮಾಡುತ್ತದೆ.