ಸಿಸಿಎಲ್ 12ನೇ ಆವೃತ್ತಿ ದಿನದಿಂದ ದಿನಕ್ಕೆ ಕುತೂಹಲ ಹೆಚ್ಚಿಸುತ್ತಿದ್ದು, ಕಿಚ್ಚ ಸುದೀಪ್ ನೇತೃತ್ವದ ಕರ್ನಾಟಕ ಬುಲ್ಡೋಜರ್ಸ್ ತಂಡ ಭರ್ಜರಿ ಪ್ರದರ್ಶನದೊಂದಿಗೆ ಸೆಮಿಫೈನಲ್ ಹಂತಕ್ಕೆ ಲಗ್ಗೆ ಇಟ್ಟಿದೆ. ಲೀಗ್ ಹಂತದಲ್ಲಿ ಆಡಿದ ಮೂರು ಪಂದ್ಯಗಳಲ್ಲೂ ಜಯ ಸಾಧಿಸಿರುವ ಬುಲ್ಡೋಜರ್ಸ್, ಅಜೇಯವಾಗಿ ಪಾಯಿಂಟ್ಸ್ ಟೇಬಲ್‌ನ ಅಗ್ರಸ್ಥಾನ ಕಾಯ್ದುಕೊಂಡಿದೆ.
ಕೋಯಂಬತ್ತೂರಿನ ಶ್ರೀ ರಾಮಕೃಷ್ಣ ಕಲಾ ಮತ್ತು ವಿಜ್ಞಾನ ಕಾಲೇಜು ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಕರ್ನಾಟಕ ಬುಲ್ಡೋಜರ್ಸ್ ನಿಗದಿತ ಓವರ್‌ಗಳಲ್ಲಿ 202 ರನ್‌ಗಳ ಭಾರೀ ಮೊತ್ತ ಪೇರಿಸಿ, ಭೋಜ್‌ಪುರಿ ದಬಾಂಗ್ಸ್‌ಗೆ 203 ರನ್‌ಗಳ ಸವಾಲಿನ ಗುರಿ ನೀಡಿತ್ತು.
ಗುರಿ ಬೆನ್ನಟ್ಟಿದ ಭೋಜ್‌ಪುರಿ ದಬಾಂಗ್ಸ್ ತಂಡ 184 ರನ್‌ಗಳಿಗೆ ಆಲೌಟ್ ಆಗಿದ್ದು, ಕರ್ನಾಟಕ ಬುಲ್ಡೋಜರ್ಸ್ 18 ರನ್‌ಗಳ ಅಂತರದಲ್ಲಿ ಜಯ ಸಾಧಿಸಿತು. ಈ ಗೆಲುವಿನೊಂದಿಗೆ ಬುಲ್ಡೋಜರ್ಸ್ ಲೀಗ್ ಹಂತದಲ್ಲಿ ಮೂರೂ ಪಂದ್ಯಗಳನ್ನು ಗೆದ್ದು, ಉತ್ತಮ ಸ್ಟ್ರೈಕ್ ರೇಟ್ ಕಾರಣದಿಂದ ಪಾಯಿಂಟ್ಸ್ ಟೇಬಲ್‌ನಲ್ಲಿ ಮೊದಲ ಸ್ಥಾನದಲ್ಲಿದೆ.
ಪಾಯಿಂಟ್ಸ್ ಪಟ್ಟಿಯಲ್ಲಿ ಬೆಂಗಾಲ್ ಟೈಗರ್ಸ್ ಕೂಡ ಮೂರು ಪಂದ್ಯಗಳನ್ನು ಗೆದ್ದು 6 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದು, ಕೇರಳ ಸ್ಟ್ರೈಕರ್ಸ್ ಎರಡು ಗೆಲುವುಗಳೊಂದಿಗೆ ಮೂರನೇ ಸ್ಥಾನದಲ್ಲಿದೆ. ಮೂರು ಪಂದ್ಯಗಳಲ್ಲಿ ಒಂದೇ ಗೆಲುವು ಪಡೆದಿದ್ದರೂ ಉತ್ತಮ ನೆಟ್ ರನ್ ರೇಟ್‌ನಿಂದ ಪಂಜಾಬ್ ದೆ ಶೇರ್ ನಾಲ್ಕನೇ ಸ್ಥಾನದಲ್ಲಿದೆ. ಈ ನಾಲ್ಕು ತಂಡಗಳು ಸೆಮಿಫೈನಲ್‌ಗೆ ಅರ್ಹತೆ ಪಡೆಯುವುದು ಬಹುತೇಕ ಖಚಿತವಾಗಿದೆ.
ಸಿಸಿಎಲ್ ಇತಿಹಾಸದಲ್ಲಿ ಕರ್ನಾಟಕ ಬುಲ್ಡೋಜರ್ಸ್ ಇದುವರೆಗೆ ಎರಡು ಬಾರಿ ಟ್ರೋಫಿ ಜಯಿಸಿದೆ. ಕಳೆದ ಸೀಸನ್‌ನಲ್ಲಿ ನಿರಾಸೆ ಅನುಭವಿಸಿದ್ದ ಸುದೀಪ್ ಪಡೆ, ಈ ಬಾರಿ ಹೊಸ ಉತ್ಸಾಹದೊಂದಿಗೆ ಮರಳಿದ್ದು, ತೆಲುಗು ವಾರಿಯರ್ಸ್ ಹಾಗೂ ಪಂಜಾಬ್ ದೆ ಶೇರ್ಂತಹ ಬಲಿಷ್ಠ ತಂಡಗಳನ್ನು ಮಣಿಸಿ ತನ್ನ ಶಕ್ತಿಯನ್ನು ತೋರಿಸಿದೆ.
Views: 3