ಆಂಧ್ರ ಪ್ರದೇಶದ ಮುಖ್ಯಮಂತ್ರಿಯಾಗಿ ಚಂದ್ರಬಾಬು ನಾಯ್ಡು ಪದಗ್ರಹಣ.

ವಿಜಯವಾಡ: ಆಂಧ್ರ ಪ್ರದೇಶದ ಮುಖ್ಯಮಂತ್ರಿಯಾಗಿ ಟಿಡಿಪಿ ಮುಖ್ಯಸ್ಥ ಎನ್.​ ಚಂದ್ರಬಾಬು ನಾಯ್ಡು (Chandrababu Naidu) ನಾಲ್ಕನೇ ಬಾರಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಬುಧವಾರ (ಜೂನ್‌ 12) ರಾಜ್ಯಪಾಲ ಅಬ್ದುಲ್ ನಜೀರ್ ಅವರು ಪ್ರಮಾಣ ವಚನ ಬೋಧಿಸಿದರು. ಜನಸೇನಾ ಪಾರ್ಟಿಯ ಪವನ್‌ ಕಲ್ಯಾಣ್‌ ಕೂಡ ಈ ವೇಳೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಸೇರಿ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಈ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವರಾದ ಅಮಿತ್‌ ಶಾ, ಜೆ.ಪಿ.ನಡ್ಡಾ, ನಿತಿನ್‌ ಗಡ್ಕರಿ, ರಾಮ್‌ದಾಸ್‌ ಅಥವಾಳೆ, ಅನುಪ್ರಿಯಾ ಪಟೇಲ್‌, ಚಿರಾಗ್‌ ಪಾಸ್ವಾನ್‌, ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್‌ ಶಿಂದೆ, ಎನ್‌ಚಿಪಿ ನಾಯಕರಾದ ಪ್ರಫುಲ್‌ ಪಟೇಲ್‌, ಮಾಜಿ ಉಪ ರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಮತ್ತಿತರರು ಪಾಲ್ಗೊಂಡಿದ್ದರು.

ಆಂಧ್ರ ಪ್ರದೇಶ ವಿಧಾನ ಸಭೆಯ 175 ಸೀಟುಗಳ ಪೈಕಿ ಎನ್‌ಡಿಎ 164 ಕ್ಷೇತ್ರಗಳಲ್ಲಿ ಜಯ ಗಳಿಸಿದೆ. ಈ ಪೈಕಿ ಟಿಡಿಪಿ 135, ಜನಸೇನಾ ಪಾರ್ಟಿ 21 ಮತ್ತು ಬಿಜೆಪಿ 8 ಕಡೆ ಗೆದ್ದಿದೆ. ಮಂಗಳವಾರ ತಡರಾತ್ರಿ ಅಮರಾವತಿಯ ತಮ್ಮ ನಿವಾಸದಲ್ಲಿ ಅಮಿತ್ ಶಾ ಮತ್ತು ಜೆ.ಪಿ.ನಡ್ಡಾ ಅವರೊಂದಿಗೆ ಸಭೆ ನಡೆಸಿದ ನಂತರ ಚಂದ್ರಬಾಬು ನಾಯ್ಡು ತಮ್ಮ ಸಚಿವರ ತಂಡವನ್ನು ಅಂತಿಮಗೊಳಿಸಿದ್ದರು. ಸತ್ಯ ಕುಮಾರ್ ಯಾದವ್ ಅವರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಬಿಜೆಪಿಯ ಏಕೈಕ ಶಾಸಕ. ಜನಸೇನಾ ಪಾರ್ಟಿಯಿಂದ ಪವನ್ ಕಲ್ಯಾಣ್, ನಾದೆಂಡ್ಲಾ ಮನೋಹರ್ ಮತ್ತು ಕಂದುಲಾ ದುರ್ಗೇಶ್ ಮೂವರು ಸಚಿವರಾಗಿ ಆಯ್ಕೆಯಾಗಿದ್ದಾರೆ. ಈ ಸಚಿವ ಸಂಪುಟದಲ್ಲಿ 17 ಹೊಸ ಮುಖಗಳಿವೆ. ಸಂಪುಟದಲ್ಲಿ ಮೂವರು ಮಹಿಳೆಯರಿದ್ದಾರೆ.

ಚಂದ್ರಬಾಬು ನಾಯ್ಡು 2014ರಲ್ಲಿ ವಿಭಜಿತ ಆಂಧ್ರಪ್ರದೇಶದ ಮೊದಲ ಮುಖ್ಯಮಂತ್ರಿಯಾಗಿ ಹೊರಹೊಮ್ಮಿದ್ದರು. ಅವರು 2019ರ ಚುನಾವಣೆಯಲ್ಲಿ ಸೋತು 2024ರವರೆಗೆ ವಿರೋಧ ಪಕ್ಷದ ನಾಯಕರಾಗಿದ್ದರು. ಇದೀಗ ಮತ್ತೆ ಮುಖ್ಯಮಂತ್ರಿಯಾಗಿ ಅಧಿಕಾರಕ್ಕೆ ಮರಳಿದ್ದಾರೆ. ಮಂಗಳವಾರ ವಿಜಯವಾಡದ ಎ-ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆದ ಎನ್‌ಡಿಎ ಸಭೆಯಲ್ಲಿ ಟಿಡಿಪಿ, ಬಿಜೆಪಿ ಮತ್ತು ಪವನ್‌ ಕಲ್ಯಾಣ ನೇತೃತ್ವದ ಜನಸೇನಾ ಪಾರ್ಟಿ(JSP)ಯ ಶಾಸಕರು ಪಾಲ್ಗೊಂಡಿದ್ದರು. ಈ ವೇಳೆ ಮುಖ್ಯಮಂತ್ರಿ ಹುದ್ದೆಗೆ ಚಂದ್ರಬಾಬು ನಾಯ್ಡು ಅವರ ಹೆಸರನ್ನು ಪವನ್‌ ಕಲ್ಯಾಣ ಪ್ರಸ್ತಾಪಿಸಿದ್ದರು. ಇದಕ್ಕೆ ಬಿಜೆಪಿಯ ಡಿ.ಪುರಂದರೇಶ್ವರಿ ಬೆಂಬಲ ಸೂಚಿಸಿದರು. ಬಳಿಕ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

Source : https://vistaranews.com/national/chandrababu-naidu-chandrababu-naidu-takes-oath-as-andhra-chief-minister/672364.html

Leave a Reply

Your email address will not be published. Required fields are marked *