ಪೋಟೋ ಮತ್ತು ವರದಿ ಸುರೇಶ್ ಪಟ್ಟಣ್
ದೊಡ್ಡಹಟ್ಟಿ ಹಾಗೂ ಕಕ್ಕೇರು ಗ್ರಾಮದ ಹಳ್ಳಗಳಿಗೆ 2 ಕೋಟಿ 5 ಲಕ್ಷ ವೆಚ್ಚದ ಚೆಕ್ ಡ್ಯಾಂ ನಿರ್ಮಾಣ ಭೂಮಿ ಪೂಜೆ
ಚಿತ್ರದುರ್ಗ ಆ 31: ಮಳೆಗಾಲದಲ್ಲಿ ಅಪಾರ ಪ್ರಮಾಣದಲ್ಲಿ ಹರಿದು ಹೋಗುವ ನೀರನ್ನು ಸಂರಕ್ಷಿಸಿ ಅಂತರ್ಜಲ ಮಟ್ಟವನ್ನು ಹೆಚ್ಚಿಸುವ ಉದ್ದೇಶದಿಂದ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಚೆಕ್ಡ್ಯಾಂಗಳ ನಿರ್ಮಾಣಕ್ಕೆ ಆದ್ಯತೆ ನೀಡಲಾಗಿದೆ ಎಂದು ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ ತಿಳಿಸಿದರು.
ತಾಲೂಕಿನ ದೊಡ್ಡಹಟ್ಟಿ ಹಾಗೂ ಕಕ್ಕೇರು ಗ್ರಾಮಗಳಲ್ಲಿ ಒಟ್ಟು 2 ಕೋಟಿ 5 ಲಕ್ಷ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸೋಮವಾರ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಮಳೆ ನೀರು ಹರಿದು ವ್ಯರ್ಥವಾಗಬಾರದು ಎಂಬ ಉದ್ದೇಶದಿಂದ ಅಗತ್ಯವಿರುವ ಪ್ರದೇಶಗಳಲ್ಲಿ ಚೆಕ್ಡ್ಯಾಂಗಳನ್ನು ನಿರ್ಮಿಸಲಾಗುತ್ತಿದೆ. ಇದರೊಂದಿಗೆ ನೀರಿನ ಸಂಗ್ರಹಣೆಗೆ ಅನುಕೂಲವಾಗುವ ಬೃಹತ್ ಹಳ್ಳಗಳು ಹಾಗೂ ನೀರು ತಡೆಗಟ್ಟುವ ಕಾಮಗಾರಿಗಳಿಗೂ ಚಾಲನೆ ನೀಡಲಾಗುತ್ತಿದೆ. ನಮ್ಮ ನೀರು ನಮ್ಮ ನೆಲದಲ್ಲಿಯೇ ಉಳಿಯಬೇಕು ಎಂಬುದು ನಮ್ಮ ಪ್ರಮುಖ ಆಶಯವಾಗಿದೆ ಎಂದು ಹೇಳಿದರು.
ಚೆಕ್ಡ್ಯಾಂಗಳ ನಿರ್ಮಾಣದಿಂದ ರೈತರಿಗೆ ಸಾಕಷ್ಟು ಅನುಕೂಲವಾಗಲಿದೆ. ರೈತರ ಜಮೀನು, ತೋಟ ಹಾಗೂ ಕೃಷಿ ಪ್ರದೇಶಗಳ ಸಮೀಪ ನೀರು ಸಂಗ್ರಹವಾಗುವುದರಿಂದ ಅಂತರ್ಜಲ ಮಟ್ಟ ಹೆಚ್ಚಾಗಿ ಬೋರ್ವೆಲ್ಗಳಲ್ಲಿ ನೀರಿನ ಲಭ್ಯತೆ ಸುಧಾರಿಸಲು ಸಹಕಾರಿಯಾಗಲಿದೆ. ಇದರಿಂದ ಕೃಷಿ ಚಟುವಟಿಕೆಗಳಿಗೆ ಉತ್ತೇಜನ ದೊರೆಯುವುದರ ಜೊತೆಗೆ ಬೇಸಿಗೆ ಸಂದರ್ಭದಲ್ಲಿಯೂ ನೀರಿನ ಸಮಸ್ಯೆ ನಿವಾರಣೆಗೆ ಸಹಾಯಕವಾಗಲಿದೆ ಎಂದು ತಿಳಿಸಿದರು.
ಗ್ರಾಮೀಣ ಪ್ರದೇಶಗಳ ಸಮಗ್ರ ಅಭಿವೃದ್ಧಿಗೆ ಸರ್ಕಾರದ ವಿವಿಧ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲಾಗುತ್ತಿದೆ. ರಸ್ತೆ, ಕುಡಿಯುವ ನೀರು, ವಿದ್ಯುತ್ ಸೇರಿದಂತೆ ಮೂಲಸೌಕರ್ಯಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ಅಗತ್ಯವಿರುವ ಕಡೆ ಆಸ್ಪತ್ರೆ, ಶಾಲಾ-ಕಾಲೇಜು ಸೇರಿದಂತೆ ಸಾರ್ವಜನಿಕ ಉಪಯೋಗದ ಕಟ್ಟಡಗಳ ನಿರ್ಮಾಣ ಹಾಗೂ ಅಭಿವೃದ್ಧಿ ಕಾರ್ಯಗಳಿಗೂ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.
ಜನಪ್ರತಿನಿಧಿಯಾಗಿ ಅಧಿಕಾರ ಶಾಶ್ವತವಾಗಿ ಇರುವುದಿಲ್ಲ ಎಂಬ ಅರಿವು ಪ್ರತಿಯೊಬ್ಬರಿಗೂ ಇರಬೇಕು. ಅಧಿಕಾರದಲ್ಲಿರುವಷ್ಟು ದಿನ ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಿ, ಹತ್ತಾರು ಜನ ಮೆಚ್ಚುವಂತಹ ಅಭಿವೃದ್ಧಿ ಕಾರ್ಯಗಳನ್ನು ಮಾಡುವುದೇ ಜನಪ್ರತಿನಿಧಿಯ ನಿಜವಾದ ಜವಾಬ್ದಾರಿ ಎಂದು ನಾನು ಭಾವಿಸಿದ್ದೇನೆ ಎಂದು ತಿಳಿಸಿದರು.
ದೊಡ್ಡಹಟ್ಟಿ ಮತ್ತು ಕಕ್ಕೇರು ಗ್ರಾಮಗಳಲ್ಲಿ ಕೈಗೆತ್ತಿಕೊಳ್ಳಲಾಗುತ್ತಿರುವ ಕಾಮಗಾರಿಗಳು ಪೂರ್ಣಗೊಂಡ ನಂತರ ರೈತರು ಹಾಗೂ ಗ್ರಾಮಸ್ಥರಿಗೆ ಹೆಚ್ಚಿನ ಅನುಕೂಲವಾಗಲಿದೆ. ನೀರಿನ ಸಂರಕ್ಷಣೆ ಮತ್ತು ಅಂತರ್ಜಲ ವೃದ್ಧಿಗೆ ಇಂತಹ ಯೋಜನೆಗಳು ಮಹತ್ವದ ಪಾತ್ರ ವಹಿಸಲಿದ್ದು, ಮುಂದಿನ ದಿನಗಳಲ್ಲಿ ಅಗತ್ಯವಿರುವ ಇತರೆ ಗ್ರಾಮಗಳಲ್ಲಿಯೂ ಅಭಿವೃದ್ಧಿ ಕಾಮಗಾರಿಗಳಿಗೆ ಆದ್ಯತೆ ನೀಡಲಾಗುವುದು ಎಂದು ಹೇಳಿದರು.
ಕಕ್ಕೇರು ಗ್ರಾಮದ ಯುವ ಮುಖಂಡ ಮಹಾಂತೇಶ್.ಟಿ ಮಾತನಾಡಿ ಚಿತ್ರದುರ್ಗ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳು ಹಾಗೂ ಭೂಮಿ ಪೂಜೆಗಳು ನಡೆಯುತ್ತಿವೆ ಇದರೊಟ್ಟಿಗೆ ನಮ್ಮ ಗ್ರಾಮದ ಸುತ್ತಮುತ್ತಲಿನಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳು ಶಾಸಕರಿದ್ದಾಗಿವೆ, ಅನ್ನೇಹಾಳ್ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವಂತಹ ಬಹುತೇಕ ಗ್ರಾಮಗಳು ಗುಡ್ಡ ಪ್ರದೇಶಗಳಿಂದ ಕೂಡಿದ್ದು ಮಳೆ ನೀರು ಸಾಕಷ್ಟು ಹಳ್ಳಗಳ ಮೂಲಕ ಹರಿದು ಬೇರೆ ಕೆರೆಗೆ ಸೇರುತ್ತವೆ, ಈ ವಿಚಾರವನ್ನು ಸುತ್ತಮುತ್ತಲಿನ ರೈತರು ಮನಗೊಂಡು ನೀರು ವ್ಯರ್ಥವಾಗದಂತೆ ಚಿಕ್ ಡ್ಯಾಂ ನಿರ್ಮಾಣ ಮಾಡಬೇಕೆಂದು ಶಾಸಕರಿಗೆ ಗ್ರಾಮಸ್ಥರು ಮನವಿಯನ್ನು ಸಲ್ಲಿಸಿದ್ದರು. ಇದರ ಪರಿಣಾಮವಾಗಿ ಶಾಸಕರು ಸಂಬಂಧಪಟ್ಟ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿ ಬೃಹತ್ ಮಟ್ಟದ ಚೆಕ್ ಡ್ಯಾಂ ನಿರ್ಮಾಣ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು , ಅದರ ಪ್ರತಿಫಲವಾಗಿ ಗ್ರಾಮದ ಹೊರ ವಲಯದ ಹಳ್ಳಗಳಿಗೆ ಚಿಕ್ ಡ್ಯಾಂ ಭೂಮಿ ಪೂಜೆ ನೆರವೇರಿಸಿರುವುದು ಅತ್ಯಂತ ಸಂತಸದ ವಿಚಾರವಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಚಿತ್ರದುರ್ಗ ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ರವಿಕುಮಾರ್, ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ಅಧಿಕಾರಿಗಳಾದ ಭೀಮರಾಜ್, ಸುಹೀಲ್ ರಹೀಮ್, ಜಿಲ್ಲಾ ಗ್ಯಾರೆಂಟಿ ಸಮಿತಿಯ ಅಧ್ಯಕ್ಷ ಶಿವಣ್ಣ, ಕೆಡಿಪಿ ಸದಸ್ಯ ನಾಗರಾಜ್, , ಅನ್ನೇಹಾಳ್ ಗ್ರಾಮ ಪಂಚಾಯಿತಿ ಆಡಳಿತ ಅಧಿಕಾರಿ ವಾಸದೇವಪ್ಪ, ಪಿಡಿಒ ಹನುಮಂತ ರಾಯಪ್ಪ, ಹಾಗೂ ಗ್ರಾಮಸ್ಥರಾದ ಮುತ್ತುರಾಜ್ ಓಬಳೇಶ್ ವರದರಾಜ ಪಾಪಣ್ಣ ಚಿದಾನಂದ ತಿಪ್ಪೇಶ್ ಮಹಾಂತೇಶ್ ರುದ್ರೇಶ್ ರವಿಕುಮಾರ್ ಅಭಿಷೇಕ್ ಪ್ರದೀಪ್ ಮಂಜುನಾಥ್,ರುದ್ರಪ್ಪ, ಗಿರೀಶ್, ಸಂತೋಷ್, ಶಿವಕುಮಾರ್, ಆನಂದಪ್ಪ, ತಿಪ್ಪೇಸ್ವಾಮಿ, ಹನುಮಂತಪ್ಪ ಹಾಗೂ ಇತರರು ಇದ್ದರು.