
ಗ್ರಾಮೀಣ ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆ (RLHP) ಮೈಸೂರು, ಜಿಲ್ಲಾ ಆಡಳಿತ ಕಲಬುರ್ಗಿ ಹಾಗೂ ಚಿಂಚೋಳಿ ತಾಲೂಕ ಆಡಳಿತ ಇವರ ಸಯುಕ್ತ ಆಶ್ರಯದಲ್ಲಿ ಮಕ್ಕಳ ದಿನಾಚರಣೆ ಅಂಗವಾಗಿ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದೊಂದಿಗೆ ಮಕ್ಕಳ ಸಂವಾದ ಕಾರ್ಯಕ್ರಮ ವನ್ನು ದಿನಾಂಕ 16/11/2018ರಂದು ಶನಿವಾರ ಸಮಯ ಬೆಳಿಗ್ಗೆ 11.00 ಗಂಟೆಗೆ ಡಾ. ಬಿಆರ್ ಅಂಬೇಡ್ಕರ್ ಸಭಾಭವನ ಚಿಂಚೋಳಿ ಇಲ್ಲಿ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಕ್ಕಳ ಆವಾಲುಗಳನ್ನು ಆಲಿಸಿದ ನಂತರ ಮಾತನಾಡಿದ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ಶ್ರೀಮತಿ.ಅಪರ್ಣ ಎಂ ಕೊಳ್ಳ ಇವರು ಮಕ್ಕಳನ್ನು ಉದ್ದೇಶಿಸಿ ಮಾತನಾಡುತ್ತಾ ಸಭೆಯಲ್ಲಿ ಹಾಜರಿದ್ದ ಇಲಾಖೆಯ ಅಧಿಕಾರಿಗಳಿಗೆ ಖಡಕ್ಕಾಗಿ ಆದೇಶವನ್ನು ಮಾಡುತ್ತ, ಮಕ್ಕಳು ಎತ್ತಿರುವ ಸಮಸ್ಯೆಗಳಿಗೆ ಏನು ಕ್ರಮಗಳನ್ನು ಕೈಗೊಂಡಿದ್ದೀರಾ, ಈಗಾಗಲೇ ಕ್ರಮ ಕೈಗೊಂಡಲ್ಲಿ ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಆಯೋಗಕ್ಕೆ ಒಪ್ಪಿಸುವಂತೆ ಸೂಚಿಸಿದರು. ಬಾಲ್ಯ ವಿವಾಹ ಪ್ರಕರಣಗಳಿಗೆ ಮತ್ತು ಹದಿಹರೆಯದ ಹೆಣ್ಣು ಮಕ್ಕಳ ಗರ್ಭಿಣಿಯರ ಸಮಸ್ಯೆಗೆ ಸಂಬಂಧಿಸಿದಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿಯವರಿಗೆ ಉದ್ದೇಶಿಸಿ ಈಗಾಗಲೇ ಬಾಲ್ಯ ವಿವಾಹಕ್ಕೆ ಒಳಗಾಗಿರುವ ಮತ್ತು ಹದಿಹರೆಯದ ಹೆಣ್ಣು ಮಕ್ಕಳ ಗರ್ಭಿಣಿಯರಿಗೆ ಸಂಬಂಧಿಸಿದಂತೆ 132 ಪ್ರಕರಣಗಳಲ್ಲಿ ಕೂಡಲೇ ದೂರನ್ನು ದಾಖಲಿಸಿ ಅದರ ಅನು ಪಾಲನ ವರದಿಯನ್ನು ಒಪ್ಪಿಸುವಂತೆ ಸೂಚಿಸಿದರು. ಹಾಗೂ ಶಾಲೆಗಳಲ್ಲಿ, ಅಂಗನವಾಡಿಗಳಲ್ಲಿ, ಗ್ರಾಮದಲ್ಲಿ ಇರುವ ಸಮಸ್ಯೆಗಳಿಗೆ ಕೂಡಲೇ ಕ್ರಮ ಕೈಗೊಳ್ಳಬೇಕು ಮತ್ತು ಗ್ರಾಮಗಳಲ್ಲಿ ಇರುವ ಬಾಲ್ಯ ವಿವಾಹ, ಬಾಲಕಾರ್ಮಿಕ, ಸಾರಾಯಿ ಮಾರಾಟ ಸಮಸ್ಯೆ ಹಾಗೂ ಇನ್ನಿತರ ಸಮಸ್ಯೆಗಳನ್ನು ಕೂಡಲೇ ಪತ್ತೆ ಹಚ್ಚಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು. ಬಾಲ್ಯ ವಿವಾಹ ಮತ್ತು ಇನ್ನಿತರ ಮಕ್ಕಳ ಮೇಲಿನ ಸಮಸ್ಯೆಗಳು ಕಂಡು ಬಂದಲ್ಲಿ ತಕ್ಷಣಕ್ಕೆ ಇಲಾಖೆಗಳನ್ನು ಅಥವಾ ಮಕ್ಕಳ ಸಹಾಯವಾಣಿ 1098 ಅಥವಾ 112 ಇವರನ್ನು ಸಂಪರ್ಕಿಸುವಂತೆ ಮಕ್ಕಳಿಗೆ ಸಲಹೆ ನೀಡಿದರು. ಸಭೆಯ ಮೊದಲು ತಾಲೂಕಿನಲ್ಲಿ ಇರುವ ವಸತಿ ನಿಲಯಗಳಿಗೆ ಭೇಟಿ ಮಾಡಿ ವಸತಿ ನಿಲಯಗಳಲ್ಲಿ ಇರುವ ಅವ್ಯವಸ್ಥೆಗಳ ಬಗ್ಗೆ ಅವರ ಗಮನಕ್ಕೆ ತಂದು ಕೂಡಲೇ ಈ ಸರಿಸಮಸ್ಯೆಗಳನ್ನು ಸರಿಪಡಿಸಬೇಕೆಂದು ಎಚ್ಚರಿಕೆ ನೀಡಿದರು.

ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಬೆಂಗಳೂರು ಇದರ ಇನ್ನೋರ್ವ ಸದಸ್ಯರಾದ ಶ್ರೀ. ವೆಂಕಟೇಶ್, ಇವರು ಮಾತನಾಡುತ್ತಾ ಮಕ್ಕಳ ಸರ್ವಾಂಗೀಣ ಅಭಿವೃದ್ಧಿ, ಮಕ್ಕಳ ಹಕ್ಕುಗಳನ್ನು ಕಾತರಿಪಡಿಸುವುದು ಮತ್ತು ಮಕ್ಕಳ ಸಮಸ್ಯೆಗಳಿಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳುವುದು ಸರಕಾರದ ಜವಾಬ್ದಾರಿಯ ಆಗಿರುತ್ತದೆ. ಹಾಗಾಗಿ ಮಕ್ಕಳ ಸಮಸ್ಯೆಗಳಿಗೆ ಸ್ಥಳೀಯ ಮಟ್ಟದಲ್ಲಿ ಇರುವ ಇಲಾಖೆಯ ಅಧಿಕಾರಿಗಳು ತಕ್ಷಣಕ್ಕೆ ಕ್ರಮಗಳನ್ನು ಕೈಗೊಳ್ಳಬೇಕು. ಮಕ್ಕಳಿಗೆ ಮಕ್ಕಳ ಸ್ನೇಹಿ ಪರಿಸರ ನಿರ್ಮಾಣ ಮಾಡುವಲ್ಲಿ ಕೈಜೋಡಿಸಬೇಕು. ಇವತ್ತು ಮಕ್ಕಳ ರಕ್ಷಣೆಯಲ್ಲಿ ಸರಕಾರದೊಂದಿಗೆ ಸಂಘ- ಸಂಸ್ಥೆಗಳು ಸಹ ಕೈಜೋಡಿಸುತ್ತಿದ್ದು ಇದು ಒಂದು ಒಳ್ಳೆಯ ಬೆಳವಣಿಗೆ. ಹಾಗಾಗಿ ಸರಕಾರಗಳು ಇಂತಹ ಸಂಸ್ಥೆಗಳಿಗೆ ಸಹಕರಿಸುವುದರ ಮೂಲಕ ಮಕ್ಕಳ ಹಕ್ಕುಗಳ ರಕ್ಷಣೆ ಮತ್ತು ಮಕ್ಕಳ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಕೈಜೋಡಿಸಬೇಕು ಎಂದು ಹೇಳಿದರು. ಮಕ್ಕಳು ತಮ್ಮ ಹಕ್ಕುಗಳಿಗಾಗಿ ಮತ್ತು ತಮ್ಮ ಅವಶ್ಯಕತೆಗಳಿಗಾಗಿ ಧ್ವನಿಯನ್ನು ಎತ್ತಬೇಕು ಅವಾಗ ಮಾತ್ರ ಮಕ್ಕಳು ತಮ್ಮ ಹಕ್ಕುಗಳನ್ನು ಪಡೆಯಲು ಸಾಧ್ಯ. ಇಲ್ಲವಾದಲ್ಲಿ ಸರಕಾರಗಳು ಅಥವಾ ಅಧಿಕಾರಿಗಳು ಮಕ್ಕಳ ಸಮಸ್ಯೆಗಳಿಗೆ, ಬೇಡಿಕೆಗಳಿಗೆ ಕಿವಿ ಕೊಡುವುದಿಲ್ಲ. ಹಾಗಾಗಿ ಮಕ್ಕಳು ಮುಂದೆ ಬಂದು ಮಾತನಾಡಬೇಕು ಎಂದು ಮಕ್ಕಳನ್ನು ಎಂದು ಹುರಿದುಂಬಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಪುರಸಭೆಯ ಅಧ್ಯಕ್ಷರಾದಂತ ಶ್ರೀ. ಆನಂದ್ ಎನ್ ಟೈಗರ್ ಇವರು ಮಾತನಾಡುತ್ತಾ, ಸಂಸ್ಥೆಯು ಇಂತಹ ಕಾರ್ಯಕ್ರಮವನ್ನು ಆಯೋಜನೆ ಮಾಡಿರುವುದು ಅಭಿನಂದನೀಯ. ಇಲಾಖೆಗಳು ಮಕ್ಕಳು ಎತ್ತಿರುವ ಸಮಸ್ಯೆಗಳನ್ನು ಆದಷ್ಟು ಬೇಗ ಪರಿಹಾರ ಮಾಡುವಲ್ಲಿ ಕ್ರಮ ಕೈಗೊಳ್ಳಬೇಕು, ಇಲಾಖೆಗಳು ಇತರರ ಸಹಯೋಗದೊಂದಿಗೆ ಒಟ್ಟಾಗಿ ಮಕ್ಕಳ ಸಮಸ್ಯೆಗಳನ್ನು ಗಂಭೀರವಾಗಿ ತೆಗೆದುಕೊಂಡು ಅವುಗಳನ್ನು ಸರಿಪಡಿಸುವ ಮೂಲಕ ಮಕ್ಕಳಿಗೆ ಮಕ್ಕಳ ಸ್ನೇಹ ಪರಿಸರವನ್ನು ನಿರ್ಮಾಣ ಮಾಡಿಕೊಡಬೇಕು. ನಾವು ಎಲ್ಲರೂ ಮಕ್ಕಳ ಸಮಸ್ಯೆಗಳಿಗೆ ಆದಷ್ಟು ಶೀಘ್ರ ಸ್ಪಂದಿಸುವಲ್ಲಿ ಪ್ರಯತ್ನಿಸುತ್ತೇವೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ಮಾತನಾಡಿದ ಗ್ರಾಮೀಣ ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆಯ ನಿರ್ದೇಶಕರಾದ ಶ್ರೀಮತಿ.ಸರಸ್ವತಿ ಇವರು ಮಾತನಾಡುತ್ತಾ ಸಂಸ್ಥೆಯು ಕಳೆದ 40 ವರ್ಷಗಳಿಂದ ಆರೋಗ್ಯ, ಶಿಕ್ಷಣ, ಜೀವನೋಪಾಯ ಹೆಣ್ಣು ಮಕ್ಕಳ ಸಬಲೀಕರಣದಲ್ಲಿ ಕೆಲಸವನ್ನು ಮಾಡುತ್ತಿದೆ. ಚಿಂಚೋಳಿಯಲ್ಲಿ ಕಳೆದ 8 ವರ್ಷಗಳಿಂದ ಕೆಲಸ ಮಾಡುತ್ತಿದ್ದು ಪ್ರಸ್ತುತ ಕೃಷಿ ಕಾರ್ಮಿಕ ಕ್ಷೇತ್ರದಲ್ಲಿ ಬಾಲಕಾರ್ಮಿಕರಾಗಿ ಕೆಲಸ ಮಾಡುತ್ತಿರುವ ಮಕ್ಕಳನ್ನು ಶಿಕ್ಷಣದ ಮುಖ್ಯವಾಹಿನಿಗೆ ತರುವ ಕೆಲಸವನ್ನು ಮಾಡುತ್ತಿದ್ದೇವೆ. ಈ ನಿಟ್ಟಿನಲ್ಲಿ ಚಿಂಚೋಳಿ ತಾಲೂಕಿನಲ್ಲಿ ಮಕ್ಕಳು ಎದುರಿಸುತ್ತಿರುವ ಸಮಸ್ಯೆಗಳನ್ನು ಗುರುತಿಸಿ ಆ ಒಂದು ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಇವತ್ತು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದೊಂದಿಗೆ ಮಕ್ಕಳ ಸಂವಾದ ಕಾರ್ಯಕ್ರಮವನ್ನು ಮಕ್ಕಳ ದಿನಾಚರಣೆಯ ಅಂಗವಾಗಿ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದ ಮೂಲಕ ಮಕ್ಕಳ ಸಮಸ್ಯೆಗಳಿಗೆ ಶೀಘ್ರದಲ್ಲಿ ಪರಿಹಾರ ಕಂಡುಕೊಳ್ಳುವ ಮೂಲಕ ಮಕ್ಕಳ ಮಾತಿಗೆ, ಅವರ ಧ್ವನಿಗೆ ಇಲಾಖೆಗಳು ಸ್ಪಂದಿಸುವಂತೆ ಮಾಡಿ ಮಕ್ಕಳ ಸ್ನೇಹಿ ಪರಿಸರವನ್ನು ನಿರ್ಮಾಣ ಮಾಡುವ ಉದ್ದೇಶವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ಶ್ರೀಮತಿ.ಸವಿತಾ, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಶ್ರೀ.ಧನರಾಜ್ ಐ ಇ, ಅಬಕಾರಿ ನಿರೀಕ್ಷಕರು, ಶ್ರೀ.ಹನುಮಂತಪ್ಪ, ಸಂಚಾರಿ ನಿಯಂತ್ರಕರು ಮತ್ತು ಶ್ರೀ ಭರತೇಶ್, ಕಾನೂನು ಮತ್ತು ಪರಿವೀಕ್ಷಣಾಧಿಕಾರಿಗಳು, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಕಲಬುರ್ಗಿ, ಶಿಕ್ಷಣ ಇಲಾಖೆ ಅಧಿಕಾರಿಗಳು, ತಾಲೂಕು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳು, ಪೊಲೀಸ್ ಇಲಾಖೆ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
40 ಗ್ರಾಮಗಳಿಂದ ಸುಮಾರು 100ಕ್ಕೂ ಹೆಚ್ಚಿನ ಮಕ್ಕಳು ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ಗ್ರಾಮ, ಶಾಲೆಯಲ್ಲಿ ಸಮಸ್ಯೆಗಳನ್ನು ಆಯೋಗದ ಮುಂದೆ ವ್ಯಕ್ತಪಡಿಸಿದ್ದರು. ಶ್ರೀಮತಿ. ಸರಬಾಯಿ ದೊಡ್ಡಿ ಸಂಯೋಜಕರು ಕಾರ್ಯಕ್ರಮವನ್ನು ನಿರೂಪಿಸಿ, ಶ್ರೀ. ಸಂಪತ್ ಕಟ್ಟಿ ಸ್ವಾಗತಿಸಿ, ಶ್ರೀ ಶಶಿಕುಮಾರ್ ಇವರು ವಂದಿಸಿದರು.