ಅಂಬೇಡ್ಕರ್ ಅವರನ್ನು ಸಂವಿಧಾನ ಶಿಲ್ಪಿಗೆ ಸೀಮಿತಗೊಳಿಸಬಾರದು: ನ್ಯಾಯಮೂರ್ತಿ ಪ್ರಸನ್ನ ಬಿ. ವರಾಲೆ.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

“ಸರಸ್ವತಿ ಕಾನೂನು ಕಾಲೇಜಿನ ವಜ್ರ ಮಹೋತ್ಸವಕ್ಕೆ ಚಾಲನೆ, ಎಲ್‌ಎಲ್‌ಎಂ ಕೋರ್ಸ್ ಆರಂಭ”

ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರನ್ನು ಕೇವಲ ಸಂವಿಧಾನದ ಶಿಲ್ಪಿಯೆಂದು ಮಾತ್ರ ಕರೆಯುವುದು ಆ ಮಹಾನ್ ವ್ಯಕ್ತಿಗೆ ಮಾಡುವ ದೊಡ್ಡ ಅನ್ಯಾಯವಾಗುತ್ತದೆ ಅಂಬೇಡ್ಕರ್ ಅವರು ಕೇವಲ ಸಂವಿಧಾನ ರಚನೆ ಕಾರರಷ್ಟೇ ಅಲ್ಲದೆ, ಒಬ್ಬ ಶ್ರೇಷ್ಠ ಸಮಾಜ ಸುಧಾರಕರು, ದಕ್ಷ ದೂರದರ್ಶಿ ಮತ್ತು ರಾಜಕೀಯ ತತ್ವಜ್ಞಾನಿ ಯಾಗಿದ್ದರು ಎಂದು ಸರ್ವೋಚ್ಛ ನ್ಯಾಯಾಲಯದ ನ್ಯಾಯಾಮೂರ್ತಿಗಳಾದ ಪ್ರಸನ್ನ ಬಾಲಚಂದ್ರ ವರಾಲೆ ತಿಳಿಸಿದರು.

ಚಿತ್ರದುರ್ಗ ನಗರದಲ್ಲಿನ ಸರಸ್ವತಿ ವಿದ್ಯಾ ಸಂಸ್ಥೆಯ ಅಡಿಯಲ್ಲಿ ನಡೆಯುತ್ತಿರುವ ಸರಸ್ವತಿ ಕಾನೂನು ಕಾಲೇಜಿನ 60 ವರ್ಷದ ವಜ್ರ ಮಹೋತ್ಸವದ ಸಂಭ್ರಮಾಚರಣೆಯ ಉದ್ಘಾಟನೆ ಹಾಗೂ ಸಂವಿಧಾನ ಕಾನೂನು ವಿಷಯದಲ್ಲಿ ಸ್ವಾತಕೋತ್ತರ ಕಾನೂನು ಪದವಿ ಕೋರ್ಸು (ಎಲ್.ಎಲ್.ಎಂ.)ಗೆ ಚಾಲನೆ ನೀಡಿ ಮಾತನಾಡಿದ ಅವರು, ಭಾರತೀಯ ಸಂವಿಧಾನದ ನಿಜವಾದ ಶಕ್ತಿ ಮತ್ತು ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಕೊಡುಗೆಯಿಂದಾಗಿ ಇಂದು ಸಮಾಜದ ವಿವಿಧ ಹಿನ್ನೆಲೆಗಳಿಂದ, ಅಂಚಿನಲ್ಲಿರುವ ವರ್ಗಗಳಿಂದ ಹಾಗೂ ಪರಿಶಿಷ್ಟ ಜಾತಿಗಳಿಂದ ಬಂದಿರುವ ನಾವೆಲ್ಲರೂ ಒಂದೆಡೆ ಸೇರಲು ಸಾಧ್ಯವಾಗಿದೆ. ಬಾಬಾಸಾಹೇಬ್ ಅಂಬೇಡ್ಕರ್ ಅವರನ್ನು ಕೇವಲ ಸಂವಿಧಾನದ ಶಿಲ್ಪಿಯೆಂದು ಸೀಮಿತಗೊಳಿಸಬಾರದು ಅವರು ಒಬ್ಬ ಸಾಮಾಜಿಕ ಸುಧಾರಕರು, ದಕ್ಷ ದೂರದರ್ಶಿ ಮತ್ತು ರಾಜಕೀಯ ತತ್ವಜ್ಞಾನಿ ಹೌದು ತಮ್ಮ ಜೀವನದಲ್ಲಿ ಅಷ್ಟು ಹತ್ತಾರು ಪಾತ್ರಗಳನ್ನು ನಿರ್ವಹಿಸಿರುವ ಮತ್ತೊಬ್ಬರನ್ನು ಕಲ್ಪಿಸಿಕೊಳ್ಳುವುದೂ ಕಷ್ಟ ಸಾಧ್ಯ ಎಂದು ಅಭಿಪ್ರಾಯಪಟ್ಟರು.

ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಅಪಾರ ಕೊಡುಗೆಗಳು ಮತ್ತು ಅವರ ದೂರದೃಷ್ಟಿಯ ಚಿಂತನೆಗಳ ಬಗ್ಗೆ ಸಮಾಜದಲ್ಲಿ ಇನ್ನೂ ಸಂಪೂರ್ಣವಾಗಿ ತಿಳಿಯಬೇಕಾದದ್ದು ಬಹಳಷ್ಟಿದೆ. ಅವರನ್ನು ಕೇವಲ ಒಂದು ಗಡಿಗೆಗೆ ಸೀಮಿತಗೊಳಿಸದೆ, ಅವರ ಬಹುಮುಖ ವ್ಯಕ್ತಿತ್ವ ಮತ್ತು ಸಮಾಜ ಸುಧಾರಣೆಯ ಹಾದಿಯನ್ನು ಪ್ರತಿಯೊಬ್ಬರೂ ಅರ್ಥಮಾಡಿಕೊಳ್ಳಬೇಕು ಎಂದ ನ್ಯಾಯಾಧೀಶರು, ತಾವೂ ಕೂಡ ಕಾನೂನು ಕಾಲೇಜಿನಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿ ಸ್ವಲ್ಪ ಕಾಲ ಸೇವೆ ಸಲ್ಲಿಸಿರುವುದಾಗಿ ತಿಳಿಸಿದ ಅವರು. ಹೊಸ ಕಾಲಮಾನಕ್ಕೆ ತಕ್ಕಂತೆ ಭಾರತೀಯ ನ್ಯಾಯ ಸಂಹಿತೆ ಹಾಗೂ ಅದಕ್ಕೆ ಸಂಬಂಧಿಸಿದ ಕಾಯ್ದೆಗಳು ಜಾರಿಗೆ ಬಂದಿದ್ದು, ಕೃತಕ ಬುದ್ಧಿಮತ್ತೆ ಮತ್ತು ದತ್ತಾಂಶ ರಕ್ಷಣೆಯಂತಹ ಹೊಸ ಸವಾಲುಗಳನ್ನು ಇದು ಎದುರಿಸಲಿದೆ ಸುಪ್ರೀಂ ಕೋರ್ಟ್ ತನ್ನ ತೀರ್ಪುಗಳನ್ನು ಕನ್ನಡ ಸೇರಿದಂತೆ ಪ್ರಾದೇಶಿಕ ಭಾಷೆಗಳಲ್ಲಿಯೂ ಲಭ್ಯವಾಗುವಂತೆ ಮಾಡುತ್ತಿದ್ದು, ಇದರಿಂದ ಸಂವಿಧಾನದ ಆಶಯಗಳು ದೇಶದ ಮೂಲೆ ಮೂಲೆಗೂ ತಲುಪಲಿವೆ ಎಂದರು.

ಕಾನೂನು ವೃತ್ತಿಯು ಅತ್ಯಂತ ಪವಿತ್ರವಾದ ಸಾರ್ವಜನಿಕ ಸೇವೆಯಾಗಿದ್ದು, ಅದನ್ನು ಕೇವಲ ವ್ಯಾಪಾರ ಅಥವಾ ಲಾಭ-ನಷ್ಟದ ದೃಷ್ಟಿಕೋನದಿಂದ ನೋಡಬಾರದು ಸಂವಿಧಾನದ ಮೌಲ್ಯಗಳನ್ನು ಎತ್ತಿಹಿಡಿಯುವ ಮೂಲಕ ಕಾನೂನು ವಿದ್ಯಾರ್ಥಿಗಳು ಮತ್ತು ಯುವ ವಕೀಲರು ಸಮಾಜದ ಹಿತಕ್ಕಾಗಿ ಶ್ರಮಿಸಬೇಕು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಗಳ ಮೂಲಕ ಆರ್ಟಿಕಲ್ 39 ಎ ನ ಭರವಸೆಯನ್ನು ಪ್ರತಿ ತಾಲೂಕಿಗೂ ಕೊಂಡೊಯ್ಯುವ ಅಗತ್ಯವಿದ್ದು, ಬೋಧನಾ ವೃತ್ತಿಯೇ ಒಂದು ದೊಡ್ಡ ಸಾರ್ವಜನಿಕ ಸೇವೆಯಾಗಿದೆ ಡಾ. ಬಿ.ಆರ್. ಅಂಬೇಡ್ಕರ್ ಅವರ ಸಂದೇಶದಂತೆ ಶಿಕ್ಷಣವೇ ಮೊದಲ ಆದ್ಯತೆಯಾಗಬೇಕು, ಏಕೆಂದರೆ ಶಿಕ್ಷಣವು ವ್ಯಕ್ತಿಗೆ ಹಕ್ಕುಗಳ ಅರಿವು ಮೂಡಿಸಿ ಅವುಗಳನ್ನು ಪಡೆಯುವ ಧೈರ್ಯವನ್ನು ನೀಡುತ್ತದೆ ಸರ್ಕಾರದ ಕೆಲಸ ದೇವರ ಕೆಲಸ ಎಂಬಂತೆ, ಪ್ರತಿಯೊಬ್ಬ ವಕೀಲರು ಮತ್ತು ನ್ಯಾಯಾಧೀಶರ ಕೆಲಸದಲ್ಲಿ ನ್ಯಾಯ ಎಂಬುದು ಪವಿತ್ರ ಧರ್ಮವಾಗಿದೆ. ವೃತ್ತಿಯನ್ನು ಪ್ರೀತಿಸಿ ಕಠಿಣ ಪರಿಶ್ರಮದಿಂದ ಮುನ್ನಡೆಯಬೇಕೇ ವಿನಃ, ಅದನ್ನು ಬರೀ ವ್ಯಾಪಾರಿಕರಣಗೊಳಿಸಬಾರದು ಎಂದು ಯುವ ವಕೀಲರಿಗೆ ಕಿವಿಮಾತು ಹೇಳಿ ಕಾನೂನು ವೃತ್ತಿಯನ್ನು ಯಾವುದೇ ಕಾರಣಕ್ಕೂ ವ್ಯಾಪಾರವಾಗಿ ನೋಡದೆ, ಅದಕ್ಕಿರುವ ನಿಯಮ ಹಾಗೂ ಪಾವಿತ್ರ್ಯತೆಯನ್ನು ಕಾಪಾಡಿಕೊಳ್ಳಬೇಕು. ಯುವ ವಕೀಲರು ಕಠಿಣ ಪರಿಶ್ರಮ, ಪ್ರಾಮಾಣಿಕತೆ ಮತ್ತು ಸಮಾಜಮುಖಿ ಚಿಂತನೆಯೊಂದಿಗೆ ಮುನ್ನಡೆದು, ಸಂವಿಧಾನದ ಆಶಯಗಳನ್ನು ಈಡೇರಿಸಲು ಶ್ರಮಿಸಬೇಕು ಎಂದು ಕರೆ ನೀಡಿದರು.

ಉಚ್ಛ ನ್ಯಾಯಾಲಯದ ನ್ಯಾಯಾಮೂರ್ತಿಗಳಾದ ಸುನಿಲ್‍ದತ್ ಯಾದವ್ ಮಾತನಾಡಿ, ಶಿಕ್ಷಣವು ಸಮಾಜ ವನ್ನು ಪರಿವರ್ತಿಸುವ ಏಕೈಕ ಶಕ್ತಿಯಾಗಿದ್ದು, ಸಣ್ಣ ಸಮುದಾಯಗಳಿಂದ ಬರುವ ವಿದ್ಯಾರ್ಥಿಗಳು ಕೂಡ ಉನ್ನತ ಹುದ್ದೆಗಳನ್ನು ಅಲಂಕರಿಸಬಹುದು. ಕಾನೂನು ವಿದ್ಯಾರ್ಥಿಗಳು ಮತ್ತು ವಕೀಲರು ಕೇವಲ ಹಣ ಸಂಪಾದನೆಯನ್ನು ದೃಷ್ಟಿಯಲ್ಲಿಟ್ಟುಕೊಳ್ಳದೆ, ಬಡವರು ಹಾಗೂ ಅಂಚಿನಲ್ಲಿರುವ ಜನರ ಪರವಾಗಿ ನಿಲ್ಲಬೇಕು ಮತ್ತು ಡಾ. ಬಿ.ಆರ್. ಅಂಬೇಡ್ಕರ್ ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಶಿಕ್ಷಣವು ಸಮಾಜದಲ್ಲಿ ದೊಡ್ಡ ಬದಲಾವಣೆ ತರಬಲ್ಲದು ಹಿಂದೆ ಅವಕಾಶಗಳಿಂದ ವಂಚಿತರಾದವರು ಸಹ ಉನ್ನತ ಶಿಕ್ಷಣದ ಮೂಲಕ ಉನ್ನತ ಸ್ಥಾನಗಳನ್ನು ತಲುಪಬಹುದು ಕೇವಲ ಕಲಿಯುವುದಷ್ಟೇ ಸಾಕಾಗುವುದಿಲ್ಲ, ಸಮಾಜದಲ್ಲಿ ಅವಕಾಶ ವಂಚಿತರು, ಬಡವರು ಮತ್ತು ಕಷ್ಟದಲ್ಲಿರುವವರ ಬಗ್ಗೆ ಸ್ಪಂದಿಸುವ ಹೃದಯವಂತಿಕೆ ವಕೀಲರಿಗೆ ಇರಬೇಕು ಯಶಸ್ಸು ಎನ್ನುವುದು ಕೇವಲ ಹಣಕಾಸಿನ ಸಂಪಾದನೆಯಲ್ಲಿ ಅಲ್ಲ, ಬದಲಿಗೆ ನಾವು ನಡೆಸುವ ಗುಣಮಟ್ಟದ ಜೀವನ ಮತ್ತು ಸಮಾಜಕ್ಕೆ ನೀಡುವ ಕೊಡುಗೆಯಲ್ಲಿದೆ ವಿದ್ಯಾರ್ಥಿಗಳು ಕಾಲೇಜಿನಲ್ಲಿ ಕಲಿತ ಜ್ಞಾನಕ್ಕೆ ಮಾತ್ರ ಸೀಮಿತಗೊಳ್ಳದೆ, ನ್ಯಾಯಾಲಯಗಳ ಕಾರ್ಯವೈಖರಿ, ವಕೀಲರ ಕಚೇರಿಗಳ ಕೆಲಸಗಳು ಹಾಗೂ ಜಗತ್ತಿನ ನೈಜ ಸ್ಥಿತಿಯನ್ನು ಅರಿಯಬೇಕು ದಾಖಲೆಗಳ ರಚನೆ ಮತ್ತು ವಾದ ಮಂಡನೆಯ ಕೌಶಲ್ಯಗಳನ್ನು ಕರಗತ ಮಾಡಿಕೊಳ್ಳುವುದು ಅತ್ಯಾವಶ್ಯಕ ಎಂದು ತಿಳಿಸಿದರು.

ಜಿಲ್ಲಾ ನ್ಯಾಯಾಲಯಗಳಲ್ಲಿಯೂ ವಕೀಲರಿಗೆ ಹೊಸ ಅವಕಾಶಗಳು ಲಭ್ಯವಿವೃದ್ಧುತ್ತಿದ್ದು, ಯುವ ವಕೀಲರು ಕಠಿಣ ಪರಿಶ್ರಮ ಮತ್ತು ಮುತುವರ್ಜಿಯಿಂದ ಇದರ ಪ್ರಯೋಜನ ಪಡೆದುಕೊಳ್ಳಬಹುದು ಅಂಬೇಡ್ಕರ್ ಅವರನ್ನು ಗೌರವಿಸಲು ಕಾರಣ, ಅವರು ಸಾಧಿಸಿದ ಸಾಧನೆ ಮಾತ್ರವಲ್ಲ, ಬದಲಿಗೆ ಅವರು ಬಂದ ಹಿನ್ನೆಲೆ ಮತ್ತು ಎದುರಿಸಿದ ಕಷ್ಟಗಳೂ ಹೌದು ಅತ್ಯಂತ ಹಿಂದುಳಿದ ಹಿನ್ನೆಲೆಯಿಂದ ಬಂದು ದೇಶದ ಸಂವಿಧಾನ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ ಅಂಬೇಡ್ಕರ್ ಅವರು ಎಲ್ಲರಿಗೂ ಮಾದರಿಯಾಗಿದ್ದಾರೆ ಎಂದು ನುಡಿದ ಅವರು. ದೇಶದ ಪ್ರಜಾಪ್ರಭುತ್ವದ ಯಶಸ್ಸಿಗೆ ಉತ್ತಮ ಕಾನೂನುಗಳು, ಉತ್ತಮ ಸಂಸ್ಥೆಗಳು ಮತ್ತು ಉತ್ತಮ ವಕೀಲರು ಅತ್ಯಾವಶ್ಯಕವಾಗಿದ್ದಾರೆ. ಕಾನೂನು ವೃತ್ತಿಯಲ್ಲಿ ತೊಡಗಿಸಿಕೊಳ್ಳುವವರು ಸಮಾಜ ಮುಖಿಯಾಗಿ ಚಿಂತಿಸಿ, ಬಡವರ ಪರವಾಗಿ ನಿಲ್ಲುವ ಮೂಲಕ ದೇಶದ ಪ್ರಜಾಪ್ರಭುತ್ವವನ್ನು ಇನ್ನಷ್ಟು ಗಟ್ಟಿಗೊಳಿಸಬೇಕು ಎಂದು ಕರೆ ನೀಡಿದರು.

ಉಚ್ಛ ನ್ಯಾಯಾಲಯದ ನ್ಯಾಯಾಮೂರ್ತಿಗಳಾದ ಬಸವರಾಜ್ ಮಾತನಾಡಿ, ಗ್ರಾಮೀಣ ಪ್ರದೇಶದ ಎಲ್ಲಾ ಕಾನೂನು ವಿದ್ಯಾರ್ಥಿಗಳು ಮುಂದೆ ಕಾನೂನು ಕ್ಷೇತ್ರದಲ್ಲಿ ನ್ಯಾಯಾಧೀಶರಾಗಲು ಅಥವಾ ಪ್ರಾಸಿಕ್ಯೂಟರ್ ಆಗಲು ಈ ಸಂವಿಧಾನವೇ ಉತ್ತಮ ಅವಕಾಶ ಕಲ್ಪಿಸಿದೆ. ತಮ್ಮ ವೃತ್ತಿಜೀವನಕ್ಕೆ ಮಾರ್ಗದರ್ಶಕರಾಗಿದ್ದ ಹಿರಿಯರಾದ ಸಿ. ಅಬ್ದುಲ್ ರಹೀಮ್ ಅವರನ್ನು ಸ್ಮರಿಸಿಕೊಂಡು ಅವರ ನೆನಪಿಗಾಗಿ `ಶ್ರೀ ಅಬ್ದುಲ್ ರಹೀಮ್ ಮೆಮೋರಿಯಲ್ ಚಾರಿಟಬಲ್ ಟ್ರಸ್ಟ್'ನ್ನು ಅಕ್ಟೋಬರ್ 31, 2026ರಂದು ಪ್ರಾರಂಭಿಸಲಾಗುತ್ತಿದೆ ಈ ಟ್ರಸ್ಟ್ ಮೂಲಕ ಕಾನೂನು ಉಪನ್ಯಾಸಗಳನ್ನು ಏರ್ಪಡಿಸುವುದು, ಕಾನೂನು ಸಾಕ್ಷರತಾ ಶಿಬಿರಗಳನ್ನು ನಡೆಸುವುದು ಹಾಗೂ ಬಡ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವುದು ಇದರ ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದರು.

ಉಚ್ಛ ನ್ಯಾಯಾಲಯದ ನ್ಯಾಯಾಮೂರ್ತಿಗಳಾದ ವೆಂಕಟೇಶ್ ನಾಯ್ಕ್ ಮಾತನಾಡಿ, ಕಾನೂನು ಶಿಕ್ಷಣ ಕ್ಷೇತ್ರದಲ್ಲಿ ಆರು ದಶಕಗಳನ್ನು ಪೂರೈಸಿರುವ ಈ ಸಂಸ್ಥೆಯು, ಶೈಕ್ಷಣಿಕ ಶ್ರೇಷ್ಠತೆ ಹಾಗೂ ಕಾನೂನು ಸಮುದಾಯಕ್ಕೆ ನೀಡಿರುವ ಕೊಡುಗೆಯು ಸಾರ್ಥಕವಾಗಿದೆ. ಸರಸ್ವತಿ ಲಾ ಕಾಲೇಜು ಕಾನೂನು ಶಿಕ್ಷಣದಲ್ಲಿ 60 ವರ್ಷಗಳನ್ನು ಪೂರೈಸಿರುವುದು ಸಂಸ್ಥೆಯ ಬದ್ಧತೆ ಮತ್ತು ಶೈಕ್ಷಣಿಕ ಸಾಧನೆಯನ್ನು ಬಿಂಬಿಸುತ್ತದೆ ಮಾಜಿ ಸಂಸದರಾದ ಹೆಚ್. ಹನುಮಂತಪ್ಪ ಅವರು ಸರಸ್ವತಿ ಲಾ ಕಾಲೇಜನ್ನು ಮಧ್ಯ ಕರ್ನಾಟಕದ ಅತ್ಯುತ್ತಮ ಕಾನೂನು ಕಾಲೇಜಾಗಿ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂದರು.

ಕಾನೂನು ವೃತ್ತಿಯು ಕೇವಲ ಬದುಕು ಕಟ್ಟಿಕೊಳ್ಳುವ ಸಾಧನವಲ್ಲ; ಬದಲಾಗಿ ಸಮಾಜವನ್ನು ಅರ್ಥಮಾಡಿ ಕೊಳ್ಳುವ, ಹಕ್ಕುಗಳನ್ನು ರಕ್ಷಿಸುವ, ವಿವಾದಗಳನ್ನು ಬಗೆಹರಿಸುವ ಮತ್ತು ಸಂವಿಧಾನ ಹಾಗೂ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಗಟ್ಟಿಗೊಳಿಸುವ ಮಹತ್ವದ ಜವಾಬ್ದಾರಿಯಾಗಿದೆ ಯಶಸ್ಸಿಗೆ ಯಾವುದೇ ಶಾರ್ಟ್‍ಕಟ್ ಇಲ್ಲದಿರುವುದರಿಂದ, ವಿದ್ಯಾರ್ಥಿಗಳು ಪ್ರತಿದಿನ ಕಠಿಣ ಪರಿಶ್ರಮ ಮತ್ತು ಆಳವಾದ ಅಧ್ಯಯನವನ್ನು ರೂಢಿಸಿಕೊಳ್ಳಬೇಕು ಕೇವಲ ಪದವಿ ಪಡೆದು ವಕೀಲರಾಗುವುದಷ್ಟೇ ಅಲ್ಲದೆ, ಸಮಾಜಕ್ಕೆ ಅಗತ್ಯವಿರುವ ಧೈರ್ಯ, ಸಮಗ್ರತೆ ಮತ್ತು ಕಾನೂನು ಜ್ಞಾನವನ್ನು ವಿದ್ಯಾರ್ಥಿಗಳು ಮೈಗೂಡಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಲಾಯಿತು. ಕಾನೂನು ಶಿಕ್ಷಣವು ಕೇವಲ ಪರೀಕ್ಷೆ ಪಾಸ್ ಮಾಡಿ ಡಿಗ್ರಿ ಪಡೆಯುವದಕ್ಕೆ ಸೀಮಿತವಾಗಿರದೆ, ಸಂವಿಧಾನದ ತತ್ತ್ವಗಳು, ಅಪರಾಧ ಕಾನೂನು, ಒಪ್ಪಂದಗಳು, ಆಸ್ತಿ ಮತ್ತು ಕೌಟುಂಬಿಕ ಕಾನೂನುಗಳ ಆಳವಾದ ತಿಳುವಳಿಕೆ ಯನ್ನು ಒಳಗೊಂಡಿರಬೇಕು. ವಿದ್ಯಾರ್ಥಿಗಳು ಪ್ರತಿದಿನ ತಮ್ಮನ್ನು ತಾವು ಸುಧಾರಿಸಿಕೊಳ್ಳುತ್ತಾ, ಕಠಿಣ ಪರಿಶ್ರಮ ಮತ್ತು ಪ್ರಾಮಾಣಿಕತೆಯಿಂದ ಮುನ್ನಡೆದರೆ ಮಾತ್ರ ಯಶಸ್ಸು ಸಾಧಿಸಲು ಸಾಧ್ಯ ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಚಿತ್ರದುರ್ಗ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾಗಿ ಜಿ.ಡಿ. ಮಹಾವರ್‍ಕರ್, ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾನಿಲಯದ ಉಪಕುಲಪತಿಗಳಾದ ಪ್ರೊ. (ಡಾ.) ರತ್ನ. ಆರ್ ಭರಮಗೌಡರ್, ಸರಸ್ವತಿ ವಿದ್ಯಾಸಂಸ್ಥೆಯ ಉಪಾಧ್ಯಕ್ಷರಾದ ಟಿ.ಎಚ್.ಬಸವರಾಜು ಭಾಗವಹಿಸಿದ್ದರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸರಸ್ವತಿ ವಿದ್ಯಾಸಂಸ್ಥೆಯ ಅಧ್ಯಕ್ಷರು ಹಾಗೂ ಹಿರಿಯ ವಕೀಲರಾದ ಫಾತ್ಯರಾಜನ್ ವಹಿಸಿದ್ದರು. ಪೂರ್ಣ ಚಂದ್ರ ತೇಜಸ್ವಿ ಪ್ರಾರ್ಥಿಸಿದರೆ ವೀಣಾ, ಕವನ ತಂಡ ನಾಡಗೀತೆಯನ್ನು ಹಾಡಿತು, ಸರಸ್ವತಿ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಶ್ರೀಮತಿ ಡಿ.ಕೆ.ಶೀಲ ಸರಸ್ವತಿ ವಿದ್ಯಾ ಸಂಸ್ಥೆ ನಡೆದು ಬಂದ ದಾರಿಯನ್ನು ತಿಳಿಸಿದರೆ ಸರಸ್ವತಿ ಕಾನೂನು ಕಾಲೇಜಿನ ಪ್ರಾಂಶುಪಾಲರಾದ ಪ್ರೊ (ಡಾ.) ಎಂ.ಎಸ್. ಸುಧಾದೇವಿ ಸ್ವಾಗತಿಸಿದರು. ಸಂದೇಶ ವಂದಿಸಿದರು, ಶ್ರೀಮತಿ ಹರ್ಷ ಹಾಗೂ ಶ್ರೀಮತಿ ಅಬೀನೇತ್ರಿ ಪಟುವರ್ಧನ್ ಕಾರ್ಯಕ್ರಮ ನಿರೂಪಿಸಿದರು.

ಇದೇ ಸಂದರ್ಭದಲ್ಲಿ ಸರಸ್ವತಿ ಕಾನೂನು ಕಾಲೇಜಿನಲ್ಲಿ ಅಭ್ಯಾಸ ಮಾಡಿ ಈಗ ರಾಜ್ಯದ ವಿವಿಧ ನ್ಯಾಯಾಲಯಗಳಲ್ಲಿ ನ್ಯಾಯಾಧೀಶರು ಪಬ್ಲಿಕ್ ಪ್ರಾಸಿಕೂಟ್ಯರ್ ಆಗಿ ಕೆಲಸ ನಿರ್ವಹಿಸುತ್ತಿರುವ ಈರಣ್ಣ, ರಾಜಕುಮಾರ್, ಶ್ರೀಮತಿ ಸ್ಮಿತಾ, ಶ್ರೀಮತಿ ಸುಮಾ, ಮಧು, ಶ್ರೀಮತಿ ರಾಧಾ, ರಾಜು, ಅಜಿತ್ ಮೊಹಮ್ಮದ್ ಷಮಾಶ್ರೀ ಆಲಿ ಹಾಗೂ 2023-24ನೇ ಸಾಲಿನಲ್ಲಿ 3ನೇ ರ್ಯಾಂಕ್ ಪಡೆದ ಕಾಲೇಜಿನ ಸ್ವಾತಿಯವರನ್ನು ಗೌರವಿಸಲಾಯಿತು.

ನಮ್ಮ ಸಮಗ್ರ ಸುದ್ದಿಗಳಿಗಾಗಿ ಕೆಳಗಿನ Social Media ಪುಟಗಳಿಗೆ Follow / Subscribe ಮಾಡಿ.

🟢 WhatsApp Group

Join WhatsApp Group

🔵 Facebook Page

Follow Facebook Page

⚫ Twitter / X

Follow on X (Twitter)

🟣 Threads

Follow on Threads

🟠 Instagram

Follow on Instagram

🔵 Telegram

Join Telegram Channel

🟢 WhatsApp Channel

Follow WhatsApp Channel

📰 ಸಮಗ್ರ ಸುದ್ದಿ

ನಿಖರತೆಗೆ ಮತ್ತೊಂದು ಹೆಸರು

📢 ಸುದ್ದಿ • ಮಾಹಿತಿ • ಶಿಕ್ಷಣ • ಉದ್ಯೋಗ • ಕರ್ನಾಟಕ • ದೇಶ • ಜಗತ್ತು

Leave a Reply

Your email address will not be published. Required fields are marked *