ಚಿತ್ರದುರ್ಗ|ಡಾ. ನಾ.ಡಿಸೋಜ ನುಡಿನಮನ ಕಾರ್ಯಕ್ರಮ: ಭಾರತೀಯ ಯೋಗ ಶಿಕ್ಷಣ ಸಂಸ್ಥೆಯಿಂದ ಆಯೋಜನೆ.

ಚಿತ್ರದುರ್ಗ: ಜ.12 : ಕನ್ನಡ ಸಾಹಿತ್ಯ ಲೋಕದಲ್ಲಿ ಅಜರಾಮರ ಸ್ಥಾನ ಪಡೆದಿರುವ ಡಾ. ನಾ. ಡಿಸೋಜ್ ಅವರು ತಮ್ಮ ಸರಳತೆ, ಮಾನವೀಯ ಮೌಲ್ಯಗಳು ಮತ್ತು ಪ್ರಕೃತಿ ಪ್ರೇಮದ ಮೂಲಕ ಸಾಹಿತ್ಯ ಪ್ರಿಯರ ಹೃದಯ ಗೆದ್ದಿದ್ದಾರೆ. ಅವರ ಕೃತಿಗಳು ಕೇವಲ ಓದುಗರನ್ನು ಮನೋರಂಜಿಸುವುದರ ಜೊತೆಗೆ ಸಮಾಜದ ಬಗೆಗಿನ ಆಳವಾದ ಚಿಂತನೆಗೆ ಸದಾಕಾಲವೂ ಪ್ರೇರೇಪಿಸುತ್ತವೆ ಎಂದು ಕನ್ನಡ ಉಪನ್ಯಾಸಕಿ ಹಾಗೂ ಸಾಹಿತಿ ಶ್ರೀಮತಿ ಸರೀನಾ ಅಭಿಪ್ರಾಯ ಪಟ್ಟಿದ್ದಾರೆ.

ಇತ್ತೀಚೆಗೆ ಅಗಲಿದ ಖ್ಯಾತ ಸಾಹಿತಿ ಹಾಗೂ ಕಾದಂಬರಿಕಾರ ಡಾ.ನಾ.ಡಿಸೋಜ ಕುರಿತು ಭಾರತೀಯ ಯೋಗ ಶಿಕ್ಷಣ ಸಂಸ್ಥೆ ಹಾಗೂ ಚಿನ್ಮೂಲಾದ್ರಿ ಸಾಹಿತ್ಯ ವೇದಿಕೆ ಚಿತ್ರದುರ್ಗ ಇವರು ಸಂಯುಕ್ತವಾಗಿ ನಗರದ ಕೋಟೆ ಮುಂಭಾಗದ ಮಹಾರಾಣಿ ಕಾಲೇಜಿನ ಸಭಾ ಭವನದಲ್ಲಿ ಆಯೋಜಿಸಿದ್ದ ನುಡಿನಮನ ಹಾಗೂ ಕಾವ್ಯವಾಚನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಡಾ.ನಾ.ಡಿಸೋಜ ಅವರ ಸಾಹಿತ್ಯ ಮತ್ತು ವ್ಯಕ್ತಿತ್ವ ಕುರಿತು ಮಾತನಾಡುತ್ತಾ ಡಾ. ಡಿಸೋಜ್ ಅವರು ಪ್ರಕೃತಿಯನ್ನು ಅತ್ಯಂತ ಆಳವಾಗಿ ಪ್ರೀತಿಸುತ್ತಿದ್ದರು ಎಂಬುದು ಅವರ ಅನೇಕ ಕೃತಿಗಳಲ್ಲಿ ಪ್ರಕೃತಿಯ ಸೌಂದರ್ಯ ಮತ್ತು ಮಹತ್ವವನ್ನು ವರ್ಣಿಸಿರುವುದು ಕಾಣಬಹುದಾಗಿದೆ. ಹಾಗೆಯೇ ಅವರು ಮಕ್ಕಳಿಗಾಗಿ ಅನೇಕ ಕಥೆಗಳನ್ನು ಬರೆದಿದ್ದು, ಆ ಮೂಲಕ ಮಕ್ಕಳಲ್ಲಿ ಓದುವ ಅಭ್ಯಾಸವನ್ನು ಬೆಳೆಸಲು ಸಹಾಯಕವಾಗಿವೆ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯೆ ಹಾಗೂ ಬರಹಗಾರ್ತಿ ಶ್ರೀಮತಿ ದಯಾವತಿ ಪುತ್ತೂರ್ಕರ್ ಮಾತನಾಡಿ ಡಾ. ಡಿಸೋಜ್ ಅವರು ತಮ್ಮ ಸಾಧನೆಗಳ ಹೊರತಾಗಿಯೂ ಅತ್ಯಂತ ಸರಳ ಜೀವನ ನಡೆಸುತ್ತಿದ್ದರು. ಅವರ ಸರಳತೆ ಅವರ ಬರಹಗಳಲ್ಲಿಯೂ ಪ್ರತಿಫಲಿಸುತ್ತದೆ. ಅವರ ಕಥೆಗಳು ಮತ್ತು ಕಾದಂಬರಿಗಳು ಜನಸಾಮಾನ್ಯರ ಜೀವನವನ್ನು ಹತ್ತಿರದಿಂದ ಬಿಂಬಿಸುತ್ತವೆ ಎಂದು ಹೇಳಿದರು.

ಕಾರ್ಯಕ್ರಮ ಆಯೋಜಿಸಿ ನಿರೂಪಣೆ ಮಾಡಿದ ಭಾರತೀಯ ಯೋಗ ಶಿಕ್ಷಣ ಸಂಸ್ಥೆ ಅಧ್ಯಕ್ಷ ರವಿ ಕೆ.ಅಂಬೇಕರ್ ಡಾ. ನಾ. ಡಿಸೋಜ ಅವರಂತಹ ಸಾಹಿತ್ಯ ದಿಗ್ಗಜರನ್ನು ನೆನಪಿಸಿಕೊಳ್ಳುವುದು ಮತ್ತು ಅವರ ಕೃತಿಗಳ ಬಗ್ಗೆ ಅರಿಯುವುದು ನಿಜಕ್ಕೂ ಪುಣ್ಯದ ಕೆಲಸ ಡಿಸೋಜರವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ಮತ್ತು ಅವರು ಪ್ರತಿಪಾದಿಸಿದ ಪರಿಸರ ಸಂರಕ್ಷಣೆ, ಸಾಮಾಜಿಕ ನ್ಯಾಯ ಮತ್ತು ಮಾನವೀಯ ಮೌಲ್ಯಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲು ಪ್ರಯತ್ನಿಸಿದರೆ ನಮ್ಮ ಕಾರ್ಯಕ್ರಮ ಸಾರ್ಥಕಗೊಳ್ಳುತ್ತದೆ ಎಂದು ಹೇಳಿದರು.

ಇದೇ ಸಂಧರ್ಭದಲ್ಲಿ ಕವಿಗಳಾದ ಶಿವರುದ್ರಪ್ಪ ಪಂಡ್ರಳ್ಳಿ,ಉಷಾರಾಣಿ, ಕು.ಸೌಮ್ಯ ನವೀನ್ ಮಸ್ಕಲ್,ನವೀನ್ ಸಜ್ಜನ್, ಪ್ರವೀಣ್ ಬೆಳಗೆರೆ,ರವೀಶ್,ಸತೀಶ್ ಕುಮಾರ್ ಡಾ.ನಾ.ಡಿಸೋಜ ಅವರನ್ನು ಕುರಿತು ತಮ್ಮ ಕವನಗಳನ್ನು ವಾಚನ ಮಾಡಿದರು. ಕಾರ್ಯಕ್ರಮದಲ್ಲಿ ಕೋಟೆ ವಾಯುವಿಹಾರಿಗಳ ಸಂಘದ ಅಧ್ಯಕ್ಷ ಆರ್.ಸತ್ಯಣ್, ಉಪನ್ಯಾಸಕ ಕೆಂಚವೀರಪ್ಪ, ನಿವೃತ್ತ ಶಿಕ್ಷಣಾಧಿಕಾರಿ ನಾಗರಾಜ್, ಪರಿಸರ ಪ್ರೇಮಿ ಮಲ್ಲಿಕಾರ್ಜುನಪ್ಪ, ನಿ.ಪೋಲಿಸ್ ಅಧಿಕಾರಿ ಮಲ್ಲಿಕಾರ್ಜುನಚಾರ್ ಯೋಗ ಶಿಕ್ಷಕಿಯರಾದ ಮಂಜುಳಾ, ವಸಂತಲಕ್ಷ್ಮಿ ಇನ್ನಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *