ಜಾತಿಪ್ರಮಾಣ ಪತ್ರ ವಿತರಣೆಗೆ ಇದ್ದ ಅಡ್ಡಿ ಆತಂಕ ದೂರ; ತಂತ್ರಾಂಶ ಕಾರ್ಯಾರಂಭ
ಮಾಜಿ ಸಚಿವ ಎಚ್.ಆಂಜನೇಯ ಹೇಳಿಕೆ
ಚಿತ್ರದುರ್ಗ:ನ.12
ಒಳಮೀಸಲಾತಿ ವಿಷಯದಲ್ಲಿ ಕೆಲವರು ಸುಳ್ಳು ಸುದ್ದಿ
ಹರಡಿಸುತ್ತಿದ್ದು, ಇದಕ್ಕೆಲ್ಲ ಸಿಎಂ ಸಿದ್ದರಾಮಯ್ಯ ತೆರೆ ಎಳೆದಿದ್ದಾರೆ ಎಂದು ಮಾಜಿ ಸಚಿವ ಎಚ್.ಆಂಜನೇಯ ಹೇಳಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಒಳಮೀಸಲಾತಿ ಬಳಿಕ ಜಾತಿಪ್ರಮಾಣ ಪತ್ರ ವಿತರಣೆಗೆ ಇದ್ದ ಅಡ್ಡಿ ಆತಂಕಗಳು ದೂರಗೊಂಡಿವೆ. ಈಗಾಗಲೇ ತಂತ್ರಾಂಶ ಕಾರ್ಯಾರಂಭಗೊಂಡಿದೆ ಎಂದರು.
ನಾನು ಆದಿಕರ್ನಾಟಕ ಜಾತಿಸೂಚಕ ಗುಂಪಿಗೆ ಸೇರಿದ್ದು ಮಾದಿಗ ಜಾತಿಯವನಾಗಿದ್ದು, ಈ ಸಂಬಂಧ ಹೊಳಲ್ಕೆರೆ ತಹಸೀಲ್ದಾರ್ ಅವರಿಂದ ಜಾತಿಪ್ರಮಾಣ ಪತ್ರ ಪಡೆದಿದ್ದೇನೆ. ಈ ಮೂಲಕ ಅಧಿಕೃತವಾಗಿ ಪ್ರಮಾಣ ಪತ್ರ ವಿತರಣೆ ಕಾರ್ಯ ಆರಂಭಗೊಂಡಿದೆ ಎಂದು ತಿಳಿಸಿದರು.
ಒಳಮೀಸಲಾತಿ ಜಾರಿ ಬಳಿಕ ಬಹುದೊಡ್ಡ ಸವಾಲು ನಮ್ಮ ಮುಂದಿದೆ.
ನುಸುಳುಕೋರರು ಎ ಗುಂಪಿಗೆ ಪ್ರವೇಶ ಮಾಡದಂತೆ ಜಾಗ್ರತೆ ವಹಿಸಬೇಕಾಗಿದೆ. ತಹಸೀಲ್ದಾರ್, ಜಿಲ್ಲಾಧಿಕಾರಿಗಳು ಜಾತಿ, ಸಿಂಧುತ್ವ ಪ್ರಮಾಣ ಪತ್ರ ವಿತರಣೆ ಸಂದರ್ಭ ವಂಶವೃಕ್ಷ, ಜಾತಿಯ ಮೂಲ ಪತ್ತೆ ಹಚ್ಚಬೇಕು ಎಂದರು.
ಒಂದು ವೇಳೆ ಸುಳ್ಳು ಜಾತಿ ಮೂಲಕ ಎ ಗುಂಪಿಗೆ ಪ್ರವೇಶಿದರೆ ಅಂತಹವರನ್ನು ನಾವುಗಳೇ ಪತ್ತೆ ಹಚ್ಚಿ ಕಠಿಣ ಶಿಕ್ಷೆ ವಿಧಿಸುವಂತೆ ಸರ್ಕಾರದ ಮೇಲೆ ಒತ್ತಡ ತರುತ್ತೇವೆ. ಈ ಸಂಬಂಧ ಒಳಮೀಸಲಾತಿ ಕಾವಲು ಸಮಿತಿ ಎಲ್ಲೆಡೆ ರಚಿಸುತ್ತೇವೆ ಎಂದು ತಿಳಿಸಿದರು.
ಸಿ ಗುಂಪಿಗೆ ಯಾವುದೇ ಸಮಸ್ಯೆ ಇಲ್ಲ. ಆದರೆ, ಎ ಮತ್ತು ಬಿ ಗುಂಪಿನಲ್ಲಿ ಎಕೆ,ಎಡಿ ಯವರು ತಮ್ಮ ಮೂಲ ಜಾತಿ ದಾಖಲಿಸಿಕೊಳ್ಳುವ ವೇಳೆ ಸುಳ್ಳು ಹೇಳಿ ಅಶಕ್ತರ ಗುಂಪು ಪ್ರವೇಶಿಸುವ ಆತಂಕ ಇದೆ. ಇದಕ್ಕೆ ಕಡಿವಾಣ ಹಾಕಲು ಅಧಿಕಾರಿಗಳು ವಂಶವೃಕ್ಷ, ಸ್ಥಳ ಪರೀಶೀಲನೆ ನಡೆಸುವುದು ಅಗತ್ಯ ಎಂದರು.
ಉದ್ಯೋಗ, ಶಿಕ್ಷಣ, ಸಾಲ-ಸೌಲಭ್ಯ ಸೇರಿ ವಿವಿಧ ಸೌಲಭ್ಯಗಳು ಮಾದಿಗ
ಸಮುದಾಯಕ್ಕೆ ಸುಲಭವಾಗಿ ಲಭಿಸಲಿವೆ. ಅದರಲ್ಲೂ ಎಂಎಸ್, ಎಂಡಿ
ಸಮುದಾಯಕ್ಕೆ ಗಗನಕುಸುಮವಾಗಿತ್ತು. ಈಗ ಉನ್ನತ ಶಿಕ್ಷಣ ದೊರೆಯಲಿದೆ.
ಆದರೆ, ಎಂಎಸ್, ಎಂಡಿ ಪ್ರವೇಶಕ್ಕೆ ಅವಕಾಶ ಸಿಕ್ಕರೂ ಅದನ್ನು ಪಡೆಯುವಷ್ಟು ಸಂಖ್ಯೆಯಲ್ಲಿ ಮಾದಿಗರು ಇರುವುದೇ ಅನುಮಾನ ಎಂದು ತಿಳಿಸಿದರು.
ನ್ಯಾ.ನಾಗಮೋಹನ್ ದಾಸ್ ಆಯೋಗ ನೀಡಿದ್ದ ಶೇ.1 ಮೀಸಲಾತಿಗಾಗಿ ಅಲೆಮಾರಿ ಸಮುದಾಯದವರು ನ್ಯಾಯಾಲಯದ ಮೊರೆ ಹೋಗಿದ್ದಾರೆ. ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅವರೊಂದಿಗೆ ಮಾತುಕತೆ ನಡೆಸಿ ಪ್ರಕರಣ ಹಿಂಪಡೆಯುವಂತೆ ಮನವೊಲಿಸಿದ್ದಾರೆ. ಜೊತೆಗೆ ಅಲೆಮಾರಿ ಅಭಿವೃದ್ಧಿ ನಿಗಮ, ವಿಶೇಷ ಪ್ಯಾಕೇಜ್ ಸೇರಿ ವಿವಿಧ ಸೌಲಭ್ಯ ಕಲ್ಪಿಸುವುದಾಗಿ ಸಿಎಂ ತಿಳಿಸಿದ್ದಾರೆ. ಈ ಕಾರಣಕ್ಕೆ ನ್ಯಾಯಾಲಯದಲ್ಲಿ ಪ್ರಕರಣ ಹಿಂಪಡೆಯುವ ಸಾಧ್ಯತೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸಚಿವ ಸಂಪುಟ ಮರು ರಚನೆ ಆಗುತ್ತೋ-ಇಲ್ಲವೋ ನನಗೆ ಗೊತ್ತಿಲ್ಲ. ಕಾರಣ ನಾನು ಎಂಎಲ್‍ಎ ಆಗಿಲ್ಲ, ಅಧಿಕಾರ ಇಲ್ಲ. ಯಾರನ್ನೂ ಸಚಿವ ಸ್ಥಾನದಿಂದ ತೆಗೆಯಬೇಕು, ಸೇರ್ಪಡೆ ಮಾಡಬೇಕು ಎಲ್ಲವೂ ಸಿಎಂ ಮತ್ತು ವರಿಷ್ಠರ ಕೈಯಲ್ಲಿದೆ ಎಂದರು.
ನನ್ನ ಜಾತಿ ಮಾದಿಗ, ನನ್ನ ಧರ್ಮ ಹಿಂದೂ. ಈ ಕಾರಣಕ್ಕೆ ಧರ್ಮದ ಕುರಿತು ಮಾತನಾಡಿದ್ದೇನೆ, ಅದನ್ನು ತಿರುಚುವ ಕೆಲಸ ಆಗುತ್ತಿದೆ. ಏರ್‍ಪೋರ್ಟ್‍ನಲ್ಲಿ ಮುಸ್ಲಿಮರು ನಮಾಜ್ ಮಾಡಿರುವುದು
ವೈಯಕಿಕ್ತ-ಕುಟುಂಬ, ದೇಶಕ್ಕಾಗಿ ಮಾಡಿರುತ್ತಾರೆ. ಜೊತೆಗೆ ಅವರ ಪ್ರಾರ್ಥನೆ
ಯಾರಿಗೂ ತೊಂದರೆ ಆಗುವ ರೀತಿ ಇರುವುದಿಲ್ಲ. ಆದರೆ, ನಮ್ಮವರು ಡಿಜೆ
ಹಾಕಿಕೊಂಡು ಕೇಕೆ ಹಾಕಿ ಅಸಭ್ಯವಾಗಿ ವರ್ತಿಸುತ್ತಾರೆ. ಇದು ಸರಿಯಲ್ಲ ಎಂಬುದು ನನ್ನ ಅಭಿಪ್ರಾಯ. ಋಷಿಮುನಿಗಳ ರೀತಿ ನಾವುಗಳು ಮನಃಶಾಂತಿ, ದೇಶಕ್ಕಾಗಿ ಪ್ರಾರ್ಥನೆ ನಡೆಸಬೇಕು. ಮುಸ್ಲಿಂ, ಕ್ರೈಸ್ತ ಧರ್ಮದ ಹಿತ ಬಯಸುವ ಹಿಂದೂ ಪ್ರೇಮಿ ನಾನು ಎಂದರು.
ಪತ್ರಿಕಾಗೋಷ್ಠಿಯಲ್ಲಿ ವಕೀಲರಾದ ರವೀಂದ್ರ, ಕಾಂಗ್ರೆಸ್ ತಾಲೂಕು ಎಸ್ಸಿ ಘಟಕದ ಅಧ್ಯಕ್ಷ ಅನಿಲ್ ಕೋಟಿ ಇದ್ದರು.
Views: 24