Coffee And Health: ನೀವು ಕುಡಿಯುವ ಕಾಫಿಯನ್ನು ಆರೋಗ್ಯಕರವಾಗಿಸಲು ಸಿಂಪಲ್ ಟಿಪ್ಸ್ ಇಲ್ಲಿದೆ.

ಹೆಚ್ಚಿನ ಜನರಿಗೆ ಕಾಫಿ (Coffee) ಅತ್ಯಂತ ಪ್ರೀತಿಯ ಮತ್ತು ಆದ್ಯತೆಯ ಪಾನೀಯಗಳಲ್ಲಿ ಒಂದಾಗಿದ್ದು, ಲಕ್ಷಾಂತರ ಜನರು ದೈನಂದಿನ ಪ್ರಧಾನ ಪಾನೀಯವಾಗಿ ಸೇವಿಸುತ್ತಾರೆ (Coffee And Health). ಕಾಫಿ ಸೇವನೆ ಮಿತವಾಗಿದ್ದರೆ ಅದು ಆರೋಗ್ಯಕ್ಕೂ ಒಳ್ಳೆಯದು. ಅತಿಯಾದರೆ ಅದರಿಂದ ಕೆಲವು ಸಮಸ್ಯೆಗಳು ಎದುರಾಗುವ ಸಾಧ್ಯತೆ ಇದೆ ಎಂದು ಆಹಾರ ತಜ್ಞರು ಎಚ್ಚರಿಸುತ್ತಾರೆ.

ನೀವು ಕುಡಿಯುವ ಕಾಫಿಯನ್ನು ಇನ್ನಷ್ಟು ಆರೋಗ್ಯಕರವಾಗಿಸಲು ಕೆಲವು ಸಲಹೆಗಳು ಇಲ್ಲಿದೆ. ಕೆಲವೊಂದಿಷ್ಟು ಬದಲಾವಣೆಗಳನ್ನು ಮಾಡಿಕೊಂಡು ಕಾಫಿ ಕುಡಿದರೆ ಆರೋಗ್ಯಕ್ಕೆ ಉತ್ತಮ. ಕಾಫಿ ಸೇವನೆಯು ಆರೋಗ್ಯಕರವಾಗಿಸಲು ಈ ಸರಳ ಟಿಪ್ಸ್ ಬಳಸಿ.

ದಾಲ್ಚಿನ್ನಿ ಪುಡಿ ಸೇರಿಸಿ

ನಿಮ್ಮ ಕಾಫಿಗೆ ಸ್ವಲ್ಪ ಪ್ರಮಾಣದ ದಾಲ್ಚಿನ್ನಿ ಸೇರಿಸಿ ಕುಡಿದರೆ ಆರೋಗ್ಯಕ್ಕೆ ಬಹಳ ಉತ್ತಮ. ದಾಲ್ಚಿನ್ನಿ ಮಧುಮೇಹಿಗಳಲ್ಲಿ ರಕ್ತದಲ್ಲಿನ ಗ್ಲೂಕೋಸ್, ಕೊಲೆಸ್ಟ್ರಾಲ್ ಮತ್ತು ಟ್ರೈಗ್ಲಿಸರೈಡ್‌ಗಳನ್ನು ಕಡಿಮೆ ಮಾಡುತ್ತದೆ. ಅಲ್ಲದೆ ಇದು ಉರಿಯೂತ ನಿವಾರಕ ಮತ್ತು ಆ್ಯಂಟಿ ಆಕ್ಸಿಡೆಂಟ್‌ಗಳಂತಹ ಹಲವು ಪ್ರಮುಖ ಪೋಷಕಾಂಶಗಳನ್ನು ಹೊಂದಿದೆ. ಹಾಗಾಗಿ ದಾಲ್ಚಿನಿ ಸೇರಿಸುವ ಮೂಲಕ ಕಾಫಿ ಕುಡಿಯಬಹುದು.

ಕೋಕೋ ಸೇರಿಸಿ

ನಿಮ್ಮ ಕಾಫಿಗೆ ಕೋಕೋ ಸೇರಿಸಿ ಕುಡಿಯುವ ಅಭ್ಯಾಸ ಮಾಡಿಕೊಳ್ಳಿ. ಕೋಕೋವು ಉತ್ಕರ್ಷಣ ನಿರೋಧಕಗಳಿಂದ ತುಂಬಿರುತ್ತದೆ. ಇದು ಹೃದ್ರೋಗದ ಅಪಾಯವನ್ನು ಕಡಿಮೆ ಮಾಡುತ್ತದೆ. ಜತೆಗೆ ರಕ್ತದೊತ್ತಡವನ್ನು ಕಡಿಮೆ ಮಾಡಲು, ಹೃದಯದ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಹಾಗಾಗಿ ನಿಮ್ಮ ಬೆಳಗಿನ ಕಾಫಿಗೆ ಕೋಕೋ ಸೇರಿಸಿ, ಅಭ್ಯಾಸವನ್ನು ಬದಲಾಯಿಸಿಕೊಳ್ಳಿ.

ತೆಂಗಿನ ಎಣ್ಣೆ ಸೇರಿಸಿ

ಕಾಫಿಗೆ ನೀವು ತೆಂಗಿನ ಎಣ್ಣೆಯನ್ನು ಕೂಡ ಸೇರಿಸಿ ಕುಡಿಯಬಹುದು. ಕಾಫಿಗೆ ತೆಂಗಿನ ಎಣ್ಣೆ, ಎಂಸಿಟಿ ಎಣ್ಣೆ ಅಥವಾ ಬೆಣ್ಣೆಯಂತಹ ಆರೋಗ್ಯಕರ ಕೊಬ್ಬನ್ನು ಸೇರಿಸುವುದರಿಂದ ಆರೋಗ್ಯಕ್ಕೆ ಉತ್ತಮ. ಹಾಗಾಗಿ ಈ ಅಭ್ಯಾಸವನ್ನು ರೂಢಿಸಿಕೊಳ್ಳಿ.

ಸಕ್ಕರೆ ಬಳಸಬೇಡಿ

ಅತಿಯಾದ ಸಕ್ಕರೆ ಬಳಕೆ ಹಾನಿಕಾರಕವಾಗುತ್ತದೆ. ನಿತ್ಯ ಸಕ್ಕರೆ ಸೇರಿಸಿ ಕಾಫಿ ಕುಡಿದರೆ ಮಧುಮೇಹದಂತಹ ಗಂಭೀರ ಕಾಯಿಲೆ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಹೀಗಾಗಿ, ಸಕ್ಕರೆ ಹಾಕದೆ ಕಾಫಿ ಕುಡಿಯುವ ಅಭ್ಯಾಸ ಮಾಡಿಕೊಳ್ಳಿ. ಜೇನುತುಪ್ಪ, ಮೇಪಲ್ ಸಿರಪ್ ಇತ್ಯಾದಿ ನೈಸರ್ಗಿಕ ಸಿಹಿಕಾರಕಗಳನ್ನು ಬಳಸುವ ಮೂಲಕ ಅಪಾಯವನ್ನು ಕಡಿಮೆ ಮಾಡಬಹುದು.

ಸಸ್ಯ ಆಧಾರಿತ ಹಾಲನ್ನು ಬಳಸಿ

ಸಸ್ಯ ಆಧಾರಿತ ಹಾಲಿನಲ್ಲಿ ಕಡಿಮೆ ಕ್ಯಾಲೋರಿ ಇರುತ್ತದೆ. ಹೀಗಾಗಿ ಪೋಷಕಾಂಶ ಸಮೃದ್ಧವಾಗಿರುವ ಬಾದಾಮಿ, ಸೋಯಾ ಮತ್ತು ಓಟ್ ಹಾಲಿನಂತಹ ಸಸ್ಯ ಆಧಾರಿತ ಹಾಲನ್ನು ಸೇರಿಸಿ ಕಾಫಿ ಕುಡಿಯಿರಿ. ಕೆಲವರಿಗೆ ಹಾಲಿನ ಉತ್ಪನ್ನ ಉರಿಯೂತ, ಜೀರ್ಣಕಾರಿ ಸಮಸ್ಯೆಗಳು ಅಥವಾ ಚರ್ಮದ ಸಮಸ್ಯೆಗಳನ್ನು ಉಂಟು ಮಾಡಬಹುದು. ಬಾದಾಮಿ, ಓಟ್ ಅಥವಾ ತೆಂಗಿನ ಹಾಲಿನಂತಹ ಸಸ್ಯ ಆಧಾರಿತ ಹಾಲನ್ನು ಬಳಸುವುದರಿಂದ ಈ ಅಪಾಯಗಳನ್ನು ಕಡಿಮೆ ಮಾಡಬಹುದು.

Source : https://vishwavani.news/latest-news/coffee-and-health-simple-ways-to-make-the-coffee-you-drink-healthier-32044.html

Leave a Reply

Your email address will not be published. Required fields are marked *