ಪೋಟೋ ಮತ್ತು ವರದಿ ಸುರೇಶ್ ಪಟ್ಟಣ್

ಚಿತ್ರದುರ್ಗ ಜೂ. 13 ತರಾತುರಿಯಲ್ಲಿ ನಡೆದ ಆರ್‍ಸಿಬಿ ಅಭಿನಂದನಾ ಸಮಾರಂಭದ ವೇಳೆ ನಡೆದ ಭೀಕರ ಕಾಲ್ತುಳಿತ ಪ್ರಕರಣದಲ್ಲಿ ಹನ್ನೊಂದು ಜನ ಮೃತಪಟ್ಟಿರುವ ಘಟನೆಯಿಂದ ಎಲ್ಲೆಡೆ ರಾಜ್ಯ ಸರಕಾರದ ವಿರುದ್ಧ ಜನಾಕ್ರೋಶ ವ್ಯಕ್ತವಾಗುತ್ತಿರುವುದನ್ನು ಕಂಡು ಇದೀಗ ಜನರ ಗಮನವನ್ನು ಪ್ರಕರಣದಿಂದ ಬೇರೆಡೆ ಸೆಳೆಯಲು ಕಾಂಗ್ರೆಸ್ ನಾಯಕರು ಜಾತಿಗಣತಿ ನಾಟಕ ಶುರುಮಾಡಿದ್ದಾರೆ ಎಂದು ಚಿತ್ರದುರ್ಗ ಬಿಜೆಪಿ ಜಿಲ್ಲಾ ಮಾಧ್ಯಮ ವಕ್ತಾರ ನಾಗರಾಜ್ ಬೇದ್ರೇ ಟೀಕಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ. ಕೆ. ಶಿ ವಕುಮಾರ್ ಕಾಂಗ್ರೆಸ್ ಹೈಕಮಾಂಡ್‍ನ ಬುಲಾವ್ ಹಿನ್ನೆಲೆಯಲ್ಲಿ ಹೋಗಿದ್ದು ಯಾವ ಸಾಧನೆ ಮಾಡಲು ಕಾಂಗ್ರೆಸ್ ಹೈಕಮಾಂಡ್‍ನವರು ತಮ್ಮ ಪಕ್ಷದ ಭಂಡ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳಿಗೆ ಬುದ್ಧಿ ಹೇಳುವುದನ್ನು ಬಿಟ್ಟು, ಕಾಲ್ತುಳಿತ ಪ್ರಕರಣವನ್ನು ವಿಷಯಾಂತರಿಸಲು ಇದೀಗ ಹೊಸ ಜಾತಿಗಣತಿ ಮಾಡುತ್ತೇವೆ ಎಂದು ಹೇಳುತ್ತಿದ್ದು ಕಾಂಗ್ರೆಸ್ ಪಕ್ಷದ ಷಡ್ಯಂತ್ರ ಎಂದು ಆರೋಪಿಸಿದ್ದಾರೆ.
ಈ ಹಿಂದೆ ಕೋಟ್ಯಂತರ ರೂ. ವೆಚ್ಚ ಮಾಡಿ ಜಾತಿಗಣತಿ ಮಾಡಿ, ಎಲ್ಲ ಸಮುದಾಯದ ಮುಖಂಡರಿಂದ ಛೀಮಾರಿ ಹಾಕಿಸಿಕೊಂಡಿದ್ದು ಆಯಿತು. ಕೇಂದ್ರ ಸರ್ಕಾರವು ಈಗಾಗಲೇ ಜಾತಿ ಗಣತಿ ನಡೆಸುವುದಾಗಿ ಘೋಷಿಸಿದೆ. ಆದರೂ ಸಹ ರಾಜ್ಯ ಕಾಂಗ್ರೆಸ್ ಸರ್ಕಾರ ಜಾತಿ ಗಣತಿ ನಡೆಸುವುದಾಗಿ ಹೇಳಿದ್ದು ದುರದೃಷ್ಟಕರ. ರಾಜ್ಯ ಸರ್ಕಾರವು ಜನರ ವಿಶ್ವಾಸ ಕಳೆದುಕೊಂಡಿದ್ದು ಇದೊಂದು ಹಗರಣಗಳ ಸರ್ಕಾರ ಎಂದು ವಕ್ತಾರ ನಾಗರಾಜ್ ಬೇದ್ರೇ ವಾಗ್ದಾಳಿ ಮಾಡಿದ್ದಾರೆ.
ಈ ಹಿಂದೆ ನಡೆದ ವಾಲ್ಮೀಕಿ ನಿಗಮ ಹಗರಣ ವಿರೋಧಿಸಿ ಬಿಜೆಪಿ ಶಾಸಕರು ಸೇರಿ ಪಕ್ಷದ ಮುಖಂಡರು ತೀವ್ರ ಸ್ವರೂಪದ ಹೋರಾಟವನ್ನು ನಡೆಸಿದ್ದರು. ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯನವರು ವಿಧಾನಸಭೆಯ ಅಧಿವೇಶನದಲ್ಲಿ 500 ಕೋಟಿಯಲ್ಲ 80 ಕೋಟಿ ರೂಪಾಯಿ ಹಗರಣ ನಡೆದಿದೆ ಎಂದು ಸ್ವತಃ ಒಪ್ಪಿಕೊಂಡಿದ್ದರು. ಈಗ ಬಳ್ಳಾರಿ ಜಿಲ್ಲೆಯ ಶಾಸಕರ ಮೇಲೆ ಇಡಿ ದಾಳಿಯಾಗಿದ್ದು ವಾಲ್ಮೀಕಿ ಹಗರಣದ ಸತ್ಯಾಂಶ ಹೊರ ಬರಲಿದೆ ಎಂಬುದನ್ನು ಕಾಂಗ್ರೆಸ್ ನಾಯಕರು ಅರಿತುಕೊಳ್ಳಬೇಕೆಂದು ವಕ್ತಾರ ನಾಗರಾಜ್ ಬೇದ್ರೇ ತಿಳಿಸಿದರು.