ಚಿತ್ರದುರ್ಗ,ಸೆ.24:
ಫೋಟೋ ಮತ್ತು ವರದಿ ಸುರೇಶ್ ಪಟ್ಟಣ್
ರಾಜ್ಯದಲ್ಲಿ ಬಹುತೇಕ ರಸ್ತೆಗಳು ಗುಂಡಿಗಳಿಂದ ತುಂಬಿರುವುದನ್ನು ವಿರೋಧಿಸಿ ರಾಜ್ಯ ಸರ್ಕಾರದ ವಿರುದ್ದ ಬುಧವಾರ ಜಿಲ್ಲಾ ಬಿಜೆಪಿ ಕಾರ್ಯಕರ್ತರು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಟಿ.ಕುಮಾರಸ್ವಾಮಿ, ರಾಜ್ಯ ಸರ್ಕಾರ ಬೆಂಗಳೂರನ್ನು ಗ್ರೇಟರ್ ಬೆಂಗಳೂರನ್ನಾಗಿ ಮಾಡಲು ಮುಂದಾಗಿದೆ ಆದರೆ ರಸ್ತೆಗಳಲ್ಲಿರುವಂತಹ ಗುಂಡಿಗಳನ್ನು ಮುಚ್ಚಲು ಸರ್ಕಾರದಲ್ಲಿ ಹಣದ ಕೊರತೆ ಇದೆ. ತೆರಿಗೆಯಿಂದ ಬಂದಂತಹ ಎಲ್ಲಾ ಹಣವನ್ನು ಗ್ಯಾರೆಂಟಿಗಳಿಗೆ ಬಳಕೆ ಮಾಡುವುದರ ಮೂಲಕ ರಾಜ್ಯದಲ್ಲಿ ಅಭಿವೃದ್ದಿ ಕಾರ್ಯ ಕುಂಠಿತವಾಗಿದ್ದು, ಇದರಿಂದ ರಾಜ್ಯದ ಜನತೆಗೆ ಗುಂಡಿಗಳ ಭಾಗ್ಯವನ್ನು ನೀಡಿದೆ ಎಂದು ಕಿಡಿಕಾರಿದರು.
ಬಹುತೇಕ ರಸ್ತೆಗಳಲ್ಲಿ ಗುಂಡಿಗಳು ಇರುವುದರಿಂದ ವಾಹನ ಸವಾರರು ಬಿದ್ದು ಕೈ ಕಾಲು ಮುರಿದುಕೊಂಡು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಆದರೂ ಸಹ ಈ ಬಗ್ಗೆ ಸರ್ಕಾರ ಗಮನ ಹರಿಸುತ್ತಿಲ್ಲ. ಗ್ರೇಟರ್ ಬೆಂಗಳೂರು ಮಾಡುವ ಮೊದಲು ರಾಜ್ಯದಲ್ಲಿನ ರಸ್ತೆಗಳ ಗುಂಡಿಗಳನ್ನು ಮುಚ್ಚುವುದಕ್ಕೆ ಮುಂದಾಗಬೇಕು ಎಂದು ಆಗ್ರಹಿಸಿದರು.
ಇಂದಿನ ಪ್ರತಿಭಟನೆ ಸಂಕೇತಿಕವಾಗಿ ನಡೆಸುತ್ತಿದ್ದು, ಗುಂಡಿಗಳನ್ನು ಮುಚ್ಚಲು ರಾಜ್ಯ ಸರ್ಕಾರ ಮುಂದಾಗದಿದ್ದರೆ ಬಿಜೆಪಿ ವತಿಯಿಂದ ರಾಜ್ಯದ್ಯಂತ ಉಗ್ರ ಹೋರಾಟ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ರಾಜ್ಯ ರೈತ ಮೋರ್ಚಾದ ಕಾರ್ಯದರ್ಶಿ ಮಲ್ಲಿಕಾರ್ಜುನ್, ಜಿಲ್ಲಾ ಕಾರ್ಯದರ್ಶಿ ಸಂಪತ್ ಕುಮಾರ್, ಸುರೇಶ್ ಸಿದ್ದಾಪುರ, ಖಜಾಂಚಿ ಮಾಧುರಿ ಗೀರೀಶ್, ನಗರಾಧ್ಯಕ್ಷ ಲೋಕೇಶ್, ಗ್ರಾಮಾಂತರ ಅಧ್ಯಕ್ಷ ನಾಗರಾಜ್, ಜಿಲ್ಲಾ ವಕ್ತಾರ ನಾಗರಾಜ್ ಬೇದ್ರೆ, ನಗರಸಭೆ ಸದಸ್ಯ ಹರೀಶ್, ಮಾಜಿ ಸದಸ್ಯ ಗರುಡಿ ಪ್ರಕಾಶ್, ಮಹಿಳಾ ಘಟಕದ ಅಧ್ಯಕ್ಷೆ ಕವೀತಾ ಜವಳಿ, ಬಸಮ್ಮ ಸೇರಿದಂತೆ ಇತರರು ಭಾಗವಹಿಸಿದ್ದರು.
Views: 85