ದಾವಣಗೆರೆ ಜಿಲ್ಲಾಸ್ಪತ್ರೆಯ ಮೇಲ್ಚಾವಣಿ ಪದರು ಕುಸಿತ: ಮಗು ಸೇರಿ ಮೂವರಿಗೆ ಗಾಯ!

ದಾವಣಗೆರೆ ಜಿಲ್ಲಾಸ್ಪತ್ರೆ ಯ ಮೇಲ್ಚಾವಣಿ ಪದರು ಕುಸಿದು ಬಿದ್ದಿದೆ. ಆಸ್ಪತ್ರೆಗೆ ದಾಖಲಾಗಿದ್ದ ತಾಯಿಯ ಆರೋಗ್ಯ ವಿಚಾರಿಸಲು ಬಂದಿದ್ದ ಮಕ್ಕಳ ಮೇಲೆ ಕಾಂಕ್ರೇಟ್​ ಕಳಚಿ ಬಿದ್ದಿದೆ. ಇದರಿಂದ ಇಬ್ಬರು ಸಹೋದರಿಯರು ಹಾಗೂ ಓರ್ವ ಎರಡು ವರ್ಷದ ಮಗುವಿಗೆ ಗಾಯವಾಗಿದ್ದು, ಅವರನ್ನು ಅದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ದಾವಣಗೆರೆ, (ಡಿಸೆಂಬರ್ 17): ದಾವಣಗೆರೆ ಜಿಲ್ಲಾ ಆಸ್ಪತ್ರೆಯ ಮೇಲ್ಚಾವಣಿಯ ಪದರು ಕುಸಿದು ಬಿದ್ದಿದೆ. ಪರಿಣಾಮ ಎರಡು ವರ್ಷದ ಮಗು ಸೇರಿ ಮೂರು ಜನರಿಗೆ ಗಾಯಗಳಾಗಿವೆ. ದಾವಣಗೆರೆ ಜಿಲ್ಲಾ ಆಸ್ಪತ್ರೆಯ ಹಿಂಭಾಗ ತುರ್ತು ಚಿಕಿತ್ಸಾ ಘಟಕದ ಎದುರಿನ ಮುಖ್ಯ ಕಟ್ಟಡದ ಮೇಲ್ಚಾವಣಿಯ ಕಾಂಕ್ರೀಟ್ ಪದರು ಕಳಚಿ ಬಿದ್ದಿದೆ. ಪ್ರೇಮಕ್ಕ (46) ಕಾವೇರಿ(36) ಹಾಗೂ ನೇತ್ರಾ (02) ಮಗುವಿಗೆ ಗಾಯವಾಗಿದೆ. ಮಗುವಿನ‌ ತಲೆಗೆ ಹಾಗೂ ಇಬ್ಬರು ಮಹಿಳೆಯರ ಕೈ ಮತ್ತು ಇನ್ನೊಬ್ಬರ ಬೆನ್ನಿಗೆ ಗಾಯವಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

ಗಾಯಾಳುಗಳು ವಿಜಯನಗರ ಜಿಲ್ಲೆಯ ಹಲವಾಗಲು ಹಾಗೂ ಹಳಲು ಗ್ರಾಮದ ನಿವಾಸಿಗಳಾಗಿದ್ದು, ಪ್ರೇಮಕ್ಕ ಹಾಗೂ ಕಾವೇರಿ ಸಹೋದರಿಯರು. ತಾಯಿ ಆಸ್ಪತ್ರೆಗೆ ದಾಖಲಾದ ಹಿನ್ನೆಲೆ ಆರೋಗ್ಯ ವಿಚಾರಿಸಲು ಬಂದಿದ್ದ ವೇಳೆ ಈ ಅವಘಡ ಸಂಭವಿಸಿದೆ.

ಇನ್ನು ಘಟನೆಗೆ ಸಾರ್ವಜನಿಕರು ಆಕ್ರೋಶ ವ್ಯಕ್ತೊಡಿಸಿದ್ದು, ಗಾಯಾಳುಗಳಿಗೆ ಪರಿಹಾರ ನೀಡುವುದರ ಬದಲಿಗೆ ಬೇಗ ಕಟ್ಟಡ ದುರಸ್ತಿ ಮಾಡಿ ಎಂದು ಆಗ್ರಹಿಸಿದ್ದಾರೆ. ಜಿಲ್ಲಾ ಆಸ್ಪತ್ರೆಯ ಕಟ್ಟಡ ಬಹುತೇಕ ಬಿರುಕು ಬಿಟ್ಟಿದೆ. ಹೀಗಾಗಿ ಆಸ್ಪತ್ರೆಯಲ್ಲಿ ಇರಲು ರೋಗಿಗಳು ಭಯಪಡುವಂತಾಗಿದೆ.

Source : https://tv9kannada.com/karnataka/davanagere/3-injured-after-davanagere-district-hospital-roof-collapsed-news-in-kannada-rbj-951310.html

Views: 0

Leave a Reply

Your email address will not be published. Required fields are marked *