DC vs KKR: ಡುಪ್ಲೆಸಿಸ್​, ಅಕ್ಷರ್ ಆಟ ವ್ಯರ್ಥ! ಕೆಕೆಆರ್​ಗೆ ರೋಚಕ ಗೆಲುವು ತಂದುಕೊಟ್ಟ ಸ್ಪಿನ್ನರ್ಸ್, ಪ್ಲೇ ಆಫ್ ಆಸೆ ಜೀವಂತ​

206ರನ್​ಗಳ ಗುರಿ ಬೆನ್ನಟ್ಟಿದ ಅತಿಥೇಯ ಡೆಲ್ಲಿ ಕ್ಯಾಪಿಟಲ್ಸ್ 20 ಓವರ್​ಗಳಲ್ಲಿ 9 ವಿಕೆಟ್​​ ನಷ್ಟಕ್ಕೆ 190ರನ್​ಗಳಿಸಷ್ಟೇ ಶಕ್ತವಾಗಿ ಸೋಲೊಪ್ಪಿಕೊಂಡಿತು.

ಪ್ಲೇ ಆಫ್​​ ಪ್ರವೇಶಿಸಲು ಗೆಲ್ಲಲೇಬೇಕಾದ ಪಂದ್ಯದಲ್ಲಿ ಕೋಲ್ಕತ್ತಾ ನೈಟ್​ ರೈಡರ್ಸ್ ತಂಡ 14 ರನ್​ಗಳ ರೋಚಕ ಜಯ ಸಾಧಿಸುವ ಮೂಲಕ ಅದ್ಭುತ ಕಮ್​​ಬ್ಯಾಕ್ ಮಾಡಿದೆ. 206ರನ್​ಗಳ ಗುರಿ ಬೆನ್ನಟ್ಟಿದ ಅತಿಥೇಯ ಡೆಲ್ಲಿ ಕ್ಯಾಪಿಟಲ್ಸ್ 20 ಓವರ್​ಗಳಲ್ಲಿ 9 ವಿಕೆಟ್​​ ನಷ್ಟಕ್ಕೆ 190ರನ್​ಗಳಿಸಷ್ಟೇ ಶಕ್ತವಾಗಿ ಸೋಲೊಪ್ಪಿಕೊಂಡಿತು. ಫಾಫ್ ಡುಪ್ಲೆಸಿಸ್​ (62), ನಾಯಕ ಅಕ್ಷರ್ ಪಟೇಲ್ (43) ಹಾಗೂ ವಿಪ್ರಜ್ ನಿಗಮ್ (38) ಗೆಲುವಿಗಾಗಿ ನಡೆಸಿದ ಹೋರಾಟ ವ್ಯರ್ಥವಾಯಿತು. ಡೆಲ್ಲಿ ಕ್ಯಾಪಿಟಲ್ಸ್​ಗೆ ಇದು 4ನೇ ಸೋಲಾಗಿದೆ.

205  ರನ್‌ಗಳ ಗುರಿಯನ್ನು ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಮೊದಲ ಓವರ್‌ನಲ್ಲಿಯೇ ದೊಡ್ಡ ಆಘಾತವನ್ನು ಅನುಭವಿಸಿತು. ಅನುಕುಲ್ ರಾಯ್ ಬೌಲಿಂಗ್‌ನಲ್ಲಿ ಅಭಿಷೇಕ್ ಪೊರೆಲ್ (4) ಅವರನ್ನು ರಸೆಲ್ ಕ್ಯಾಚ್ ನೀಡಿ ಔಟಾದರು.  ನಂತರ ಬಂದ ಕರುಣ್ ನಾಯರ್ (15) ವೈಭವ್ ಅರೋರಾ ಬೌಲಿಂಗ್‌ನಲ್ಲಿ ರಿಂಕು ಸಿಂಗ್‌ಗೆ ಕ್ಯಾಚ್ ನೀಡಿ ಔಟಾದರು. ಇನ್ನು ಕೆಎಲ್​ ರಾಹುಲ್ ಆಟ ಕೇವಲ 7 ರನ್​ಗಳಿಗೆ ಸೀಮಿತವಾಯಿತು. ರಾಹುಲ್​ ಇಲ್ಲದ ರನ್​ ಕದಿಯಲು ಹೋಗಿ ರನ್​ಔಟ್ ಆದರು. ಡೆಲ್ಲಿ 60ಕ್ಕೆ 3 ವಿಕೆಟ್ ಕಳೆದುಕೊಂಡು ಸೋಲಿನ ಸುಳಿಗೆ ಸಿಲುಕಿತ್ತು.

ಆದರೆ 5ನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದ ನಾಯಕ ಅಕ್ಷರ್ ಪಟೇಲ್ (43) ಡು ಪ್ಲೆಸಿಸ್ ಜೊತೆಗೆ ಅದ್ಭುತ ಆಟವಾಡಿದರು. ಇವರಿಬ್ಬರು ಐದನೇ ವಿಕೆಟ್‌ಗೆ 76 ರನ್‌ಗಳ ಜೊತೆಯಾಟ ನೀಡಿ ಡೆಲ್ಲಿಗೆ ಚೇತರಿಕೆ ನೀಡಿದರು. ಆದರೆ ಸುನಿಲ್ ನರೈನ್  ಈ ಜೋಡಿಯನ್ನ ಬೇರ್ಪಡಿಸಿ ಪಂದ್ಯವನ್ನ ಕೆಕೆಆರ್ ಕಡೆಗೆ ತಿರುಗಿಸಿದರು.  ಅಕ್ಷರ್ ಪಟೇಲ್  23 ಎಸೆತಗಳಲ್ಲಿ ಬೌಂಡರಿ, 3 ಸಿಕ್ಸರ್​ಗಳ ಸಹಿತ 43 ರನ್​ಗಳಿಸಿ ಔಟ್​ ಆದರು. ಅದೇ ಓವರ್‌ನಲ್ಲಿ ನರೈನ್ ಉತ್ತಮ ಫಾರ್ಮ್‌ನಲ್ಲಿದ್ದ ಟ್ರಿಸ್ಟಾನ್ ಸ್ಟಬ್ಸ್ ಅವರನ್ನೂ ಕೂಡ ಬೌಲ್ಡ್ ಮಾಡಿ ಡಬಲ್ ಶಾಕ್ ಕೊಟ್ಟರು.

45 ಎಸೆತಗಳಲ್ಲಿ 7 ಬೌಂಡರಿ, 2 ಸಿಕ್ಸರ್ ಸಹಿತ 62 ರನ್​ಗಳಿಸಿದ್ದ ಫಾಫ್​ ಡುಪ್ಲೆಸಿಸ್​ರನ್ನ  ನರೈನ್ ತಮ್ಮ ಕೊನೆಯ ಓವರ್​​ನಲ್ಲಿ ಔಟ್ ಮಾಡುವ ಮೂಲಕ ಡೆಲ್ಲಿ ಕ್ಯಾಪಿಟಲ್ಸ್​ನ ಕೊನೆಯ ಭರವಸೆಯವನ್ನ ಭಗ್ನಗೊಳಿಸಿದರು.  ಡು ಪ್ಲೆಸಿಸ್ ಔಟಾದಾಗ ದೆಹಲಿಯ ಸೋಲು ಖಚಿತವಾಯಿತು. ಕೊನೆಯಲ್ಲಿ, ವಿಪ್ರಜ್ ನಿಗಮ್ 19 ಎಸೆತಗಳಲ್ಲಿ 5 ಬೌಂಡರಿ, 2 ಸಿಕ್ಸರ್ ಸಹಿತ 38 ರನ್​ಗಳಿಸಿದರಾದರೂ ತಂಡವನ್ನ ಗೆಲುವಿನ ಗಡಿ ದಾಟಿಸಲು ಸಾಧ್ಯವಾಗಲಿಲ್ಲ .

ಇಂಪ್ಯಾಕ್ಟ್ ಸಬ್ ಆಗಿ ಬಂದ ಅಶುತೋಷ್ ಶರ್ಮಾ 7, ಮಿಚೆಲ್ ಸ್ಟಾರ್ಕ್ 0ಗೆ ಔಟ್ ಆದರು. ಕೆಕೆಆರ್ ಪರ ಸುನಿಲ್ ನರೈನ್ 29ಕ್ಕೆ 3 ವಿಕೆಟ್ ಪಡೆದರೆ, ವರುಣ್ ಚಕ್ರವರ್ತಿ 39ಕ್ಕೆ 2, ಆ್ಯಂಡ್ರೆ ರಸೆಲ್, ವೈಭವ್ ಅರೋರ ಹಾಗೂ ಅನುಕುಲ್ ರಾಯ್ ತಲಾ ಒಂದು ವಿಕೆಟ್ ಪಡೆದು ಗೆಲುವಿನ ರೂವಾರಿಯಾದರು. 3 ವಿಕೆಟ್, 27 ರನ್​, ಒಂದು ರನ್​ಔಟ್ ಮಾಡಿದ ನರೈನ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.

ಕೆಕೆಆರ್ ಸಂಘಟಿತ ಹೋರಾಟ

advertisement

ಟಾಸ್​ ಸೋತು ಬ್ಯಾಟಿಂಗ್ ಇಳಿದ ಕೆಕೆಆರ್ ಉತ್ತಮ ಆರಂಭ ಪಡೆದುಕೊಂಡಿತು. ಆರಂಭಿಕರಾದ ರೆಹ್ಮಾನುಲ್ಲಾ ಗುರ್ಬಜ್ ಹಾಗೂ ನರೈನ್ ಮೊದಲ ವಿಕೆಟ್​ ಜೊತೆಯಾಟದಲ್ಲಿ 3 ಓವರ್​ಗಳಲ್ಲೇ 48 ರನ್ ಸೇರಿಸಿದರು. ಗುರ್ಬಜ್ 12 ಎಸೆತಗಳಲ್ಲಿ 5 ಬೌಂಡರಿ, 1 ಸಿಕ್ಸರ್ ಸಹಿತ 26 ರನ್​ಗಳಿಸಿದರೆ, ನರೈನ್ 16 ಎಸೆತಗಳಲ್ಲಿ ತಲಾ 2 ಬೌಂಡರಿ, 2 ಸಿಕ್ಸರ್ ಸಹಿತ 27 ರನ್​ಗಳಿಸಿದರು. ನಾಯಕ ಅಜಿಂಕ್ಯಾ ರಹಾನೆ 14 ಎಸೆತಗಳಲ್ಲಿ 4 ಬೌಂಡರಿ, 1 ಸಿಕ್ಸರ್ ಸಹಿತ 26 ರನ್​ಗಳಿಸಿದರು.

ರಘುವಂಶಿ ಟಾಪ್ ಸ್ಕೋರರ್

ಉತ್ತಮ ಆರಂಭ ಪಡೆದಿದ್ದ ಕೆಕೆಆರ್ ಕೆಲವು ರನ್​ಗಳ ಅಂತರದಲ್ಲಿ ವಿಕೆಟ್ ಕಳೆದುಕೊಂಡಿತು. 23 ಕೋಟಿ ಪಡೆದಿರುವ ವೆಂಕಟೇಶ್ ಅಯ್ಯರ್ 5 ಎಸೆತಗಳಲ್ಲಿ ಕೇವಲ 7 ರನ್​ಗಳಿಸಿ ಔಟ್ ಆದರು.ಆದರೆ ಯುವ ಆಟಗಾರ ಅಂಗ್​ಕ್ರಿಸ್ ರಘುವಂಶಿ 32 ಎಸೆತಗಳಲ್ಲಿ 3 ಬೌಂಡರಿ, 2 ಸಿಕ್ಸರ್​ ಸಹಿತ 44 ರನ್​ಗಳಿಸಿದರು. ಇದು ತಂಡದ ಗರಿಷ್ಠ ಸ್ಕೋರ್ ಆಯಿತು. ರಿಂಕು ಸಿಂಗ್ 25 ಎಸೆತಗಳಲ್ಲಿ 3 ಬೌಂಡರಿ, 1 ಸಿಕ್ಸರ್​ ಸಹಿತ 36 ರನ್​ಗಳಿಸಿದರು. ಕೊನೆಯಲ್ಲಿ ಅಬ್ಬರಿಸಿದ ಆ್ಯಂಡ್ರೆ ರಸೆಲ್ 8 ಎಸೆತಗಳಲ್ಲಿ 2 ಬೌಂಡರಿ, 1 ಸಿಕ್ಸರ್ ಸಹಿತ ಅಜೇಯ ರನ್​ಗಳಿಸಿದರೆ, ಪೊವೆಲ್ ಅಜೇಯ ರನ್​ಗಳಿಸಿದರು.

ಕೊನೆಯ ಓವರ್​​ನಲ್ಲಿ ಮಿಚೆಲ್ ಸ್ಟಾರ್ಕ್​ ಕೇವಲ 9 ರನ್​ ನೀಡಿದ 2 ವಿಕೆಟ್​ ಪಡೆದರು. ಒಟ್ಟಾರೆ 4 ಓವರ್​ಗಳಲ್ಲಿ 43 ರನ್​ ನೀಡಿ 3 ವಿಕೆಟ್ ಉಡಾಯಿಸಿದರು. ವಿಪ್ರಜ್ ನಿಗಮ್ 41ಕ್ಕೆ 2, ಅಕ್ಷರ್ ಪಟೇಲ್ 27ಕ್ಕೆ2, ದುಷ್ಮಂತ್ ಚಮೀರಾ 46ಕ್ಕೆ1 ವಿಕೆಟ್ ಪಡೆದು ಮಿಂಚಿದರು.

Source : News18 Kannada

Leave a Reply

Your email address will not be published. Required fields are marked *