![](https://samagrasuddi.co.in/wp-content/uploads/2025/01/image-115-300x144.png)
ಚಿತ್ರದುರ್ಗ: ಜ.31: ಜಿಲ್ಲಾ ಆಡಳಿತ,ಜಿಲ್ಲಾ ಪಂಚಾಯತ್, ಜಿಲ್ಲಾ ಆಯುಷ್ ಇಲಾಖೆ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜಿಲ್ಲೆಯ ಜಿಲ್ಲಾ ಕ್ಷಯ ರೋಗ ನಿಯಂತ್ರಣ ಕಛೇರಿ ಹಾಗೂ ವಿವಿಧ ಆಯುರ್ವೇದ ಮಹಾವಿದ್ಯಾಲಯ ಇವರ ಸಹಯೋಗದೊಂದಿಗೆ ದಿನಾಂಕ 30/01/2025 ರಂದು 100 ದಿನಗಳ ನಿಕ್ಷಯ ಅಭಿಯಾನದ ಅಂಗವಾಗಿ ಜಾಗೃತಿ ಜಾಥಾವನ್ನು ಹಮ್ಮಿಕೊಳ್ಳಲಾಗಿತ್ತು.
ದೇಶವನ್ನು ಕ್ಷಯ ಮುಕ್ತಗೊಳಿಸಲು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ದೃಷ್ಟಿಯಿಂದ ಅಮೃತ ಆಯುರ್ವೇದ ಮಹಾವಿದ್ಯಾಲಯ ಮತ್ತು ಆಸ್ಪತ್ರೆ, ಮತ್ತು ಪ್ರಕೃತಿ ಆಯುರ್ವೇದ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ಚಿತ್ರದುರ್ಗ ಇವರ ಸಹಯೋಗದೊಂದಿಗೆ ವಿದ್ಯಾರ್ಥಿಗಳು ಸಿಬ್ಬಂದಿ ವರ್ಗದವರು ವೈದ್ಯಾಧಿಕಾರಿಗಳು ನಗರದ ಪ್ರಮುಖ ಬೀದಿಯಲ್ಲಿ ಘೋಷಣೆಗಳನ್ನು ಕೂಗುತ್ತಾ ಬಿತ್ತಿಫಲಕಗಳನ್ನು ಪ್ರದರ್ಶಿಸುತ್ತಾ ಜಾಥಾವನ್ನು ನಿರ್ವಹಿಸಿದರು.
ಜಾಥಾ ಕಾರ್ಯಕ್ರಮದ ಉದ್ಘಾಟನೆಯನ್ನು ಜಿಲ್ಲಾ ಆಯುಷ್ ಅಧಿಕಾರಿಗಳಾದ ಡಾ. ಚಂದ್ರಕಾಂತ ನಾಗಸಮುದ್ರ ಅವರು ಹಸಿರು ನಿಶಾನೆ ತೋರಿಸುವುದರ ಮುಖಾಂತರ ಚಾಲನೆ ನೀಡಿದರು. ಜಾಥಾ ಮುಂಜಾನೆ, 7:30ಕ್ಕೆ ಸರಿಯಾಗಿ ಜಿಲ್ಲಾಧಿಕಾರಿಗಳ ಕಚೇರಿ ಅವರಣದಿಂದ ಆರಂಭವಾಗಿ ರಂಗಯ್ಯನ ಬಾಗಿಲು, ಆನೆ ಬಾಗಿಲು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಹಳೆ ಮಾಧ್ಯಮಿಕ ಶಾಲಾ ಆವರಣದಲ್ಲಿ ಅಂತ್ಯಗೊಳಿಸಲಾಯಿತು. ಕಾರ್ಯಕ್ರಮದಲ್ಲಿ ಮಾತನಾಡಿದ ಜಿಲ್ಲಾ ಆಯುಷ್ ಅಧಿಕಾರಿ ಡಾ|| ಚಂದ್ರಕಾಂತ್ ನಾಗಸಮುದ್ರ ” ಕ್ಷಯರೋಗ ನಿರ್ಮೂಲನೆ ಪ್ರತಿ ನಾಗರೀಕನ ಜವಾಬ್ದಾರಿಯಾಗಿದೆ. ದೇಶಾದ್ಯಂತ ಕ್ಷಯ ರೋಗವು ಅತ್ಯಂತ ವೇಗವಾಗಿ ಹಬ್ಬುತ್ತಿದ್ದು ಇದು ಮಾರಣಾಂತಿಕವಾಗಬಹುದು.
ಇದನ್ನು ತಡೆಗಟ್ಟುವುದು ಪ್ರತಿಯೊಬ್ಬ ನಾಗರೀಕನ ಜವಾಬ್ದಾರಿ ಈ ಹಂತದಲ್ಲಿ ಆಯುಷ್ ಇಲಾಖೆ ಹಮ್ಮಿಕೊಂಡಿರುವ 100 ದಿನಗಳ ಕ್ಷಯರೋಗ ನಿರ್ಮೂಲನ ಅಭಿಯಾನದ ಮೂಲಕ ರೋಗಿಗಳನ್ನು ಪತ್ತೆಹಚ್ಚಿ ಚಿಕಿತ್ಸೆಗೆ ಕಳಿಸುವ ವ್ಯವಸ್ಥೆಯನ್ನು ಉಚಿತವಾಗಿ ಆಯುಷ್ ಇಲಾಖೆಯಿಂದ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಹಾಜರಿದ್ದ ಇನ್ನೋರ್ವ ಮುಖ್ಯ ಅತಿಥಿ ಡಾ. ಸುಧಾ ಕ್ಷಯ ರೋಗ ನಿಯಂತ್ರಣಾಧಿಕಾರಿ ಅವರು ಕಾಯಿಲೆ ಹೇಗೆ ಹಬ್ಬುತ್ತದೆ ತಡೆಗಟ್ಟುವ ಕ್ರಮಗಳು ಇವುಗಳ ಬಗ್ಗೆ ಸವಿಸ್ತಾರವಾಗಿ ವಿವರಿಸಿದರು .NTEP ವೈದ್ಯಾರಾದ ಡಾ.ಪ್ರಶಾಂತ್ ಹಾಜರಿದ್ದರು. ಡಾ.ನಾರದಮುನಿ ಅವರು ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು.
ಕಾರ್ಯಕ್ರಮದಲ್ಲಿ ಡಾ. ಖಾಸಿಂ ಡಾ. ನವಾಜ್ ಡಾ ನವೀನ್ ಬೋಧಕ ಸಿಬ್ಬಂದಿ ಉಪ ಸಂಚಾಲಕರಾದ ಡಾ. ಪ್ರಶಾಂತ್ ಹಾಗೂ ಆಯುಷ್ ಇಲಾಖೆ ವೈದ್ಯಾಧಿಕಾರಿಗಳು,ಜಿಲ್ಲಾ ಆಯುಷ್ ವಿಭಾಗದ ವೈದ್ಯಾಧಿಕಾರಿಗಳು, ಸಿಬ್ಬಂದಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.