
ಚಿತ್ರದುರ್ಗ: ಸ್ವಚ್ಛತೆ ಬಗ್ಗೆ ಅರಿವು ಮೂಡಿಸಲು ಚಿತ್ರದುರ್ಗ ನಗರ ಸಭೆಯವರು ಸಿ.ಕೆ.ಪುರದ ಶಾಲೆಯ ಮುಂದೆ ಕೈಗೊಂಡಿರುವ ಕೆಲಸ ಶ್ಲಾಘನೀಯ, ಕಸ ಎಸೆಯುವ ಜಾಗದಲ್ಲಿ ಕುಳಿತುಕೊಳ್ಳುವ ಬೆಂಚ್‌ಗಳನ್ನು ಹಾಕಿ, ಹೂವಿನ ಕುಂಡಗಳನ್ನು ಇಟ್ಟು, ಸುತ್ತಮುತ್ತಲಿರುವ ಗೋಡೆಗಳಿಗೆ ಪರಿಸರ ಸಂರಕ್ಷಣೆ, ಕಸ ವಿಲೇವಾರಿಯ ಬಗ್ಗೆ, ಮಾಹಿತಿಯನ್ನ, ಘೋಷಣೆಗಳನ್ನ ಬರೆದು, ನಗರದ ಸೌಂದರ್ಯ ಹೆಚ್ಚಿಸಲು ಕೈಗೊಂಡಿರುವ ಕ್ರಮವನ್ನು ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ ಎಂದು ಕನ್ನಡದಲ್ಲಿ ಜ್ಞಾನ ವಿಜ್ಞಾನ ಸಮಿತಿ ಮತ್ತು ಕರ್ನಾಟಕ ಸರ್ವೋದಯ ಮಂಡಳಿಯ ಜಿಲ್ಲಾಧ್ಯಕ್ಷರಾದ ಡಾ. ಹೆಚ್. ಕೆ.ಎಸ್ ಸ್ವಾಮಿಯವರು ಪತ್ರಿಕಾ ಪ್ರಕಟಣೆ ಮುಖಾಂತರ ತಿಳಿಸಿದ್ದಾರೆ.
ಸರ್ಕಾರಿ ಶಾಲೆಗಳ ಮುಂದೆ, ನಗರವಾಸಿಗಳು ಬೆಳಿಗ್ಗೆಯಿಂದ ಸಂಜೆವರೆಗೂ ಕಸ ತಂದು ಸುರಿಯುತ್ತಿದ್ದಂತಹ ದೃಶ್ಯ ನೋಡಿ, ಆ ರಸ್ತೆಯಲ್ಲಿ ಓಡಾಡುವ ಸಾರ್ವಜನಿಕರಿಗೆ, ಮಕ್ಕಳಿಗೆ, ಪರಿಸರ ಸ್ನೇಹಿ ಸ್ನೇಹಿತರಿಗೆ, ಬಹಳ ಮುಜುಗರ ಉಂಟುಮಾಡುತ್ತಿದ್ದಂತಹ ದೃಶ್ಯವಾಗಿತ್ತು. ತಿಂಗಳಾನುಗಟ್ಟಲೆಯಿಂದ ಜನರು ಶಾಲೆಯ ಮುಂದೆ ಕಸ ಎಸೆಯುತ್ತಿದ್ದು, ಸ್ವಚ್ಛತೆಯನ್ನ ಧಿಕ್ಕರಿಸಿ, ಮಕ್ಕಳ ಕಲಿಕೆಗೆ ತೊಂದರೆ ಉಂಟು ಮಾಡುತ್ತಿದ್ದರು. ಮಕ್ಕಳು ಸಹ ಆ ಗಲೀಜು ಕಸದ ಸುತ್ತಮುತ್ತ ಓಡಾಡಿಕೊಂಡು, ಶಾಲೆಯ ಒಳಗೆ ಪ್ರವೇಶಿಸುತ್ತಿದ್ದರು. ಶಾಲೆಯ ಪ್ರವೇಶದ್ವಾರದ ಮುಂದೆ ಕಸದ ರಾಶಿ ಹಾಕಿಕೊಂಡು, ಶಿಕ್ಷಣ ನೀಡುವುದು ಎಷ್ಟರಮಟ್ಟಿಗೆ ಸರಿ ಎಂದು ಅಲ್ಲಿರುವ ಶಿಕ್ಷಕರು, ಪೋಷಕರು, ಮನನೊಂದು, ನಗರಸಭೆಯವರಿಗೆ ಕೋರಿಕೊಳ್ಳುತ್ತಿದ್ದರು ಎಂದರು.

ಬಹಳಷ್ಟು ತಿಂಗಳು ಸಹ ಇಲ್ಲಿ ಕಸದ ರಾಶಿ ಬಿದ್ದು, ಅದನ್ನ ದಿವಸ ಬೆಳಿಗ್ಗೆ ಟ್ರ್ಯಕ್ಟರ್ ನಲ್ಲಿ ಸಾಗಿಸುತ್ತಿದ್ದಂತಹ ನಗರಸಭೆ ಸಿಬ್ಬಂದಿಯವರೆಗೂ ಸಹ, ರೋಸಿ ಹೋಗಿ, ಜನರಿಗೆ ಮನಪರಿವರ್ತನೆ ಮಾಡುವ ಹೊಸ ದಾರಿಯನ್ನು ಅನ್ವೇಷಿಸಿಕೊಂಡು, ಪೂರ್ತಿ ರಸ್ತೆಯ ಆವರಣವನ್ನು ಸ್ವಚ್ಛಗೊಳಿಸಿ, ಕುಳಿತುಕೊಳ್ಳಲು ಎರಡು ಬೆಂಚ್ ಗಳನ್ನು ಹಾಕಿ, ಹೂವಿನ ಕುಂಡಗಳನ್ನು ಇಟ್ಟು, ಸುತ್ತಲೂ ಬಣ್ಣ ಬಳಿದು, ಗೋಡೆಗಳನ್ನು ಸುಂದರಗೊಳಿಸಿ, ಯಾರಾದರೂ ನಿವೃತ್ತರಾದವರು, ವೃದ್ಧರು, ದಣಿದವರು ಅಲ್ಲಿ ಬಂದು ಕುಳಿತು, ಸ್ವಚ್ಛ ಪರಿಸರದ ಅನುಭವವನ್ನು ತೆಗೆದುಕೊಂಡು, ಜನ ಕಸ ಎಸೆಯಲು ಮನಸ್ಸು ಬಾರದಂತೆ ಮಾಡಿರುವ ದೃಶ್ಯ ಎಲ್ಲರ ಮನಸ್ಸು ಗೆಲ್ಲುತ್ತಿದೆ ಎಂದರು.
ಬಹಳಷ್ಟು ಕಡೆ ಜನರಿಗೆ ಕಸ ಎಲ್ಲಿ ಹಾಕಬೇಕು, ಅದನ್ನ ವಿಲೇವಾರಿ ಮಾಡುವುದು ಹೇಗೆ ಎಂಬುದರ ಬಗ್ಗೆ ಜಾಗೃತಿ ಸಾಲದೆ, ಎಲ್ಲೆಲ್ಲಿ ಕಸ ಹಾಕಲು ಜಾಗ ಸಿಗುತ್ತೋ, ಅಲ್ಲೆಲ್ಲ ಕಸದ ಗುಡ್ಡಗಳನ್ನಾಗಿ ಮಾಡಿ, ನಗರದ ಸೌಂದರ್ಯವನ್ನು, ಆರೋಗ್ಯವನ್ನು ಹಾಳುಗಳುತ್ತಿರುವುದನ್ನ ನಾವು ಎಲ್ಲ ಕಡೆ ಗಮನಿಸಬಹುದು. ಕಸ ಎಸಯಬೇಡಿ ಎಂದು ಬೋರ್ಡ್ ನೇತಾಕಿದರು ಸಹ, ಅಲ್ಲೇ ಕಸ ತಂದು ಸುರಿಯುವ ಹವ್ಯಾಸವನ್ನು ರೂಡಿಸಿಕೊಂಡಿದ್ದರು. ಮನ ಪರಿವರ್ತಿಸಲು ಇದೊಂದು ವಿನೂತನವಾದ ಪ್ರಯೋಗ ನಗರಸಭೆ ಹಮ್ಮಿಕೊಂಡಿದ್ದು, ಎಲ್ಲೆಲ್ಲಿ ಜನ, ಬೇಡವಾದ ಜಾಗದಲ್ಲಿ ಕಸದ ರಾಶಿ ಹಾಕಿರುತ್ತಾರೋ, ಅವರನ್ನ ನಿಗ್ರಹಿಸಲು ಇಂತಹ ಒಂದು ಜಾಣ್ಮೆಯ ಕೆಲಸವನ್ನು ಮಾಡಿರುವುದನ್ನು ನೋಡಿದರೆ, ನಿಜವಾಗಲೂ ಎಲ್ಲರೂ ವಿಸ್ಮಯರಾಗುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಸಾಮಾನ್ಯವಾಗಿ ಗ್ರಾಮಗಳಲ್ಲಿ, ನಗರದ ವಿವಿಧ ಬಡಾವಣೆಗಳಲ್ಲಿ, ಕಸ ಎಸೆಯುವ ಜಾಗವನ್ನು ಆಯ್ಕೆ ಮಾಡಿಕೊಳ್ಳುವಾಗ, ಬಹಳ ಹಕ್ಕಿನಿಂದ ಆಯ್ಕೆ ಮಾಡಿಕೊಳ್ಳುವ ಜಾಗ ಎಂದರೆ ಸರ್ಕಾರಿ ಶಾಲೆಗಳ ಸುತ್ತಮುತ್ತ, ಗೇಟಿನ ಸುತ್ತಮುತ್ತ, ಯಾರ ಭಯವು ಇಲ್ಲದೆ ಕಸ ಸುರಿಯುವುದನ್ನು ರೂಡಿ ಮಾಡಿಕೊಂಡಿದ್ದೇವೆ. ಶಾಲೆಗಳು ಸುತ್ತಮುತ್ತ ಕಸ ಎಸೆಯಬಾರದು ಎಂಬ ಸಾಮಾನ್ಯ ತಿಳುವಳಿಕೆಯನ್ನು ನಾವು ಹೆಚ್ಚಿಸಿಕೊಂಡು, ಕಸದ ಲಾರಿಗಳಿಗೆ, ಕಸದ ಗಾಡಿಗಳಿಗೆ, ಕಸ ಹಾಕಿ, ಸಾಧ್ಯವಾಗದಿದ್ದರೆ, ಕಸವನ್ನ ಒಂದು ಪ್ಲಾಸ್ಟಿಕ್ ಚೀಲದಲ್ಲಿ ಸಂಗ್ರಹಿಸಿ ಇಟ್ಟುಕೊಂಡು, ಕಸ ಸಂಗ್ರಹಿಸುವ ವಾಹನ ಬಂದಾಗ ಅಥವಾ ವಾಹನಗಳು ಇದ್ದ ಕಡೆ ಹೋಗಿ ಕಸ ಹಾಕಿದರೆ, ನಗರದ ಸೌಂದರ್ಯವನ್ನು ಹೆಚ್ಚಿಸಲು ಸಹಕಾರಿಯಾಗುತ್ತದೆ ಎಂದರು.
ಜನಸಾಮಾನ್ಯರು, ನಾಗರೀಕರು ಸಹ ನಗರಸಭೆಯವರ ಸ್ವಚ್ಛತಾ ಕಾರ್ಯಕ್ರಮದಲ್ಲಿ ಕೈಜೋಡಿಸಿದರೆ, ನಗರ ಸುಂದರಮಯವಾಗುತ್ತದೆ. ನಗರಸಭೆಯವರು ಮಾಡುವ ಕೆಲಸಕ್ಕೆ ವಿರುದ್ಧವಾಗಿ ಜನರು ಕಾರ್ಯನಿರ್ವಹಿಸಿದರೆ, ಯಾರಿಂದಲೂ ಸಹ ನಗರವನ್ನ ಸ್ವಚ್ಛಗೊಳಿಸಲು ಅಸಾಧ್ಯವಾಗುತ್ತದೆ ಎಂದಿದ್ದಾರೆ.
ಇನ್ನು ಮುಂದಾದರೂ ಜನರು ಮನಸ್ಸ ಇಚ್ಚೆ ಎಲ್ಲೆಂದರಲ್ಲಿ ಕಸ ಎಸೆಯದೇ , ನಿರ್ದಿಷ್ಟವಾದ ಜಾಗದಲ್ಲಿ ಕಸ ವಿಲೇವಾರಿ ಮಾಡಿ, ನಗರದ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಲಿ. ಈ ರೀತಿ ಉದಾಹರಣೆಗಳು ಇನ್ನು ಹೆಚ್ಚಾಗಲಿ, ನಗರಸಭೆಯವರು ಎಲ್ಲಿ ಕಸ ಹಾಕುತ್ತಿದ್ದಾರೆ, ಅಲ್ಲೆಲ್ಲ ಈ ರೀತಿ ಬೆಂಚ್‌ಗಳನ್ನು ಹಾಕಲೂ, ಅವರಲ್ಲಿ ಸಾಕಷ್ಟು ಬೆಂಚ್‌ಗಳಿವೆಯೋ ಇಲ್ಲವೋ ಗೊತ್ತಿಲ್ಲ?. ಆದರೂ ಸಹ ನಗರಸಭೆಯವರು ಪ್ರಯತ್ನಪಟ್ಟು, ಜನರ ಮನಸ್ಸನ್ನ ಬದಲಿಸುತ್ತಿರುವ ಮಾರ್ಗ ತುಂಬಾ ಮನ ಸೆಳೆಯುವಂತಿದೆ ಎಂದು ಶ್ಲಾಘಿಸಿದ್ದಾರೆ.
ಸಾಮಾನ್ಯವಾಗಿ ಈ ಕೆಲಸ ಮಾಡಲು, ಕಸ ಹಾಕುವ ಸ್ಥಳಕ್ಕೆ ಕನಿಷ್ಠಪಕ್ಷ ಎರಡು ಬೆಂಚ್‌ಗಳನ್ನು ಹಾಕಬೇಕಾಗುತ್ತದೆ ಅವುಗಳನ್ನ ನಗರಸಭೆಯವರು ಎಲ್ಲಿಂದ ತಂದು ಕೂರಿಸುತ್ತಿದ್ದಾರೋ ತಿಳಿಯದಾಗಿದೆ?. ಜನಸಾಮಾನ್ಯರೇ, ನಿರ್ದಿಷ್ಟವಾದ ಜಾಗಕ್ಕೆ ಕಸವನ್ನ ತಲುಪಿಸಿದರೆ, ಇಂತಹ ಕೆಲಸಗಳನ್ನು, ವೆಚ್ಚಮಯ ಕೆಲಸವನ್ನು ತಪ್ಪಿಸಬಹುದು. ಇಂತಹ ಕೆಲವು ಉದಾಹರಣೆಗಳು ಜನರ ಮನಸ್ಸನ್ನು ಬದಲಾಯಿಸಿ, ನಗರ ಸಭೆಯ ಹಾಕಿರುವ ಬೆಂಚ್‌ಗಳ ಮೇಲೆ ಜನರು ಕುಳಿತು, ಬೆಳಿಗ್ಗೆ ಮತ್ತು ಸಂಜೆ ನಗರದ ಸ್ವಚ್ಛತೆ ಬಗ್ಗೆ ಚಿಂತಿಸುವಂತಾಗಲಿ ಎಂದು ಹಾರೈಸಿದ್ದಾರೆ.