ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ, ಜ 10
ಶಿಕ್ಷಣದ ಮೂಲಕ ಮೌಲ್ಯಯುತ ಮಾನವ ಸಂಪನ್ಮೂಲ ನಿರ್ಮಾಣವೇ ಸಂಸ್ಥೆಯ ಮುಖ್ಯ ಧ್ಯೇಯವಾಗಿದೆ ಎಂದು ದೇವರಾಜ್ ಅರಸ್ ಶಿಕ್ಷಣ ಸಂಸ್ಥೆಯ ಸಂಸ್ಥೆಯ ಸ್ಥಾಪಕ ಕಾರ್ಯದರ್ಶಿಗಳಾದ ಡಾ. ಎಂ. ಚಂದ್ರಪ್ಪ ತಿಳಿಸಿದರು.
ನಗರದ ದೇವರಾಜ್ ಅರಸ್ ಶಿಕ್ಷಣ ಸಂಸ್ಥೆವತಿಯಿಂದ ಹಮ್ಮಿಕೊಂಡಿದ್ದ 4 ದಿನದ ಡೆಸ್ಟಿನಿ 2026” ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಣದ ಮೂಲಕ ಮೌಲ್ಯಯುತ ಮಾನವ ಸಂಪನ್ಮೂಲ ನಿರ್ಮಾಣವೇ ಸಂಸ್ಥೆಯ ಮುಖ್ಯ ಧ್ಯೇಯವಾಗಿದ್ದು, ದೇವರಾಜ್ ಅರಸ್ ಶಿಕ್ಷಣ ಸಂಸ್ಥೆಯ ಇಂದಿನ ಪ್ರಗತಿಯ ಹಿಂದೆ ಇರುವ ಅಪಾರ ಪರಿಶ್ರಮ, ಸಮರ್ಪಣೆ ಹಾಗೂ ನಿರಂತರ ಶೈಕ್ಷಣಿಕ ಬದ್ಧತೆ ಬಗ್ಗೆ ವಿವರಿಸಿದರು. ಆರ್ಥಿಕವಾಗಿ ಹಿಂದುಳಿದ ಹಿನ್ನೆಲೆಯ ಸಾವಿರಾರು ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ಒದಗಿಸುವ ಮೂಲಕ ಸಂಸ್ಥೆ ಸಾಮಾಜಿಕ ನ್ಯಾಯ ಮತ್ತು ಶಿಕ್ಷಣ ಸಮಾನತೆಯನ್ನು ಅರ್ಥಪೂರ್ಣವಾಗಿ ಅನುಷ್ಠಾನಗೊಳಿಸುತ್ತಿದೆ ಎಂದು ಹೇಳಿದರು.
ದೇಶಾದ್ಯಂತ ವಿದ್ಯಾರ್ಥಿ ಸಮುದಾಯವನ್ನು ನಾಶಪಡಿಸುತ್ತಿರುವ ಮಾದಕ ದ್ರವ್ಯಗಳ ದುಷ್ಪರಿಣಾಮಗಳ ಬಗ್ಗೆ ಗಂಭೀರ ಚಿಂತನೆ ವ್ಯಕ್ತಪಡಿಸಿ ಪೋಷಕರು ತಮ್ಮ ಮಕ್ಕಳ ಮೇಲೆ ಸದಾ ನಿಗಾ ವಹಿಸಿ, ಮಾದಕ ವ್ಯಸನದ ವಿವಿಧ ರೂಪಗಳನ್ನು ಗುರುತಿಸಿ ತಡೆಯುವ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅವರು ಮಾರ್ಗದರ್ಶನ ನೀಡಿದರು. ದೇವರಾಜ್ ಅರಸ್ ಶಿಕ್ಷಣ ಸಂಸ್ಥೆ ಮಾದಕ ವ್ಯಸನ ಮಾಫಿಯಾದಿಂದ ಸಂಪೂರ್ಣ ಮುಕ್ತವಾಗಿದೆ ಎಂದು ಸ್ಪಷ್ಟಪಡಿಸಿದ ಅವರು, ಶಿಕ್ಷಣ ಸಂಸ್ಥೆಗಳ ಪ್ರಯತ್ನಗಳಿಗೆ ಪೋಷಕರು ಸಂಪೂರ್ಣ ಸಹಕಾರ ನೀಡುವಂತೆ ಮನವಿ ಮಾಡಿದರು.
ಮುಖ್ಯ ಅತಿಥಿಯಾಗಿ ಮಾತನಾಡಿದ ಹಿರಿಯ ಉಪ ನೋಂದಣಾಧಿಕಾರಿ ತಿಪ್ಪೇರುದ್ರಪ್ಪ ಕಳೆದ 43 ವರ್ಷಗಳಿಂದ ನಿರಂತರ ಸ್ವಾರ್ಥರಹಿತ ಶೈಕ್ಷಣಿಕ ಸೇವೆ ಸಲ್ಲಿಸುತ್ತಿರುವ ದೇವರಾಜ್ ಅರಸ್ ಶಿಕ್ಷಣ ಸಂಸ್ಥೆಯು ಸಮಾಜದ ಶೈಕ್ಷಣಿಕ ಪ್ರಗತಿಗೆ ನೀಡುತ್ತಿರುವ ಕೊಡುಗೆ ಶ್ಲಾಘನೀಯವಾಗಿದೆ ಎಂದು ಅಭಿಪ್ರಾಯಪಟ್ಟರು. ಗ್ರಾಮೀಣ ಮತ್ತು ನಗರ ಪ್ರದೇಶದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಒದಗಿಸುವಲ್ಲಿ ಸಂಸ್ಥೆಯ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಹೇಳಿದರು.
ದೇವರಾಜ್ ಅರಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ ಯಶಸ್ವಿನಿ ಕಿರಣ್ ಮಾತನಾಡಿ ಸಂಸ್ಥೆಯ ಅಭಿವೃದ್ಧಿಗೆ ನಿರಂತರವಾಗಿ ಸಹಕಾರ ನೀಡುತ್ತಿರುವ ಎಲ್ಲಾ ಪೋಷಕರು ಹಾಗೂ ಸಿಬ್ಬಂದಿ ವರ್ಗದವರಿಗೆ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸಿದರು. ದೇವರಾಜ್ ಅರಸ್ ಶಿಕ್ಷಣ ಸಂಸ್ಥೆಯ ಘನತೆ, ಕೀರ್ತಿ ಹಾಗೂ ಮೌಲ್ಯಗಳನ್ನು ಉನ್ನತ ಮಟ್ಟದಲ್ಲಿ ಕಾಪಾಡಿಕೊಂಡು ಹೋಗುವಲ್ಲಿ ಪೋಷಕರು ಮತ್ತು ಸಿಬ್ಬಂದಿಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಅವರು ಹೇಳಿದರು.
ದೇವರಾಜ್ ಅರಸ್ ಶಿಕ್ಷಣ ಸಂಸ್ಥೆಯ ಸಿಇಓ ಎಂ.ಸಿ. ರಘುಚಂದನ್ ಮಾತನಾಡಿ, 2025-26 ಶೈಕ್ಷಣಿಕ ವರ್ಷದಲ್ಲಿ ದೇವರಾಜ್ ಅರಸ್ ಶಿಕ್ಷಣ ಸಂಸ್ಥೆ ಸಾಧಿಸಿರುವ ಮಹತ್ವದ ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಆಡಳಿತಾತ್ಮಕ ಸಾಧನೆಗಳನ್ನು ವಿವರಿಸಿದರು.
ಕಾರ್ಯಕ್ರಮದಲ್ಲಿ ದೇವರಾಜ್ ಅರಸ್ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಶ್ರೀಮತಿ ಹೆಚ್. ಚಂದ್ರಕಲಾ, ಹೈದರಾಬಾದ್‍ನ ಮೈರಾ ಅಕಾಡೆಮಿಯ ನಿರ್ದೇಶಕರಾದ ಮನೀಶ್, ಸಹ ಸಂಸ್ಥಾಪಕರಾದ ಶ್ರೀಮತಿ ಸುಧಾ ದೇವರಾಜ್, ದೇವರಾಜ್ ಅರಸ್ ಶಿಕ್ಷಣ ಸಂಸ್ಥೆಯ ಡೀನ್ (ಶೈಕ್ಷಣಿಕ), ಡಾ. ಬಿ.ಸಿ. ಅನಂತರಾಮು, ಡಾ. ಪ್ರದೀಪ್ ಹೆಚ್, ಶ್ರೀ ವೆಂಕಟೇಶ್ವರ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ. ಎ.ಜೆ. ಶಿವಕುಮಾರ್, ಉಪಸ್ಥಿತರಿದ್ದರು.
ಶ್ರೀ ವೆಂಕಟೇಶ್ವರ ಶಿಕ್ಷಣ ಮಹಾವಿದ್ಯಾಲಯದ ಶಿಕ್ಷಣ ಪ್ರಾಧ್ಯಾಪಕರಾದ ಡಾ. ಜಿ.ಇ. ಬೈರಸಿದ್ದಪ್ಪ ಸ್ವಾಗತಿಸಿದರು. ಪ್ರಾಂಶುಪಾಲರಾದ ಕೆ.ಪಿ. ನಾಗಭೂಷಣ ಶೆಟ್ಟಿ, ವಂದಿಸಿದರು.
ಡೀಪ್ಸ್ ಬ್ಯಾಂಡ್ ತಂಡದ ವಾದ್ಯ ಸಂಗೀತ ಕಾರ್ಯಕ್ರಮ ಅತ್ಯಂತ ಮನಮೋಹಕವಾಗಿದ್ದು, ಶ್ರೋತೃಗಳಿಗೆ ಮನಸ್ಸಿಗೆ ನೆಮ್ಮದಿ ನೀಡುವ ನಿಜವಾದ ಸಂಗೀತಾನಂದದ ಅನುಭವವಾಗಿ ಪರಿಣಮಿಸಿತು. ಅವರ ಸಂಗೀತ ಪ್ರಸ್ತುತಿ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿ, ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿತು.
ಕಾಮಿಡಿ ಖಿಲಾಡಿಗಳು ಖ್ಯಾತಿಯ ಜಗ್ಗಪ್ಪ, ಸುಷ್ಮಿತಾ, ಸೂರಜ್ ಹಾಗೂ ತಂಡ ನೀಡಿದ ಹಾಸ್ಯ ನಾಟಕ (ಸ್ಕಿಟ್) ಪ್ರೇಕ್ಷಕರನ್ನು ನಿರಂತರ ನಗುವಿನಲ್ಲೇ ತೊಡಗಿಸಿತು. ವಿಭಿನ್ನ ಹಾಸ್ಯಶೈಲಿ, ನೈಜ ಜೀವನದ ಘಟನೆಗಳ ಆಧಾರಿತ ಹಾಸ್ಯ ಪ್ರದರ್ಶನ ಮತ್ತು ಕಲಾವಿದರ ಸಮರ್ಥ ಅಭಿನಯ ಪ್ರೇಕ್ಷಕರಿಂದ ಭಾರಿ ಮೆಚ್ಚುಗೆ ಗಳಿಸಿತು.
ವಿದ್ಯಾರ್ಥಿಗಳ ಸಾಂಸ್ಕೃತಿಕ ಪ್ರದರ್ಶನಗಳು, ಬೆಳಕು ಧ್ವನಿ ವ್ಯವಸ್ಥೆಯ ಸೊಗಸಾದ ಸಂಯೋಜನೆ ಹಾಗೂ ಶಿಸ್ತುಬದ್ಧ ಆಯೋಜನೆ ಎಲ್ಲರ ಗಮನ ಸೆಳೆಯಿತು. ಡೆಸ್ಟಿನಿ 2026 ಕಾರ್ಯಕ್ರಮವು ಶಿಕ್ಷಣ, ಸಂಸ್ಕೃತಿ ಹಾಗೂ ಮನೋರಂಜನೆಯ ಸಮನ್ವಯದೊಂದಿಗೆ ಚಿತ್ರದುರ್ಗ ಜಿಲ್ಲೆಯ ಶೈಕ್ಷಣಿಕ ವಲಯದಲ್ಲಿ ಹೊಸ ಮಾನದಂಡವನ್ನು ಸ್ಥಾಪಿಸಿತು. ಡೆಸ್ಟಿನಿ2026 ಕಾರ್ಯಕ್ರಮವು ವಿದ್ಯಾರ್ಥಿಗಳ ಪ್ರತಿಭೆ, ಸಂಸ್ಥೆಯ ಶೈಕ್ಷಣಿಕ ಬದ್ಧತೆ ಹಾಗೂ ಭವಿಷ್ಯದ ದೃಷ್ಟಿಕೋನವನ್ನು ಪ್ರತಿಬಿಂಬಿಸುವ ವೇದಿಕೆಯಾಗಿ ಯಶಸ್ವಿಯಾಗಿ ನಡೆಯಿತು.
ಈ ಸೆಲೆಬ್ರಿಟಿ ಕಾರ್ಯಕ್ರಮಗಳು ಡೆಸ್ಟಿನಿ 2026 ಸಂಭ್ರಮಕ್ಕೆ ವಿಶಿಷ್ಟ ಆಕರ್ಷಣೆಯಾಗಿ, ಕಾರ್ಯಕ್ರಮವನ್ನು ಸ್ಮರಣೀಯವಾಗಿಸಿತು.
Views: 62