ಚಿತ್ರದುರ್ಗ ಜೂನ್ 20: ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನವು ಹಸುವಿನಂತೆ ನಮಗೆ ಉಪಕಾರಿಯಾಗಬೇಕೇ ಹೊರತು, ನಿಯಂತ್ರಣ ಸಿಗದ ಆನೆಯಾಗಬಾರದು. ಎಐ ಬಳಸದಿದ್ದರೆ ಮುಖ್ಯವಾಹಿನಿಯಿಂದ ದೂರ ಉಳಿಯಬೇಕಾಗುತ್ತದೆ ಎಂಬ ಆತಂಕದ ಬದಲು, ಅದನ್ನು ಜಾಗೃತವಾಗಿ ಮತ್ತು ಸಕಾರಾತ್ಮಕವಾಗಿ ಅನ್ವೇಷಿಸುವ ಮನೋಭಾವವನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು ಎಂದು ಸೈನ್ಸ್ ಫೌಂಡೇಷನ್ ಅಧ್ಯಕ್ಷ ಜಿ.ಎನ್.ಮಲ್ಲಿಕಾರ್ಜುನಪ್ಪ ತಿಳಿಸಿದರು.
ತಾಲ್ಲೂಕಿನ ಸೀಬಾರ ಗುತ್ತಿನಾಡು ಗ್ರಾಮದ ವಿಶ್ವಮಾನವ ಪದವಿಪೂರ್ವ ಕಾಲೇಜಿನಲ್ಲಿ ಶನಿವಾರ ವಿಶ್ವಮಾನವ ಸಾಂಸ್ಕೃತಿಕ ಮತ್ತು ವಿದ್ಯಾಸಂಸ್ಥೆ ಹಾಗೂ ಚಿತ್ರದುರ್ಗ ಸೈನ್ಸ್ ಫೌಂಡೇಷನ್‌ನಿಂದ ಕೃತಕ ಬುದ್ಧಿಮತ್ತೆ (ಎಐ) ಯುಗದಲ್ಲಿ ಶೈಕ್ಷಣಿಕ ಹಾದಿ ಕುರಿತು ಆಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವರ್ತಮಾನದ ತಂತ್ರಜ್ಞಾನ ಬೆಳವಣಿಗೆಗಳೊಂದಿಗೆ ಹೆಜ್ಜೆ ಹಾಕುವುದು ಇಂದಿನ ಅನಿವಾರ್ಯತೆಯಾಗಿದೆ. ಎಐ ತಂತ್ರಜ್ಞಾನವನ್ನು ಸಂಪೂರ್ಣವಾಗಿ ನಿರಾಕರಿಸುವ ಬದಲು, ಅದರ ಧನಾತ್ಮಕ ಸಾಧ್ಯತೆಗಳನ್ನು ಅರಿತು ನಮ್ಮದಾಗಿಸಿಕೊಳ್ಳುವುದು ಮುಖ್ಯ ಎಂದರು.
ಎಐ ಕೇವಲ ಒಂದು ಸಾಧನವಷ್ಟೇ, ಅದು ಎಂದಿಗೂ ಮನುಷ್ಯನ ಚಿಂತನೆಗೆ ಪರ್ಯಾಯವಾಗಲು ಸಾಧ್ಯವಿಲ್ಲ. ಅಗತ್ಯಕ್ಕೆ ತಕ್ಕಂತೆ ಉಪಯೋಗಿಸಿದರೆ ಅದು ಸಹಾಯಕ; ಆದರೆ ನಿಯಂತ್ರಣವಿಲ್ಲದೆ ಅದರ ಮೇಲೆಯೇ ಅತಿಯಾಗಿ ಅವಲಂಬಿತರಾದರೆ ಅದೊಂದು ದೊಡ್ಡ ಸಮಸ್ಯೆಯಾಗಿ ಪರಿಣಮಿಸಲಿದೆ ಎಂದು ಅವರು ಎಚ್ಚರಿಸಿದರು.
ಎಐ ಬಳಕೆಯಿಂದಾಗಿ ವಿದ್ಯಾರ್ಥಿಗಳ ಕಲಿಕೆಯ ವಿಧಾನ ಹಾಗೂ ದೈನಂದಿನ ಬದುಕಿನಲ್ಲಿ ಸಾಕಷ್ಟು ಬದಲಾವಣೆಗಳು ಆಗುತ್ತಿವೆ. ಯಾವುದೇ ಮಾಹಿತಿಯನ್ನು ಹುಡುಕುವುದು, ವಿಷಯಗಳನ್ನು ಗ್ರಹಿಸುವುದು ಮತ್ತು ಹೊಸ ವಿಚಾರಗಳನ್ನು ತಿಳಿದುಕೊಳ್ಳುವುದು ಇಂದು ಸುಲಭವಾಗಿದೆ. ಆದರೆ ತಂತ್ರಜ್ಞಾನದ ಸುಲಭ ಲಭ್ಯತೆಯ ನಡುವೆಯೂ ವಿದ್ಯಾರ್ಥಿಗಳು ತಮ್ಮ ಸಹಜ ಬುದ್ಧಿವಂತಿಕೆ, ಸೃಜನಶೀಲತೆ ಮತ್ತು ಸ್ವತಂತ್ರ ಚಿಂತನೆಯ ಬೆಳವಣಿಗೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಕಿವಿಮಾತು ಹೇಳಿದರು.
ಎಐ ತಂತ್ರಜ್ಞಾನಕ್ಕೆ ತನ್ನದೇ ಆದ ಸ್ವತಂತ್ರ ಆಲೋಚನಾ ಶಕ್ತಿ ಇರುವುದಿಲ್ಲ. ಅದಕ್ಕೆ ಈಗಾಗಲೇ ನೀಡಿರುವ ಮಾಹಿತಿ ಮತ್ತು ಅಂಕಿ-ಅಂಶಗಳ ಆಧಾರದ ಮೇಲಷ್ಟೇ ಅದು ಕಾರ್ಯನಿರ್ವಹಿಸುತ್ತದೆ. ಆದ್ದರಿಂದ ಅಂತಿಮ ನಿರ್ಧಾರ ಕೈಗೊಳ್ಳುವ ಶಕ್ತಿ ಮನುಷ್ಯನ ವಿವೇಕದಲ್ಲೇ ಇರುತ್ತದೆ ಎಂದು ಸ್ಪಷ್ಟಪಡಿಸಿದರು.
ತಂತ್ರಜ್ಞಾನದ ಬೆಳವಣಿಗೆಯು ದಿಗ್ಭ್ರಮೆ ಮೂಡಿಸುವಂತಿರಬಾರದು, ಬದಲಿಗೆ ಜ್ಞಾನ ವಿಸ್ತರಣೆಗೆ ಪೂರಕವಾಗಿರಬೇಕು. ವಿದ್ಯಾರ್ಥಿಗಳು ಎಐ ಅನ್ನು ಅಧ್ಯಯನದ ಸಹಾಯಕನಾಗಿ ಮಾತ್ರ ಬಳಸಿಕೊಂಡು ಹೊಸ ಕೌಶಲ್ಯಗಳನ್ನು ಬೆಳೆಸಿಕೊಳ್ಳಬೇಕು. ಎಐ ಬಗ್ಗೆ ಅತಿಯಾದ ಆತಂಕ ಬೇಡ, ಆದರೆ ಅದರ ಬಳಕೆಯಲ್ಲಿ ಜವಾಬ್ದಾರಿ ಅಗತ್ಯ ಎಂದು ಅವರು ಹೇಳಿದರು.
ಶಿಕ್ಷಣ ಕೌಶಲ ಸಲಹೆಗಾರ ಟಿ.ದಿಲೀಪ್ ಕುಮಾರ್ ವಿಶೇಷ ಉಪನ್ಯಾಸ ನೀಡಿ, ಇಂದಿನ ಯುಗವು ಕೇವಲ ಮಾಹಿತಿ ತಂತ್ರಜ್ಞಾನದ ಯುಗವಲ್ಲ, ಕೃತಕ ಬುದ್ಧಿಮತ್ತೆ (ಎಐ) ಯುಗವಾಗಿದ್ದು, ಪಿಯುಸಿ ವಿದ್ಯಾರ್ಥಿಗಳು ಬದಲಾಗುತ್ತಿರುವ ತಂತ್ರಜ್ಞಾನಕ್ಕೆ ಹೊಂದಿಕೊಳ್ಳುವ ಮೂಲಕ ಭವಿಷ್ಯದ ಸವಾಲುಗಳನ್ನು ಎದುರಿಸಲು ಸಿದ್ಧರಾಗಬೇಕು ಎಂದು ತಿಳಿಸಿದರು.
ವಿದ್ಯಾರ್ಥಿ ಜೀವನದಲ್ಲಿ ಪಿಯುಸಿ ಹಂತ ಅತ್ಯಂತ ಮಹತ್ವದ್ದಾಗಿದ್ದು, ಈ ಅವಧಿಯಲ್ಲಿ ಬೆಳೆಸಿಕೊಳ್ಳುವ ಜ್ಞಾನ, ಕೌಶಲ್ಯ ಮತ್ತು ಚಿಂತನಾ ಸಾಮರ್ಥ್ಯವೇ ಮುಂದಿನ ಜೀವನದ ಯಶಸ್ಸಿಗೆ ಬುನಾದಿಯಾಗುತ್ತದೆ. ಕಳೆದ ಕೆಲವು ವರ್ಷಗಳಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ದೊಡ್ಡ ಬದಲಾವಣೆಗಳಾಗಿವೆ. ಹಿಂದೆ ಶಿಕ್ಷಕರು, ಪಠ್ಯಪುಸ್ತಕಗಳು ಮತ್ತು ತರಗತಿಗಳು ಮಾತ್ರ ಕಲಿಕೆಯ ಪ್ರಮುಖ ಮೂಲಗಳಾಗಿದ್ದವು. ಆದರೆ ಇಂದು ಡಿಜಿಟಲ್ ವೇದಿಕೆಗಳು, ಆನ್‌ಲೈನ್ ಸಂಪನ್ಮೂಲಗಳು ಮತ್ತು ಎಐ ಆಧಾರಿತ ಕಲಿಕಾ ಸಾಧನಗಳು ವಿದ್ಯಾರ್ಥಿಗಳಿಗೆ ಜ್ಞಾನದ ಹೊಸ ಬಾಗಿಲುಗಳನ್ನು ತೆರೆದಿವೆ ಎಂದು ತಿಳಿಸಿದರು.
ಕೃತಕ ಬುದ್ಧಿಮತ್ತೆ ವಿದ್ಯಾರ್ಥಿಗಳ ಶತ್ರುವಲ್ಲ; ಸರಿಯಾದ ಬಳಕೆಯಿಂದ ಅದು ಅತ್ಯುತ್ತಮ ಕಲಿಕಾ ಸಂಗಾತಿಯಾಗಬಹುದು. ಆದರೆ ಎಐ ನೀಡುವ ಮಾಹಿತಿಯನ್ನು ಅರ್ಥಮಾಡಿಕೊಂಡು, ವಿಶ್ಲೇಷಿಸಿ, ಸ್ವಂತ ಚಿಂತನೆಯ ಮೂಲಕ ಬಳಸುವ ಸಾಮರ್ಥ್ಯ ವಿದ್ಯಾರ್ಥಿಗಳಲ್ಲಿ ಬೆಳೆಯಬೇಕು ಎಂದು ಹೇಳಿದರು.
ಇಂದಿನ ಪಿಯುಸಿ ವಿದ್ಯಾರ್ಥಿಗಳು ಕೇವಲ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆಯುವ ಗುರಿಯಲ್ಲದೆ, ಭವಿಷ್ಯದ ಜಗತ್ತಿಗೆ ಅಗತ್ಯವಾದ ಕೌಶಲ್ಯಗಳನ್ನು ಹೊಂದಬೇಕು. ಸೃಜನಶೀಲತೆ, ಸಂವಹನ ಕೌಶಲ್ಯ, ಸಮಸ್ಯೆ ಪರಿಹಾರ ಸಾಮರ್ಥ್ಯ, ಹೊಸದನ್ನು ಕಲಿಯುವ ಆಸಕ್ತಿ ಮತ್ತು ತಂತ್ರಜ್ಞಾನದ ಜವಾಬ್ದಾರಿಯುತ ಬಳಕೆ ಅತ್ಯಗತ್ಯವಾಗಿದೆ ಎಂದು ಹೇಳಿದರು.
ಭವಿಷ್ಯದಲ್ಲಿ ವೈದ್ಯಕೀಯ, ಇಂಜಿನಿಯರಿಂಗ್, ವಿಜ್ಞಾನ, ವ್ಯಾಪಾರ, ಶಿಕ್ಷಣ ಸೇರಿದಂತೆ ಪ್ರತಿಯೊಂದು ಕ್ಷೇತ್ರದಲ್ಲಿಯೂ ಎಐ ಪ್ರಮುಖ ಪಾತ್ರ ವಹಿಸಲಿದೆ. ಆದ್ದರಿಂದ ವಿದ್ಯಾರ್ಥಿಗಳು ಈಗಿನಿಂದಲೇ ತಂತ್ರಜ್ಞಾನದ ಅರಿವು ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಎಐ ನಮ್ಮ ಕೆಲಸಗಳನ್ನು ಕಸಿದುಕೊಳ್ಳುತ್ತದೆ ಎನ್ನುವ ಭಯಕ್ಕಿಂತ, ಎಐ ಬಳಸುವ ಸಾಮರ್ಥ್ಯ ಹೊಂದಿದವರು ಭವಿಷ್ಯವನ್ನು ಮುನ್ನಡೆಸುತ್ತಾರೆ ಎಂಬ ಅರಿವು ವಿದ್ಯಾರ್ಥಿಗಳಲ್ಲಿ ಮೂಡಬೇಕು. ಯಂತ್ರಗಳು ವೇಗ ನೀಡಬಹುದು, ಆದರೆ ದಿಕ್ಕು ನೀಡುವುದು ಮಾನವನ ಜ್ಞಾನ ಮತ್ತು ಮೌಲ್ಯಗಳು. ಜ್ಞಾನಕ್ಕೆ ತಂತ್ರಜ್ಞಾನದ ಸ್ಪರ್ಶ ದೊರೆತಾಗ ಶಿಕ್ಷಣದ ಶಕ್ತಿ ಹೆಚ್ಚುತ್ತದೆ. ಎಐ ಯುಗದಲ್ಲಿ ಕಲಿಯುವ ಮನಸ್ಸು ಹೊಂದಿರುವ ವಿದ್ಯಾರ್ಥಿಗಳೇ ನಾಳೆಯ ಯಶಸ್ವಿ ಪೀಳಿಗೆ ಎಂದು ತಿಳಿಸಿದರು.
ಸಂಸ್ಥೆ ಕಾರ್ಯದರ್ಶಿ ಎಂ.ನೀಲಕಂಠದೇವ ಮಾತನಾಡಿ, ಭವಿಷ್ಯವನ್ನು ಉತ್ತಮವಾಗಿ ರೂಪಿಸಿಕೊಳ್ಳಲು ಇಂದಿನಿಂದಲೇ ಸಿದ್ಧತೆ ಆರಂಭಿಸಬೇಕು. ಮಕ್ಕಳ ಗುರಿಯ ಬಗ್ಗೆ ಸ್ಪಷ್ಟತೆ ಮೂಡಿಸುವುದು ಹಾಗೂ ಅವರ ಆಸಕ್ತಿ, ಸಾಮರ್ಥ್ಯಗಳನ್ನು ಗುರುತಿಸಿ ಸರಿಯಾದ ಮಾರ್ಗದರ್ಶನ ನೀಡುವುದು ಪೋಷಕರ ಜವಾಬ್ದಾರಿಯಾಗಿದೆ ಎಂದರು.
ಮಕ್ಕಳ ಭವಿಷ್ಯದ ವಿಚಾರದಲ್ಲಿ ಪೋಷಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಕೇವಲ ಅಂಕಗಳ ಹಿಂದೆ ಓಡಿಸದೆ ಸಮಾಜಮುಖಿ ಚಿಂತನೆ, ಮೌಲ್ಯಗಳು ಮತ್ತು ಜವಾಬ್ದಾರಿಯುತ ಬದುಕಿನ ಅರಿವನ್ನು ಬೆಳೆಸಬೇಕು ಎಂದು ತಿಳಿಸಿದರು.
ಮಕ್ಕಳೊಂದಿಗೆ ಪೋಷಕರು ಮುಕ್ತವಾಗಿ ಮಾತನಾಡಬೇಕು. ಅವರ ಸಮಸ್ಯೆ, ಆಸಕ್ತಿ ಹಾಗೂ ಕನಸುಗಳನ್ನು ಅರ್ಥ ಮಾಡಿಕೊಂಡು ಪ್ರೋತ್ಸಾಹ ನೀಡಿದರೆ ಆತ್ಮವಿಶ್ವಾಸ ಹೆಚ್ಚುತ್ತದೆ. ಶಿಕ್ಷಣದ ಪ್ರಮುಖ ಹಂತಗಳಲ್ಲಿ ಎರಡು ವರ್ಷಗಳ ಕಾಲ ಶಿಸ್ತು, ಪರಿಶ್ರಮ ಮತ್ತು ಸರಿಯಾದ ಯೋಜನೆಯೊಂದಿಗೆ ಸಾಗಿದರೆ ಮಕ್ಕಳ ಭವಿಷ್ಯ ಉತ್ತಮವಾಗಿ ರೂಪುಗೊಳ್ಳಲು ಸಾಧ್ಯ ಎಂದು ಸಲಹೆ ನೀಡಿದರು.
ಎಸ್ ಎಸ್ ಎಲ್ ಸಿಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳ ಪೋಷಕರನ್ನು ಸನ್ಮಾನಿಸಲಾಯಿತು. ಪ್ರಾಂಶುಪಾಲೆ ಎಚ್.ಆರ್.ಸುಧಾ, ಸಂಸ್ಥೆ ರೂವಾರಿ ಎಚ್.ಜಲೀಲ್ ಸಾಬ್, ಫೌಂಡೇಷನ್ ಕಾರ್ಯದರ್ಶಿ ಎಚ್.ಎಸ್.ಟಿ.ಸ್ವಾಮಿ, ನಿರ್ದೇಶಕ ಈ.ರುದ್ರಮುನಿ ಭಾಗವಹಿಸಿದ್ದರು.
