ಕಿವಿ, ಮೂಗು ಮತ್ತು ಗಂಟಲುಗಳ ಕಾರ್ಯನಿರ್ವಹಣೆ ಪ್ರತ್ಯೇಕ ಪ್ರತ್ಯೇಕವಾಗಿದ್ದರೂ ಅವುಗಳು ತೀರಾ ನಿಕಟವಾದ ಮತ್ತು ಸಂಕೀರ್ಣ ಸಂಬಂಧವನ್ನು ಹೊಂದಿವೆ. ಈ ಮೂರು ಅಂಗಗಳು ಜತೆಗೂಡಿ ನಾವು ಮಾತನಾಡಲು, ಕೇಳಿಸಿಕೊಳ್ಳಲು, ಉಸಿರಾಡಲು, ವಾಸನೆ ಗ್ರಹಿಸಲು, ನುಂಗಲು ಮತ್ತು ದೇಹ ಸಮತೋಲನವನ್ನು ಕಾಪಾಡಿಕೊಳ್ಳಲು ನೆರವಾಗುತ್ತವೆ.
ಈ ಪೈಕಿ ಯಾವುದೇ ಒಂದು ಅಂಗಕ್ಕೆ ಸಮಸ್ಯೆ ಉಂಟಾದರೂ ಅದರಿಂದ ಜೀವನ ಗುಣಮಟ್ಟದ ಮೇಲೆ ಉಂಟಾಗುವ ಪರಿಣಾಮ ಅಗಾಧವಾದುದು. ಇಎನ್‌ಟಿ ಅಥವಾ ಕಿವಿ-ಮೂಗು- ಗಂಟಲಿನ ಆರೋಗ್ಯ ಎಂದರೆ ಈ ಒಟ್ಟು ವ್ಯವಸ್ಥೆಯ ಆರೋಗ್ಯವಾಗಿದ್ದು, ಇದನ್ನು ಕಾಪಾಡಿಕೊಳ್ಳುವುದು ನಮ್ಮ ಅನುಕೂಲದ ದೃಷ್ಟಿಯಿಂದ ಮಾತ್ರವಲ್ಲದೆ ನಮ್ಮ ಒಟ್ಟಾರೆ ದೈಹಿಕ ಆರೋಗ್ಯ ಮತ್ತು ದೈನಂದಿಕ ಕಾರ್ಯಚಟುವಟಿಕೆಗಳ ದೃಷ್ಟಿಯಿಂದಲೂ ಬಹಳ ಮಹತ್ವದ್ದಾಗಿದೆ.
ಇಎನ್‌ಟಿ ಆರೋಗ್ಯ ಯಾಕೆ ಮುಖ್ಯ?
ಇಎನ್‌ಟಿ ಅಥವಾ ಕಿವಿ-ಮೂಗು- ಗಂಟಲು ವ್ಯವಸ್ಥೆಯ ಪ್ರತಿಯೊಂದು ಭಾಗವೂ ಬಹಳ ನಿರ್ಣಾಯಕವಾದ ಪಾತ್ರವನ್ನು ಹೊಂದಿದೆ. ಕಿವಿಯು ಸದ್ದನ್ನು ಕೇಳಲು ಮತ್ತು ದೈಹಿಕ ಸಮತೋಲನವನ್ನು ಕಾಪಾಡಲು ಸಹಾಯ ಮಾಡುತ್ತದೆ. ಮೂಗು ಉಸಿರಾಟದ ಆರಂಭ ಭಾಗವಾಗಿದ್ದು, ಗಾಳಿಯಲ್ಲಿರುವ ಅಪಾಯಕಾರಿ ವಸ್ತುಗಳನ್ನು ಸೋಸುತ್ತದೆ; ಜತೆಗೆ ನಾವು ವಾಸನೆ ಮತ್ತು ರುಚಿಗಳನ್ನು ಗ್ರಹಿಸುವುದಕ್ಕೂ ಸಹಕಾರಿಯಾಗಿದೆ.
ಇಎನ್‌ಟಿ ಆರೋಗ್ಯ ನಮ್ಮ ಕಿವಿ, ಮೂಗು ಮತ್ತು ಗಂಟಲಿನ ಕಾಳಜಿ ಗಂಟಲು ಕುಳಿ (ಫಾರಿಂಕ್ಸ್) ಮತ್ತು ಲ್ಯಾರಿಂಕ್ಸ್ (ಧ್ವನಿಪೆಟ್ಟಿಗೆ)ಗಳನ್ನು ಹೊಂದಿರುವ ಗಂಟಲು ನುಂಗುವುದು, ಮಾತನಾಡುವುದು ಮತ್ತು ಉಸಿರಾಟಕ್ಕೆ ಅಗತ್ಯವಾಗಿದೆ. ಈ ಮೂರೂ ಅಂಗಗಳು ಪರಸ್ಪರ ನಿಕಟ ಸಂಪರ್ಕ ಹೊಂದಿರುವುದರಿಂದ ಸೋಂಕುಗಳು ಮತ್ತು ಇತರ ಅನಾರೋಗ್ಯಗಳು ಬಹಳ ವೇಗವಾಗಿ ಒಂದು ಅಂಗದಿಂದ ಇನ್ನೊಂದಕ್ಕೆ ಹರಡುವುದು ಸಾಧ್ಯ. ಉದಾಹರಣೆಗೆ, ಅಲರ್ಜಿಗಳಿಂದ ಮೂಗು ಕಟ್ಟುವ ತೊಂದರೆಯಿಂದಾಗಿ ಮಧ್ಯ ಕಿವಿಯ ಸೋಂಕು ಅಥವಾ ಗಂಟಲಿನಲ್ಲಿ ಕಿರಿಕಿರಿ ಉಂಟಾಗಬಹುದಾಗಿದೆ.
ನಿರ್ಲಕ್ಷಿಸಬಾರದ ಲಕ್ಷಣಗಳು
ಇಎನ್‌ಟಿ ಅನಾರೋಗ್ಯ ತೊಂದರೆಯು ಹೆಚ್ಚು ಗಂಭೀರ ಅನಾರೋಗ್ಯದ ಲಕ್ಷಣವಾಗಿರುವ ಸಾಧ್ಯತೆಗಳಿರುತ್ತವೆ; ಇಂಥವುಗಳನ್ನು ಶೀಘ್ರವಾಗಿ ಗುರುತಿಸುವುದು ಅತ್ಯಗತ್ಯ. ಇಂಥವುಗಳೆಂದರೆ:
- ಸತತ ಅಥವಾ ತೀವ್ರಗೊಳ್ಳುತ್ತಿರುವ ಕಿವಿ ನೋವು
- ಹಠಾತ್ ಶ್ರವಣ ಶಕ್ತಿ ನಷ್ಟ
- ಪದೇಪದೆ ಸೈನಸ್ ಸೋಂಕು ಅಥವಾ ಮುಖದಲ್ಲಿ ಒತ್ತಡ
- ಮೂಗಿನಲ್ಲಿ ಉಸಿರಾಟಕ್ಕೆ ಕಷ್ಟ
- 2 ವಾರಕ್ಕಿಂತ ಹೆಚ್ಚು ಸಮಯದಿಂದ ಇರುವ ಗಂಟಲು ನೋವು
- ಕಾರಣವಿಲ್ಲದೆ ಧ್ವನಿ ಕೀರಲಾಗುವುದು ಅಥವಾ ಧ್ವನಿಯಲ್ಲಿ ಬದಲಾವಣೆಗಳು
- ಕುತ್ತಿಗೆ ಭಾಗದಲ್ಲಿ ಊತ ಅಥವಾ ಗಂಟುಗಳು ಉಂಟಾಗುವುದು
- ನುಂಗಲು ಅಥವಾ ಉಸಿರಾಡಲು ಕಷ್ಟವಾಗುವುದು
- ಮೂಗಿನಲ್ಲಿ ರಕ್ತಸ್ರಾವ ಅಥವಾ ಕೆಟ್ಟ ವಾಸನೆ ಸಹಿತ ಸ್ರಾವ
ಶೀಘ್ರ ರೋಗಪತ್ತೆ ಮತ್ತು ಚಿಕಿತ್ಸೆಯಿಂದ ಉತ್ತಮ ಫಲಿತಾಂಶ ಪಡೆಯಬಹುದು ಮತ್ತು ಸಂಕೀರ್ಣ ತೊಂದರೆಗಳು ಉಂಟಾಗದಂತೆ ತಡೆಯಬಹುದು.
ಸಾಮಾನ್ಯ ಇಎನ್‌ಟಿ ತೊಂದರೆಗಳು
ಇಎನ್‌ಟಿ ತೊಂದರೆಗಳು ಮಕ್ಕಳು ಮತ್ತು ವಯಸ್ಕರಲ್ಲಿ ಸಾಮಾನ್ಯವಾಗಿದ್ದು, ಲಘು ಸ್ವರೂಪದ, ಅಲ್ಪಕಾಲಿಕ ಸಮಸ್ಯೆಗಳಿಂದ ತೊಡಗಿ ದೀರ್ಘಕಾಲೀನ ಅಥವಾ ಸಂಕೀರ್ಣ ಸಮಸ್ಯೆಗಳವರೆಗೆ ಉಂಟಾಗಬಹುದಾಗಿದೆ. ಕೆಲವು ಸಾಮಾನ್ಯ ತೊಂದರೆಗಳು ಈ ಕೆಳಗಿನಂತಿವೆ:
1. ಕಿವಿಯ ಸೋಂಕುಗಳು (ಓಟಿಟಿಸ್ ಮೀಡಿಯಾ): ಮಕ್ಕಳಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತವೆ, ಬ್ಯಾಕ್ಟೀರಿಯಾ ಮತ್ತು ವೈರಸ್ ಗಳಿಂದ ಉಂಟಾಗುತ್ತವೆ. ಕಿವಿ ನೋವು, ಜ್ವರ ಮತ್ತು ತಾತ್ಕಾಲಿಕವಾದ ಶ್ರವಣ ಶಕ್ತಿ ನಷ್ಟ ಕೆಲವು ಲಕ್ಷಣಗಳು.
2. ಸೈನಸೈಟಿಸ್: ಸೋಂಕು ಅಥವಾ ಅಲರ್ಜಿಗಳಿಂದಾಗಿ ಸೈನಸ್ ಕುಹರಗಳಲ್ಲಿ ಉರಿಯೂತ, ಮುಖದಲ್ಲಿ ನೋವು, ಮೂಗು ಕಟ್ಟುವುದು ಮತ್ತು ತಲೆನೋವು ಕೆಲವು ಪ್ರಮುಖ ಲಕ್ಷಣಗಳು.
3. ಟಾನ್ಸಿಲ್ಸ್ ಮತ್ತು ಫಾರಿಂಜೈಟಿಸ್: ಗಂಟಲು ನೋವು, ನುಂಗಲು ಕಷ್ಟ ಮತ್ತು ಕೆಲವೊಮ್ಮೆ ಜ್ವರವನ್ನೂ ಉಂಟು ಮಾಡುವ ಸೋಂಕುಗಳು.
4. ಅಲರ್ಜಿಕ್ ರಿನೈಟಿಸ್: ಪರಾಗರೇಣು, ಸಾಕುಪ್ರಾಣಿಗಳ ಮೈಧೂಳು ಅಥವಾ ಧೂಳಿನ ಅಲರ್ಜಿಯಿಂದ ಉಂಟಾಗುವ ಇದು ಸೀನು, ಮೂಗು ಕಟ್ಟುವುದು ಮತ್ತು ಕಣ್ಣುಗಳಲ್ಲಿ ತುರಿಕೆಯಂತಹ ಲಕ್ಷಣಗಳನ್ನು ಉಂಟು ಮಾಡುತ್ತದೆ.
5. ಶ್ರವಣಶಕ್ತಿ ನಷ್ಟ: ಕಿವಿ ಕುಗ್ಗೆ, ವೃದ್ಧಾಪ್ಯ, ಭಾರೀ ಸದ್ದಿಗೆ ಒಡ್ಡಿಕೊಳ್ಳುವಿಕೆ ಅಥವಾ ನರಶಾಸ್ತ್ರೀಯ ಹಾನಿಗಳಿಂದ ಉಂಟಾಗಬಹುದು.
6. ಟಿನ್ನಿಟಸ್: ಸತತವಾಗಿ ಅಥವಾ ಆಗಾಗ ಕಿವಿಗಳಲ್ಲಿ ಗುಂಯ್ ಗುಡುವ ಅಥವಾ ರಿಂಗಣಿಸುವ ಸದ್ದು.
7. ಸ್ಲೀಪ್ ಆಯಪ್ನಿಯಾ: ಉಸಿರಾಟ ಮಾರ್ಗದಲ್ಲಿ ಅಡಚಣೆಯಿಂದಾಗಿ ನಿದ್ದೆ ಹೋಗಿರುವಾಗ ಉಸಿರಾಟವು ಪದೇಪದೆ ಸ್ಥಗಿತಗೊಳ್ಳುವ, ಕೆಲವು ಬಾರಿ ಅಪಾಯಕಾರಿಯಾದ ಅನಾರೋಗ್ಯ.
8. ಮೂಗಿನಲ್ಲಿ ದುರ್ಮಾಂಸ (ನೇಸಲ್ ಪಾಲಿಪ್ಸ್) ಅಥವಾ ವಕ್ರ ಮೂಗು: ಇದರಿಂದಾಗಿ ಉಸಿರಾಟದಲ್ಲಿ ಅಡಚಣೆ, ಉಸಿರಾಟಕ್ಕೆ ಕಷ್ಟ ಮತ್ತು ಸೈನಸ್ ಸೋಂಕುಗಳ ಅಪಾಯ ಹೆಚ್ಚಬಹುದು.
ಈ ಅನಾರೋಗ್ಯಗಳನ್ನು ಸಾಮಾನ್ಯವಾಗಿ ಚಿಕಿತ್ಸೆಯ ಮೂಲಕ ನಿಭಾ ಯಿಸಬಹುದಾದರೂ ಕೆಲವೊಮ್ಮೆ ಸರಿಯಾಗಿ ಚಿಕಿತ್ಸೆ ಒದಗಿಸದೆ ಇದ್ದಲ್ಲಿ ದೈನಿಕ ಕಾರ್ಯಚಟುವಟಿಕೆಗಳಲ್ಲಿ ಅಡಚಣೆ ಉಂಟು ಮಾಡಬಲ್ಲವು.
ಬಾಲ್ಯದಿಂದ ಮುಪ್ಪಿನವರೆಗೆ – ಇಎನ್‌ಟಿ ಆರೋಗ್ಯ
ದೇಹಶಾಸ್ತ್ರೀಯವಾಗಿ ವಿಭಿನ್ನವಾಗಿರುವ ಮತ್ತು ರೋಗ ನಿರೋಧಕ ಶಕ್ತಿ ಬೆಳೆದಿಲ್ಲದ ಮಕ್ಕಳಲ್ಲಿ ಇಎನ್‌ಟಿ ಸಮಸ್ಯೆಗಳು ಹೆಚ್ಚು ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತವೆ. ಕಿವಿಯ ಸೋಂಕುಗಳು, ಅಡೆನಾಯ್ಡಗಳು ಊದಿಕೊಳ್ಳುವುದು, ಟಾನ್ಸಿಲ್ಸ್ ಮತ್ತು ಮಾತು ವಿಳಂಬವಾಗುವುದು ಕೆಲವು ಸಾಮಾನ್ಯ ಸಮಸ್ಯೆಗಳು. ಇವುಗಳಿಂದಾಗಿ ಶ್ರವಣ ಶಕ್ತಿ ನಷ್ಟ ಅಥವಾ ಬೆಳವಣಿಗೆಯಲ್ಲಿ ವಿಳಂಬದಂತಹ ದೀರ್ಘಕಾಲಿಕ ದುಷ್ಪರಿಣಾಮಗಳು ಉಂಟಾಗದಂತೆ ಮಕ್ಕಳ ಇಎನ್‌ಟಿ ಆರೈಕೆ ಅಥವಾ ಪೀಡಿಯಾಟ್ರಿಕ್ ಇಎನ್‌ಟಿ ಕೇರ್ ನೋಡಿಕೊಳ್ಳುತ್ತದೆ.
ವಯಸ್ಕರಲ್ಲಿ ಒತ್ತಡ, ಪರಿಸರ ಮಾಲಿನ್ಯ, ಧೂಮಪಾನ ಮತ್ತು ಜೀವನ ಶೈಲಿಯ ಅಂಶಗಳಿಂದಾಗಿ ಸೈನಸೈಟಿಸ್, ಧ್ವನಿ ಕೀರಲಾಗುವುದು ಮತ್ತು ಅಲರ್ಜಿಕ್ ರಿನೈಟಿಸ್ ನಂತಹ ಇಎನ್‌ಟಿ ತೊಂದರೆಗಳು ಉಂಟಾಗುತ್ತವೆ. ನಿಯಮಿತವಾಗಿ ಇಎನ್‌ಟಿ ತಪಾಸಣೆ ಮಾಡಿಸಿಕೊಳ್ಳುವುದು ಮತ್ತು ಪುನರಾವರ್ತನೆಯಾಗುವ ಲಕ್ಷಣಗಳಿಗೆ ಸೂಕ್ತ ಚಿಕಿತ್ಸೆ ಪಡೆದುಕೊಳ್ಳುವುದರಿಂದ ತೀವ್ರ ಸ್ವರೂಪದ ತೊಂದರೆಗಳು ಉಂಟಾಗದಂತೆ ತಡೆಯಬಹುದು.
ವಯೋವೃದ್ದರಲ್ಲಿ ಶ್ರವಣ ಶಕ್ತಿ ನಷ್ಟ (ಪ್ರಿಸ್ಟಿಕಸಿಸ್), ಸಮತೋಲನದ ಸಮಸ್ಯೆಗಳು, ಧ್ವನಿ ದೀರ್ಘಕಾಲ ಕೀರಲಾಗುವುದು ಮತ್ತು ನುಂಗಲು ಕಷ್ಟ ಮುಖ್ಯವಾಗಿ ಕಂಡುಬರುತ್ತವೆ. ಇವುಗಳಿಂದಾಗಿ ಸಂವಹನ, ಚಲನವಲನ ಮತ್ತು ಸ್ವಾವಲಂಬನೆಗೆ ತೊಂದರೆಯುಂಟಾಗುತ್ತದೆ. ಶ್ರವಣ ಸಾಧನಗಳಂತಹ ಸಹಾಯಕ ಸಲಕರಣೆಗಳ ಜತೆಗೆ ನಿರ್ದಿಷ್ಟ ಚಿಕಿತ್ಸೆಗಳು ಮತ್ತು ಔಷಧಗಳ ಮೂಲಕ ಈ ಸಮಸ್ಯೆಗಳನ್ನು ಹೊಂದಿರುವ ವಯೋವೃದ್ಧರ ಜೀವನ ಗುಣಮಟ್ಟವನ್ನು ಸಾಕಷ್ಟು ಸುಧಾರಿಸಬಹುದಾಗಿದೆ.
ತಡೆ ಮತ್ತು ಸ್ವಯಂ ಆರೈಕೆ
ಇಎನ್‌ಟಿ ಆರೋಗ್ಯ ರಕ್ಷಣೆಯಲ್ಲಿ ರೋಗ ಬಾರದಂತೆ ತಡೆ ಮುಖ್ಯ ಪಾತ್ರವನ್ನು ನಿರ್ವಹಿಸುತ್ತದೆ. ಕೆಲವು ಸರಳವಾದ ನೈರ್ಮಲ್ಯ ಮತ್ತು ಜೀವನ ವಿಧಾನ ಕ್ರಮಗಳನ್ನು ಅನುಸರಿಸುವುದರಿಂದ ಹಲವಾರು ಇಎನ್‌ಟಿ ಸಮಸ್ಯೆಗಳನ್ನು ತಡೆಗಟ್ಟಬಹುದು ಅಥವಾ ಕನಿಷ್ಟ ಮಟ್ಟಕ್ಕಿಳಿಸಬಹುದು:
ಕಿವಿಗಳು
- ಕಿವಿಯೊಳಗೆ ಹತ್ತಿಯುಂಡೆ, ಮೊನಚಾದ ವಸ್ತುಗಳು ಇತ್ಯಾದಿ ತುರುಕಿಸಬೇಡಿ.
- ನಿರ್ದಿಷ್ಟವಾಗಿ ಈಜುವಿಕೆಯ ಬಳಿಕ ಕಿವಿಗಳನ್ನು ಶುಷ್ಕವಾಗಿ ಇರಿಸಿಕೊಳ್ಳಿ.
- ಭಾರೀ ಸದ್ದುಗದ್ದಲದ ಪರಿಸರದಲ್ಲಿ ಕಿವಿ ರಕ್ಷಕ ವಸ್ತುಗಳನ್ನು ಧರಿಸಿ.
- ಕಿವಿಗಳಲ್ಲಿ ಸತತ ಗುಂಯ್ ಗುಡುವಿಕೆ, ರಿಂಗಣದ ಸದ್ದು, ನೋವು ಅಥವಾ ಶ್ರವಣ ಶಕ್ತಿ ನಷ್ಟ ಇದ್ದಲ್ಲಿ ವೈದ್ಯರಿಗೆ ತೋರಿಸಿ ತಪಾಸಣೆ ಮಾಡಿಸಿಕೊಳ್ಳಿ.
ಮೂಗು
- ಧೂಳು, ಹೊಗೆ ಮತ್ತು ತೀಕ್ಷ್ಣವಾದ ಸುಗಂಧ ದ್ರವ್ಯಗಳಂತಹ ಸಾಮಾನ್ಯ ಅಲರ್ಜಿಕಾರಕಗಳು ಮತ್ತು ತೊಂದರೆದಾಯಕಗಳಿಂದ ದೂರವಿರಿ.
- ಮೂಗಿನ ಒಳಭಾಗ ಆರ್ದ್ರವಾಗಿರುವುದಕ್ಕಾಗಿ ಸಾಕಷ್ಟು ನೀರು ಕುಡಿಯಿರಿ.
- ಮೂಗು ಕಟ್ಟಿದ ಸಂದರ್ಭಗಳಲ್ಲಿ ಸಲೈನ್ ಸ್ಪ್ರೇಗಳು ಅಥವಾ ಸ್ಟೀಮ್ ತೆಗೆದುಕೊಳ್ಳುವಂತಹ ಕ್ರಮಗಳನ್ನು ಅನುಸರಿಸಿ.
- ಸೋಂಕುಗಳು ಹರಡುವುದನ್ನು ತಡೆಯಲು ಉತ್ತಮ ನೈರ್ಮಲ್ಯ ಕ್ರಮಗಳನ್ನು ಅನುಸರಿಸಿ.
ಗಂಟಲು
- ಕಿರಿಚಾಡುವುದು ಅಥವಾ ಧ್ವನಿಯ ಮಿತಿಮೀರಿದ ಬಳಕೆ ಮಾಡಬಾರದು.
- ಸಾಕಷ್ಟು ನೀರು ಕುಡಿಯಿರಿ ಹಾಗೂ ಅತಿಯಾದ ಕೆಫಿನ್ ಮತ್ತು ಮದ್ಯಪಾನದಿಂದ ದೂರವಿರಿ.
- ಧೂಮಪಾನ ಅಥವಾ ತಂಬಾಕು ಉತ್ಪನ್ನಗಳ ಬಳಕೆಯಿಂದ ದೂರವಿರಿ.
- ಉತ್ತಮ ಆಹಾರ ಕ್ರಮ ಮತ್ತು ಚಿಕಿತ್ಸೆಯಿಂದ ಹುಳಿತೇಗು ಅಥವಾ ಆಯಸಿಡ್ ರಿಫ್ಲೆಕ್ಸ್ ಸಮಸ್ಯೆಯನ್ನು ಪರಿಹರಿಸಿಕೊಳ್ಳಿ.
ಇಎನ್‌ಟಿ ಮತ್ತು ಋತು ಸಹಜ ಅನಾರೋಗ್ಯಗಳು
ಅನೇಕ ಇಎನ್‌ಟಿ ಅನಾರೋಗ್ಯಗಳು, ವಿಶೇಷವಾಗಿ ಅಲರ್ಜಿಗಳು ಮತ್ತು ವೈರಲ್ ಸೋಂಕುಗಳು ಋತು ಸಂಬಂಧಿಯಾಗಿರುತ್ತವೆ. ಮಳೆಗಾಲ ಮತ್ತು ಚಳಿಗಾಲದಲ್ಲಿ ಸೈನಸೈಟಿಸ್, ಗಂಟಲು ನೋವು ಮತ್ತು ಕಿವಿಯ ಸೋಂಕುಗಳು ಹೆಚ್ಚು ಕಂಡುಬರುತ್ತವೆ. ಅಸ್ತಮಾ, ಅಲರ್ಜಿಕ್ ರಿನೈಟಿಸ್ ಅಥವಾ ಬ್ರಾಂಕೈಟಿಸ್ ರೋಗಿಗಳಲ್ಲಿ ಸಮಸ್ಯೆಗಳು ಈ ಋತುಗಳಲ್ಲಿ ಉಲ್ಬಣಗೊಳ್ಳುತ್ತವೆ.
ಅಲರ್ಜಿಕಾರಕಗಳಿಂದ ದೂರವಿರುವುದು, ವಾತಾವರಣದಲ್ಲಿ ಪರಾಗರೇಣು ಅಧಿಕವಿರುವ ಸಮಯದಲ್ಲಿ ಮಾಸ್ಕ್ ಧರಿಸುವುದು ಹಾಗೂ ವಾಸ್ತವ್ಯ ಸ್ಥಳಗಳನ್ನು ಶುಚಿಯಾಗಿ ಮತ್ತು ಸಾಕಷ್ಟು ಗಾಳಿ ಬೆಳಕು ಓಡಾಡುವಂತೆ ಇರಿಸಿಕೊಳ್ಳುವಂತ ಪ್ರತಿಬಂಧಕಾತ್ಮಕ ಕ್ರಮಗಳಿಂದ ಈ ಋತುಸಂಬಂಧಿ ಸಮಸ್ಯೆಗಳು ಉಲ್ಬಣಗೊಳ್ಳುವುದನ್ನು ತಡೆಗಟ್ಟಬಹುದಾಗಿದೆ. ಋತುಸಂಬಂಧಿ ಅಲರ್ಜಿಗಳಿಂದ ಬಳಲುವವರು ಆಯಂಟಿಹಿಸ್ಟಮಿನ್ ಔಷಧಗಳು ಅಥವಾ ಇಮ್ಯುನೋಥೆರಪಿಯಂತಹ ದೀರ್ಘಕಾಲೀನ ಅಲರ್ಜಿ ಚಿಕಿತ್ಸೆಗಳಿಂದ ಪ್ರಯೋಜನ ಪಡೆಯಬಹುದಾಗಿದೆ.
ಇಎನ್‌ಟಿ ತಜ್ಞರನ್ನು ಯಾವಾಗ ಕಾಣಬೇಕು?
ಓಟೊಲ್ಯಾರಿಂಜಾಲಜಿಸ್ಟ್ ಎಂದೂ ಕರೆಯಲ್ಪಡುವ ಇಎನ್‌ಟಿ ಅಥವಾ ಕಿವಿ-ಮೂಗು – ಗಂಟಲು ತಜ್ಞರು ಈ ಅಂಗಗಳಿಗೆ ಸಂಬಂಧಿಸಿದ ವೈದ್ಯಕೀಯ ಮತ್ತು ಶಸ್ತ್ರಚಿಕಿತ್ಸಾತ್ಮಕ ವಿಷಯಗಳಲ್ಲಿ ಪರಿಣತರಾಗಿರುತ್ತಾರೆ. ನೀವು ಈ ಕೆಳಕಂಡ ಲಕ್ಷಣಗಳನ್ನು ಹೊಂದಿದ್ದರೆ ಇಎನ್‌ಟಿ ತಜ್ಞರನ್ನು ಭೇಟಿಯಾಗುವುದನ್ನು ಪರಿಗಣಿಸಬಹುದು:
- ಪದೇ ಪದೆ ಅಥವಾ ದೀರ್ಘಕಾಲದಿಂದ ಕಿವಿಯ ಸೋಂಕು
- ಬಹಳ ಕಾಲದಿಂದ ಇರುವ ಅಥವಾ ಕಾರಣವಿಲ್ಲದ ಕೀರಲು ಧ್ವನಿ
- ಸತತವಾದ ಮೂಗು ಕಟ್ಟುವಿಕೆ ಅಥವಾ ಸೈನಸ್ ನೋವು
- ಪದೇ ಪದೆ ಟಾನ್ಸಿಲ್ ಸೋಂಕು
- ಕೇಳಿಸುವಿಕೆಯಲ್ಲಿ ಕಷ್ಟಗಳು
- ದೇಹ ಸಮತೋಲನದ ಸಮಸ್ಯೆಗಳು ಅಥವಾ ತಲೆ ತಿರುಗುವುದು
- ಮೂಗು ಕಟ್ಟುವುದರಿಂದಾಗಿ ಉಸಿರಾಟದ ಸಮಸ್ಯೆಗಳು
- ಗೊರಕೆ ಅಥವಾ ಸ್ಲೀಪ್ ಆಯಪ್ನಿಯಾದಿಂದಾಗಿ ನಿದ್ದೆಗೆ ಅಡಚಣೆ
ಇಎನ್‌ಟಿ ತಜ್ಞರು ಎಂಡೊಸ್ಕೋಪ್, ಶ್ರವಣ ಪರೀಕ್ಷೆ, ಇಮೇಜಿಂಗ್ (ಸಿಟಿ/ ಎಂಆರ್‌ಐ) ಮತ್ತು ಅಲರ್ಜಿ ಪರೀಕ್ಷೆಗಳ ಮೂಲಕ ಅನಾರೋಗ್ಯವನ್ನು ಪತ್ತೆಹಚ್ಚುತ್ತಾರೆ. ಜತೆಗೆ ಪತ್ತೆಯಾದ ಸಮಸ್ಯೆಯನ್ನು ಆಧರಿಸಿ ಔಷಧಗಳನ್ನು, ಜೀವನ ಶೈಲಿ ಬದಲಾವಣೆಗಳನ್ನು ಶಿಫಾರಸು ಮಾಡಬಹುದು ಅಥವಾ ಸಣ್ಣ ಯಾ ದೊಡ್ಡ ಶಸ್ತ್ರಚಿಕಿತ್ಸೆಗಳನ್ನು ನಡೆಸಬಹುದು.
source: Udayavani
Views: 39