ರೋಚಕತೆ ಹುಟ್ಟಿಸಿದೆ ಟಾಪ್ ಶ್ರೇಯಾಂಕಿತರ ಕಾಳಗ: ಭಾರತ, ಆಸೀಸ್ ಮೊದಲ ಟಿ20 ಫೈಟ್
ಆಸ್ಟ್ರೇಲಿಯಾದಲ್ಲಿ ಏಕದಿನ ಸರಣಿ ನಡೆದಾಗ 2027ರಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ಬಗ್ಗೆ ಹೆಚ್ಚಿನ ಮಾತುಗಳು ಕೇಳಿ ಬಂದವು. ಇನ್ನು ಬುಧವಾರದಿಂದ ಆರಂಭವಾಗಲಿರುವ ಟಿ20 ಸರಣಿಯ ವೇಳೆ ಮುಂದಿನ ವರ್ಷ ನಡೆಯಲಿರುವ ಟಿ20 ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡ ಯಾವುದು ಎಂಬ ಪ್ರಶ್ನೆಗೆ ಸರಣಿ ಮುಗಿದ ಬಳಿಕ ಉತ್ತರ ಸಿಗಲಿದೆ.
ಭಾರತ ಹಾಗೂ ಶ್ರೀಲಂಕಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ನ್ನು ದೃಷ್ಟಿಯಲ್ಲಿ ಇಟ್ಟುಕೊಂಡೇ ಈ ಪಂದ್ಯವನ್ನು ನೋಡಲಾಗುತ್ತಿದೆ. ಏಷ್ಯಾ ಕಪ್‌ನಲ್ಲಿ ಸೂಪರ್ ಪ್ರದರ್ಶನ ನೀಡಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿರುವ ಭಾರತ, ಮತ್ತೊಂದು ಸರಣಿ ಗೆಲುವಿನ ಕನಸಿನಲ್ಲಿದೆ.
ವಿಶ್ವದ ನಂಬರ್ 1 ತಂಡವಾಗಿರುವ ಭಾರತ ಹಾಗೂ 2ನೇ ಶ್ರೇಯಾಂಕಿತ ಆಸ್ಟ್ರೇಲಿಯಾ ನಡುವಿನ ಜಿದ್ದು ಕಣ್ಣು ತುಂಬಿಕೊಳ್ಳಲು ಅಭಿಮಾನಿಗಳೆಲ್ಲಾ ತುದಿಗಾಲಿನಲ್ಲಿ ನಿಂತಿದ್ದಾರೆ. ಅಂಕಿ ಅಂಶಗಳ ಲೆಕ್ಕಾಚಾರದಲ್ಲಿ ಭಾರತ ಬಲಿಷ್ಠವಾಗಿದ್ದು, ತನ್ನ ಅಂಕಿ ಅಂಶಗಳನ್ನು ಇನ್ನು ಬೆಸ್ಟ್ ಮಾಡಿಕೊಳ್ಳಲು ಕಣಕ್ಕೆ ಇಳಿಯಲಿದೆ. ಉಭಯ ತಂಡಗಳಲ್ಲೂ ಸ್ಟಾರ್ ಆಟಗಾರರು ಇದ್ದು ರೋಚಕತೆ ಹೆಚ್ಚಿಸಿದೆ.
ಅಭಿಷೇಕ್ ಶರ್ಮಾ ಮೇಲೆ ಚಿತ್ತ
ವಿಶ್ವದ ನಂಬರ್ 1 ಟಿ20 ಬ್ಯಾಟರ್ ಅಭಿಷೇಕ್ ಶರ್ಮಾ ಬುಧವಾರ ಕಣಕ್ಕೆ ಇಳಿಯಲಿದ್ದಾರೆ. ದುಬೈನಲ್ಲಿ ನಡೆದಿದ್ದ ಏಷ್ಯಾ ಕಪ್ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಸ್ಥಿರ ಪ್ರದರ್ಶನ ನೀಡಿದ್ದ ಅಭಿಷೇಕ್, ಭರವಸೆ ಮೂಡಿಸಿದ್ದಾರೆ. ಆಸ್ಟ್ರೇಲಿಯಾದಲ್ಲೂ ಇದೇ ಪ್ರದರ್ಶನ ನೀಡುವ ಕನಸು ಅಭಿಷೇಕ್ ಅವರದ್ದಾಗಿದೆ. ಇನ್ನು ಇವರೊಂದಿಗೆ ಆರಂಭಿಕರಾಗಿ ಶುಭಮನ್ ಗಿಲ್ ಕಣಕ್ಕೆ ಇಳಿಯಲಿದ್ದಾರೆ. ಇವರು ತಮ್ಮ ನೈಜ್ಯ ಆಟವನ್ನು ಆಡಿ ತಂಡಕ್ಕೆ ಆಧಾರವಾಗಬೇಕಿದೆ. ಮಧ್ಯಮ ಕ್ರಮಾಂಕದಲ್ಲಿ ಸೂರ್ಯಕುಮಾರ್ ಯಾದವ್ ಕಳೆದುಕೊಂಡಿರುವ ತಮ್ಮ ಲಯವನ್ನು ಮರಳಿ ಪಡೆಯಬೇಕಿದೆ. ತಿಲಕ್ ವರ್ಮಾ ಏಷ್ಯಾ ಕಪ್ ಟಿ20 ಟೂರ್ನಿಯಲ್ಲಿ ನೀಡಿದ ಪ್ರದರ್ಶನವನ್ನೇ ಮುಂದುವರೆಸುವ ಅನಿವಾರ್ಯತೆ ಇದೆ.
ವಿಕೆಟ್ ಕೀಪರ್ ಬ್ಯಾಟರ್ ಆಗಿ ಸಂಜು ಸ್ಯಾಮ್ಸನ್ ಕಣಕ್ಕೆ ಇಳಿಯಲಿದ್ದಾರೆ. ಫಿನಿಷರ್ ಪಾತ್ರದಲ್ಲಿ ರಿಂಕು ಸಿಂಗ್ ಮೈದಾನಕ್ಕೆ ಇಳಿಯಬಹುದು. ಆಲ್‌ರೌಂಡರ್ ರೂಪದಲ್ಲಿ ಅಕ್ಷರ್ ಪಟೇಲ್, ಶಿವಂ ದುಬೆ ಇಬ್ಬರಲ್ಲಿ ಒಬ್ಬರಿಗೆ ಅವಕಾಶ ಸಿಗುವ ಸಾಧ್ಯತೆ ಇದೆ. ಸ್ಪಿನ್ ಬೌಲರ್‌ಗಳಾಗಿಯೂ ಕುಲ್‌ದೀಪ್ ಯಾದವ್, ವರುಣ್ ಚಕ್ರವರ್ತಿ ಇಬ್ಬರಲ್ಲಿ ಒಬ್ಬರಿಗೆ ಚಾನ್ಸ್ ಸಿಗಲಿದೆ. ಭಾರತ ತಂಡಕ್ಕೆ ಜಸ್ಪ್ರಿತ್ ಬುಮ್ರಾ ಮತ್ತೆ ಕಂ ಬ್ಯಾಕ್ ಮಾಡಿದ್ದು, ಬಲ ಹೆಚ್ಚಿದೆ. ಎಡಗೈ ವೇಗಿ ಅರ್ಷದೀಪ್ ಸಿಂಗ್ ತಮ್ಮ ಬಿಗುವಿನ ದಾಳಿಯ ಮೂಲಕ ಆಸೀಸ್ ಬ್ಯಾಟರ್‌ಗಳನ್ನು ಕಾಡಬೇಕಿದೆ.
ಸ್ಟಾರ್‌ಗಳ ಬಲ
ಆತಿಥೇಯ ಆಸ್ಟ್ರೇಲಿಯಾ ತಂಡದಲ್ಲೂ ಟಿ20 ಫಾರ್ಮೆಟ್‌ನ ಸ್ಟಾರ್ ಆಟಗಾರರು ಇದ್ದಾರೆ. ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಷ್, ಟೀಮ್ ಡೇವಿಡ್ ತಮ್ಮ ನೈಜ್ಯ ಆಟ ಪ್ರದರ್ಶಿಸಿ ತಂಡಕ್ಕೆ ನೆರವಾಗಬಲ್ಲರು. ವೇಗದ ಬೌಲಿಂಗ್ ನೊಗವನ್ನು ಜೋಶ್ ಹ್ಯಾಜಲ್‌ವುಡ್ ಹೊರಲಿದ್ದು, ಮ್ಯಾಟ್ ಕುಹ್ನೆಮನ್ ಸ್ಪಿನ್ ಬೌಲರ್ ರೂಪದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
Views: 15