ಲೋಕಸಭೆ ಚುನಾವಣೆ ವೇಳಾಪಟ್ಟಿ ಪ್ರಕಟ ಬೆನ್ನಲ್ಲೇ ನೀತಿ ಸಂಹಿತೆ ಜಾರಿ: ಯಾವೆಲ್ಲ ಚಟುವಟಿಕೆಗೆ ನಿರ್ಬಂಧ? ಇಲ್ಲಿದೆ ವಿವರ

Model Code of Conduct: ಲೋಕಸಭೆ ಚುನಾವಣೆ ದಿನಾಂಕ ಪ್ರಕಟಗೊಂಡ ಬೆನ್ನಲ್ಲೇ ಚುನಾವಣಾ ಮಾದರಿ ನೀತಿ ಸಂಹಿತೆ ಕೂಡ ಜಾರಿಗೆ ಬರಲಿದೆ. ನೀತಿ ಸಂಹಿತೆ ನಿಯಮದಡಿ ಯಾವೆಲ್ಲ ಚಟುವಟಿಕೆಗಳಿಗೆ ನಿರ್ಬಂಧವಿದೆ? ಜನಸಾಮಾನ್ಯರ ಮೇಲೆ ಕೂಡ ಈ ನಿಯಮಗಳು ಹೇಗೆ ಪ್ರಭಾವ ಬೀರುತ್ತವೆ ಎಂಬ ವಿವರ ಇಲ್ಲಿದೆ.

ಲೋಕಸಭೆ ಚುನಾವಣೆ ವೇಳಾಪಟ್ಟಿ  ಪ್ರಕಟವಾಗಿದ್ದ,. ಇದರೊಂದಿಗೆ ಕೆಲವು ರಾಜ್ಯಗಳ ವಿಧಾನಸಭಾ ಚುನಾವಣೆಯ ದಿನಾಂಕವೂ ಪ್ರಕಟವಾಗಿದೆ. ವಿಧಾನಸಭೆ ಚುನಾವಣೆ ನಡೆಯಲಿರುವ ರಾಜ್ಯಗಳಲ್ಲಿ ಒಡಿಶಾ, ಸಿಕ್ಕಿಂ, ಅರುಣಾಚಲ ಪ್ರದೇಶ ಮತ್ತು ಆಂಧ್ರಪ್ರದೇಶ ಸೇರಿವೆ. ಚುನಾವಣಾ ಮಾದರಿ ನೀತಿ ಸಂಹಿತೆ (Model Code of Conduct) ದೇಶಾದ್ಯಂತ ಜಾರಿಗೆ ಬರುತ್ತದೆ. ನೀತಿ ಸಂಹಿತೆ ಎಂದರೆ ಏನು, ಅದನ್ನು ಯಾರು ಜಾರಿಗೊಳಿಸುತ್ತಾರೆ? ಅದು ಜಾರಿಯಾದ ನಂತರ ಯಾವೆಲ್ಲ ಚಟುವಟಿಕೆಗಳಿಗೆ ನಿರ್ಬಂಧವಿರುತ್ತದೆ ಮತ್ತು ಯಾವುದಕ್ಕೆಲ್ಲ ಅನುಮತಿ ಇದೆ ಎಂಬ ಮಾಹಿತಿ ಇಲ್ಲಿದೆ.

ನೀತಿ ಸಂಹಿತೆ ಎಂದರೇನು?

ದೇಶದಲ್ಲಿ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಸಲು ಚುನಾವಣಾ ಆಯೋಗ ಕೆಲವು ನಿಯಮಗಳನ್ನು ರೂಪಿಸಿದೆ. ಈ ನಿಯಮಗಳನ್ನು ನೀತಿ ಸಂಹಿತೆ ಎಂದು ಕರೆಯಲಾಗುತ್ತದೆ. ಲೋಕಸಭೆ ಅಥವಾ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ರಾಜಕೀಯ ಪಕ್ಷಗಳು ಈ ನಿಯಮಗಳನ್ನು ಪಾಲಿಸುವುದು ಅಗತ್ಯ. ಚುನಾವಣಾ ಸಂದರ್ಭದಲ್ಲಿ ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳು ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬುದನ್ನು ನೀತಿ ಸಂಹಿತೆಯ ಅಡಿಯಲ್ಲಿ ತಿಳಿಸಲಾಗಿದೆ. ಭಾರತದ ಸಂವಿಧಾನದ 324 ನೇ ವಿಧಿಯ ಅಡಿಯಲ್ಲಿ, ಚುನಾವಣಾ ಆಯೋಗವು ಶಾಂತಿಯುತ ಚುನಾವಣೆಗಳಿಗಾಗಿ ನೀತಿ ಸಂಹಿತೆಯನ್ನು ಅನುಸರಿಸಲು ರಾಜಕೀಯ ಪಕ್ಷಗಳಿಗೆ ಸೂಚನೆ ನೀಡುತ್ತದೆ.

ನೀತಿ ಸಂಹಿತೆ ಮೊದಲು ಆರಂಭವಾದದ್ದು ಯಾವಾಗ?

1960 ರಲ್ಲಿ ಕೇರಳ ವಿಧಾನಸಭೆ ಚುನಾವಣೆಯಲ್ಲಿ ನೀತಿ ಸಂಹಿತೆಯನ್ನು ಮೊದಲು ಪರಿಚಯಿಸಲಾಯಿತು. 1962ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಚುನಾವಣಾ ಆಯೋಗ ಮೊದಲ ಬಾರಿಗೆ ಈ ನಿಯಮಗಳ ಬಗ್ಗೆ ರಾಜಕೀಯ ಪಕ್ಷಗಳಿಗೆ ಮಾಹಿತಿ ನೀಡಿತ್ತು. ನೀತಿ ಸಂಹಿತೆ ವ್ಯವಸ್ಥೆಯು 1967ರ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳಿಂದ ಜಾರಿಗೆ ಬಂದಿತು. ಸಂಹಿತೆ ಜಾರಿಗೆ ಬಂದ ನಂತರ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ನೌಕರರು ಚುನಾವಣಾ ಆಯೋಗದ ನೌಕರರಾಗಿ ಕೆಲಸ ಮಾಡಬೇಕೇ ಹೊರತು ಚುನಾವಣಾ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಸರ್ಕಾರದ ನೌಕರರಲ್ಲ. ಚುನಾವಣೆ ಮುಗಿದ ನಂತರ ನೀತಿ ಸಂಹಿತೆ ರದ್ದಾಗುತ್ತದೆ.

ಸಚಿವರು, ಶಾಸಕರಿಗೆ ಏನೇನು ನಿರ್ಬಂಧ?

ಸಚಿವರು ಸರ್ಕಾರಿ ವೆಚ್ಚದಲ್ಲಿ ಚುನಾವಣಾ ರ‍್ಯಾಲಿ ನಡೆಸುವಂತಿಲ್ಲ. ಈ ಅವಧಿಯಲ್ಲಿ ಸಚಿವರು ತಮ್ಮ ನಿವಾಸದಿಂದ ಕಚೇರಿಗೆ ಹೋಗಲು ಮಾತ್ರ ಸರ್ಕಾರಿ ವಾಹನಗಳನ್ನು ಬಳಸಬಹುದು. ಚುನಾವಣಾ ರ‍್ಯಾಲಿಗಳು ಮತ್ತು ಪ್ರವಾಸಗಳಿಗೆ ಅವುಗಳನ್ನು ಬಳಸಬಾರದು.

ನೀತಿ ಸಂಹಿತೆ ನಿಯಮಗಳು ಹೀಗಿವೆ

ನೀತಿ ಸಂಹಿತೆ ಜಾರಿಯಾದ ನಂತರ ಯಾವುದೇ ರಾಜಕೀಯ ಪಕ್ಷಕ್ಕೆ ಲಾಭವಾಗುವಂತೆ ಯಾವುದೇ ಸಂದರ್ಭದಲ್ಲಿ ಸರ್ಕಾರದ ಹಣವನ್ನು ಬಳಸುವಂತಿಲ್ಲ. ಸರ್ಕಾರದ ಘೋಷಣೆಗಳು, ಉದ್ಘಾಟನೆಗಳು, ಶಂಕುಸ್ಥಾಪನೆ ಮುಂತಾದ ಎಲ್ಲಾ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದಿಲ್ಲ. ಆದರೆ ಕೆಲವು ಕೆಲಸಗಳು ಈಗಾಗಲೇ ಪ್ರಾರಂಭವಾಗಿದ್ದರೆ ಅದನ್ನು ಮುಂದುವರಿಸಬಹುದು.

ದೇವಸ್ಥಾನ, ಮಸೀದಿ, ಚರ್ಚ್, ಗುರುದ್ವಾರ ಅಥವಾ ಯಾವುದೇ ಧಾರ್ಮಿಕ ಸ್ಥಳವನ್ನು ಚುನಾವಣಾ ಪ್ರಚಾರಕ್ಕೆ ಬಳಸುವಂತಿಲ್ಲ.

ನೀತಿ ಸಂಹಿತೆಯ ಅಡಿಯಲ್ಲಿ, ಸರ್ಕಾರವು ಯಾವುದೇ ಸರ್ಕಾರಿ ಅಧಿಕಾರಿ ಅಥವಾ ಉದ್ಯೋಗಿಯನ್ನು ವರ್ಗಾಯಿಸಲು ಅಥವಾ ಪೋಸ್ಟ್ ಮಾಡಲು ಸಾಧ್ಯವಿಲ್ಲ. ವರ್ಗಾವಣೆ ಬಹಳ ಮುಖ್ಯವಾಗಿದ್ದರೆ ಚುನಾವಣಾ ಆಯೋಗದಿಂದ ಅನುಮತಿ ಪಡೆಯುವುದು ಅಗತ್ಯ.

ಸಾರ್ವಜನಿಕ ಅಥವಾ ಖಾಸಗಿ ಸ್ಥಳದಲ್ಲಿ ಸಭೆ ಆಯೋಜಿಸುವ, ಮೆರವಣಿಗೆ ನಡೆಸುವ ಮತ್ತು ಧ್ವನಿವರ್ಧಕಗಳನ್ನು ಬಳಸುವ ಮೊದಲು ಸ್ಥಳೀಯ ಪೊಲೀಸ್ ಅಧಿಕಾರಿಗಳಿಂದ ಲಿಖಿತ ಅನುಮತಿಯನ್ನು ಪಡೆಯುವುದು ಅವಶ್ಯಕ. ರಾತ್ರಿ 10.00 ರಿಂದ ಬೆಳಗ್ಗೆ 6.00 ರವರೆಗೆ ಧ್ವನಿವರ್ಧಕಗಳನ್ನು ಬಳಸುವಂತಿಲ್ಲ.

ನೀತಿ ಸಂಹಿತೆ ಉಲ್ಲಂಘಿಸಿದರೆ ಏನಾಗುತ್ತದೆ?

ಯಾವುದೇ ರಾಜಕೀಯ ಪಕ್ಷ ಅಥವಾ ಅದರ ಅಭ್ಯರ್ಥಿ ನೀತಿ ಸಂಹಿತೆಯನ್ನು ಉಲ್ಲಂಘಿಸಿದರೆ, ಅಂಥವರನ್ನು ಪ್ರಚಾರದಿಂದ ನಿಷೇಧಿಸಬಹುದು. ಅಭ್ಯರ್ಥಿಯು ಚುನಾವಣೆಗೆ ಸ್ಪರ್ಧಿಸದಂತೆ ನಿರ್ಬಂಧಿಸಬಹುದು. ಇಷ್ಟೇ ಅಲ್ಲ, ಅಗತ್ಯವಿದ್ದರೆ, ಅಭ್ಯರ್ಥಿಯ ವಿರುದ್ಧ ಕ್ರಿಮಿನಲ್ ಮೊಕದ್ದಮೆಯನ್ನು ಸಹ ದಾಖಲಿಸಬಹುದು ಮತ್ತು ಆತ ಜೈಲುಪಾಲಾಗುವ ಸಾಧ್ಯತೆಯೂ ಇದೆ.

ಜನ ಸಾಮಾನ್ಯರಿಗೆ ನೀತಿ ಸಂಹಿತೆ ಹೇಗೆ ಅನ್ವಯ?

ನೀತಿ ಸಂಹಿತೆ ಕೇವಲ ರಾಜಕೀಯ ಪಕ್ಷಗಳಿಗೆ ಅಥವಾ ಅಭ್ಯರ್ಥಿಗಳಿಗೆ ಸೀಮಿತವಾಗಿಲ್ಲ. ಇದು ಸಾಮಾನ್ಯರಿಗೂ ಅನ್ವಯಿಸುತ್ತದೆ. ಅಂದರೆ, ಯಾರಾದರೂ ತಮ್ಮ ನಾಯಕರ ಪ್ರಚಾರದಲ್ಲಿ ತೊಡಗಿದ್ದರೆ, ಅವರು ಈ ನಿಯಮಗಳನ್ನು ಅನುಸರಿಸಬೇಕಾಗುತ್ತದೆ. ಮೇಲೆ ತಿಳಿಸಿದ ನಿಯಮಗಳನ್ನು ನಿರ್ಲಕ್ಷಿಸಿ ಕೆಲವು ಕೆಲಸಗಳನ್ನು ಮಾಡಲು ಯಾವುದೇ ರಾಜಕಾರಣಿ ನಿಮ್ಮನ್ನು ಕೇಳಿದರೆ, ನೀತಿ ಸಂಹಿತೆಯ ನಿಯಮಗಳು ಮತ್ತು ನಿಬಂಧನೆಗಳ ಬಗ್ಗೆ ಹೇಳುವ ಮೂಲಕ ನೀವು ನಿರಾಕರಿಸಬಹುದು. ಯಾರಾದರೂ ಪ್ರಚಾರ ಮಾಡಿ ಸಿಕ್ಕಿಬಿದ್ದರೆ ಕ್ರಮ ಕೈಗೊಳ್ಳಬಹುದು.

Source: https://tv9kannada.com/national/lok-sabha-election-dates-model-code-of-conduct-for-election-campaign-know-rules-and-regulations-here-gsp-799550.html

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group: https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *