IPL 2024: ಆರ್​ಸಿಬಿ ಪಾಲಿಗೆ ವಿದೇಶಿ ಆಟಗಾರರೇ ವಿಲನ್ಸ್..!

ಐಪಿಎಲ್ 2024 (IPL 2024)ರ ಮೊದಲ 9 ಪಂದ್ಯಗಳಲ್ಲಿ ತವರು ನೆಲದಲ್ಲಿ ಆಡಿದ ತಂಡವೇ ಗೆದ್ದಿತ್ತು. ಆದರೆ ಈಗ ಈ ಪ್ರವೃತ್ತಿಗೆ ಬ್ರೇಕ್ ಬಿದ್ದಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ 10ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಕೋಲ್ಕತ್ತಾ ನೈಟ್ ರೈಡರ್ಸ್  (Royal Challengers Bengaluru vs Kolkata Knight Riders) 7 ವಿಕೆಟ್‌ಗಳಿಂದ ಸೋಲಿಸಿದೆ. ಈ ಮೂಲಕ ಆರ್​ಸಿಬಿ ತವರಿನಲ್ಲಿ ಕೆಕೆಆರ್ ತನ್ನ ಪಾರುಪತ್ಯವನ್ನು ಮುಂದುವರೆಸಿದೆ. ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಆರ್​ಸಿಬಿ ವಿರಾಟ್ ಕೊಹ್ಲಿ ಅವರ ಅಜೇಯ ಅರ್ಧಶತಕದ ನೆರವಿನಿಂದ 6 ವಿಕೆಟ್ ನಷ್ಟಕ್ಕೆ 182 ರನ್ ಗಳಿಸಿತು. ಆರಂಭದಿಂದಲೇ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದ ಕೆಕೆಆರ್ 17ನೇ ಓವರ್​ನಲ್ಲಿಯೇ ಗುರಿ ಮುಟ್ಟಿತು. ಅಲ್ಲದೆ ತಂಡ ಇನ್ನು 19 ಎಸೆತಗಳು ಬಾಕಿ ಇರುವಾಗಲೇ ಗೆಲುವು ಸಾಧಿಸಿತು. ಈ ಮೂಲಕ ಆರ್​ಸಿಬಿ (RCB) ಲೀಗ್​ನಲ್ಲಿ ಆಡಿರುವ ಮೂರು ಪಂದ್ಯಗಳಲ್ಲಿ ಎರಡನೇ ಸೋಲನ್ನು ಅನುಭವಿಸಬೇಕಾಯಿತು.

ಚಿನ್ನಸ್ವಾಮಿಯಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್​ಸಿಬಿ ನಿಗದಿತ 20 ಓವರ್​ಗಳಲ್ಲಿ 6 ವಿಕೆಟ್ ಕಳೆದುಕೊಂಡು 182 ರನ್ ಕಲೆಹಾಕಿತು. ಚಿನ್ನಸ್ವಾಮಿಯಂತಹ ಅತಿ ಚಿಕ್ಕ ಗ್ರೌಂಡ್​ನಲ್ಲಿ ಆರ್​ಸಿಬಿ ಕಲೆಹಾಕಿದ 182 ರನ್ ಕೂಡ ಬಹಳ ಸಣ್ಣದಾಗಿತ್ತು. ಪೇಪರ್ ಮೇಲೆ ಅತಿ ಬಲಿಷ್ಠ ತಂಡದಂತೆ ಕಾಣುವ ಆರ್​​ಸಿಬಿ ಆಡಿರುವ ಮೂರೂ ಪಂದ್ಯಗಳಲ್ಲೂ ಅತ್ಯಂತ ಕಳಪೆ ಪ್ರದರ್ಶನ ನೀಡಿದೆ. ಅದರಲ್ಲೂ ಕೋಟಿ ಕೋಟಿ ಪಡೆದು ಆರ್​ಸಿಬಿ ಪಾಳಯ ಸೇರಿಕೊಂಡಿರುವ ವಿದೇಶಿ ಆಟಗಾರರು ಹೋದ ಪುಟ್ಟ ಬಂದ ಪುಟ್ಟ ಪ್ರದರ್ಶನ ನೀಡುತ್ತಿರುವುದು ತಂಡದ ಸೋಲಿಗೆ ಪ್ರಮುಖ ಕಾರಣವಾಗಿದೆ.

ನಾಯಕನ ಕಳಪೆ ಬ್ಯಾಟಿಂಗ್

ತಂಡದ ನಾಯಕತ್ವ ಹೊತ್ತು ಆರಂಭಿಕರಾಗಿ ಬ್ಯಾಟಿಂಗ್ ಇಳಿಯುತ್ತಿರುವ ಫಾಫ್ ಡು ಪ್ಲೆಸಿಸ್ ಇದುವರೆಗೂ ತಮ್ಮ ಬ್ಯಾಟಿಂಗ್​ನಲ್ಲಿ ಕಮಾಲ್ ಮಾಡಿಲ್ಲ. ಆಡಿದ ಮೊದಲ ಪಂದ್ಯದಲ್ಲಿ 35 ರನ್ ಕಲೆಹಾಕಿದ್ದು ಬಿಟ್ಟರೆ ಫಾಫ್ ಬ್ಯಾಟ್ ಮೌನಕ್ಕೆ ಶರಣಾಗಿದೆ. ಉಳಿದ ಎರಡು ಪಂದ್ಯಗಳಲ್ಲಿ ಫಾಫ್ ಕ್ರಮವಾಗಿ 3 ಹಾಗೂ 8 ರನ್ ಕಲೆಹಾಕಲಷ್ಟೇ ಶಕ್ತರಾಗಿದ್ದಾರೆ.  ಆರಂಭಿಕನಾಗಿ ತಂಡಕ್ಕೆ ಬಲಿಷ್ಠ ಆರಂಭ ಒದಗಿಸಬೇಕಾದ ನಾಯಕನೇ ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿಕೊಳ್ಳುತ್ತಿರುವುದು ತಂಡವನ್ನು ಸಂಕಷ್ಟಕ್ಕೆ ತಳ್ಳಿದೆ. ಅಲ್ಲದೆ ಫಾಫ್ ಡುಪ್ಲೆಸಿಸ್ ಅವರ ನಾಯಕತ್ವದಲ್ಲಿ ಹೇಳಿಕೊಳ್ಳುವಂತಹ ಪರಿಣಾಮಕಾರಿ ನಿರ್ಧಾರಗಳು ಹೊರಬರುತ್ತಿಲ್ಲ. ಬ್ಯಾಟರ್​ಗೆ ತಕ್ಕಂತೆ ಫೀಲ್ಡ್ ಪ್ಲೇಸ್ ಮಾಡುವುದಾಗಲಿ, ಬೌಲರ್​ಗಳ ಬದಲಾವಣೆಯನ್ನಾಗಲಿ ಫಾಫ್ ಮಾಡುತ್ತಿಲ್ಲ.

ಮಂಕಾಗಿರುವ ಮ್ಯಾಕ್ಸ್​ವೆಲ್

ಮೇಲೆ ಹೇಳಿದಂತೆ ಆರ್​ಸಿಬಿ ತಂಡ ಪೇಪರ್ ಮೇಲೆ ಬಲಿಷ್ಠವಾಗಿ ಕಾಣಲು ಖ್ಯಾತ ವಿದೇಶಿ ಆಟಗಾರರೇ ಕಾರಣ. ಆದರೆ ಇದುವರೆಗೂ ಅವರಿಂದ ಯಾವುದೇ ಹೇಳಿಕೊಳ್ಳುವಂತಹ ಪ್ರದರ್ಶನ ಕಂಡುಬಂದಿಲ್ಲ. ಅದರಲ್ಲೂ ತಂಡದ ಮಧ್ಯಮ ಕ್ರಮಾಂಕದ ಆಧಾರ ಸ್ತಂಭವಾಗಿರುವ ಗ್ಲೆನ್ ಮ್ಯಾಕ್ಸ್​ವೆಲ್ ಬಿಗ್ ಇನ್ನಿಂಗ್ಸ್ ಆಡುವುದಿರಲಿ, ತಂಡಕ್ಕೆ ನೆರವಾಗುವಂತಹ ಒಂದೇ ಒಂದು ಇನ್ನಿಂಗ್ಸ್ ಆಡಿಲ್ಲ. ಮೊದಲ ಪಂದ್ಯದಲ್ಲಿ ಸೊನ್ನೆಗೆ ವಿಕೆಟ್ ಒಪ್ಪಿಸಿದ್ದ ಮ್ಯಾಕ್ಸ್​ವೆಲ್, 2ನೇ ಪಂದ್ಯದಲ್ಲಿ 3 ರನ್​ಗಳಿಗೆ ಸುಸ್ತಾಗಿದ್ದರು. ಮೂರನೇ ಪಂದ್ಯದಲ್ಲಿ ಎರಡೆರಡು ಜೀವದಾನಗಳು ಸಿಕ್ಕ ನಂತರವೂ ಮ್ಯಾಕ್ಸ್​ವೆಲ್ ಇನ್ನಿಂಗ್ಸ್  28 ರನ್​ಗಳಿಗೆ ಮುಗಿದಿತ್ತು. ಬೌಲಿಂಗ್​ನಲ್ಲೂ ಮ್ಯಾಕ್ಸ್​ವೆಲ್ ಪ್ರದರ್ಶನ ಅಷ್ಟಕಷ್ಟೆ.

ರುಚಿಸದ ಗ್ರೀನ್ ಆಟ

17.5 ಕೋಟಿ ನೀಡಿ ಮುಂಬೈನಿಂದ ಟ್ರೇಡಿಂಗ್ ಮಾಡಿಕೊಂಡಿದ್ದ ಆಸ್ಟ್ರೇಲಿಯಾದ ಆಲ್​ರೌಂಡರ್ ಕ್ಯಾಮರೂನ್ ಗ್ರೀನ್ ತಾವು ಪಡೆದ ಬೆಲೆಗೆ ನ್ಯಾಯ ಒದಗಿಸುವ ಪ್ರಯತ್ನ ಮಾಡುತ್ತಿದ್ದರಾದರೂ ಅವರ ಆಟ ಪ್ರೇಕ್ಷಕರಿಗೆ ರುಚಿಸುತ್ತಿಲ್ಲ. ಇದಕ್ಕೆ ಕಾರಣ ಅವರ ಆಮೆಗತಿಯ ಬ್ಯಾಟಿಂಗ್. ಮೂರೂ ಪಂದ್ಯಗಳಲ್ಲೂ ಅಬ್ಬರದ ಇನ್ನಿಂಗ್ಸ್ ಅಲ್ಲದಿದ್ದರೂ ಎರಡಂಕಿಯ ಮೊತ್ತ ಕಲೆಹಾಕುತ್ತಿರುವ ಗ್ರೀನ್ ಬ್ಯಾಟ್ ಅಬ್ಬರಿಸುತ್ತಿಲ್ಲ. ಬ್ಯಾಟಿಂಗ್​ಗೆ ಹೋಲಿಸಿಕೊಂಡರೆ ಬೌಲಿಂಗ್​ನಲ್ಲಿ ಗ್ರೀನ್ ಕೊಂಚ ಕಾಣಿಕೆ ನೀಡಿರುವುದು ಇಲ್ಲಿ ಗಮನಾರ್ಹ.

ಸುಧಾರಿಸದ ಜೋಸೆಫ್  ಆಟ

ಆಡಿರುವ ಮೂರು ಪಂದ್ಯಗಳಲ್ಲೂ ಬೌಲಿಂಗ್​ನಲ್ಲಿ ಅತಿ ದುಬಾರಿಯಾಗಿರುವ ಅಲ್ಜಾರಿ ಜೋಸೆಫ್​ರನ್ನು ತಂಡದ ಆಡಳಿತ ಮಂಡಳಿ ಪದೇ ಪದೇ ಆಡುವ ಹನ್ನೊಂದರ ಬಳಗದಲ್ಲಿ ಏಕೆ ಆಯ್ಕೆ ಮಾಡುತ್ತಿದೆ ಎಂಬುದನ್ನು ಆ ದೇವರೇ ಬಲ್ಲ. ಕೇವಲ ವೇಗವಾಗಿ ಎಸೆಯುವುದನ್ನು ಬಿಟ್ಟರೆ ಜೋಸೆಫ್ ಬೌಲಿಂಗ್​ನಲ್ಲಿ ಹೇಳಿಕೊಳ್ಳುವಂತಹ ವ್ಯತ್ಯಾಸ ಕಂಡುಬರುತ್ತಿಲ್ಲ. ಹೀಗಾಗಿಯೇ ಮೊದಲ ಓವರ್​ನಿಂದಲೇ ಜೋಸೆಫ್​ಗೆ ಎದುರಾಳಿ ತಂಡದ ಬ್ಯಾಟರ್​ಗಳು ಬೌಂಡರಿ ಸಿಕ್ಸರ್​ಗಳ ಉಡುಗೊರೆ ನೀಡುತ್ತಿದ್ದಾರೆ. ಹೀಗಾಗಿ ಆರ್​ಸಿಬಿ ಆಡಳಿತ ಮಂಡಳಿ ಎಲ್ಲಿಯವರೆಗೆ ಜೋಸೆಫ್ ಮೇಲೆ ನಂಬಿಕೆ ಇಡಲಿದೆ ಎಂಬುದನ್ನು ಕಾದುನೋಡಬೇಕಿದೆ.

Source : https://tv9kannada.com/sports/cricket-news/ipl-2024-rcb-4-overseas-players-poor-form-continues-psr-808400.html

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group: https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *