
ಯೋಗಭ್ಯಾಸದಿಂದ ಮಹಿಳೆಯರ ಹಲವಾರ ಆರೋಗ್ಯ ಸಮಸ್ಯೆಗಳು ದೂರ.
_ ಡಾ.ವಿಜಯಲಕ್ಷ್ಮಿ ಪಿ. ಹಿರಿಯ ವೈದ್ಯಾಧಿಕಾರಿ, ಆಯುಷ್ ಇಲಾಖೆ ಚಿತ್ರದುರ್ಗ
ಚಿತ್ರದುರ್ಗ: ಜೂ.15. ಇಂದಿನ ಧಾವಂತ ಬದುಕಿನಲ್ಲಿ ಮಹಿಳೆಯರು ತಮ್ಮ ದೈಹಿಕ, ಮಾನಸಿಕ ಮತ್ತು ಭಾವನಾತ್ಮಕ ಆರೋಗ್ಯ ಸೇರಿದಂತೆ ಹಲವು ಋತುಚರ್ಯ ಆರೋಗ್ಯ ಸಮಸ್ಯೆಗಳನ್ನು ನಿವಾರಿಸಿಕೊಳ್ಳಲು ಯೋಗದ ಮೊರೆ ಹೋಗುವುದು ಅವಶ್ಯಕವಾಗಿದೆ ಎಂದು ಆಯುಷ್ ಇಲಾಖೆಯ ಹಿರಿಯ ವೈದ್ಯಾಧಿಕಾರಿ ಶ್ರೀಮತಿ ವಿಜಯಲಕ್ಷ್ಮಿ ಪಿ. ಅವರು ಅಭಿಪ್ರಾಯ ಪಟ್ಟಿದ್ದಾರೆ.

ಇದೇ ಜೂನ್ ಬರುವ 21ನೇ ಅಂತರಾಷ್ಟ್ರೀಯ ಯೋಗ ದಿನ ಹಾಗೂ ಭಾರತೀಯ ಯೋಗ ಶಿಕ್ಷಣ ಸಂಸ್ಥೆಯ ನಾಲ್ಕನೇ ವಾರ್ಷಿಕೋತ್ಸವ ಅಂಗವಾಗಿ ಭಾರತೀಯ ಯೋಗ ಶಿಕ್ಷಣ ಸಂಸ್ಥೆ ಚಿತ್ರದುರ್ಗ , ಜಿಲ್ಲಾ ಆಯುಷ್ ಇಲಾಖೆ ಚಿತ್ರದುರ್ಗ ಹಾಗೂ ಕೋಟೆ ವಾಯುವಿಹಾರಿಗಳ ಸಂಘ ಚಿತ್ರದುರ್ಗ ಇವರು ಸಂಯುಕ್ತವಾಗಿ ಮಹಿಳೆಯರಿಗಾಗಿ ಆಯೋಜಿಸಿರುವ ಉಚಿತ ಯೋಗ ಶಿಬಿರವನ್ನು ನಗರದ ಐತಿಹಾಸಿಕ ಕೋಟೆ ಕರುವರ್ತಿ ಬಳಿಯ ಶ್ರೀ ಆಂಜನೇಯಸ್ವಾಮಿ ದೇವಸ್ಥಾನದ ಆವರಣದಲ್ಲಿ ಶನಿವಾರ ಸಂಜೆ ಉದ್ಘಾಟನೆ ಮಾಡಿ ಅವರು ಶಿಬಿರಾರ್ಥಿಗಳನ್ನುದ್ಧೇಶಿಸಿ ಮಾತನಾಡುತ್ತಾ ಮಹಿಳೆಯರು ತಮ್ಮ ಜೀವನದ ವಿವಿಧ ಹಂತಗಳಲ್ಲಿ ಅಂದರೆ ಮುಟ್ಟು, ಗರ್ಭಧಾರಣೆ, ಋತುಬಂಧ, ಇತ್ಯಾದಿ ಅನುಭವಿಸುವ ವೇಳೆಯಲ್ಲಿ ಹಾರ್ಮೋನುಗಳ ಬದಲಾವಣೆಗಳು ಮತ್ತು ಒತ್ತಡಗಳನ್ನು ನಿಭಾಯಿಸಲು ಯೋಗವು ವಿಶೇಷವಾಗಿ ಸಹಾಯಕವಾಗಲಿದೆ ಎಂದು ತಿಳಿಸಿದರು
ಇದೇ ಸಂಧರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೋಟೆ ವಾಯುವಿಹಾರಿಗಳ ಸಂಘದ ಅಧ್ಯಕ್ಷರಾದ ಆರ್.ಸತ್ಯಣ್ಣ ಮಾತನಾಡಿ ಚಿತ್ರದುರ್ಗ ಕೋಟೆಗೆ ವಾಯುವಿಹಾರಕ್ಕಾಗಿ ಬರುವ ಹಲವಾರು ಜನರು ಒಂದಿಲ್ಲೊಂದು ಆರೋಗ್ಯ ಸಮಸ್ಯೆಗಳನ್ನು ಇಟ್ಟುಕೊಂಡೇ ಬರುತ್ತಾರೆ ಅಂತಹವರಿಗೆ ಸಹಾಯವಾಗಲೆಂದು ಕೋಟೆ ವಾಯುವಿಹಾರಿಗಳ ಸಂಘ ಹಾಗೂ ಭಾರತೀಯ ಯೋಗ ಶಿಕ್ಷಣ ಸಂಯುಕ್ತವಾಗಿ ಇದುವರೆಗೆ ಹಲವಾರು ಆರೋಗ್ಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರಲಾಗಿದೆ ಇದೇ ಜೂನ್ 21 ರಂದು ಆಚರಿಸುವ ವಿಶ್ವ ಯೋಗ ದಿನಾಚರಣೆ ವಿಶೇಷವಾಗಿ ಆಚರಿಸುವ ಸಲುವಾಗಿ ಈ ಮಹಿಳೆಯರಿಗಾಗಿ ಉಚಿತವಾಗಿ ಯೋಗ ತರಬೇತಿ ಶಿಬಿರ ಏರ್ಪಡಿಸಲಾಗಿದೆ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಯೋಗ ಕಲಿತು ತಮ್ಮ ಆರೋಗ್ಯ ಕಾಪಾಕೊಂಡರೆ ಶಿಬಿರ ಸಾರ್ಥಕಪಡೆಯುತ್ತದೆ ಎಂದು ಮನವಿ ಮಾಡಿದರು.
ಇದೇ ಸಂಧರ್ಭದಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಸಾಹಿತಿ ಹಾಗು ಪತ್ರಕರ್ತ ಮೊಹೀದ್ದೀನ್ ಖಾನ್ ” ಒಬ್ಬ ವ್ಯಕ್ತಿಯು ತಾನು ಗುಣಮುಖನಾಗುತ್ತೇನೆ ಎಂಬ ದೃಢ ವಿಶ್ವಾಸವನ್ನು ಹೊಂದಿದ್ದರೆ, ಆತನ ದೇಹವು ಚೇತರಿಕೆಗೆ ಉತ್ತಮವಾಗಿ ಸ್ಪಂದಿಸುತ್ತದೆ. ಉತ್ತಮ ಆಹಾರ, ಸಾಕಷ್ಟು ನಿದ್ದೆ, ವ್ಯಾಯಾಮ ಮತ್ತು ಸಕಾರಾತ್ಮಕ ಸಾಮಾಜಿಕ ಸಂಬಂಧಗಳು ಆರೋಗ್ಯಕರ ಜೀವನಕ್ಕೆ ಆಧಾರವಾಗಿವೆ. ಆರೋಗ್ಯಕರ ಜೀವನ ಹಲವಾರು ರೋಗಗಳನ್ನು ತಡೆಗಟ್ಟಲು ಮತ್ತು ಗುಣಪಡಿಸಲು ನಿರ್ಣಾಯಕ ಪಾತ್ರ ವಹಿಸುತ್ತದೆ ಎಂದು ತಿಳಿಸಿದರು.
ವೇದಿಕೆ ಕಾರ್ಯಕ್ರಮ ನಂತರ ಭಾರತೀಯ ಯೋಗ ಶಿಕ್ಷಣ ಸಂಸ್ಥೆಯ ಯೋಗ ಶಿಕ್ಷಕಿಯರಾದ ಶ್ರೀಮತಿ ಮಂಜುಳಾ ಹಾಗೂ ವಸಂತಲಕ್ಷ್ಮಿ ಶಿಬಿರಾರ್ಥಿಗಳಿಗೆ ಯೋಗ ತರಬೇತಿ ನೀಡಿದರು. ಶಿಬಿರದ ಆಯೋಜಕ ಹಾಗೂ ಯೋಗ ತರಬೇತುದಾರ ಆಯುಷ್ ಇಲಾಖೆಯಲ್ಲಿ ಉತ್ತಮ ಸೇವೆ ಸಲ್ಲಿಸುತ್ತಾ ಬಂದಿರುವ ಶ್ರೀಮತಿ ಡಾ.ವಿಜಯಲಕ್ಷ್ಮಿಯವರಿಗೆ ಸಂಸ್ಥೆ ವತಿಯಿಂದ ಸನ್ಮಾನಿಸಲಾಯಿತು ರವಿ ಕೆ.ಅಂಬೇಕರ್ ಕಾರ್ಯಕ್ರಮ ನಿರೂಪಿಸಿದರು ಈ ಕಾರ್ಯಕ್ರಮದಲ್ಲಿ ನಿವೃತ್ತ ಪೋಲಿಸ್ ಅಧಿಕಾರಿ ಮಲ್ಲಿಕಾರ್ಜುನಾಚಾರ್ ಎಂ., ರಾಜ್ಯೋತ್ಸವ ಪ್ರಶಸ್ತಿ ವಿಜೇತ ಪರಿಸರ ಸಂರಕ್ಷಕ ಮಲ್ಲಿಕಾರ್ಜುನಪ್ಪ ಸೇರಿದಂತೆ ಸಂಸ್ಥೆಯ ಇತರ ಪದಾಧಿಕಾರಿಗಳು ಯೋಗಾಸಕ್ತರು ಉಪಸ್ಥಿತರಿದ್ದರು.