Glaucoma: ಗ್ಲೊಕೊಮಾ ಅರಿವಿನ ಮಾಸ-ಸದ್ದಿಲ್ಲದೆ ಕಾಡುವ ರೋಗದ ಸುದ್ದಿ ತಿಳಿದಿರಲಿ.

Glaucoma: ಆರೋಗ್ಯದ ಬಗೆಗಿನ ಅರಿವು ಇದ್ದಷ್ಟಕ್ಕೂ ಒಳ್ಳೆಯದೇ. ಇಷ್ಟೊಂದು ಅಂಗಗಳು ಇರುವಂಥ ದೇಹದ ಬಗೆಗೆ ಎಷ್ಟು ತಿಳುವಳಿಕೆ ಕೆಲವೊಮ್ಮೆ ಕಡಿಮೆಯಾಗಿಬಿಡುತ್ತದೆ. ಕಾರಣ, ಕೆಲವು ರೋಗಗಳು ಸದ್ದಿಲ್ಲದೆ ಅಮರಿಕೊಂಡು, ʻನಮಗೆ ಮೊದಲೇ ತಿಳಿಯದೆ ಹೋಯಿತಲ್ಲʼ ಎಂದು ಕೈ ಹಿಸುಕುವಂತೆ ಮಾಡುತ್ತವೆ. ಅಂಥದ್ದೇ ಒಂದು ರೋಗ ಗ್ಲೊಕೊಮಾ.

ಆರೋಗ್ಯದ ಬಗೆಗಿನ ಅರಿವು ಇದ್ದಷ್ಟಕ್ಕೂ ಒಳ್ಳೆಯದೇ. ಇಷ್ಟೊಂದು ಅಂಗಗಳು ಇರುವಂಥ ದೇಹದ ಬಗೆಗೆ ಎಷ್ಟು ತಿಳುವಳಿಕೆ ಕೆಲವೊಮ್ಮೆ ಕಡಿಮೆಯಾಗಿಬಿಡುತ್ತದೆ. ಕಾರಣ, ಕೆಲವು ರೋಗಗಳು ಸದ್ದಿಲ್ಲದೆ ಅಮರಿಕೊಂಡು, ʻನಮಗೆ ಮೊದಲೇ ತಿಳಿಯದೆ ಹೋಯಿತಲ್ಲʼ ಎಂದು ಕೈ ಹಿಸುಕುವಂತೆ ಮಾಡುತ್ತವೆ. ಅಂಥದ್ದೇ ಒಂದು ರೋಗ ಗ್ಲೊಕೊಮಾ. ಸುಳಿವನ್ನೇ ಕೊಡದೆ ನಮ್ಮ ದೃಷ್ಟಿಯನ್ನು ಶಾಶ್ವತವಾಗಿ ಕಸಿಯುವ ಈ ರೋಗದ ಬಗೆಗೆ ಅರಿವು ಹೆಚ್ಚಬೇಕು ಎನ್ನುವ ಉದ್ದೇಶದಿಂದ, ಜನವರಿ ತಿಂಗಳನ್ನು ಗ್ಲೊಕೊಮ ಜಾಗೃತಿ ಮಾಸ ಎಂದು ಆಚರಿಸಲಾಗುತ್ತದೆ(Glaucoma).

ಏನು ರೋಗವಿದು?

ಕಣ್ಣುಗಳಲ್ಲಿ ಹೆಚ್ಚುವ ಒತ್ತಡದಿಂದಾಗಿ ಆಪ್ಟಿಕ್‌ ನರಗಳು ಹಾನಿಗೊಳಗಾಗುತ್ತವೆ. ಕಣ್ಣು ಮತ್ತು ಮೆದುಳಿನ ಸಂಪರ್ಕ ಸೇತುವಾಗಿ ಕೆಲಸ ಮಾಡುವ ಈ ನರಗಳು ಹಾನಿಗೊಳಗಾದರೆ ದೃಷ್ಟಿ ನಾಶವಾಗುತ್ತಾ ಹೋಗುತ್ತದೆ. ಆದರೆ ದೊಡ್ಡ ಸಮಸ್ಯೆ ಎಂದರೆ ಇದು ಆರಂಭಿಕ ಹಂತದಲ್ಲಿ ರೋಗಿಯ ಗಮನಕ್ಕೆ ಬರುವುದೇ ಕಷ್ಟ. ದೃಷ್ಟಿಯ ಸುತ್ತಳತೆ ಕ್ರಮೇಣ ಕುಂದುತ್ತಾ ಹೋಗುವುದರಿಂದ, ತನ್ನ ದೃಷ್ಟಿಯಲ್ಲಿ ದೋಷವಿದೆ ಎಂಬುದೇ ತಿಳಿಯುವುದಿಲ್ಲ. ಅದು ತಿಳಿಯುವಷ್ಟದಲ್ಲಿ ಶೇ. ೪೦ರಷ್ಟು ಹಾನಿ ಸಂಭವಿಸಿರುತ್ತದೆ. ಅದಾಗಲೇ ನಾಶವಾಗಿರುವ ದೃಷ್ಟಿಯನ್ನು ಮರಳಿಸುವುದು ಸಾಧ್ಯವಿಲ್ಲದ ಮಾತು.

ಏನು ಕಾರಣ?

ಗ್ಲೊಕೊಮಾ ಬರುವುದಕ್ಕೆ ಹಲವು ಕಾರಣಗಳಿವೆ. ಧೂಮಪಾನ, ಅತಿಯಾದ ಕೆಫೇನ್‌ ಸೇವನೆ, ಅಧಿಕ ರಕ್ತದೊತ್ತಡ, ಮಧುಮೇಹ, ಕಣ್ಣಿಗೆ ಪೆಟ್ಟಾಗುವುದು, ಕೆಲವು ರೀತಿಯ ಸ್ಟೆರಾಯ್ಡ್‌ಗಳ ಸೇವನೆ, ಕುಟುಂಬದಲ್ಲಿ ಯಾರಿಗಾದರೂ ಗ್ಲೊಕೊಮ ಆಗಿದ್ದರೆ, ಅತಿಯಾದ ಮೈಗ್ರೇನ್‌ ತೊಂದರೆ, ಯಾವುದೇ ಕಾರಣದಿಂದಾಗಿ ಕಣ್ಣಿನ ಒತ್ತಡ ಹೆಚ್ಚಿರುವುದು- ಇವೆಲ್ಲ ಗ್ಲೊಕೊಮ ಬರುವುದಕ್ಕೆ ಕಾರಣವಾಗಬಹುದು.

ಲಕ್ಷಣಗಳೇನು?

ಆರಂಭದಲ್ಲಿ ಈ ರೋಗವು ಲಕ್ಷಣಗಳನ್ನೇ ತೋರಿಸುವುದಿಲ್ಲ. ಏನನ್ನೋ ಪರೀಕ್ಷೆ ಮಾಡುವಾಗ ಆಕಸ್ಮಿಕವಾಗಿ ಈ ರೋಗ ಪತ್ತೆಯಾದ ಉದಾಹರಣೆಗಳು ಎಷ್ಟೋ ಇವೆ. ಆದರೆ ರೋಗ ಕೊಂಚ ಮುಂದುವರಿಯುತ್ತಿದ್ದಂತೆ ಕಣ್ಣಲ್ಲಿ ನೋವು, ಕೆಂಪಾಗುವುದು, ದೃಷ್ಟಿ ಅಸ್ಪಷ್ಟವಾಗುವುದು, ತಲೆನೋವು, ಹೊಟ್ಟೆ ತೊಳೆಸುವುದು, ವಾಂತಿ, ಕಣ್ಣಲ್ಲಿ ಹಲವು ಬಣ್ಣಗಳು ಕಾಣುವುದು- ಇಂಥವು ಕಾಣಬಹುದು. ಆದರೆ ದೃಷ್ಟಿಗೆ ತೊಂದರೆಯಾಗುತ್ತಿದೆ, ಎದುರಿನ ಅಥವಾ ಕಣ್ಣು ಮುಂದಿನ ಭಾಗ ಬಿಟ್ಟರೆ ಸುತ್ತಲಿನ ವಸ್ತುಗಳು ಕಾಣಿಸುತ್ತಿಲ್ಲ ಎಂಬುದು ರೋಗಿಗೆ ತಿಳಿಯುವಷ್ಟರಲ್ಲಿ ತಡವಾಗಿರುತ್ತದೆ.

ತಡೆ ಹೇಗೆ?

ಸಾಮಾನ್ಯವಾಗಿ ೪೦ ವರ್ಷ ವಯಸ್ಸಿನ ನಂತರ, ನಿಯಮಿತವಾಗಿ ನೇತ್ರಗಳನ್ನು ತಪಾಸಣೆ ಮಾಡಿಸಿಕೊಳ್ಳುವುದು ಒಳ್ಳೆಯ ಅಭ್ಯಾಸ. ಅದರಲ್ಲೂ ಮೈಗ್ರೇನ್‌, ಸಮೀಪದೃಷ್ಟಿ ಅಥವಾ ದೂರದೃಷ್ಟಿಯ ತೊಂದರೆಗಳಿದ್ದರೆ, ಕುಟುಂಬದಲ್ಲಿ ಗ್ಲೊಕೊಮ ಇದ್ದರೆ, ಬಿಪಿ ಇಲ್ಲವೇ ಮಧುಮೇಹದ ಸಮಸ್ಯೆಯಿದ್ದರೆ ನೇತ್ರಗಳ ತಪಾಸಣೆಯತ್ತ ಗಮನ ಹರಿಸಬೇಕು. ಕಣ್ಣುಗಳು ಚೆನ್ನಾಗೇ ಇವೆ, ಏನೂ ತೊಂದರೆಯಿಲ್ಲ ಎಂದಾಗಲೂ ಒಳಗೊಳಗೇ ಗ್ಲೊಕೊಮ ಬಂದಿರಬಾರದು ಎಂದೇನಿಲ್ಲ. ಕಣ್ಣು ಮತ್ತು ಆಪ್ಟಿಕ್‌ ನರಗಳ ತಪಾಸಣೆ, ದೃಷ್ಟಿಯ ಸುತ್ತಳತೆ ಕ್ಷೀಣಿಸಿದೆಯೇ ಎಂಬುದನ್ನು ಪತ್ತೆ ಹಚ್ಚುವ ಫೀಲ್ಡ್‌ ಟೆಸ್ಟ್‌, ಕಣ್ಣುಗಳ ಒತ್ತಡ ಅಳೆಯುವುದು ಮುಂತಾದ ವಿಧಾನಗಳಿಂದ ಗ್ಲೊಕೊಮ ಇದೆಯೇ ಎಂಬುದನ್ನು ಪತ್ತೆ ಮಾಡಲಾಗುತ್ತದೆ. ಇಂಥ ಯಾವ ಪರೀಕ್ಷೆಗಳಲ್ಲೂ ರಕ್ತ ತೆಗೆಯುವುದು, ಕ್ಷಕಿರಣಗಳಿಗೆ ಒಡ್ಡುವುದು ಇತ್ಯಾದಿಗಳೆಲ್ಲ ಇಲ್ಲ

ಒಮ್ಮೆ ಈ ರೋಗ ಪ್ರಾರಂಭವಾದರೆ, ಕಣ್ಣುಗಳ ಒತ್ತಡ ಹೆಚ್ಚದಂತೆ ನಿರ್ವಹಿಸುವುದು ಮತ್ತು ರೋಗ ಮುಂದುವರೆಯದಂತೆ ತಡೆಯುವುದು ಚಿಕಿತ್ಸೆಯ ಮುಖ್ಯ ಭಾಗವಾಗಿರುತ್ತದೆ. ಆದರೆ ಈಗಾಗಲೇ ನಶಿಸಿರುವ ದೃಷ್ಟಿಯನ್ನು ಮರಳಿ ತರುವುದು ಸಾಧ್ಯವೇ ಇಲ್ಲ. ಹಾಗಾಗಿ ಈ ರೋಗವನ್ನು ಆರಂಭದಲ್ಲೇ ಪತ್ತೆ ಮಾಡುವುದು ಅತಿ ಮುಖ್ಯ. ಈ ಹಿನ್ನೆಲೆಯಲ್ಲಿ ಯಾವುದೇ ಲಕ್ಷಣಗಳು ಕಾಣದಿದ್ದರೂ, 40 ವರ್ಷಗಳ ನಂತರ ನಿಯಮಿತವಾದ ನೇತ್ರ ತಪಾಸಣೆ ಮಹತ್ವದ್ದು ಎನಿಸುತ್ತದೆ.

Source: https://vishwavani.news/latest-news/glaucoma-glaucoma-awareness-month-be-aware-of-the-silent-disease-31691.html

Leave a Reply

Your email address will not be published. Required fields are marked *