ಸೆಪ್ಟೆಂಬರ್ 26:
2025ರ ಜನವರಿಯಿಂದ ಜೂನ್ ವರೆಗೆ ಜಾಗತಿಕ ಸಾಲವು 21 ಟ್ರಿಲಿಯನ್ ಡಾಲರ್ ಹೆಚ್ಚಳಗೊಂಡು ಒಟ್ಟು 337.7 ಟ್ರಿಲಿಯನ್ ಡಾಲರ್‌ಗೆ ಏರಿಕೆಯಾಗಿದೆ ಎಂದು ಇನ್ಸ್ಟಿಟ್ಯೂಟ್ ಆಫ್ ಇಂಟರ್‌ನ್ಯಾಷನಲ್ ಫೈನಾನ್ಸ್ (IIF) ತನ್ನ ಇತ್ತೀಚಿನ ವರದಿಯಲ್ಲಿ ತಿಳಿಸಿದೆ.
ಈ ಏರಿಕೆಗೆ ಮುಖ್ಯ ಕಾರಣವಾಗಿ ಅಮೆರಿಕನ್ ಡಾಲರ್ ಮೌಲ್ಯದ ಕುಸಿತವನ್ನು ವರದಿ ಸೂಚಿಸಿದೆ. ಕೋವಿಡ್ ಸಮಯದಲ್ಲಿ ಕಂಡಿದ್ದ ಸಾಲದ ತೀವ್ರ ಏರಿಕೆಯಂತೆ, ಈ ಬಾರಿ ಕೂಡ ದಾಖಲೆಯ ಏರಿಕೆ ದಾಖಲಾಗಿದೆ.
ಸಾಲ ಹೆಚ್ಚಳಕ್ಕೆ ಕಾರಣವಾಗಿರುವ ಪ್ರಮುಖ ದೇಶಗಳು
ಮೊದಲ ಆರು ತಿಂಗಳಲ್ಲಿ ಸಾಲ ಏರಿಕೆಗೆ ಅತಿಹೆಚ್ಚು ಕೊಡುಗೆ ನೀಡಿರುವುದು ಅಮೆರಿಕ, ಚೀನಾ, ಫ್ರಾನ್ಸ್, ಜರ್ಮನಿ, ಬ್ರಿಟನ್ ಹಾಗೂ ಜಪಾನ್ ದೇಶಗಳಿಂದಾಗಿದೆ.
- ಅಮೆರಿಕ: 32.9 ಟ್ರಿಲಿಯನ್ ಡಾಲರ್
- ಚೀನಾ: 15 ಟ್ರಿಲಿಯನ್ ಡಾಲರ್
- ಜಪಾನ್: 10.9 ಟ್ರಿಲಿಯನ್ ಡಾಲರ್
- ಬ್ರಿಟನ್: 3.4 ಟ್ರಿಲಿಯನ್ ಡಾಲರ್
- ಫ್ರಾನ್ಸ್: 3.4 ಟ್ರಿಲಿಯನ್ ಡಾಲರ್
- ಇಟಲಿ: 3.1 ಟ್ರಿಲಿಯನ್ ಡಾಲರ್
- ಭಾರತ: 3 ಟ್ರಿಲಿಯನ್ ಡಾಲರ್
- ಜರ್ಮನಿ: 2.8 ಟ್ರಿಲಿಯನ್ ಡಾಲರ್
- ಕೆನಡಾ: 2.3 ಟ್ರಿಲಿಯನ್ ಡಾಲರ್
- ಬ್ರೆಜಿಲ್: 1.8 ಟ್ರಿಲಿಯನ್ ಡಾಲರ್
ಉದಯೋನ್ಮುಖ ಮಾರುಕಟ್ಟೆಗಳಲ್ಲಿ ಸಾಲ
ಭಾರತ ಸೇರಿದಂತೆ ಎಮರ್ಜಿಂಗ್ ಮಾರ್ಕೆಟ್ ದೇಶಗಳಲ್ಲಿ ಮೊದಲ ಆರು ತಿಂಗಳಲ್ಲಿ 3.4 ಟ್ರಿಲಿಯನ್ ಡಾಲರ್ ಏರಿಕೆಯಾಗಿದೆ. ಇದರೊಂದಿಗೆ ಈ ಮಾರುಕಟ್ಟೆಗಳ ಒಟ್ಟು ಸಾಲವು 109 ಟ್ರಿಲಿಯನ್ ಡಾಲರ್‌ಗೆ ತಲುಪಿದೆ.
ಜಿಡಿಪಿ–ಸಾಲದ ಅನುಪಾತದಲ್ಲಿ ಅಗ್ರ 10 ದೇಶಗಳು
ಒಟ್ಟು ಸಾಲಕ್ಕಿಂತಲೂ ಹೆಚ್ಚು ಚರ್ಚೆಯ ವಿಷಯವೆಂದರೆ ಜಿಡಿಪಿಗೆ ಹೋಲಿಸಿದ ಸಾಲದ ಪ್ರಮಾಣ (Debt to GDP ratio).
- ಲೆಬನಾನ್: 283%
- ಸೂಡಾನ್: 256%
- ಜಪಾನ್: 255%
- ಸಿಂಗಾಪುರ್: 168%
- ಎರಿಟ್ರಿಯಾ: 164%
- ಗ್ರೀಸ್: 162%
- ಅರ್ಜೆಂಟೀನಾ: 155%
- ವೆನಿಜುವೆಲಾ: 146%
- ಇಟಲಿ: 135%
- ಭೂತಾನ್: 123%
ತಜ್ಞರ ಎಚ್ಚರಿಕೆ
ಜಾಗತಿಕ ಸಾಲದ ಈ ಭಾರೀ ಏರಿಕೆ ಮುಂದಿನ ದಿನಗಳಲ್ಲಿ ಆರ್ಥಿಕ ಅಸ್ಥಿರತೆಯನ್ನುಂಟುಮಾಡಬಹುದೆಂದು ತಜ್ಞರು ಎಚ್ಚರಿಸಿದ್ದಾರೆ. ಅಮೆರಿಕಾದ ಜಿಡಿಪಿಗಿಂತ 11 ಪಟ್ಟು ಹೆಚ್ಚಿನ ಮಟ್ಟದಲ್ಲಿ ಜಾಗತಿಕ ಸಾಲ ಏರಿರುವುದು ಜಾಗತಿಕ ಹಣಕಾಸು ವ್ಯವಸ್ಥೆಗೆ ಗಂಭೀರ ಸವಾಲಾಗಬಹುದು ಎಂದು ವರದಿ ಎಚ್ಚರಿಸಿದೆ.